ಎನ್ಆರ್ಸಿ ಬಿಕ್ಕಟ್ಟಿಗೆ ಸರ್ವೋಚ್ಚ ನ್ಯಾಯಾಲಯದ ಅವಾಸ್ತವಿಕ ಗಡುವು ಕಾರಣ: ನ್ಯಾ. ಮದನ್ ಬಿ. ಲೋಕುರ್
ಮಾತು ಕತೆ
ಎನ್ಆರ್ಸಿ ವಿಷಯದಲ್ಲಿ ಕೇವಲ ಪ್ರಕ್ರಿಯೆಯನ್ನು ದೂಷಿಸಲಾಗಿದೆ. ಈ ಪ್ರಕ್ರಿಯೆಯಿಂದ ಮಾನವೀಯ ಬಿಕ್ಕಟ್ಟು ಸೃಷ್ಟಿಯಾದ ಕಾರಣಕ್ಕೆ ಸರಕಾರವನ್ನು ಟೀಕಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ಅವಾಸ್ತವಿಕ ಗಡುವು ನೀಡುವ ಮೂಲಕ ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತು.
ಬಿಡುಗಡೆಗೊಂಡ ಎರಡು ವಾರಗಳ ನಂತರವೂ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಗೊಂದಲಗಳು ಕಡಿಮೆಯಾಗುತ್ತಿಲ್ಲ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಮದನ್ ಬಿ.ಲೋಕುರ್ ಮತ್ತು ಕುರಿಯನ್ ಜೋಸೆಫ್ ಹಾಗೂ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾ ಅವರನ್ನೊಳಗೊಂಡ ಜನರ ನ್ಯಾಯಾಧಿಕರಣ, ಈ ಇಡೀ ಯೋಜನೆಯ ಅನುಷ್ಠಾನ ಮಾನವೀಯ ಸಮಸ್ಯೆಯನ್ನು ಹುಟ್ಟುಹಾಕಿದೆ ಎಂದು ಟೀಕಿಸಿದೆ.
ಈ ಸಮಸ್ಯೆ ಕಡಿಮೆಯಾಗದಿರುವುದರಿಂದ ಚಿಂತೆಯಾಗಿದೆ ಎಂದು ನ್ಯಾಯಾಧಿಕರಣ ತಿಳಿಸಿದೆ.
3.3 ಕೋಟಿ ಅರ್ಜಿದಾರರ ಪೈಕಿ 19 ಲಕ್ಷ ಜನರನ್ನು ಆಗಸ್ಟ್ 31, 2019ರಂದು ಬಿಡುಗಡೆಯಾದ ಎನ್ಆರ್ಸಿಯ ಅಂತಿಮ ಪಟ್ಟಿಯಿಂದ ಹೊರಗಿಡಲಾಗಿದೆ. ಎನ್ಆರ್ಸಿಯ ಅಂತಿಮ ಪಟ್ಟಿ ಬಿಡುಗಡೆಯಾದ ವಾರದ ನಂತರ ನಾಗರಿಕರ ನ್ಯಾಯಾಧಿಕರಣ ಈ ವಿಷಯದಲ್ಲಿ ಸಭೆ ನಡೆಸಿತು. ಎರಡು ದಿನಗಳವರೆಗೆ ನಡೆದ ಚರ್ಚೆಯಲ್ಲಿ ಈ ಕೆಳಗಿನ ವಿಷಯಗಳ ಮೇಲೆ ಗಮನಹರಿಸಲಾಗಿತ್ತು.
ಎನ್ಆರ್ಸಿ ಪ್ರಕ್ರಿಯೆಯನ್ನು ಸಂವಿಧಾನದ ಅನುಸಾರ ನಡೆಸಲಾಗಿದೆಯೇ?
ಸಾಂವಿಧಾನಿಕ ಪ್ರಕ್ರಿಯೆಗಳು ಮತ್ತು ನೈತಿಕತೆಯನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರವೇನು?
ಎನ್ಆರ್ಸಿಯನ್ನು ದೇಶದ ಇತರೆಡೆಗಳಿಗೆ ವಿಸ್ತರಿಸುವ ಸೂಚನೆಗಳು ಮತ್ತು ಅದರಿಂದ ಉಂಟಾಗುವ ಮಾನವೀಯ ಬಿಕ್ಕಟ್ಟು ಯಾವುದು?
