varthabharthi


ಭೀಮ ಚಿಂತನೆ

ಮಾಂಗ್‌ರ ಮೇಲಿರುವ ಆರೋಪ ತಿರುಳಿಲ್ಲದ್ದು

ವಾರ್ತಾ ಭಾರತಿ : 12 Sep, 2019

20ನೇ ಜುಲೈ 1927ರ ಬುಧವಾರದಂದು ಸಾಯಂಕಾಲ 7 ಘಂಟೆಗೆ ಪುಣೆಯ ಮಾಂಗ್‌ರ ವಸತಿಯಲ್ಲಿ ಪುಣೆಯ ‘ದೀನಬಂಧು’ ಪತ್ರಿಕೆಯ ಸಂಪಾದಕರಾದ ನವಲೆಯವರ ಅಧ್ಯಕ್ಷತೆಯಲ್ಲಿ ದಲಿತರ ಜಾಹೀರ ಸಭೆಯೊಂದನ್ನು ಆಯೋಜಿಸಲಾಗಿತ್ತು. ದಲಿತ ಹಾಗೂ ಮೇಲ್ಜಾತಿಯ ಒಟ್ಟು 300 ಜನ ನೆರೆದಿದ್ದರು. ಮುಂಬೈ ಕಾಯ್ದೆ ಮಂಡಳದ ಸರಕಾರ ನೇಮಿಸಿರುವಂತಹ ಸಭಾಸದರಾದ ಡಾ. ಅಂಬೇಡ್ಕರ್ ಹಾಗೂ ಡಾ. ಸಾಳುಂಕೆ, ಸುಭೇದಾರ್ ಘಾಡಗೆ, ಮಿ. ಇಂಗಳೆ, ಮಿ. ಲಾಂಡಗೆ, ಮಿ. ಸಾವಳೆಕರ್, ಮಿ. ಕೆ. ಕೆ. ಸಕಟ್, ಮಿ. ಘಾಡಗೆ, ಮಿ. ವಾಯದಂಡೆ, ವರ್ಹಾಡ್‌ನ ಆನಂದಸ್ವಾಮಿ ಹಾಗೂ ಶಂಕರಾವ್ ಪೋತನೀಸ್, ದೇಶಪಾಂಡೆ ಇವರೆಲ್ಲ ಮುಖ್ಯವಾಗಿ ಸಭೆಗೆ ಹಾಜರಿದ್ದರು. ಸಭೆ ಆರಂಭವಾದಾಗ ಜಿಟಿಜಿಟಿ ಮಳೆ ಆರಂಭವಾಗಿದ್ದರೂ ಡಾ. ಅಂಬೇಡ್ಕರ್ ಹಾಗೂ ಅವರ ಅನುಭವಸ್ಥ ನಾಯಕರ ಭಾಷಣಗಳನ್ನು ಕೇಳುವುದರಲ್ಲಿ ಜನ ಸಾಕಷ್ಟು ಉತ್ಸುಕರಾಗಿದ್ದರಿಂದ ಮಳೆಗೆ ಬೆಲೆ ಕೊಡದೆ ಸಭೆಯ ಕಾರ್ಯಕಲಾಪಗಳು ನಡೆದಿದ್ದವು.

ಕೆ. ಎಮ್. ಜಾದವ್ ಅವರ ಸೂಚನೆಯಂತೆ ಡಾ. ನವಲೆಯವರ ಅಧ್ಯಕ್ಷಸ್ಥಾನವನ್ನು ಸ್ವೀಕರಿಸಿದ ಮೇಲೆ ಡಾ. ಅಂಬೇಡ್ಕರ್ ಕೆಳಗಿನಂತೆ ಭಾಷಣ ಮಾಡಿದರು.

