ಮೋಟರ್ ವಾಹನ ಕಾಯ್ದೆ ತಿದ್ದುಪಡಿ ಜಾರಿ: ಜನಸಾಮಾನ್ಯರ ಸುರಕ್ಷತೆಯ ಹೆಸರಿನ ಮಹಾ ಕೊಳ್ಳೆ?!
ಅನಗತ್ಯವಾದ ಮೋಟರ್ ವಾಹನ ಕಾಯ್ದೆ ಉತ್ಪಾದನೆಗಳಿಗೆ ಅವಕಾಶಗಳನ್ನು ನೀಡುತ್ತಾ, ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಸೂಪರ್ ಡೂಪರ್ ಲಾಭಗಳ ಕೊಳ್ಳೆಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸಿ, ಬೇಕಾಬಿಟ್ಟಿಯಾಗಿ ನೂರಾರು ಬ್ರಾಂಡ್‌ಗಳ ವಾಹನಗಳ ಉತ್ಪಾದನೆಗೆ ಅನುವು ಮಾಡಿದ ಇದುವರೆಗೂ ಆಳುತ್ತಾ ಬಂದ ಸರಕಾರಗಳು, ಇಂದಿನ ತೀವ್ರ ರೀತಿಯ ಆರ್ಥಿಕ ಅರಾಜಕತೆಗಳಿಗೆ ಮೂಲ ಕಾರಣವಾಗಿವೆ. ಆಳುವ ಶಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಈ ಎಲ್ಲಾ ಸರಕಾರಗಳು ಇಂತಹವುಗಳನ್ನು ಮಾಡುತ್ತಾ ಬಂದಿವೆ. ಇವರು ಮಾಡಿಟ್ಟಿರುವ ಇಂತಹ ಹಲವಾರು ಅನಾಹುತಗಳನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಾ ಮತ್ತೆ ಅವರನ್ನೇ ಬಲಿಪಶುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ.
ಭಾರತದ ಆರ್ಥಿಕ ಹಿಂಜರಿತ ದಿನೇ ದಿನೇ ಬಿಗಡಾಯಿಸುತ್ತಿದೆ. ಇಡೀ ದೇಶವನ್ನು ಆರ್ಥಿಕ ಕುಸಿತದೆಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಭಾರೀ ಕಾರ್ಪೊರೇಟ್ ಹಿಡಿತದಲ್ಲೇ ಇರುವ, ಮೋದಿಯ ಬಿಜೆಪಿ ಸರಕಾರದ ತುತ್ತೂರಿಗಳಂತೆ ಕಾರ್ಯಾಚರಿಸುತ್ತಿದ್ದ ಮಾಧ್ಯಮಗಳು ಕೂಡ ಈಗ ಭಾರತದ ಆರ್ಥಿಕತೆ ದಿನೇ ದಿನೇ ಹದಗೆಡುತ್ತಿರುವ ವರದಿಗಳನ್ನು ಪ್ರಕಟಿಸದೇ ಇರಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಗಳು ಲಕ್ಷಗಳ ಸಂಖ್ಯೆಯಲ್ಲಿ ನಷ್ಟವಾಗುತ್ತಿವೆ. ಯುವಜನರಿಗೆ ಉದ್ಯೋಗದಲ್ಲಿ ಹಿಂದೆ ಇದ್ದಷ್ಟೂ ಆಯ್ಕೆಗಳು ಇಲ್ಲದಂತಾಗಿವೆ. ಜವಳಿ ವಲಯ, ಯಂತ್ರಗಳ ಸಾಧನ ಸಲಕರಣೆಗಳ ವಲಯ, ಮೋಟರ್ ವಾಹನ ಉದ್ದಿಮೆ ವಲಯ, ಬಿಸ್ಕಿಟ್ ಹಾಗೂ ಬೇಕರಿ ಉದ್ದಿಮೆ, ಹೊಟೇಲ್ ಉದ್ದಿಮೆಗಳೂ ಸೇರಿದಂತೆ ಐಟಿ ವಲಯದಲ್ಲೂ ಇದರ ಬಿಸಿ ಗಂಭೀರವಾಗಿ ಬಾಧಿಸಲಾರಂಭಿಸಿದೆ. ನೋಟು ರದ್ದತಿ ನಂತರದ ಅವೈಜ್ಞಾನಿಕ ಜಿಎಸ್‌ಟಿ ಹೇರಿಕೆಗಳ ನಂತರ ದೇಶದ ಕೆಲವೇ ಕಾರ್ಪೊರೇಟ್ ಕೂಟ ಹೊರತು ಪಡಿಸಿದಂತೆ ಎಲ್ಲಾ ವಲಯಗಳೂ ಇಳಿಕೆಯ ಹಾದಿಯಲ್ಲೇ ಸಾಗುತ್ತಾ ಬಂದಿದ್ದು ಈಗ ಭಾರೀ ಮಟ್ಟದಲ್ಲಿ ಸ್ತಬ್ಧವಾಗುತ್ತಿವೆ.
