ಅ.15, 16ರಂದು ಜಯದೇವ ಆಸ್ಪತ್ರೆಯಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ
ಬೆಂಗಳೂರು, ಸೆ.17: ನಗರದಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸುಮಾರು 200 ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಅಕ್ಟೋಬರ್ 15, 16ರಂದು ಆಯೋಜಿಸಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಅಮೆರಿಕಾ ಹಾಗೂ ಡಾ.ಗೋಂವಿದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ವಿಸ್ಕಿನ್ ಸನ್, ಅಮೆರಿಕಾ ಸಹಯೋಗದೊಂದಿಗೆ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ.
ಪ್ರತಿ ರೋಗಿಗೂ ಉನ್ನತ ಗುಣಮಟ್ಟದ ಮೆಡಿಕೇಟೆಡ್ ಸ್ಟಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುವುದು. ಈ ಸೌಲಭ್ಯವನ್ನು ಈಗಾಗಲೇ ಅಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದಾಗಿದೆ. ಅವಶ್ಯಕ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕೆಂದು ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು 1ನೇ ಅಕ್ಟೋಬರ್ 2019 ರೊಳಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್ ಬೆಂ.69., ದೂರವಾಣಿ ಸಂಖ್ಯೆ 8431239166, 080-22977433ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.