ಒಂದು ರಾಷ್ಟ್ರ, ಒಂದು ಸಂವಿಧಾನ?
ದೇಶದ ನಾಲ್ಕು ರಾಜ್ಯಗಳು ಸಾರ್ವಜನಿಕ ಹಾಗೂ ಖಾಸಗಿ-ಎರಡೂ ರಂಗಗಳಲ್ಲಿ ಒಟ್ಟು ನೌಕರಿಗಳ ಮೂರನೇ ಎರಡು ನೌಕರಿಗಳನ್ನು ತಮ್ಮ ರಾಜ್ಯದ ನಿವಾಸಿಗಳಿಗೆ ಮಾತ್ರ ಮೀಸಲಾಗಿಟ್ಟಿರುವಾಗ ಅಥವಾ ಮೀಸಲಾತಿ ನೀಡಲು ಯೋಚಿಸುತ್ತಿರುವಾಗ ಅಂತಹ ಒಂದು ಭಾರತವನ್ನು ನಾವು ‘‘ಒಂದು ರಾಷ್ಟ್ರ ಒಂದು ಸಂವಿಧಾನ’’ದ ಭಾರತವೆಂದು ಪರಿಗಣಿಸಲು ಸಾಧ್ಯವೇ?
ಯಾಕೆಂದರೆ ಆಂಧ್ರಪ್ರದೇಶ ಮಧ್ಯಪ್ರದೇಶ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾರತದ ಬಹುತೇಕ ಶೇ. ಮೂವತ್ತು ಭೂಭಾಗವನ್ನು ಹೊಂದಿರುವ ರಾಜ್ಯಗಳು. ಅಮೂಲ್ಯವಾದ ನೌಕರಿಗಳ ವಿಷಯಕ್ಕೆ ಬಂದಾಗ ‘ಸ್ಥಳೀಯರು’ ಭಾರತದ ನಾಗರಿಕರಲ್ಲ. ಒಂದು ನಿರ್ದಿಷ್ಟ ಅವಧಿಯಿಂದ ಆ ರಾಜ್ಯಗಳಲ್ಲಿ ವಾಸಿಸುತ್ತಿರುವವರು ಮಾತ್ರ ಸ್ಥಳೀಯರು. ವ್ಯಕ್ತಿಯೊಬ್ಬ ಜನಿಸಿದ ಸ್ಥಳ ಅಥವಾ ಆತ ಎಲ್ಲಿಯ ನಿವಾಸಿ ಎಂಬುದನ್ನಾಧರಿಸಿ ಆತನ ವಿರುದ್ಧ ಯಾವುದೇ ರೀತಿಯ ತಾರತಮ್ಯ ಮಾಡಕೂಡದು ಎಂಬ ನಮ್ಮ ಸಂವಿಧಾನದ ಮೂಲಭೂತವಾದ ತತ್ವವನ್ನು ಉಲ್ಲಂಘಿಸಿ ಈ ರಾಜ್ಯಗಳು ಗೇಟೆಡ್ ಸಮುದಾಯಗಳಾಗ ಬಯಸುತ್ತವೆ.
ಸಂವಿಧಾನದ ಮೂವತ್ತೈದನೇ ಪರಿಚ್ಛೇದದ 370ನೇ ವಿಧಿಯನ್ನು ಈಗ ರದ್ದುಪಡಿಸಿರುವುದರಿಂದ ಯಾರು ರಾಜ್ಯದ ಖಾಯಂ ನಿವಾಸಿ ಮತ್ತು ಯಾರು ಅಲ್ಲ ಎಂಬುದನ್ನು ವ್ಯಾಖ್ಯಾನಿಸುವ ಹಕ್ಕನ್ನು ಜಮ್ಮು ಮತ್ತು ಕಾಶ್ಮೀರ ಕಳೆದುಕೊಂಡಿದೆ. 371ನೇ ವಿಧಿಯು ಯಾವ ಅಧಿಕಾರಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಸಿದು ಕೊಂಡಿದೆಯೋ ಅದೇ ಅಧಿಕಾರಗಳನ್ನು ಪಡೆಯಲು ಮೇಲೆ ಉಲ್ಲೇಖಿಸಲಾದ ನಾಲ್ಕು ರಾಜ್ಯಗಳು ತುದಿಗಾಲಲ್ಲಿ ನಿಂತಿವೆ.
ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದ ಪ್ರಧಾನಿ ನರೇಂದ್ರ ಮೋದಿಯವರು ‘‘370ನೇ ವಿಧಿಯ ರದ್ದತಿಯೊಂದಿಗೆ ಅಂತಿಮವಾಗಿ ನಮ್ಮ ದೇಶ ಒಂದು ಸಂವಿಧಾನವನ್ನು ಹೊಂದಿರುವ ಒಂದು ರಾಷ್ಟ್ರವಾಗಿದೆ’’ ಎಂದರು. ಆದರೆ ಅದೇ ದಿನ ಕನಿಷ್ಠ ಮೂವರು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಅದೇ ತ್ರಿವರ್ಣ ಧ್ವಜವನ್ನು ಅರಳಿಸಿದರು ಮತ್ತು ತಮ್ಮ ರಾಜ್ಯದಲ್ಲಿ ಸ್ಥಳೀಯರಿಗೆ ನೌಕರಿಗಳನ್ನು ಮೀಸಲಿಡುವ ಹಕ್ಕನ್ನು ಒಂದೋ ಸಮರ್ಥಿಸಿದರು ಅಥವಾ ಅಂತಹ ಹಕ್ಕು ತಮಗಿದೆಯೆಂದು, ಅಂತಹ ಕಾನೂನೊಂದನ್ನು ತಾವು ತರುವೆವು ಎಂದು ಘೋಷಿಸಿದರು.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜುಲೈ 22ರಂದು ಆಂಧ್ರ ಪ್ರದೇಶದ ಅಸೆಂಬ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ನೌಕರಿ ನೀಡಬೇಕೆನ್ನುವ ಕಾಯ್ದೆಯನ್ನು ಅಂಗೀಕರಿಸಿತು. ಅವರು ತನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡ ತಮ್ಮ ಅಂದಿನ ಭಾಷಣಗಳಲ್ಲಿ ತಾವು ಕೂಡ ಹಾಗೆಯೇ ಮಾಡುವುದಾಗಿ ಆಶ್ವಾಸನೆ ನೀಡಿದರು. ಮಹಾರಾಷ್ಟ್ರದ ಉದ್ಯಮ ಸಚಿವ ಸುಭಾಷ್ ದೇಸಾಯಿ ತನ್ನ ಸರಕಾರವು ಸ್ಥಳೀಯರಿಗೆ ಶೇ. 80ಕ್ಕಿಂತ ಕಡಿಮೆ ಇಲ್ಲದಂತೆ ನೌಕರಿಗಳನ್ನು ಮೀಸಲಿಡುವ ಕಾನೂನೊಂದನ್ನು ಜಾರಿಗೆ ತರುವುದಾಗಿ ಆಗಸ್ಟ್ 1ರಂದು ಹೇಳಿದ್ದರು.
ಈ ನಾಲ್ಕು ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಬಿಜೆಪಿ ನಿಯಂತ್ರಣದಲ್ಲಿವೆ. ಬಿಜೆಪಿ ರಾಷ್ಟ್ರೀಯತೆ ತನ್ನ ಮೂಲ ಮೌಲ್ಯಗಳಲ್ಲಿ ಒಂದು ಎನ್ನುತ್ತದೆ. ಈ ಎರಡು ರಾಜ್ಯಗಳಲ್ಲೇ ಮುಂಬೈ ಮತ್ತು ಬೆಂಗಳೂರು ಇರುವುದು. ಈ ನಗರಗಳು ವಲಸಿಗರ ಹೊರತಾಗಿ ಅವು ಈಗ ಏನಾಗಿದೆಯೋ ಅದಾಗಲೂ ಸಾಧ್ಯವಿತ್ತೇ ಎಂದು ಯಡಿಯೂರಪ್ಪ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಯಾವುದೇ ವಲಸೆ ವಿರೋಧಿ ಕಾನೂನು ತರುವ ಮೊದಲು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳಬೇಕು.
ಇನ್ನೊಂದೆಡೆ ಜಗನ್ ಜಾಗತಿಕವಾಗಿ ಎಲ್ಲೆಡೆಯಿಂದ ತನ್ನ ರಾಜ್ಯಕ್ಕೆ ಬಂಡವಾಳ ಹರಿದು ಬರಬೇಕೆಂದು ಬಯಸುತ್ತಾರೆ ಹಾಗೂ ಆಗಸ್ಟ್ 10ರಂದು ಅವರು 16 ರಾಯಭಾರಿಗಳು ಸೇರಿದಂತೆ, 30 ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿ ಆ ದೇಶಗಳ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದರು.
ಅಂದರೆ ದೇಶದ ಹೊರಗಿನ ಬಂಡವಾಳಕ್ಕೆ, ಹಣಕ್ಕೆ ಸ್ವಾಗತವಿದೆ. ಆದರೆ ಭಾರತದ ಒಳಗಿನ ಪ್ರತಿಭಾವಂತರು ಆಂಧ್ರಪ್ರದೇಶದವರಲ್ಲವಾದರೆ ಅವರಿಗೆ ಸ್ವಾಗತವಿಲ್ಲ. ತೆಲುಗು ಟೆಕ್ಕಿಗಳು ವಿಶ್ವದ ನಾನಾ ದೇಶಗಳಿಗೆ ವಲಸೆ ಹೋಗಿ ಹೆಸರು ಗಳಿಸಿರುವ ಕಾಲ ಇದು. ನಿಜ ಹೇಳಬೇಕೆಂದರೆ, ಯಡಿಯೂರಪ್ಪನವರು ಸ್ಥಳೀಯರಿಗೆ, ಕರ್ನಾಟಕದವರಿಗೆ ಮಾತ್ರ ನೌಕರಿಯನ್ನು ಮೀಸಲಿಟ್ಟರೆ ಆಂಧ್ರಪ್ರದೇಶದ ಟೆಕ್ಕಿಗಳೇ ಅತ್ಯಧಿಕ ಸಂಖ್ಯೆಯಲ್ಲಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾವಿರಾರು ಮಂದಿ ತೆಲುಗರು, ತೆಲುಗು ಟೆಕ್ಕಿಗಳು ಕರ್ನಾಟಕದಲ್ಲಿ ಉದ್ಯೋಗದಲ್ಲಿದ್ದಾರೆ.