ಎಲ್ಲಾ ಉದ್ದಿಮೆಗಳಲ್ಲೂ ಉದ್ಯೋಗ ಕಡಿತಗಳ ಪರ್ವ ಭಾರೀ ಪ್ರಮಾಣದಲ್ಲಿ ಆರಂಭವಾಗಿವೆ. ಇದರ ಹಾದಿಯಲ್ಲಿ ಸಾರ್ವಜನಿಕ ರಂಗದ ಸಂಸ್ಥೆಗಳೂ ಸಾಗಲಾರಂಭಿಸಿವೆ. ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ವಚ್ಛಭಾರತ ಅಭಿಯಾನ್, ಬೆೇಟಿ ಪಢಾವೋ ಬೇಟಿ ಬಚಾವೋ, ಅಚ್ಛೇ ದಿನ್ ಆಯೇಗಾ, ಸ್ಮಾರ್ಟ್ ಸಿಟಿ ಯೋಜನೆ, ಕಪ್ಪುಹಣದ ವಿರುದ್ಧ ಸಮರ, ಪ್ರಧಾನ್ ಮಂತ್ರಿ ಜನಧನ್ ಯೋಜನಾದಂತಹ ಘೋಷಣೆಗಳಿಂದ ಹಿಡಿದು ಇತ್ತೀಚೆಗೆ ಕಾಶ್ಮೀರಕ್ಕೆ ಕಾಗದದಲ್ಲಿ ಮಾತ್ರವಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ತೆಗೆದು ಹಾಕುವ ಕಾರ್ಯ, 5 ಟ್ರಿಲಿಯನ್ ಆರ್ಥಿಕತೆಯ ನಿರ್ಮಾಣದ ಘೋಷಣೆ, ಭಾರತ ವಿಶ್ವಗುರುವಾಯಿತು ಎನ್ನುವ ಘೋಷಣೆ ಹೀಗೆ ಕೇವಲ ಘೋಷಣೆ ಮತ್ತು ಭಾರೀ ಪ್ರಚಾರ ಕಾರ್ಯಗಳ ಮೂಲಕ ಜನಸಾಮಾನ್ಯರನ್ನು ಭ್ರಮೆಯ ಕೂಪಕ್ಕೆ ತಳ್ಳುವ ಕಾರ್ಯಗಳನ್ನು ಮೋದಿಯ ಬಿಜೆಪಿ ಸರಕಾರ ಮೊದಲಿನಿಂದಲೂ ಬಹಳ ಸಮರ್ಥ ಹಾಗೂ ಶಕ್ತಿಯುತವಾಗಿ ಮಾಡುತ್ತಾ ಬಂದಿದೆ.