ನಾನಿಂದು ಮನಬಿಚ್ಚಿ ಮಾತಾಡುವವನಿದ್ದೇನೆ, ನನ್ನ ಭಾಷಣವನ್ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮಿ. ಸಕಟ್ ಹಾಗೂ ಮಿ. ವಾಯದಂಡೆಯವರು ಕಾರಣವಿಲ್ಲದೆ ನನ್ನನ್ನು ಟೀಕಿಸುತ್ತಿದ್ದಾರೆ. ನಾಯಕರ ಮೇಲೆ ಯಾವತ್ತೂ ಟೀಕೆಗಳಾಗುತ್ತವೆ ಅನ್ನುವುದನ್ನು ನಾನು ಬಲ್ಲೆ. ನಾನು ಮಾಂಗ್ ಜಾತಿಯವನು ಅನ್ನುವುದು ನಿಮಗೆಲ್ಲ ಗೊತ್ತು, ಮಾಂಗ್ ಸ್ವಾರ್ಥಿಗಳು ಅನ್ನುವುದು ಈ ಟೀಕಾಕಾರದ ಅಂಬೋಣ, ಆದರೆ ದಲಿತರ ಮಾಂಗ್‌ರೇತರ ಜಾತಿಯ ನಾಯಕರು ಮಾಂಗ್‌ರಿಗಾಗಿ ನಿಸ್ವಾರ್ಥ ಬುದ್ಧಿಯಿಂದ ಕೆಲಸ ಮಾಡಿದ್ದಾರೆಯೇ? ಅನ್ನುವ ಪ್ರಶ್ನೆಯನ್ನಿಲ್ಲಿ ನೆರೆದಿರುವವರೆಲ್ಲರಿಗೆ ಕೇಳುತ್ತಿದ್ದೇನೆ.

ವಾಸ್ತವಿಕವಾಗಿ ನೋಡಿದರೆ ಮಾಂಗ್‌ರೇತರ ಜಾತಿಗಳು ಶೈಕ್ಷಣಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಸುಧಾರಿಸಿವೆ. ಮುಂಬೈಯ ಕೆಲವು ಚಮ್ಮಾರರು ಹಾಗೂ ಮಹಾರರು ಇನ್‌ಕಮ್‌ಟ್ಯಾಕ್ಸ್ ಕಟ್ಟುವಷ್ಟು ಹಣವಂತರಾಗಿದ್ದಾರೆ. ಹೀಗಿದ್ದೂ ಮಾಂಗ್‌ರ ಏಳಿಗೆಗಾಗಿ ಅವರೆಂದಾದರೂ ಪ್ರಯತ್ನಿಸಿದ್ದಾರೆ ಅನ್ನುವುದನ್ನು ನಾನು ಕಂಡಿಲ್ಲ. ಆದರೆ ನಾವು ಅನೇಕ ಉಪಯುಕ್ತ ಸಂಸ್ಥೆಗಳನ್ನು ಕಟ್ಟಿಕೊಂಡು ಕೇವಲ ಮಾಂಗ್‌ರಿಗಷ್ಟೇಯಲ್ಲ ದಲಿತರ ಎಲ್ಲ ಜಾತಿಗಾಗಿ ಕಾಯಾ-ವಾಚಾ-ಮನಸಾ ಕಷ್ಟಪಡುತ್ತಿದ್ದೇವೆ. ಬಹಿಷ್ಕೃತ ಹಿತಕಾರಿಣಿ ಸಭೆಯನ್ನು ಸ್ಥಾಪಿಸಿ ಅಸ್ಪಶ್ಯೋನ್ನತಿಯ ಕೆಲಸವನ್ನಾರಂಭಿಸಿದ್ದೇವೆ. ಸೋಲಾಪೂರಿನಲ್ಲಿ ದಲಿತರಿಗಾಗಿ ನಾವು ವಸತಿಗೃಹಗಳನ್ನು ಕಟ್ಟಿದ್ದೇವೆ. ಚಮ್ಮಾರರು ಅದಕ್ಕೆ ಸಹಾಯ ಮಾಡಿಲ್ಲ ಆದರೂ ಮಾಂಗ್, ಮಹರ್, ಚಮ್ಮಾರಾರಾದಿ ಎಲ್ಲ ಜಾತಿಯ ಮಕ್ಕಳು ಈ ವಸತಿಗೃಹದಲ್ಲಿದ್ದಾರೆ. ‘ಇನ್ನಷ್ಟು ಮಹರ್ ಮಕ್ಕಳನ್ನು ಈ ವಸತಿಗೃಹಕ್ಕೆ ಕಳಿಸಿಕೊಡಿ’ ಎಂದು ಮಿ. ಸಕಟ್ ಅವರಿಗೆ ವಿನಂತಿಸಿದ್ದೇನೆ. ಅದರಂತೆಯೇ ನಾಸಿಕ್ ಹಾಗೂ ಜಳಗಾಂವ್‌ನಲ್ಲಿ ವಸತಿಗೃಹಗಳನ್ನಾರಂಭಿಸಿ ಮಾಂಗ್ ಹಾಗೂ ಮಾಂಗ್‌ರೇತರ ಜಾತಿಯ ಏಳಿಗೆಗಾಗಿ ನಾವು ಅನವರತವಾಗಿ ಕಷ್ಟಪಡುತ್ತಿದ್ದೇವೆ. ಹೀಗಿದ್ದೂ ಮಾಂಗ್ ಜಾತಿಯ ವಿರುದ್ಧ ಸುಮ್ಮನೆ ಗುಲ್ಲೆಬ್ಬಿಸುವುದರಲ್ಲೇನರ್ಥವಿದೆ? ಅನ್ನುವುದೇ ನಮಗರ್ಥವಾಗುತ್ತಿಲ್ಲ.

