'ಹಿಂದಿ ಹೇರಿಕೆ ಹಿಂಪಡೆಯಿರಿ’: ಸಾಹಿತಿಗಳು, ಸಂಘ-ಸಂಸ್ಥೆಗಳಿಂದ ಪ್ರತಿಭಟನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.17: ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗುತ್ತಿದ್ದು, ಇದನ್ನು ಹಿಂಪಡೆಯದಿದ್ದರೆ, ಬಹುದೊಡ್ಡ ಹೋರಾಟವನ್ನೇ ರೂಪಿಸುತ್ತೇವೆ ಎಂದು ನಾಡಿನ ಹಿರಿಯ ಸಾಹಿತಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಎಚ್ಚರಿಕೆ ಸಂದೇಶ ರವಾನಿಸಿದರು.
ಮಂಗಳವಾರ ನಗರದ ಪುರಭವನದ ಮುಂಭಾಗ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಸಾಹಿತಿಗಳು, ಕೇಂದ್ರ ಸರಕಾರವು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರುವ ಕೆಲಸವನ್ನು ಮಾಡುತ್ತಿದೆ. ಇದು ಸರಿಯಲ್ಲ. ಕೇಂದ್ರದ ಈ ನಡೆಯಿಂದ ಸ್ಥಳೀಯ ಭಾಷೆಗೆ ಧಕ್ಕೆಯಾಗುತ್ತದೆ ಎಂದರು.
ದೇಶದಲ್ಲಿ ನಾನಾ ಭಾಷೆಗಳಿದ್ದು, ಎಲ್ಲವೂ ಸಮಾನ ಸ್ಥಾನಮಾನ ಹೊಂದಿವೆ. ನಮ್ಮ ಭಾರತ ಭಾಷಾ ವೈವಿಧ್ಯತೆಯಿಂದ ಕೂಡಿದ ಒಕ್ಕೂಟವಾಗಿದೆ. ನಮ್ಮ ಎಲ್ಲ ಭಾಷೆಗೆ ಸಮಾನ ಗೌರವ ಸಿಕ್ಕಾಗ ಮಾತ್ರ ಭಾರತದ ವೈವಿದ್ಯತೆ ಉಳಿಯಲು ಮತ್ತು ಒಕ್ಕೂಟದ ಒಗ್ಗಟ್ಟು ಗಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಕೇಂದ್ರ ಸರಕಾರ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಭಾರತದ ಭಾಷಾ ವೈವಿಧ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಲೇ ಬಂದಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಕೇಂದ್ರ ಸರಕಾರ ಹಲವಾರು ಉದ್ಯೋಗ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸುವುದರ ಮೂಲಕ ಕನ್ನಡಿಗರರಿಗೆ ಉದ್ಯೋಗದಲ್ಲಿ ದೊಡ್ಡ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯ ಸರಿಪಡಿಸಲು ಕೇಂದ್ರ ಸರಕಾರವು ತ್ವರಿತವಾಗಿ ಕ್ರಮ ಕೈಗೊಂಡು ಸಂವಿಧಾನದ 343ರಿಂದ 351ರ ವಿಧಿಗಳನ್ನು ತಿದ್ದುಪಡಿ ಮಾಡಿ ಎಲ್ಲ ಭಾಷೆಗಳಿಗೂ ಸಮಾನ ಗೌರವ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಾಹಿತಿ ಬೈರಮಂಗಲ ರಾಮೇಗೌಡ, ಗೃಹ ಸಚಿವ ಅಮಿತ್ ಶಾ ಒಂದೇ ದೇಶ ಒಂದೇ ಭಾಷೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರು ದೇಶದ ಸಾರ್ವಭೌಮತ್ವದ ಅಂಶಗಳನ್ನು ಒಳಗೊಂಡಿರುವ ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡಂತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪ್ರೊ.ನರಸಿಂಹಯ್ಯ ಸೇರಿದಂತೆ ಪ್ರಮುಖರಿದ್ದರು.
ಹಿಂದಿ ರಾಷ್ಟ್ರಭಾಷೆಯಲ್ಲ
ಭಾರತ ಬಹುಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ದೇಶ. ಈ ಸಾಂಸ್ಕೃತಿಕ ಬಹುತ್ವವೇ ಭಾರತೀಯರ ವಿಶಿಷ್ಟತೆ ಮತ್ತು ಹೆಮ್ಮೆ. ಕನ್ನಡ, ಹಿಂದಿ ಸೇರಿದಂತೆ 22 ಭಾಷೆಗಳಿಗೆ ಸಂವಿಧಾನ ಮಾನ್ಯತೆ ನೀಡಿದೆ. ಸಂವಿಧಾನದಲ್ಲಿ ಯಾವೊಂದು ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಹೆಸರಿಸಿಲ್ಲ.
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