ಈಗ ಆರೆಸ್ಸೆಸ್‌ನ ವಿನಾಶಕಾರಿ ಚಿಂತನೆಗಳ ಭಾಗವಾದ ಒಂದು ದೇಶ, ಒಂದೇ ಧರ್ಮ, ಒಂದೇ ಧ್ವಜ, ಒಂದೇ ಭಾಷೆ, ಒಂದೇ ನಾಗರಿಕ ಸಂಹಿತೆಗಳನ್ನು ಹೇರುವ ಪ್ರಯತ್ನಗಳು ಶುರುವಾಗಿವೆ. ಅದರ ಭಾಗವಾಗಿ ಹಿಂದಿ ಭಾಷೆಯ ಹೇರಿಕೆಯನ್ನು ತೀವ್ರಗೊಳಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಈಶಾನ್ಯ ಭಾರತದಲ್ಲಿ ನಾಗರಿಕ ನೋಂದಾವಣೆ ಹೆಸರಿನಲ್ಲಿ ಹತ್ತಾರು ಲಕ್ಷ ಜನರನ್ನು ದೇಶಭ್ರಷ್ಟರನ್ನಾಗಿ ಮಾಡಲಾಗುತ್ತಿದೆ. ನೂರಾರು ವರ್ಷಗಳಿಂದ ಆ ಪ್ರದೇಶಗಳಲ್ಲಿ ವಾಸಿಸುತ್ತಾ ಬಂದಿದ್ದ ಅವರನ್ನೆಲ್ಲಾ ಅಕ್ರಮವಾಸಿಗಳೆಂದು ಪರಿಗಣಿಸಿ ನಿರಾಶ್ರಿತ ಶಿಬಿರಗಳ ಹೆಸರಿನಲ್ಲಿ ಬಂಧನದಲ್ಲಿ ಇಡಲಾಗುತ್ತಿದೆ.
ಬಾಂಗ್ಲಾದೇಶದಿಂದ ಬಂದವರು ಹಲವರು ಇದರಲ್ಲಿ ಸೇರಿದ್ದರೂ ಅವರೆಲ್ಲಾ ಬಡಪಾಯಿಗಳೇ ಆಗಿದ್ದು ದುಡಿದುಣ್ಣುವ ಜನರೇ ಹೊರತು ಇಲ್ಲಿನ ಸಂಪತ್ತನ್ನು ಜಾಗತಿಕ ಕಾರ್ಪೊರೇಟ್‌ಗಳಂತೆ ಲೂಟಿ ಮಾಡುವವರಲ್ಲ. ಅವರೆಲ್ಲಾ ಮುಸ್ಲಿಮರು ಎಂಬ ಒಂದೇ ಕಾರಣದಿಂದ ಈ ರೀತಿಯಾಗಿ ಭಾರತದ ಫ್ಯಾಶಿಸ್ಟ್ ಬ್ರಾಹ್ಮಣಶಾಹಿ ಆಳುವ ವರ್ಗ ನಾಗರಿಕತ್ವದ ನೋಂದಣಿ ಹೆಸರಿನಲ್ಲಿ ಹಿಟ್ಲರ್‌ನ ನಾಝಿ ಆಡಳಿತದಂತೆ ಈಶಾನ್ಯ ಭಾರತದಲ್ಲಿ ಕಾನ್ಸೆೆಂಟ್ರೇಷನ್ ಕ್ಯಾಂಪುಗಳ ರೀತಿಯಲ್ಲಿ ಮುಸ್ಲಿಮರನ್ನು ಕೂಡಿ ಹಾಕಿ ಚಿತ್ರಹಿಂಸೆಗಳನ್ನು ನೀಡುತ್ತಿದೆ. ಅವರಿಗೆ ಎಲ್ಲಾ ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಭಾರತೀಯ ಸೇನೆಯಲ್ಲಿ, ಕೇಂದ್ರೀಯ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರನ್ನು ಕೂಡ ಭಾರತದ ಪೌರತ್ವದಿಂದ ಹೊರಗಿಡುತ್ತಿರುವ ವರದಿಗಳು ಬಂದಿವೆ ಎಂದರೆ ಪರಿಸ್ಥಿತಿ ಹೇಗಿದೆಯೆಂದು ಅಂದಾಜು ಮಾಡಬಹುದು.