ಸರಕಾರದಿಂದ ಸಿಗುವ ಸವಲತ್ತುಗಳನ್ನು ಮಾಂಗ್‌ರು ಸ್ವಾರ್ಥಿಗಳಾಗಿ ಎಲ್ಲವನ್ನೂ ಕಬಳಿಸುತ್ತಾರೆ ಅನ್ನುವುದು ಟೀಕಾಕಾರರ ಅಂಬೋಣ. ಮುಂಬೈಯಲ್ಲಿ ನಿಕಾಳಜೆ ಅನ್ನುವ ಮಾಂಗ್‌ಜಾತಿಯ ಮನುಷ್ಯನನ್ನು ಮುಂಬೈ ಕಾರ್ಪೊರೇಷನ್‌ನಲ್ಲಿ ನೇಮಿಸಲಾಗಿತ್ತು. ಆದರೆ ಅಖಿಲ ದಲಿತರ ಉನ್ನತಿ ಹೇಳಿಕೊಳ್ಳುವಷ್ಟು ಅವರಿಂದಾಗಲಿಲ್ಲ ಅನ್ನುವ ವಿಷಯ ನನ್ನ ಗಮನಕ್ಕೆ ಬಂದಾಗ ಆ ಜಾಗಕ್ಕೆ ಚಮ್ಮಾರ ಜಾತಿಯ ಪ್ರಸಿದ್ಧ ಕ್ರಿಕೆಟ್ ಆಟಗಾರ ಮಿ. ಬಾಳು ಅವರನ್ನು ನಾನೇ ಸರಕಾರದಿಂದ ನೇಮಿಸಿದೆ. ಸಾತಾರ ಜಿಲ್ಲೆಯಲ್ಲಿ ಸಾಕಷ್ಟು ಮಾಂಗ್‌ರ ವಸತಿಯಿದ್ದರೂ ಅಲ್ಲಿಯ ಮುನಿಸಿಪಾಲ್ಟಿಯಲ್ಲಿ ಸರಕಾರ ನೇಮಿಸಿರುವ ಸಭಾಸದ ಚಮ್ಮಾರ ಜಾತಿಯವನೇ ಆಗಿದ್ದಾನೆ. ಈ ಎಲ್ಲ ವಿಷಯಗಳನ್ನು ಗಮನಿಸಿದಾಗ ಮಾಂಗ್‌ರ ಮೇಲೆ ಸ್ವಾರ್ಥಿತನದ ಆರೋಪ ಎಷ್ಟು ಸುಳ್ಳು ಅನ್ನುವುದು ಗೊತ್ತಾಗುತ್ತದೆ.