ಈ ಎಲ್ಲ ವಿಷಯಗಳ ಬಗ್ಗೆ ನ್ಯಾಯಾಧೀಶ ಮದನ್ ಬಿ. ಲೋಕುರ್ ಅವರು ರೆಡಿಫ್.ಕಾಮ್ನ ಸಯ್ಯದ್ ಫಿರ್ದೌಸ್ ಅಶ್ರಫ್ ಜೊತೆ ನಡೆಸಿದ ಇ-ಮೇಲ್ ಸಂದರ್ಶನದಲ್ಲಿ ಚರ್ಚಿಸಿದ್ದಾರೆ.
ಪ್ರ: ನೀವೂ ಭಾಗವಾಗಿರುವ ಜನರ ನ್ಯಾಯಾಧಿಕರಣ ಎನ್ಆರ್ಸಿ ಯೋಜನೆಯನ್ನು ಟೀಕಿಸಲಾಗುತ್ತಿದೆ. ಈ ಯೋಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಏನಾದರೂ ಯೋಚನೆಯಿದೆಯೇ?
ಉ: ಯೋಜನೆಯನ್ನು ಟೀಕಿಸಿಲ್ಲ. ಪ್ರಕ್ರಿಯೆಯನ್ನು ಟೀಕಿಸಲಾಗಿದೆ.
ಪ್ರ: ಎನ್ಆರ್ಸಿ ವಿಷಯದಲ್ಲಿ ಸರಕಾರವನ್ನು ದೂಷಿಸಲಾಗುತ್ತಿದೆ. ಆದರೆ ಇದಕ್ಕೆ ಆದೇಶ ನೀಡಿರುವುದು ಮತ್ತು ಪ್ರಕ್ರಿಯೆಯ ಮೇಲುಸ್ತುವಾರಿ ನೋಡಿಕೊಂಡಿರುವುದು ಸರ್ವೋಚ್ಚ ನ್ಯಾಯಾಲಯವಾಗಿರುವುದರಿಂದ ಸರಕಾರವನ್ನು ಟೀಕಿಸುವುದು ಸರಿಯೇ?
ಉ: ಮೊದಲೇ ತಿಳಿಸಿದಂತೆ ಕೇವಲ ಪ್ರಕ್ರಿಯೆಯನ್ನು ದೂಷಿಸಲಾಗಿದೆ. ಈ ಪ್ರಕ್ರಿಯೆಯಿಂದ ಮಾನವೀಯ ಬಿಕ್ಕಟ್ಟು ಸೃಷ್ಟಿಯಾದ ಕಾರಣಕ್ಕೆ ಸರಕಾರವನ್ನು ಟೀಕಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ಅವಾಸ್ತವಿಕ ಸಮಯ ಗಡುವು ನೀಡುವ ಮೂಲಕ ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತು.
ಪ್ರ: ನಾಗರಿಕರನ್ನು ಲೆಕ್ಕಹಾಕಲು ಇದಕ್ಕಿಂತ ಉತ್ತಮ ಮತ್ತು ಸುರಕ್ಷಿತ ದಾರಿಯಿದೆಯೇ? ಇಡೀ ಯೋಜನೆಯ ಉದ್ದೇಶದಿಂದ (ದೇಶದಲ್ಲಿರುವ ಅಕ್ರಮ ವಲಸಿಗರ ಪತ್ತೆ) ಗಮನ ಕಳೆದುಕೊಳ್ಳದೆ ಅದನ್ನು ಸೂಕ್ತ ರೀತಿಯಲ್ಲಿ ನಡೆಸುವುದು ಹೇಗೆ?
ಉ: ಇದಕ್ಕೆ ಸರಕಾರ ಉತ್ತರಿಸಬೇಕು. ಆದರೆ ಅದು ಮಾನವ ವೆಚ್ಚವನ್ನೂ ಗಮನದಲ್ಲಿರಿಸಬೇಕು. ಅಸ್ಸಾಮಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ನಿರೀಕ್ಷಿತ ಕೋಟಿಗಳಿಂದ ಕೆಲವು ಲಕ್ಷಕ್ಕೆ ಬಂದಿಳಿದಿದೆ. ಇದು ಎಣಿಕೆಯಲ್ಲಿ ದೋಷ ತೋರಿಸುತ್ತದೆಯೇ ಅಥವಾ ಸತ್ಯದಲ್ಲಿ? ಕೇವಲ ಆಳವಾದ ವಿಶ್ಲೇಷಣೆಯಿಂದ ಮಾತ್ರ ಇದು ತಿಳಿಯಲು ಸಾಧ್ಯ.
ಪ್ರ: ಅಸ್ಸಾಮಿನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಅಕ್ರಮ ವಲಸಿಗರ ಸಮಸ್ಯೆಯಿದೆಯೇ?
ಉ: ಇದು ಅಕ್ರಮ ವಲಸಿಗರನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಮತ್ತು ಗುರುತಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಪ್ರ: ಯೋಜನೆಯ ಮುಂದಿನ ಭಾಗವಾಗಿರುವ ಬಂಧನ ಪ್ರಕ್ರಿಯೆಗೆ ಇನ್ನೂ ಚಾಲನೆ ನೀಡಲಾಗಿಲ್ಲ ಮತ್ತು ಎನ್ಆರ್ಸಿಯಿಂದ ಕೈಬಿಟ್ಟವರು ತಮ್ಮ ಪ್ರಮಾಣಪತ್ರ ಒದಗಿಸಲು 120 ದಿನಗಳ ಸಮಯಾವಕಾಶ ನೀಡಲಾಗಿದೆ. ನಿಮ್ಮ ಪ್ರಕಾರ ಇದು ನ್ಯಾಯಯುತವೇ?
ಉ: ಹಲವು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಕೆಲವರಂತೂ ಅನೇಕ ವರ್ಷಗಳಿಂದ ಬಂಧನದಲ್ಲಿದ್ದಾರೆ. 120 ದಿನಗಳ ಸಮಯಾವಕಾಶ ಸಾಕು. ಆದರೆ ಅಗತ್ಯಬಿದ್ದರೆ ಅದನ್ನು ವಿಸ್ತರಿಸಬೇಕು.
ಪ್ರ: ಎನ್ಆರ್ಸಿಯನ್ನು ದೇಶಾದ್ಯಂತ ವಿಸ್ತರಿಸಲು ಸರಕಾರ ಯೋಚಿಸುತ್ತಿದೆ. ಇದು ಉತ್ತಮ ಯೋಚನೆ ಎಂದು ನಿಮಗನಿಸುತ್ತದೆಯೇ?
ಉ: ಸದ್ಯ ಪ್ರಕ್ರಿಯೆಯನ್ನು ಬಳಸಿಯಂತೂ ಖಂಡಿತವಾಗಿಯೂ ಒಳ್ಳೆಯದಲ್ಲ.
ಪ್ರ: ಅಕ್ರಮ ವಲಸಿಗರು ನಿಜವಾಗಿಯೂ ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ನಿಮಗನಿಸುತ್ತದೆಯೇ?
ಉ: ಅದು ವಲಸೆಯ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಈ ಹಿಂದೆಯೂ ದೇಶಕ್ಕೆ ವಲಸಿಗರು ಬಂದಿದ್ದರು. ಆದರೆ ಅವರಿಂದ ದೇಶಕ್ಕೆ ಯಾವುದೇ ಅಪಾಯ ಎದುರಾಗಿಲ್ಲ.
ಪ್ರ: ಅನೇಕ ಭಾರತೀಯರು ವಲಸಿಗರು ಭಾರತದ ಸಂಪನ್ಮೂಲಗಳಲ್ಲಿ ಪಾಲು ಪಡೆಯುತ್ತಿದ್ದಾರೆ ಎನ್ನುವ ಭಾವನೆಯನ್ನು ಹೊಂದಿದ್ದಾರೆ. ಹಾಗಾಗಿ ಭಾರತೀಯರ ಮನಸ್ಸಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಇರುವ ಆತಂಕವನ್ನು ಪರಿಹರಿಸಲು ಯಾವ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ?
ಉ: ಇದಕ್ಕೆ ಸರಕಾರ ಉತ್ತರಿಸಬೇಕು.
ಪ್ರ: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರೆ ಬಾಂಗ್ಲಾದೇಶ ಈ ವಲಸಿಗರನ್ನು ಪಡೆಯಲು ನಿರಾಕರಿಸಿದೆ. ಈ ಪರಿಸ್ಥಿತಿಯಲ್ಲಿ 19 ಲಕ್ಷ ಅಕ್ರಮ ವಲಸಿಗರನ್ನು ನಾವು ಏನು ಮಾಡಬಹುದು?