ನೋಟು ರದ್ದತಿಯ ಮೂಲಕ ಜನಸಾಮಾನ್ಯರ ಕೈಯಲ್ಲಿದ್ದ ಹಣವನ್ನೆಲ್ಲಾ ಬರಿದುಮಾಡಿ ಕಸಿದುಕೊಂಡು ಭಾರೀ ಕಾರ್ಪೊರೇಟ್‌ಗಳ ಬಂಡವಾಳದ ಕೊರತೆಯನ್ನು ನೀಗಿಸಿ ಜನಸಾಮಾನ್ಯರ ಬದುಕುಗಳನ್ನು ಬರ್ಬಾದು ಮಾಡಲಾಯಿತು. ನೂರಾರು ಜನರು ಅಗತ್ಯಗಳಿಗೆ ತಮ್ಮ ಹಣ ವಾಪಾಸು ಪಡೆಯಲಾಗದೇ ಸಾವು ಕಂಡರು. ನಂತರ ಅವೈಜ್ಞಾನಿಕ ಜಿಎಸ್‌ಟಿ ಹೇರುವ ಮೂಲಕ ಸಣ್ಣಪುಟ್ಟ ಉದ್ದಿಮೆಗಳು, ವ್ಯಾಪಾರ ವ್ಯವಹಾರಗಳನ್ನು ನೆಲ ಕಚ್ಚುವಂತೆ ಮಾಡಿ ಅಲ್ಲಿನ ಅವಕಾಶಗಳನ್ನ್ನು ಕೂಡ ಭಾರೀ ಕಾರ್ಪೊರೇಟ್‌ಗಳು ಆಕ್ರಮಿಸಿಕೊಳ್ಳುವಂತೆ ಮಾಡಿಕೊಡಲಾಯಿತು, ನಂತರ ಬ್ಯಾಂಕ್ ವಿಲೀನಗಳನ್ನು ನಡೆಸುತ್ತಾ ಭಾರೀ ಕಾರ್ಪೊರೇಟ್‌ಗಳು ಮೋಸ ಮಾಡಿದ ಹತ್ತಾರು ಲಕ್ಷಾಂತರ ಕೋಟಿ ರೂಪಾಯಿಗಳ ಅನುತ್ಪಾದಕ ಸಾಲಗಳನ್ನು ಮರೆಮಾಚುವುದು, ಇಲ್ಲವೇ ಮನ್ನಾ ಮಾಡುವುದು, ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿಬೆಳೆಸಿದ ಬಿಎಸ್ಸೆನ್ನೆಲ್, ಭಾರತೀಯ ರೈಲ್ವೆಯಂತಹ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ಕಾರ್ಪೊರೇಟ್‌ಗಳಿಗೆ ಕೊಟ್ಟು ಅವರು ಭಾರೀ ಲಾಭಗಳನ್ನು ದೋಚಲು ಅನುಕೂಲ ಕಲ್ಪಿಸುವುದು, ಜನಸಾಮಾನ್ಯರ ದುಡಿಮೆಯ ಎಲ್ಲಾ ಗಳಿಕೆಗಳನ್ನು ಭಾರೀ ಕಾರ್ಪೊರೇಟ್‌ಗಳು ನುಂಗಲು ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಅನುಕೂಲ ಕಲ್ಪಿಸುವುದು, ಅದಕ್ಕಾಗಿ ಕಾರ್ಮಿಕ ಕಾಯ್ದೆ, ಶಿಕ್ಷಣ ಕಾಯ್ದೆ, ಕಂಪೆನಿ ಕಾಯ್ದೆ, ಕಂಪೆನಿಗಳ ದಿವಾಳಿ ಕಾಯ್ದೆ, ಅರಣ್ಯ ಕಾಯ್ದೆ ಮೊದಲಾದವುಗಳನ್ನು ಭಾರೀ ತಿದ್ದುಪಡಿಗಳಿಗೆ ಹಿಂದಿನ ಕಾಂಗ್ರೆಸ್, ಯುಪಿಎ ಸರಕಾರದ ಕಾಲದಿಂದಲೂ ಮಾಡುತ್ತಾ ಬರಲಾಗಿದೆ. ಮೋದಿ ಸರಕಾರ ಅವುಗಳನ್ನು ಹಿಂದೆಂದೂ ಇಲ್ಲದಷ್ಟು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ.