‘‘ಡೊನಾಲ್ಡ್ ಟ್ರಂಪ್ ಅವರ ಅಮೆರಿಕನ್ ಸರಕಾರ ವಲಸಿಗರಿಂದ ನೌಕರಿಗಳನ್ನು ಕಿತ್ತುಕೊಂಡು ಅಮೆರಿಕನ್ ನಾಗರಿಕರಿಗೆ ನೀಡುವುದು ಸರಿಯಾದರೆ ಆಂಧ್ರ ಸರಕಾರ ತಂದಿರುವ ಕಾಯ್ದೆ ಯಾಕೆ ಸರಿಯಲ್ಲ’’ ಎಂದು ಜಗನ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಆದರೆ ಟ್ರಂಪ್ ತನ್ನ ಶ್ವೇತ ರಾಷ್ಟ್ರೀಯವಾದಿ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳುವ ಒಂದು ಪ್ರಯತ್ನವಾಗಿ ಮಾಡುತ್ತಿರುವುದನ್ನು ಭಾರತದಲ್ಲಿ ಜಗನ್ ಸಮರ್ಥಿಸಿಕೊಳ್ಳುವುದು ಅಸಂಗತವಾಗುತ್ತದೆ. ಟ್ರಂಪ್‌ರ ವಲಸೆ ವಿರೋಧಿ ನೀತಿಗಳ ಉದ್ದೇಶ ಉದ್ಯೋಗಗಳನ್ನು ರಕ್ಷಿಸುವುದಲ್ಲ.
ಅದೇನಿದ್ದರೂ ಆಂಧ್ರಪ್ರದೇಶದಲ್ಲಿ ಮಣ್ಣಿನ ಮಗ ನೀತಿಗಳಿಗೆ ದೀರ್ಘವಾದ ಒಂದು ಇತಿಹಾಸ ಇದೆ. ಏಳನೆಯ ನಿಜಾಮರ ಕಾಲದಲ್ಲಿ ಇದ್ದ ‘ಮೂಲ್ಕಿ ನಿಯಮಗಳು’ ಅಂತಿಮವಾಗಿ ಸಂವಿಧಾನದ 371 ಡಿ ವಿಧಿಯ ರೂಪ ಪಡೆದವು. ಪರಿಣಾಮವಾಗಿ ಸರಕಾರ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ದೊರೆಯಿತು. ಈಗ ಬಂದಿರುವ ಹೊಸ ಕಾನೂನು ಖಾಸಗಿ ರಂಗದಲ್ಲಿ ಕೂಡ ಸ್ಥಳೀಯರಿಗೆ ಮೀಸಲಾತಿ ನೀಡುವ ಒಂದು ಹೊಸ ಅಂಶವನ್ನು ಒಳಗೊಂಡಿದೆ.
ಅಂತಿಮವಾಗಿ, ಇದೆಲ್ಲ ಜನಪ್ರಿಯತೆ, ಪಾಪ್ಯುಲಿಸಂ ವರ್ಸಸ್ ಸಂವಿಧಾನದ ಪ್ರಶ್ನೆಯಾಗುತ್ತದೆ. ಈ ಪಾಪ್ಯುಲಿಸ್ಟ್ ಧೋರಣೆಯ ವಿರುದ್ಧ ದನಿ ಎತ್ತಿ ಸಂವಿಧಾನದ ಪರವಾಗಿ ನಿಲ್ಲುವ ಧೈರ್ಯ ಯಾವುದೇ ರಾಜಕೀಯ ನಾಯಕರಿಗಾಗಲಿ ಅಥವಾ ಪಕ್ಷಕ್ಕಾಗಲಿ ಇದೆಯೇ ? ಆಂಧ್ರಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡುವ ಕಾನೂನು ಬಂದ ಬಳಿಕ ಕಳೆದ ತಿಂಗಳಲ್ಲಿ ಯಾರೂ ಕೂಡ ಆ ಕಾನೂನನ್ನು ಪ್ರಶ್ನಿಸಿಲ್ಲ, ಅದಕ್ಕೆ ಸವಾಲೊಡ್ಡಿಲ್ಲ.*ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