ಕೆಲವು ಮಾಂಗ್‌ರು ದೂರದೃಷ್ಟಿಯುಳ್ಳವರಲ್ಲದಿರಬಹುದು, ಹಾಗೆಂದು ಎಲ್ಲ ಮಾಂಗ್‌ರನ್ನು ದೂಷಿಸುವುದು ಒಲ್ಳೆಯದಲ್ಲ. ಮಾಂಗ್ ಜಾತಿಯ ನಾಯಕರೇನು ಮಾಡುತ್ತಿದ್ದಾರೆ ಅನ್ನುವುದನ್ನು ಸರಿಯಾಗಿ ಗಮನಿಸಿ ಆಮೇಲೆ ಆರೋಪಿಸಿ ಎಂದು ನಾನು ಇತರ ಜಾತಿಯ ನಾಯಕರಲ್ಲಿ ಬೇಡಿಕೊಳ್ಳುತ್ತೇನೆ. ನಾನು ಸ್ವತಃ ಮಹರ್‌ರೊಡನೆ ಊಟದ ಹಾಗೂ ಹೆಣ್ಣು ಕೊಡುಕೊಳ್ಳುವಿಕೆಯ ಸಂಬಂಧವಿಟ್ಟುಕೊಳ್ಳಲು ಸಿದ್ಧನಿರುವಾಗ ಮಾಂಗ್ ಮಹರ್‌ರ ನಡುವೆ ವೈರತ್ವವೇಕೆ? ನಾನು ಮಹರ್ ಹುಡುಗನನ್ನು ನನ್ನ ಸ್ವಂತ ಮಗನಂತೆ ಸಾಕಿದ್ದೆ, ಯಾರಾದರೂ ಇನ್ನೂಬ್ಬ ಮಹರ್ ಹುಡುಗನನ್ನು ಕರೆದುಕೊಂಡು ಬಂದರೆ ಅವನ ಪಾಲನೆ ಪೋಷಣೆಯನ್ನೂ ನೋಡಿಕೊಳ್ಳುತ್ತೇನೆ. ನಾವು ಬರಿಯ ಬಾಯಿ ಮಾತಿನ ನೇತಾರರಲ್ಲ, ಪ್ರತಿಯೊಂದು ಕೆಲಸವನ್ನು ಮಾಡಿ ತೋರಿಸುತ್ತೇವೆ. ಕಾಂಗ್ರೆಸ್‌ನ ಅಧಿವೇಶನದಲ್ಲಿ ಊಟದ ಸಮಯದಲ್ಲಿ ಪ್ರತಿಯೊಂದು ಜಾತಿಗೆ ಬೇರೆ ಬೇರೆ ಕೂರಿಸಿ ಊಟ ಹಾಕಲಾಗುತ್ತದೆ ಆದರೆ ನನ್ನ ನೇತೃತ್ವದಲ್ಲಾಗುವ ಪರಿಷತ್ತಿನಲ್ಲಿ ಎಲ್ಲ ಜಾತಿಯವರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇದೆಲ್ಲದರಿಂದ ಎಲ್ಲ ಜಾತಿಗಳಲ್ಲೂ ಐಕ್ಯತೆ ಬೆಳೆಯಲು ನಾವೆಷ್ಟು ಪ್ರಯತ್ನಿಸುತ್ತೇವೆ ಅನ್ನುವುದು ಗೊತ್ತಾದೀತು.

ಇಷ್ಟೆಲ್ಲ ಇದ್ದೂ ಮಾಂಗ್‌ರೇತರ ಜಾತಿಗಳು ಮಾಂಗ್‌ರಿಂದ ಬೇರೆ ಇರಬಯಸಿದರೆ ಇರಬಹುದು. ಅವರು ಸ್ವತಂತ್ರವಾಗಿದ್ದು ಅಸ್ಪಶ್ಯೋದ್ಧಾರದ ಕೆಲಸ ಮಾಡಿದರೂ ನನಗೇನೂ ತೊಂದರೆಯಿಲ್ಲ. ಆದರೆ ಅವರು ಕೆಲವು ವಿಶಿಷ್ಟ ಜಾತಿಯ ಜನರ ಕೈ ಕೆಳಗಿರಬಾರದು ಅನ್ನುವುದೊಂದೇ ನನ್ನ ವಿನಂತಿ. ಕೆಲವು ಬ್ರಾಹ್ಮಣರು ಅಸ್ಪಶ್ಯೋದ್ಧಾರಕ್ಕಾಗಿ ಕಷ್ಟಪಡುತ್ತಿದ್ದಾರೆ ಅನ್ನುವುದು ನಿಜವಾದರೂ ಅನೇಕ ಬ್ರಾಹ್ಮಣರು-ಬ್ರಾಹ್ಮಣೇತರರು ತಮ್ಮ ಪಕ್ಷವನ್ನು ಗಟ್ಟಿಗೊಳಿಸಲು ಮಾಂಗ್‌ರನ್ನು ಹತ್ತಿರ ಸೇರಿಸುತ್ತಾರೆ ಎಂದು ನನಗನಿಸುತ್ತದೆ. ಕೇವಲ ನಮ್ಮ ಉದ್ಧಾರಕ್ಕಾಗಿ ನಿಸ್ವಾರ್ಥದಿಂದ ಕೆಲಸ ಮಾಡುವ ಬ್ರಾಹ್ಮಣರು ಇಲ್ಲವೇ ಮರಾಠರು ನಮಗೆ ಬೇಕಿದ್ದಾರೆ. ಬೇರೆಯವರ ಕೈಯ ಕೋಲಾಗುವುದು ನಮಗೆ ಬೇಕಿಲ್ಲ.

