ಕೃತಕವಾಗಿ ಪಕ್ವಗೊಳಿಸಿದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತೇ?
ಮಾವು,ಕಲ್ಲಂಗಡಿಗಳಂತಹ ಬೇಸಿಗೆ ಋತುವಿನ ಹಣ್ಣುಗಳನ್ನು ಬೇಸಿಗೆ ಆರಂಭವಾಗುವ ಬಹಳ ಮೊದಲೇ ಮಾರುಕಟ್ಟೆಯಲಿ ಕಂಡು ಅಚ್ಚರಿಗೊಂಡಿದ್ದೀರಾ? ಅವುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ ಕೃತಕವಾಗಿ ಹಣ್ಣಾಗಿಸುವ ತಂತ್ರ ಇದಕ್ಕೆ ಕಾರಣ. ಲಾಭಬಡುಕ ವ್ಯಾಪಾರಿಗಳ ಈ ತಂತ್ರ ಅವುಗಳಲ್ಲಿಯ ಪೋಷಕಾಂಶಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಜೊತೆಗೆ ಬಳಕೆದಾರರನ್ನೂ ಕೆಲವು ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಮೂಲಕ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.
ತಾಜಾ ಹಣ್ಣುಗಳಲ್ಲಿರುವ ಅಗತ್ಯ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಪಡೆಯಲು ಅವುಗಳನ್ನು ನಿತ್ಯ ಸೇವಿಸುವಂತೆ ಪೋಷಕಾಂಶ ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಈ ಆರೋಗ್ಯಲಾಭಗಳು ಅವುಗಳನ್ನು ಬೆಳೆಸಿದ ಮತ್ತು ಪಕ್ವಗೊಳಿಸಿದ ರೀತಿಯನ್ನು ಅವಲಂಬಿಸಿರುತ್ತದೆ. ನೈಸರ್ಗಿಕವಾಗಿ ಪಕ್ವಗೊಂಡ ಹಣ್ಣುಗಳು ಗರಿಷ್ಠ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಆದರೆ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅವುಗಳನ್ನು ಕೃತಕವಾಗಿ ಪಕ್ವಗೊಳಿಸುವ ಪ್ರವೃತ್ತಿಯೂ ಅಪಾಯಕಾರಿಯಾಗಿ ಹೆಚ್ಚುತ್ತದೆ. ಇದು ನಮ್ಮ ಆರೋಗ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತದೆ.
► ಏನಿದು ಕೃತಕವಾಗಿ ಪಕ್ವವಾಗಿಸುವಿಕೆ?
ರೈಪನಿಂಗ್ ಏಜೆಂಟ್ ಅಥವಾ ಪಕ್ವಗೊಳಿಸುವ ರಾಸಾಯನಿಕಗಳನ್ನು ಬಳಸಿ ಹಣ್ಣುಗಳು ಮತ್ತು ತರಕಾರಿಗಳನ್ನು ಕೃತಕವಾಗಿ ಪಕ್ವಗೊಳಿಸಲಾಗುತ್ತದೆ. ಈ ರಾಸಾಯನಿಕಗಳು ಅವು ಬೇಗನೇ ಪಕ್ವಗೊಳ್ಳುವಂತೆ ಮಾಡುವ ಜೊತೆಗೆ ಅವುಗಳ ಬಣ್ಣ,ಸೊಗಸು ಮತ್ತು ಸ್ವಾದವನ್ನೂ ಹೆಚ್ಚಿಸುತ್ತವೆ. ಮಾವು,ಪಪ್ಪಾಯ,ಬಾಳೆಹಣ್ಣು,ಟೊಮೆಟೊ ಮತ್ತು ಖರ್ಜೂರ ಇವು ಹೆಚ್ಚು ಸಾಮಾನ್ಯವಾಗಿ ಕೃತಕವಾಗಿ ಪಕ್ವ ಮಾಡಲಾಗುವ ಹಣ್ಣುಗಳಲ್ಲಿ ಸೇರಿವೆ. ರಾಸಾಯನಿಕಗಳ ಬಳಕೆಯಿಂದ ಅವು ಆಕರ್ಷಕ ನೋಟವನ್ನು ಹೊಂದಿರುತ್ತವೆ ಮತ್ತು ಬಣ್ಣಕ್ಕೆ ಮರುಳಾಗುವ ಗ್ರಾಹಕರು ಬೇರೆ ವಿಚಾರವನ್ನೇ ಮಾಡದೆ ಅವುಗಳನ್ನು ಖರೀದಿಸುತ್ತಾರೆ. ಆದರೆ ಇದು ಅಪಾಯಕಾರಿ ವ್ಯಾಪಾರ ಪದ್ಧತಿಯಾಗಿದೆ.