ಇದರಿಂದೆಲ್ಲಾ ರೈತರನ್ನು, ಯುವಜನರು, ಸಣ್ಣಪುಟ್ಟ ಉದ್ದಿಮೆ ಹಾಗೂ ವ್ಯವಹಾರಸ್ಥರು ಲಕ್ಷಗಳ ಸಂಖ್ಯೆಯಲ್ಲಿ ಆತ್ಮಹತ್ಯೆಗಳಿಗೆ ದೂಡುತ್ತಾ ಬಂದಿದ್ದರೆ, ಈಗ ‘ಕೆಫೆ ಕಾಫಿ ಡೆ’ಯ ಸಿದ್ಧಾರ್ಥ ಹೆಗ್ಡೆಯಂತಹ ಮಧ್ಯಮ ಕಾರ್ಪೊರೇಟ್‌ಗಳೂ ಹತ್ತಾರು ಸಂಖ್ಯೆಗಳಲ್ಲಿ ದೇಶಾದ್ಯಂತ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ರಂಗದ ಹಿಡಿತದಲ್ಲಿದ್ದ ಭೂಮಿ ಇನ್ನಿತರ ಆಸ್ತಿಪಾಸ್ತಿಗಳನ್ನು ಕೂಡ ನಗದೀಕರಣದ ಹೆಸರಿನಲ್ಲಿ ಭಾರೀ ಕಾರ್ಪೊರೇಟ್‌ಗಳಿಗೆ ಬಿಟ್ಟು ಕೊಡುವ ಕಾರ್ಯವನ್ನು ಭರದಿಂದ ಮೋದಿ ಸರಕಾರ ಮಾಡಲು ತೊಡಗಿದೆ. ಇದನ್ನು ರಕ್ಷಣಾ ಕ್ಷೇತ್ರವನ್ನೂ ಹೊರತು ಪಡಿಸದೇ ಮಾಡಲಾಗುತ್ತಿದೆ. ದೇಶದ ಅಳಿದುಳಿದ ಆಸ್ತಿ ಪಾಸ್ತಿಗಳನ್ನು ಹೇಗೆಲ್ಲಾ ಭಾರೀ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಬಹುದು ಎಂದು ಯೋಜನೆ ರೂಪಿಸುವುದೇ ಈಗಿನ ಸರಕಾರದ ಪ್ರಮುಖ ಕಾರ್ಯವಾಗಿ ಬಿಟ್ಟಿದೆ.
ಸಣ್ಣ ಪುಟ್ಟ ಹಾಗೂ ಮಧ್ಯಮ ಉದ್ದಿಮೆ ವ್ಯಾಪಾರ ವಹಿವಾಟು ವಲಯವನ್ನು ಜಿಎಸ್‌ಟಿಯಂತಹ ಅವೈಜ್ಞಾನಿಕ ಹಾಗೂ ಆಕ್ರಮಣಕಾರಿ ತೆರಿಗೆ ಹಾಗೂ ದಂಡಗಳಿಗೆ ಒಳಪಡಿಸಿದ ನಂತರ ಮೋದಿ ಸರಕಾರ ತೆರಿಗೆಯೇತರ ಆದಾಯಗಳನ್ನು ಭಾರೀ ಪ್ರಮಾಣದಲ್ಲಿ ಒಟ್ಟುಗೂಡಿಸುವ ಕಾರ್ಯದಲ್ಲಿ ತೊಡಗಿದೆ. ಆರ್ಥಿಕ ಹಾಗೂ ತೆರಿಗೆಯ ಶಿಸ್ತುಗಳಿಗೆ ಒಳಪಡಿಸುವ ನಾಜೂಕಾದ ಹೆಸರಿನಲ್ಲಿ ಭಾರೀ ಪ್ರಮಾಣದ ದಂಡಗಳನ್ನು ವಸೂಲಿ ಮಾಡಲು ತೊಡಗಿದೆ.
