ವಿದ್ಯಾರ್ಥಿಗಳಿಗಾಗಿ ಮೂಲ ವಿಜ್ಞಾನ
ಈ ಹೊತ್ತಿನ ಹೊತ್ತಿಗೆ
‘‘ಮೂಲ ವಿಜ್ಞಾನವನ್ನು ನಿರ್ಲಕ್ಷಿಸಿ ತಂತ್ರಜ್ಞಾನವನ್ನು ಪೋಷಿಸುವುದೆಂದರೆ, ಕಟ್ಟದ ಬುನಾದಿಯ ವೆಚ್ಚದಲ್ಲಿ ಕಡಿತ ಮಾಡಿ, ಮಹಡಿಗಳ ಸಂಖ್ಯೆ ಹೆಚ್ಚಿಸಿದಂತೆ. ಅಂತಹ ಸೌಧ ಕುಸಿದು ಬೀಳಲು ಹೆಚ್ಚು ಕಾಲ ಬೇಕಾಗಿಲ್ಲ’’ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಟಿಷ್ ವಿಜ್ಞಾನಿ ಸರ್ ಜಾರ್ಜ್ ಪೋರ್ಟರ್ ಅವರ ಮಾತು ಇದು. ಇಂದು ತಂತ್ರಜ್ಞಾನಗಳಿಗೆ ಸಿಕ್ಕಿದಷ್ಟು ಆದ್ಯತೆ ಮೂಲ ವಿಜ್ಞಾನಕ್ಕೆ ಸಿಗದೇ ಇರುವ ಕಾಲ. ಈ ನಿಟ್ಟಿನಲ್ಲಿ ಈತನ ಮಾತುಗಳನ್ನು ನಾವು ಅಗತ್ಯವಾಗಿ ನೆನೆಯಬೇಕಾಗಿದೆ. ಈ ಕಾರಣಕ್ಕಾಗಿ ಮೂಲ ವಿಜ್ಞಾನಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ನವಕರ್ನಾಟಕ ಪ್ರಕಾಶನವು ‘ಮೂಲ ವಿಜ್ಞಾನ- ಭಿನ್ನವಾಗಿ ಯೋಚಿಸಿ’ ಸರಣಿ ಪುಸ್ತಕ ಮಾಲೆಯನ್ನು ಹೊರತಂದಿದೆ. ಅದರ ಮೊದಲ ಭಾಗ ಭೌತ ವಿಜ್ಞಾನ. ಪ್ರೊ. ಡಿ. ಆರ್. ಬಳೂರಗಿ ಅವರು ಈ ಕೃತಿಯನ್ನು ಬರೆದಿದ್ದಾರೆ. ವಿಭಿನ್ನ ಚಿಂತನೆಗಳ ಮೂಲ ವಿಜ್ಞಾನವನ್ನು ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಹಾಗೂ ಶಿಕ್ಷಕರಿಗೆ ಬೋಧನೆಗೆ ಉಪಯೋಗವಾಗುವಂತೆ ಸರಳವಾಗಿ ವಿವರಿಸುವ ಪುಸ್ತಕಗಳ ಮಾಲಿಕೆ ಇದು.
ವಿಜ್ಞಾನವನ್ನು ತಳಮಟ್ಟದಲ್ಲಿಯೇ ಚೆನ್ನಾಗಿ ಗ್ರಹಿಸಿಕೊಂಡಾಗ ವಿದ್ಯಾರ್ಥಿಗೆ ಮುಂದೆ ವಿಜ್ಞಾನದ ಯಾವುದೇ ವಿಷಯ ಕಗ್ಗಂಟಾಗಿ ಕಾಣಿಸದೆ ಇನ್ನೂ ಹೆಚ್ಚು ಆಸಕ್ತಿದಾಯಕವೆನಿಸುವುದರಲ್ಲಿ ಸಂದೇಹವಿಲ್ಲ. ಇಂದು ವಿಜ್ಞಾನ-ತಂತ್ರಜ್ಞಾನಗಳಲ್ಲಿ, ಸಂಶೋಧನಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರಗತಿ ಕಾಣಲು ಮೂಲ ವಿಜ್ಞಾನದ ಪರಿಕಲ್ಪನೆಗಳೇ ಕಾರಣ. ವಿದ್ಯಾರ್ಥಿಗಳಲ್ಲಿ ಮೂಡಬಹುದಾದ - ಏನು? ಯಾಕೆ? ಹೀಗೇಕೆ? ಎಂಬಂತಹ ಪ್ರಶ್ನೆಗಳಿಗೆ ಈ ಮಾಲಿಕೆಯಲ್ಲಿ ಉತ್ತರಗಳಿವೆ. ಈಗಾಗಲೇ 40 ಜನಪ್ರಿಯ ವಿಜ್ಞಾನ ಕೃತಿಗಳನ್ನು ಬರೆದಿರುವ ಪ್ರೊ. ಡಿ. ಆರ್. ಬಳೂರಗಿ, ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ವಿಜ್ಞಾನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ, ಬಾಲವಿಜ್ಞಾನ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಭೌತ ವಿಜ್ಞಾನದ ಪರಿಕಲ್ಪನೆಗಳ ಕುರಿತಂತೆ ಪ್ರಾಥಮಿಕ ಮಾಹಿತಿಯನ್ನು ಸರಳವಾಗಿ, ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಈ ಕೃತಿಯಲ್ಲಿ ಅವರು ಮಂಡಿಸಿದ್ದಾರೆ.
ವಿಸ್ತೀರ್ಣ ಮತ್ತು ಗಾತ್ರ, ದ್ರವ್ಯರಾಶಿ ಮತ್ತು ತೂಕ, ಭಾರ ಮತ್ತು ಹಗುರ, ತೇಲುವುದು ಮತ್ತು ಮುಳುಗುವುದು, ಆರ್ಕಿಮಿಡೀಸ್ ಮತ್ತು ಚಿನ್ನದ ಕಿರೀಟ, ಶಕ್ತಿ ಮತ್ತು ಬಲ, ನ್ಯೂಟನ್ ಮತ್ತು ಜೌಲ್, ವೇಗ ಮತ್ತು ವೇಗೋತ್ಕರ್ಷ, ಸಂವೇಗ ಮತ್ತು ಆವೇಗ, ಗೆಲಿಲಿಯೋ ಮತ್ತು ಪೀಸಾದ ವಾಲುಗೋಪುರ, ಉಷ್ಣತೆ ಮತ್ತು ಉಷ್ಣ, ಶಬ್ದದ ತೀವ್ರತೆ ಮತ್ತು ಪ್ರಬಲತೆ, ಎವರೆಸ್ಟ್ ಶಿಖರ ಮತ್ತು ಅದರ ಎತ್ತರ, ತೂಕ ಮತ್ತು ತೂಕರಾಹಿತ್ಯ...ಹೀಗೆ 14 ವಿಷಯಗಳನ್ನು ಎತ್ತಿ ಅದನ್ನು ಸರಳವಾಗಿ ವಿವರಿಸಿದ್ದಾರೆ.
96 ಪುಟಗಳ ಈ ಕೃತಿಯ ಮುಖಬೆಲೆ 90 ರೂ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದು.