varthabharthi


ಬುಡಬುಡಿಕೆ

ನನ್ನ ಬಳಿ ಸ್ಕೂಟರ್ ಇಲ್ಲ...ಮತ್ತೆ ಹೆಲ್ಮೆಟ್ ಯಾಕೆ ಸಾರ್...?

ವಾರ್ತಾ ಭಾರತಿ : 15 Sep, 2019
*ಚೇಳಯ್ಯ chelayya@gmail.com

ತನ್ನ ಪುರಾತನ ಸ್ಕೂಟರನ್ನೇ ದಂಡವಾಗಿ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿದ ಪತ್ರಕರ್ತ ಎಂಜಲು ಕಾಸಿ ನಿರಾಳವಾಗಿ ನಗರದಲ್ಲಿ ನಡೆದುಕೊಂಡು ಬರುತ್ತಿದ್ದ. ಈ ಸ್ಕೂಟರನ್ನು ಹೊಂದಿದ ಆತನ ಸ್ಥಿತಿ ಗೋ ಸಾಕುವ ರೈತನಂತಾಗಿತ್ತು. ಮನೆಯಲ್ಲಿಟ್ಟು ಸಾಕುವಂತಿಲ್ಲ. ಹೊರಗೆ ಮಾರುವಂತಿಲ್ಲ. ರೈತನಿಗೆ ಗೋರಕ್ಷಕರ ಕಾಟವಾದರೆ, ಕಾಸಿಗೆ ಟ್ರಾಫಿಕ್ ಪೊಲೀಸರ ಕಾಟ. ಹಾಲು ಕೊಡದ ಹಸುವನ್ನು ಸಾಕಲು ರೈತ ಕಾಸು ಕೊಟ್ಟುಹುಲ್ಲು ತರುವಂತಿಲ್ಲ. ಇತ್ತ, ಸ್ಕೂಟರ್‌ಗೆ ಪೆಟ್ರೋಲ್ ಹಾಕಲು ದುಡ್ಡಿಲ್ಲ. ಇದರ ಜೊತೆಗೆ ಗೋರಕ್ಷಕರಂತೆ, ಟ್ರಾಫಿಕ್ ಪೊಲೀಸರು ತಡೆದು ಕಾಟ ಕೊಡಲು ಶುರು ಮಾಡಿದ್ದಾರೆ. ‘‘ಸಾರ್ ಹೀಗೆಲ್ಲ ದಂಡ ಕಟ್ಟಲು ಈ ಗುಜರಿ ಸ್ಕೂಟರ್ ಗೋಮಾತೆ ಸ್ಥಾನವನ್ನು ಪಡೆದಿದೆಯೇ?’’ ಕಾಸಿ ಅಚ್ಚರಿಯಿಂದ ಟ್ರಾಫಿಕ್ ಪೊಲೀಸರ ಬಳಿ ಕೇಳಿದ್ದ.
‘‘ಅದೆಲ್ಲ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಸರಕಾರ ಗೋವುಗಳಿಗೆ ಶಾಲೆ ಕಟ್ಟಿಸಿದಂತೆಯೇ ಈ ವಾಹನಗಳಿಗೆಲ್ಲ ವಾಹನಶಾಲೆ ಕಟ್ಟಿಸಿ, ಅಲ್ಲೇ ಇವುಗಳನ್ನು ಸಾಕುವ ವ್ಯವಸ್ಥೆ ಮಾಡುತ್ತಿದೆ. ದಂಡ ಕಟ್ಟಿದ ಹಣವೆಲ್ಲ ಇವುಗಳ ಆರೈಕೆಗೆ ವ್ಯಯ ಮಾಡಲಾಗುತ್ತದೆಯಂತೆ...ಈಗ ದಂಡ ಕಟ್ಟಿ...’’ ಪೊಲೀಸ್ ಹೇಳಿದ್ದ.
‘‘ಎಷ್ಟಾಯಿತು ಸಾರ್....’’ ಕಾಸಿ ಅಸಹಾಯಕನಾಗಿ ಕೇಳಿದ.
‘‘ಎಲ್ಲ ಒಟ್ಟು ಸೇರಿ 35 ಸಾವಿರ ರೂಪಾಯಿ.....’’ ಪೊಲೀಸ್ ಹೇಳಿದ.
‘‘ಸಾರ್....ನನ್ನ ಜೀವನದಲ್ಲಿ ಅಷ್ಟು ಹಣ ನಾನು ನೋಡಿಲ್ಲ. ಗುಜರಿ ಅಂಗಡಿ ಸೇರಿದ್ದ ಸ್ಕೂಟರನ್ನು 2000 ರೂಪಾಯಿಗೆ ಪಡೆದು ಅದಕ್ಕೆ ಇನ್ನೊಂದು ಐದು ಸಾವಿರ ರೂಪಾಯಿ ಖರ್ಚು ಮಾಡಿ ಓಡಿಸ್ತಾ ಇದ್ದೇನೆ....’’
‘‘ಗುಜರಿ ಅಂಗಡಿ ಸೇರಿದ್ದ ಸ್ಕೂಟರ್ ಆಗಿದ್ರೆ ದಂಡ ಇನ್ನೂ ಹೆಚ್ಚಾಗತ್ತೆ. ಒಟ್ಟು ನಲವತ್ತು ಸಾವಿರ ಕಟ್ಟಿ....’’
‘‘ಸಾರ್ ಈ ಸ್ಕೂಟರ್ ನೀವೇ ಇಟ್ಕೊಳ್ಳಿ....ದಂಡಕ್ಕೆ ಭರ್ತಿ ಮಾಡಿ....’’
‘‘ಉಳಿದ ಹಣ ಯಾರು ಕಟ್ತಾರೆ? ಅದೆಲ್ಲ ಆಗಲ್ಲ....’’
‘‘ಸಾರ್...ರಿಸಿಪ್ಟ್ ಬೇಡ....ಸ್ಕೂಟರ್ ನೀವೇ ಇಟ್ಕಳ್ಳಿ’’ ಎಂದವನೇ ಸ್ಕೂಟರನ್ನು ಪೊಲೀಸ್ ಕೈಗೆ ಒಪ್ಪಿಸಿ ಪರಾರಿಯಾದ.
***
ಕಾಸಿ ರಸ್ತೆ ದಾಟಿ, ಇನ್ನೇನು ತನ್ನ ಕಚೇರಿಯೆಡೆಗೆ ನಡೆಯಬೇಕು, ಎನ್ನುವಷ್ಟರಲ್ಲಿ ಅದೆಲ್ಲಿಂತ ಬಿಳಿ ಪೇದೆಯೊಬ್ಬ ಪ್ರತ್ಯಕ್ಷನಾದನೋ....‘‘ಹೆಲ್ಮೆಟ್ ಎಲ್ಲಿ?’’ ಕೇಳಿದ.
‘‘ಸಾರ್...ನನ್ನ ಬಳಿ ಸ್ಕೂಟರ್ ಇಲ್ಲ...ಮತ್ತೆ ಹೆಲ್ಮೆಟ್ ಯಾಕೆ ಸಾರ್...?’’ ಕಾಸಿ ಅರ್ಥವಾಗದೆ ಕೇಳಿ.
‘‘ನೋಡ್ರೀ...ನೀವು ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಲೇ ಬೇಕು...ಇದು ನಿಮ್ಮ ಪ್ರಾಣದ ಒಳಿತಿಗಾಗಿ ನಾವು ಮಾಡಿರುವುದು...’’ ಪೊಲೀಸ್ ಹೇಳಿದ.
‘‘ಸಾರ್...ಆದ್ರೆ ನಾನು ಪಾದಚಾರಿ....’’
‘‘ಪಾದಚಾರಿಯಾದ್ರೇನು? ನಿಮಗೆ ತಲೆ ಇಲ್ವೆ? ವಾಹನ ಬಂದು ಗುದ್ದಿದ್ರೆ ಮೊದಲು ನಿಮ್ಮ ತಲೆಗೆ ಹಾನಿಯಾಗುವುದು...ಕಟ್ಟಿ ಕಟ್ಟಿ....’’
‘‘ಎಷ್ಟು ಸಾರ್?’’ ಕಾಸಿ ಹತಾಶೆಯಿಂದ ಕೇಳಿದ.
‘‘ಒಟ್ಟು 25 ಸಾವಿರ ರೂಪಾಯಿ...’’
‘‘ಸಾರ್, ಬರೇ ಹೆಲ್ಮೆಟ್ ಇಲ್ಲದ್ದಕ್ಕೆ...?’’
‘‘ನೋಡ್ರೀ...ಈಗ ರಸ್ತೆ ದಾಟಿದ್ರಲ್ಲ....ರಸ್ತೆ ದಾಟುವುದಕ್ಕೂ ನಿಯಮ ಇದೆ....ಝೀಬ್ರಾ ಮಾರ್ಕ್ ಇರುವಲ್ಲೇ ದಾಟಬೇಕು...’’ ಪೊಲೀಸ್ ಹೇಳಿದ.
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಇಲ್ಲಿ ಝೀಬ್ರಾ ಮಾರ್ಕೇ ಇಲ್ಲ ಸಾರ್....’’ ರಸ್ತೆ ತೋರಿಸಿ ಹೇಳಿದ.
‘‘ನೋಡ್ರೀ...ಇಲ್ಲ ಅಂದ ಮೇಲೆ ದಾಟ ಬಾರದು ಅಷ್ಟೇ. ಎಲ್ಲಿ ಝೀಬ್ರಾ ಮಾರ್ಕಿದೆಯೋ ಅಲ್ಲೇ ದಾಟಬೇಕು....’’
‘‘ಆದ್ರೆ ಎಲ್ಲೂ ಇಲ್ಲ ಸಾರ್....ನೀವು ಝೀಬ್ರಾ ಮಾರ್ಕ್ ಬರೆದ್ರೆ ತಾನೇ ನಾನು ಅದರ ಮೇಲೆ ನಡೆಯುವುದು...’’
‘‘ಬರೆದಿಲ್ಲ ಅಂದ ಮೇಲೆ ದಾಟ ಬಾರದು ಅಷ್ಟೇ. ಕಟ್ಟಿ ಕಟ್ಟಿ....’’
‘‘ಆದರೆ ಇಷ್ಟಕ್ಕೆ 25 ಸಾವಿರ ರೂಪಾಯಿಯ?’’ ಕಾಸಿ ಮತ್ತೂ ಆತಂಕದಿಂದ ಕೇಳಿದ.
‘‘ನೀವೀಗ ನಿಂತಿರುವುದು ಎಲ್ಲಿ?’’ ಪೊಲೀಸ್ ಕೇಳಿದ.
‘‘ರಸ್ತೆಯಲ್ಲಿ....’’ ಕಾಸಿ ಉತ್ತರಿಸಿದ.
‘‘ಪಾದಚಾರಿ ಎಲ್ಲಿ ನಡೆಯಬೇಕು?’’
‘‘ಫುಟ್‌ಪಾತಿನಲ್ಲಿ....’’
‘‘ಇಷ್ಟು ಚೆನ್ನಾಗಿ ರಸ್ತೆ ನಿಯಮಗೊತ್ತಿದೆ....ಮತ್ತೇಕೆ ರಸ್ತೆಯಲ್ಲಿ ನಡೆಯುತ್ತಿದ್ದೀರಿ....ಕಟ್ಟಿ ಕಟ್ಟಿ’’
‘‘ಸಾರ್...ಇಲ್ಲಿ ಫುಟ್‌ಪಾತ್ ಎಲ್ಲಿದೆ ಸಾರ್? ಫುಟ್‌ಪಾತ್‌ಗೆ ಜಾಗ ಬಿಡದೇ ರಸ್ತೆ ಮಾಡಿದ್ದಾರೆ....’’ ಕಾಸಿ ಅಲವತ್ತುಕೊಂಡ.
‘‘ನೋಡ್ರೀ...ಅದೆಲ್ಲ ನನಗೆ ಗೊತ್ತಿಲ್ಲ...ಮೋದಿಯವ್ರ ನಿಯಮ ಅಂದ್ರೆ ನಿಯಮ. ಅದಕ್ಕೊಂದು ಕಾರಣ ಇರುತ್ತೆ. ಫುಟ್‌ಪಾತ್ ಇಲ್ಲದ ರಸ್ತೆಯ ಮೇಲೆ ಯಾಕೆ ನಡೆಯಬೇಕು? ಹೋಗಿ ಯಾವುದೋ ಮೈದಾನದಲ್ಲಿ ನಡೆಯಬಹುದಲ್ಲ....’’
‘‘ಸಾರ್...ದುಡ್ಡಿಲ್ಲದೆ ಈಗಾಗಲೇ ಸ್ಕೂಟರನ್ನು ಒಬ್ಬ ಪೊಲೀಸ್‌ಗೆ ಕೊಟ್ಟುಬಂದೆ....ನನ್ನಲ್ಲಿ ಈಗ ಏನೂ ಇಲ್ಲ ಸಾರ್....’’
‘‘ಬಟ್ಟೆ ಬೂಟು ಚಪ್ಪಲಿ ಎಲ್ಲ ಬಿಚ್ಚಿ....’’
‘‘ಸಾರ್ ನಾಚಿಕೆಯಾಗತ್ತೆ ಸಾರ್...’’ ಕಾಸಿ ಬೇಡಿಕೊಂಡ.
‘‘ನಾಚಿಕೆ ಯಾಕ್ರಿ....ಎಲ್ಲರೂ ದಂಡ ಕಟ್ಟಿ ಬೆತ್ತಲೆಯಾಗಿಯೇ ಓಡಾಡ್ತ ಇದ್ದಾರೆ....ಒಮ್ಮೆ ತಲೆಯೆತ್ತಿ ನೋಡಿ...’’
ಕಾಸಿ ತಲೆಯೆತ್ತಿ ನೋಡಿದವನೇ ಬೆಚ್ಚಿ ಬಿದ್ದ. ನಗರದಾದ್ಯಂತ ಎಲ್ಲರೂ ಬೆತ್ತಲೆಯಾಗಿ ಓಡಾಡುತ್ತಿದ್ದಾರೆ. ಕಾಸಿ ಧೈರ್ಯದಿಂದ ಈಗ ದಂಡ ಕಟ್ಟಿ ನಿರಾಳನಾಗಿ ಎಲ್ಲರೊಳಗೊಂದಾದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)