ಇದೀಗ ಮೋದಿಯ ಬಿಜೆಪಿ ಸರಕಾರ ಮೋಟರ್ ವಾಹನ ಕಾಯ್ದೆಗೆ ಭಾರೀ ತಿದ್ದುಪಡಿ ತಂದು ಮೋಟರ್ ವಾಹನ ಅಪಘಾತಗಳನ್ನು ತಗ್ಗಿಸುವ ಉದ್ಧೇಶಗಳಿಂದ ಇದನ್ನು ಮಾಡಲಾಗಿದೆ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ. ಆದರೆ ದೇಶದ ಹಲವಾರು ಕಡೆಗಳಲ್ಲಿ ಮೋಟರ್ ವಾಹನ ಮಸೂದೆಯ ತಿದ್ದುಪಡಿಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಕೊಳ್ಳೆಯ ರೀತಿಯಲ್ಲಿ ವಾಹನ ಸವಾರರನ್ನು, ಮಾಲಕರನ್ನು ಸುಲಿಯುತ್ತಿರುವ ವರದಿಗಳು ಬರುತ್ತಿವೆ. ಹಲವು ದಂಡಗಳು ಆ ವಾಹನದ ಬೆಲೆಗಿಂತಲೂ ಹೆಚ್ಚಿನ ಮಟ್ಟದ್ದಾಗಿದೆ. ಹಲವು ಕಡೆಗಳಲ್ಲಿ ದಂಡಗಳು ವಾಹನದ ದುಪ್ಪಟ್ಟಾಗಿದೆ. ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರಿಗೆ ತಿಂಗಳಿಗೆ ಇಂತಿಷ್ಟು ಪ್ರಮಾಣದ ದಂಡವಸೂಲಿ ಮಾಡಿಕೊಡಲೇ ಬೇಕೆಂದು ತಾಕೀತು ಮಾಡಲಾಗಿದೆ.
ಸಂಚಾರ ನಿಯಮ ಉಲ್ಲಂಘನೆಗಳಿಗಿಂತಲೂ ಮೂಲ ದಾಖಲೆಗಳು ಜೊತೆಯಲ್ಲಿ ಇಟ್ಟುಕೊಂಡಿಲ್ಲದಿರುವ, ವಾಹನಗಳಲ್ಲಿರುವ ಸಣ್ಣಪುಟ್ಟ ದೋಷಗಳ ಹೆಸರಿನಲ್ಲೇ ದಂಡಗಳನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ವರದಿಗಳು ಬರುತ್ತಿವೆ. ಎರಡು ಗಂಟೆಗಳಲ್ಲಿ/ಎರಡು ದಿನಗಳಲ್ಲಿ ಹಲವು ಲಕ್ಷ ರೂಪಾಯಿಗಳ ದಂಡ ವಸೂಲಿ ಮಾಡಿರುವುದನ್ನು ಮಹಾ ಸಾಧನೆಗಳೆಂಬಂತೆ ಅಧಿಕಾರಿಗಳು ಹೆಮ್ಮೆಯಿಂದ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ಸಂಗತಿಗಳೂ ನಡೆಯುತ್ತಿವೆ. ದಾಖಲೆಗಳ ನಕಲನ್ನು ಇಟ್ಟುಕೊಂಡು ಮೂಲ ದಾಖಲೆಯ ವಿವರಗಳನ್ನು ಕ್ಷಣ ಮಾತ್ರದಲ್ಲಿ ಅರಿಯಬಹುದಾದ ದಾಖಲೆಗಳ ಡಿಜಿಟಲೀಕರಣ ಮಾಡಲಾಗಿದ್ದರೂ ಅದನ್ನು ಬಳಸದೇ ಜಾಣತನದಿಂದ ದಂಡ ವಸೂಲಿಗಾಗಿಯೇ ಹತ್ತು ಹಲವು ಕುಂಟು ನೆಪಗಳನ್ನು ಹುಡುಕುತ್ತಾ ಅಧಿಕಾರಿಗಳ ಮೂಲಕ ದಂಡ ವಸೂಲಿಗೆ ಇಳಿದಿದೆ.
