ಮಿಠಾಯಿ
ಮಕ್ಕಳೇ ಇಲ್ಲದ ಮಹಿಳೆಯೊಬ್ಬಳು ಎಲ್ಲ ವೈದ್ಯರನ್ನು ಸಂಪರ್ಕಿಸಿ ವಿಫಲಳಾಗಿ ಒಬ್ಬ ಹಿರಿಯ ಸ್ವಾಮೀಜಿಯ ಬಳಿ ಬಂದು ದುಃಖ ತೋಡಿಕೊಂಡಳು.
ಸ್ವಾಮೀಜಿ ಹತ್ತಿರದಲ್ಲಿದ್ದ ಡಬ್ಬದಿಂದ ಒಂದು ಹಿಡಿ ಮಿಠಾಯಿಯನ್ನು ತೆಗೆದು ಮಂತ್ರಿಸಿ ಮಹಿಳೆಯ ಕೈಗೆ ಕೊಟ್ಟು ನುಡಿದರು ‘‘ಹೊರಗೆ ಅಂಗಳದಲ್ಲಿ ದೇವರ ವಿಗ್ರಹ ಇದೆ. ದೇವರಿಗೆ ಕೈ ಮುಗಿದು ಮನದ ಬೇಡಿಕೆ ಹೇಳಿ ಈ ಮಿಠಾಯಿ ತಿನ್ನು. ಈ ಮಿಠಾಯಿಯ ಪ್ರಸಾದದಿಂದ ನಿನಗೆ ಶೀಘ್ರದಲ್ಲೇ ಮಗುವಾಗುತ್ತದೆ’’
ಮಹಿಳೆ ಮಿಠಾಯಿಯೊಂದಿಗೆ ಹೊರಗೆ ಬಂದಳು. ದೇವರಿಗೆ ಕೈ ಮುಗಿದು ತನ್ನ ಬೇಡಿಕೆ ಹೇಳಿ ಇನ್ನೇನು ಮಿಠಾಯಿ ತಿನ್ನಬೇಕು ಎನ್ನುವಷ್ಟರಲ್ಲಿ, ಅದೆಲ್ಲಿಂದಲೋ ಒಂದು ಭಿಕ್ಷುಕ ಮಗು ಆಕೆಯ ಕಡೆಗೆ ಕೈ ಚಾಚಿತು. ಏನೆನಿಸಿತೋ ಆಕೆ ಕೆಲವು ಮಿಠಾಯಿಯನ್ನು ತೆಗೆದು ಮಗುವಿಗೆ ಕೊಟ್ಟಳು. ಮಗು ಮತ್ತೆ ಕೈ ಚಾಚಿತು. ಮಹಿಳೆ ಸಂಕಟದಿಂದ ಎಲ್ಲ ಮಿಠಾಯಿಯನ್ನು ಕೊಟ್ಟು ಬಿಟ್ಟಳು. ಸ್ವಾಮೀಜಿಯ ಬಳಿ ಬಂದವಳು ‘ಮಿಠಾಯಿ ತಿಂದೆ’ ಎಂದ ಸುಳ್ಳು ಹೇಳಿದಳು.
ಕೆಲವೇ ತಿಂಗಳಲ್ಲಿ ಆಕೆ ಗರ್ಭವತಿಯಾದಳು. ಆಕೆಗೆ ಅಚ್ಚರಿ. ಮಿಠಾಯಿ ತಿನ್ನದೆಯೂ ಮಗುವಾಯಿತಲ್ಲ? ನೇರವಾಗಿ ಸ್ವಾಮೀಜಿಯ ಬಳಿ ಧಾವಿಸಿದಳು ‘‘ಗುರುಗಳೇ, ನಾನು ನಿಮ್ಮ ಮಿಠಾಯಿಯನ್ನು ತಿಂದಿರಲಿಲ್ಲ. ಆದರೂ ನನಗೆ ಮಗುವಾಗಿದೆ...’’ ಹೇಳಿದಳು.
ಗುರುಗಳು ನಕ್ಕು ಹೇಳಿ ದರು ‘‘ಒಂದು ವೇಳೆ ನೀನು ಮಿಠಾಯಿಯನ್ನು ಆ ಮಗುವಿಗೆ ನೀಡದೆ ತಿಂದು ಬಿಟ್ಟಿದ್ದರೆ ನಿನಗೆಂದೂ ಮಗುವಾಗುತ್ತಿರಲಿಲ್ಲ...’’