ಸ್ವಾರ್ಥ ಬುದ್ಧಿಯಿಂದ ಪ್ರೇರಿತವಾದ ಜನರಿಂದ ಅಸ್ಪಶ್ಯತೆ ನಿವಾರಣೆಯ ಕೆಲಸವಾದರೂ ಚಿಂತೆಯಿಲ್ಲ. ಏಕೆಂದರೆ ಅಸ್ಪಶ್ಯರಾಗಿ ಸಿಗುವ ಸವಲತ್ತಿನ ಸಹಾಯದಿಂದ ನಮ್ಮ ಏಳಿಗೆ ಮಾಡಿಸಿಕೊಳ್ಳುವುದೇ ನಮಗೆ ಸುಲಭವಾದೀತು ಎಂದು ನನಗನಿಸುತ್ತದೆ. ಅಸ್ಪಶ್ಯರನ್ನು ಹತ್ತಿರ ಸೇರಿಸಿ ಬ್ರಾಹ್ಮಣೇತರರನ್ನು ಪಕ್ಕಕ್ಕೆ ಸರಿಸುವುದಕ್ಕೆ ಬ್ರಾಹ್ಮಣರು ಪ್ರಯತ್ನಿಸುತ್ತಿದ್ದಾರೆ ಅನ್ನುವುದು ನನ್ನನಿಸಿಕೆ. ರಾ. ಮಾಟೆಯವರು ನನ್ನ ಅನಿಸಿಕೆ ಸುಳ್ಳು ಮಾಡಿದರೆ ನಾನವರಿಗೆ ಬೇಕಾದ ಸಹಾಯವನ್ನೆಲ್ಲ ಮಾಡುವೆ. ಮುಸಲ್ಮಾನರಿಂದ ಬಿಡುಗಡೆ ಹೊಂದಲು ಅಸ್ಪಶ್ಯತೆಯನ್ನು ನಿವಾರಿಸುವ ಆಟ ಇತ್ತೀಚೆಗೆ ಹಿಂದೂ ಮಹಾಸಭೆ ಆಡುತ್ತಿದೆ ಎಂದು ನನಗನಿಸುತ್ತಿದೆ. ಹಾಗಾಗಿ ಮಾಂಗ್ ರೇತರ ಬಂಧುಗಳು ಯಾರಿಗೂ ಬಲಿಯಾಗಬೇಡಿ ಎಂದು ನಾನವರನ್ನು ವಿನಂತಿಸುತ್ತೇನೆ. ಮಿ. ಸಕಟ್ ಅವರು ಭಿಕ್ಷೆ ಬೇಡಿದರೂ ನನಗೆ ದುಃಖವಾಗಲಿಕ್ಕಿಲ್ಲ ಆದರೆ ಅವರು ಮಿ. ಮಾಟೆಯವರ ಸಂಗ ಬಯಸಿದರೆ ಮಾತ್ರ ನನಗೆ ಬಹಳ ದುಃಖವಾದೀತು.

ಸ್ವತಂತ್ರವಾಗಿರಿ, ಆದರೆ ಇನ್ನೊಬ್ಬರ ಗುಲಾಮರಾಗಬೇಡಿ ಎಂದಷ್ಟೆ ನಾನವರಿಗೆ ಹೇಳಬಯಸುತ್ತೇನೆ. ಮಾಂಗ್ ಜಾತಿಯ ನಾಯಕರೇ ಕೌನ್ಸಿಲ್ ಜಾಗಗಳನ್ನು ಕಬಳಿಸುತ್ತಾರೆ ಅನ್ನುವ ಆರೋಪ ನಮ್ಮ ಮೇಲಿದೆ. ದಲಿತರ ಹಕ್ಕುಗಳನ್ನು ರಕ್ಷಿಸಲು ಯೋಗ್ಯ ಮನುಷ್ಯನೇ ಅಲ್ಲಿರಬೇಡವೇ? ಮಾಂಗ್‌ರೇತರರಲ್ಲಿ ನನ್ನಂತಹ ಮನುಷ್ಯ ಹುಟ್ಟಿಲ್ಲ ಅನ್ನುವುದು ಅವರ ದುರ್ದೈವವಲ್ಲವೇ? ಆದರೆ ನನಗೆ ಕೌನ್ಸಿಲ್‌ನ ಜಾಗದ ಆಸೆಯಿಲ್ಲ, ಮಾಂಗ್ ರೇತರರಲ್ಲಿ ಯೋಗ್ಯ ಮನುಷ್ಯನಿದ್ದರೆ ಸಂತೋಷವಾಗಿ ನನ್ನ ಜಾಗಕ್ಕೆ ಬರಲಿ, ನಾನಿಲ್ಲಿಂದಲೇ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಕೌನ್ಸಿಲ್‌ನಲ್ಲಿ ನಾನು ಯಾವಾಗಲಾದರೂ ಮಾಂಗ್‌ರ ಪರ, ಮಾಂಗ್‌ರ ಹಿತಕ್ಕಾಗಿಯೇ ಕೆಲಸ ಮಾಡುತ್ತಿದ್ದೇನೆ ಅನ್ನುವ ಅನುಮಾನ ಕಾಡಿದರೆ ಪತ್ರದ ಮೂಲಕ ನೀವು ನನಗೆ ತಿಳಿಸಿದರೆ ನಿಮ್ಮ ಅನುಮಾನಗಳನ್ನು ಪರಿಹರಿಸುತ್ತೇನೆ.

‘‘ಸುಶಿಕ್ಷಿತರಾದರೆ ಅಸ್ಪಶ್ಯತೆ ತಂತಾನೆ ತೊಲಗುತ್ತದೆ’’ ಎಂದು ಮೇಲ್ಜಾತಿಯವರು ಆಗಾಗ ಹೇಳುತ್ತಿರುತ್ತಾರೆ. ಕೇವಲ ಸುಶಿಕ್ಷಿತರಾದರೆ ಅಸ್ಪಶ್ಯತೆ ತೊಲಗುತ್ತದೆ ಅಂದುಕೊಳ್ಳುವುದು ಶತ ಮೂರ್ಖತನ. ನಾನೊಂದು ಉದಾಹರಣೆ ಕೊಡುತ್ತೇನೆ, ನಾನು ಮಾಂಗ್ ಎಂದು ಮುಂಬೈಯ ನನ್ನ ಚೇಂಬರ್ ಹತ್ತಿರದ ಅಡುಗೆಯವನಿಗೆ ಹಾಗೂ ಹೊಟೇಲಿನವನಿಗೆ ಎಲ್ಲಿಯವರೆಗೆ ಗೊತ್ತಿರಲಿಲ್ಲವೋ ಅಲ್ಲಿಯವರೆಗೆ ನನಗೆ ಅವರ ಕಪ್ಪು ಬಸಿಯಲ್ಲಿ ಚಹಾ ಮತ್ತು ಪ್ಲೇಟಿನಲ್ಲಿ ಭಜ್ಜಿಗಳನ್ನು ಕೊಡುತ್ತಿದ್ದರು. ಇತ್ತೀಚೆಗೆ ನಾನು ಮಾಂಗ್‌ನೆಂಬುದು ಗುಜರಾತಿ ಪತ್ರಿಕೆಯಲ್ಲಿ ಅಚ್ಚಾದ ನನ್ನ ಛಾಯಾಚಿತ್ರದ ಮೂಲಕ ಗೊತ್ತಾದ ಮೇಲಿನಿಂದ ನನಗವರು ಗಾಜಿನ ಗ್ಲಾಸಿನಲ್ಲಿ ಚಹಾ ಕೊಡುತ್ತಿದ್ದಾರೆ. ಹಾಗೆ ಮಾಡಲು ಮೇಲ್ಜಾತಿಯ ಒಬ್ಬ ಕಾರಕೂನನು ಕಿವಿ ಚುಚ್ಚಿದ್ದ. ಇಂತಹ ಪರಿಸ್ಥಿತಿಯಿರುವಾಗ ಸುಶಿಕ್ಷಿತರಾದರೆ ಅಸ್ಪಶ್ಯತೆ ತೊಲಗುತ್ತದೆ ಅನ್ನುವುದು ಎಷ್ಟು ತಪ್ಪು ಅನ್ನುವುದು ತಿಳಿಯುತ್ತದೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)