ಆದರೆ ಭಾರತದ ರಸ್ತೆಗಳ/ನಗರಗಳ ಧಾರಣ ಶಕ್ತಿಗಳಿಗನುಸಾರ, ಕೆಲವೇ ವರ್ಗದ ವಿಲಾಸೀತನಕ್ಕಿಂತಲೂ ಜನರ ಕೆಲಸ ಕಾರ್ಯಗಳ ಅಗತ್ಯಗಳಿಗನುಸಾರ ವಾಹನಗಳಿಗೆ ಅನುಮತಿ ನೀಡುವ ಕಾರ್ಯವನ್ನಾಗಲೀ, ಅಗತ್ಯಕ್ಕೆ ತಕ್ಕಂತೆ ವಾಹನಗಳ ಉತ್ಪಾದನೆಗಳನ್ನು ನಿರ್ಬಂಧಿಸುವ ಕೆಲಸವನ್ನಾಗಲೀ ಮಾಡಲು ತಯಾರಿಲ್ಲದ ಸರಕಾರ ಜನಸಾಮಾನ್ಯರನ್ನು ಹತ್ತು ಹಲವು ವಿಧಗಳಲ್ಲಿ ರಸ್ತೆ ಸುರಕ್ಷತೆ ಹೆಸರಿನಲ್ಲಿ ಸುಲಿಗೆ ಮಾಡತೊಡಗಿರುವುದಂತೂ ಸತ್ಯ. ಇದರಿಂದಾಗಿ ಭಾರತದಲ್ಲಿ ಸಹಜ ಮರಣಕ್ಕಿಂತಲೂ ರಸ್ತೆ ಅಪಘಾತಗಳ ಕಾರಣದಿಂದಾಗುವ ಮರಣಗಳೇ ಹೆಚ್ಚು ಎನ್ನುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ರಸ್ತೆಗಿಳಿದರೆ ಸುರಕ್ಷಿತವಾಗಿ ಮರಳಬಹುದು ಎನ್ನುವ ಪರಿಸ್ಥಿತಿಯೇ ಇಲ್ಲವಾಗಿದೆ. ಆದರೆ ಜನಸಾಮಾನ್ಯರು ತಮ್ಮ ಅಗತ್ಯಗಳಿಗೆ ಬಳಸುವ ರಸ್ತೆಗಳ ಸುಧಾರಣೆಗಳ ಬಗ್ಗೆ ಸರಕಾರಗಳಿಗೆ ಗಮನ ಬಹಳ ಕಡಿಮೆ. ಗ್ರಾಮೀಣ ಪ್ರದೇಶಗಳಿಗಂತೂ ಇನ್ನೂ ಕಡಿಮೆ.
ಅನಗತ್ಯವಾದ ಮೋಟರ್ ವಾಹನ ಉತ್ಪಾದನೆಗಳಿಗೆ ಅವಕಾಶಗಳನ್ನು ನೀಡುತ್ತಾ, ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಸೂಪರ್ ಡೂಪರ್ ಲಾಭಗಳ ಕೊಳ್ಳೆಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸಿ, ಬೇಕಾಬಿಟ್ಟಿಯಾಗಿ ನೂರಾರು ಬ್ರಾಂಡ್‌ಗಳ ವಾಹನಗಳ ಉತ್ಪಾದನೆಗೆ ಅನುವು ಮಾಡಿದ ಇದುವರೆಗೂ ಆಳುತ್ತಾ ಬಂದ ಸರಕಾರಗಳು, ಇಂದಿನ ತೀವ್ರ ರೀತಿಯ ಆರ್ಥಿಕ ಅರಾಜಕತೆಗಳಿಗೆ ಮೂಲ ಕಾರಣವಾಗಿವೆ. ಆಳುವ ಶಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಈ ಎಲ್ಲಾ ಸರಕಾರಗಳು ಇಂತಹವುಗಳನ್ನು ಮಾಡುತ್ತಾ ಬಂದಿವೆ. ಇವರು ಮಾಡಿಟ್ಟಿರುವ ಇಂತಹ ಹಲವಾರು ಅನಾಹುತಗಳನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಾ ಮತ್ತೆ ಅವರನ್ನೇ ಬಲಿಪಶುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. ಮೋಟರ್ ವಾಹನಗಳ ಸವಾರರ ಮೇಲೆ, ಸಣ್ಣ ಪುಟ್ಟ ಉದ್ದಿಮೆಗಳ ಮೇಲೆ ಭಾರೀ ದಂಡಗಳನ್ನು ಹೇರುವುದು ಇತ್ಯಾದಿಗಳೆಲ್ಲಾ ಅದರ ಅವಿಭಾಜ್ಯ ಭಾಗಗಳಾಗಿವೆ. ಜನ ಸಾಮಾನ್ಯರ ಆರ್ಥಿಕ ಲೂಟಿಯ ಮುಂದುವರಿದ ಭಾಗಗಳಾಗಿವೆ. ಅರಾಜಕ ಆಡಳಿತ ವ್ಯವಸ್ಥೆ ಕೊನೆಯಾಗದೇ ಇವುಗಳಿಗೆ ಪರಿಹಾರವಂತೂ ಇಲ್ಲ.
ಮಿಂಚಂಚೆ: nandakumarnandana67gmail.com