► ಹಣ್ಣುಗಳನ್ನು ಕೃತಕವಾಗಿ ಪಕ್ವಗೊಳಿಸುವ ರಾಸಾಯನಿಕಗಳು
ಇಥೆಲಿನ್ ಅನಿಲವು ನೈಸರ್ಗಿಕ ರೈಪನಿಂಗ್ ಏಜೆಂಟ್ ಆಗಿದ್ದು,ಹಣ್ಣು ಅಥವಾ ತರಕಾರಿಗಳನ್ನು ನೈಸರ್ಗಿಕವಾಗಿ ಪಕ್ವಗೊಳಿಸುತ್ತದೆ. ಕೃತಕವಾಗಿ ಪಕ್ವಗೊಳಿಸುವುದರಿಂದ ಅವು ಒಳ್ಳೆಯ ಬಣ್ಣವನ್ನು ಪಡೆಯುತ್ತವೆ. ಪಕ್ವಗೊಳ್ಳದ ಹಣ್ಣುಗಳು ಮತ್ತು ತರಕಾರಿಗಳನ್ನು ಅದೇ ಸ್ಥಿತಿಯಲ್ಲಿ ಕಿತ್ತು ಇಂಜೆಕ್ಷನ್ ಸೂಜಿಯ ಮೂಲಕ ಇಥೆಲಿನ್ ಗ್ಯಾಸ್‌ನ್ನು ಅವುಗಳಲ್ಲಿ ಸೇರಿಸಿ ಕೃತಕವಾಗಿ ಹಣ್ಣಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
ಕ್ಯಾಲ್ಸಿಯಂ ಕಾರ್ಬೈಡ್ ಕೃತಕವಾಗಿ ಹಣ್ಣಾಗಿಸಲು ವ್ಯಾಪಕವಾಗಿ ಬಳಕೆಯಾಗುತ್ತಿರುವ ರಾಸಾಯನಿಕವಾಗಿದೆ. ಕೃತಕವಾಗಿ ಹಣ್ಣಾಗಿಸುವ ಈ ದಂಧೆಯಲ್ಲಿ ಈ ರಾಸಾಯನಿಕವನ್ನು ‘ಮಸಾಲಾ’ಎಂದು ಕರೆಯುತ್ತಾರೆ. ಅದು ಎಸಿಟಿಲಿನ್ ಅನಿಲವನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇದು ಇಥೆಲಿನ್ ಅನಿಲದಂತೆಯೇ ಪರಿಣಾಮವನ್ನು ಬೀರುತ್ತದೆ. ಇವು ಕಾಯಿಗಳನ್ನು ಹಣ್ಣಾ ಗಿರುವಂತೆ ತೋರಿಸುವ ಅನ್‌ಸ್ಯಾಚ್ಯುರೇಟೆಡ್ ಹೈಡ್ರೋಕಾರ್ಬನ್‌ಗಳಾಗಿವೆ. ಕ್ಯಾಲ್ಸಿಯಂ ಕಾರ್ಬೈಡ್ ಬಿಡುಗಡೆಗೊಳಿಸುವ ಎಸಿಟಿಲಿನ್ ಅನಿಲವು ಫಾಸ್ಫರಸ್ ಹೈಡ್ರೈಡ್ ಮತ್ತು ಆರ್ಸೆನಿಕ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಇವು ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಬಾಯಾರಿಕೆ, ವಾಂತಿ, ನಿಶ್ಶಕ್ತಿ,ಹೊಟ್ಟೆಯಲ್ಲಿ ಉರಿ,ಅತಿಸಾರ,ಗಂಟಲಿನ ಕಿರಿಕಿರಿ,ಉಸಿರಾಟದಲ್ಲಿ ತೊಂದರೆ,ಕಣ್ಣಿನ ತೊಂದರೆ,ಚರ್ಮದಲ್ಲಿ ಹುಣ್ಣು,ಹೊಟ್ಟೆಯಲ್ಲಿ ಗಡಿಬಿಡಿ ಇವೆಲ್ಲ ಸಮಸ್ಯೆಗಳನ್ನು ಈ ರಾಸಾಯನಿಕಗಳು ಉಂಟು ಮಾಡುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್ ಸ್ವರೂಪದಲ್ಲಿ ಕ್ಯಾನ್ಸರ್ ಜನಕವಾಗಿರುವುದರಿಂದ ನಮ್ಮ ಶರೀರಕ್ಕೆ ಅತ್ಯಂತ ವಿನಾಶಕಾರಿಯಾಗಿದೆ. ಅದು ದೀರ್ಘಕಾಲಿಕ ಹೈಪೊಕ್ಸಿಯಾ(ಆಮ್ಲಜನಕದ ಕೊರತೆ)ಕ್ಕೆ ಕಾರಣವಾಗುವ ಮೂಲಕ ನರಮಂಡಲದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಈ ಸ್ಥಿತಿಯಲ್ಲಿ ರಕ್ತ ಮತ್ತು ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆಗೆ ತಡೆಯುಂಟಾಗುತ್ತದೆ. ಇದು ತಲೆನೋವು,ತಲೆ ಸುತ್ತುವಿಕೆ,ಜ್ಞಾಪಕ ಶಕ್ತಿ ನಷ್ಟ,ವಾಕರಿಕೆ,ಮಿದುಳಿನಲ್ಲಿ ಊತ, ಲಹರಿ ಬದಲಾಣೆಗಳಿಗೆ ಕಾರಣವಾಗುತ್ತದೆ.