ಉ: ಇದಕ್ಕೆ ಸರಕಾರ ಉತ್ತರಿಸಬೇಕು.
ಪ್ರ: ಎನ್ಆರ್ಸಿ ಪ್ರಕ್ರಿಯೆಗೆ ಆಗಸ್ಟ್ 31ನ್ನು ಅಂತಿಮ ಗಡುವಾಗಿ ನಿಗದಿಪಡಿಸಿದ ಸರ್ವೋಚ್ಚ ನ್ಯಾಯಾಲಯದ ಕ್ರಮ ತಪ್ಪಾಗಿತ್ತು ಅದಕ್ಕೆ ಹೆಚ್ಚಿನ ಸಮಯ ನೀಡಬೇಕಿತ್ತು ಎಂದು ಅನೇಕರು ಭಾವಿಸುತ್ತಾರೆ. ನೀವೂ ಹಾಗೆ ಭಾವಿಸುತ್ತೀರಾ? ಹೌದಾದರೆ, ಯಾಕೆ?
ಉ: ಇದನ್ನು ಸರಿ ಅಥವಾ ತಪ್ಪು ಎಂದು ಹೇಳುವುದು ಕಷ್ಟ. ಆದರೆ ಸಮಯಾವಕಾಶ ನಿಗದಿಪಡಿಸುವಾಗ ಸರ್ವೋಚ್ಚ ನ್ಯಾಯಾಲಯ ಕಾರ್ಯಸಾಧುತ್ವವನ್ನು ನೋಡಬೇಕಿತ್ತು.
ಪ್ರ: ಹೊರಗಿಡಲ್ಪಟ್ಟ ಜನರು ಪೌರತ್ವ ಪಡೆಯಬಹುದಾದ ಸಾಧ್ಯತೆಗಳೆಷ್ಟು?
ಉ: ಇದಕ್ಕೆ ಸರಕಾರ ಉತ್ತರಿಸಬೇಕು.
ಪ್ರ: ಸರಕಾರ ನಾಗರಿಕರ ಮೇಲೆ ಪೌರತ್ವದ ಹೊರೆ ಹೊರಿಸಬಹುದೇ?
ಉ: ಸದ್ಯ ಮಾಡಿರುವಂತೆ ಶೇ.100 ಅಲ್ಲ. ಒಂದು ಸೀಮಿತ ಹಂತದವರೆಗೆ ವೌಖಿಕ ಸಾಕ್ಷಿಗೂ ಅನುಮತಿಸಿದರೆ, ಹೌದು.
ಪ್ರ: ಅಸ್ಸಾಮಿನಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ನಡೆಯುವುದು ಸಾಮಾನ್ಯವಾಗಿದೆ. ಹಾಗಾಗಿ ಮಹಿಳೆಯರ ದಾಖಲೆಗಳಲ್ಲಿ ಅವರ ಹೆತ್ತವರ ಹೆಸರಿನ ಬದಲಿಗೆ ಗಂಡನ ಹೆಸರಿರುತ್ತದೆ. ಇದರಿಂದ ಅವರು ತಮ್ಮ ವಂಶಾವಳಿಯನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದು ನಿಜವೇ?
ಉ: ಕೆಲವೊಂದು ಪರಿಶೀಲನೆಗಳು ಇದನ್ನು ಸೂಚಿಸಿವೆ.
ಪ್ರ: ಎನ್ಆರ್ಸಿಯನ್ನು ಭಾರತದ ಸಂವಿಧಾನದ ಅನುಸಾರ ನಡೆಸಲಾಗಿದೆಯೇ?
ಉ: ಇದನ್ನು ಸರ್ವೋಚ್ಚ ನ್ಯಾಯಾಲಯ ಪರಿಶೀಲಿಸುತ್ತಿದೆ. ಪೌರತ್ವ ಕಾಯ್ದೆ (ಬಾಹ್ಯ ಕೊಂಡಿ)ಯ ವಿಧಿ 6ಎಯ ಸಾಂವಿಧಾನಿಕ ಸಿಂಧುತ್ವ ಪರಿಗಣನೆಗೆ ಬಾಕಿಯುಳಿದಿದೆ.
ಕೃಪೆ: ರೆಡಿಫ್. ಕಾಮ್