ಭಾರತಕ್ಕೆ ‘ವ್ಯಾಪಾರ ಆದ್ಯತೆ’ ಸ್ಥಾನಮಾನ ಮರುನೀಡಿ: ಟ್ರಂಪ್ ಆಡಳಿತಕ್ಕೆ ಅಮೆರಿಕದ 44 ಸಂಸದರ ಒತ್ತಾಯ
ವಾಶಿಂಗ್ಟನ್, ಸೆ. 18: ಭಾರತ ಮತ್ತು ಅಮೆರಿಕಗಳ ನಡುವಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಪೂರ್ವಭಾವಿಯಾಗಿ, ಮಹತ್ವದ ಜಿಎಸ್‌ಪಿ ವ್ಯಾಪಾರ ಕಾರ್ಯಕ್ರಮದಡಿ ಭಾರತಕ್ಕೆ ‘ಫಲಾನುಭವಿ ಅಭಿವೃದ್ಧಿಶೀಲ ದೇಶ’ ಸ್ಥಾನಮಾನವನ್ನು ಮರುನೀಡುವಂತೆ 44 ಪ್ರಭಾವಿ ಸಂಸದರ ಉಭಯ ಪಕ್ಷಗಳ ಗುಂಪೊಂದು ಟ್ರಂಪ್ ಆಡಳಿತವನ್ನು ಒತ್ತಾಯಿಸಿದೆ.
ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್‌ಪಿ) ಅಡಿ ಭಾರತದ ಫಲಾನುಭವಿ ಅಭಿವೃದ್ಧಿಶೀಲ ದೇಶ ಸ್ಥಾನಮಾನವನ್ನು ಟ್ರಂಪ್ ಆಡಳಿತ ಜೂನ್ ತಿಂಗಳಲ್ಲಿ ಹಿಂದಕ್ಕೆ ಪಡೆದುಕೊಂಡಿತ್ತು.
ಈ ಸ್ಥಾನಮಾನ ಪಡೆದ ದೇಶಗಳಿಂದ ಸಾವಿರಾರು ಉತ್ಪನ್ನಗಳನ್ನು ಅಮೆರಿಕವು ಆಮದು ತೆರಿಗೆಯಿಲ್ಲದೆ ಆಮದು ಮಾಡಲು ಹಾಗೂ ಆ ಮೂಲಕ ಆ ನಿರ್ದಿಷ್ಟ ದೇಶಗಳ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶವನ್ನು ಜಿಎಸ್‌ಪಿ ಹೊಂದಿದೆ.
‘‘ಮೊದಲು ಒಂದು ವಿವಾದಕ್ಕೆ ಸಂಬಂಧಿಸಿ ಒಪ್ಪಂದಕ್ಕೆ ಬನ್ನಿ. ನಂತರದ ವಿವಾದಗಳಿಗೆ ಸಂಬಂಧಿಸಿದ ಮಾತುಕತೆಗಳ ವೇಳೆ ಅಮೆರಿಕದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಗಳು ಮುಚ್ಚದಂತೆ ಖಾತರಿಪಡಿಸಿ’’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಥಿಜರ್‌ಗೆ ಬರೆದ ಪತ್ರವೊಂದರಲ್ಲಿ ಹೌಸ್ ಸದಸ್ಯರು ಸೂಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಹ್ಯೂಸ್ಟನ್‌ನಲ್ಲಿ ಸೆಪ್ಟಂಬರ್ 22ರಂದು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ, ಜಿಎಸ್‌ಪಿ ಸೇರಿದಂತೆ ದೀರ್ಘಕಾಲೀನ ವ್ಯಾಪಾರ ವಿವಾದಗಳಿಗೆ ಸಂಬಂಧಿಸಿದ ಒಪ್ಪಂದವೊಂದನ್ನು ಅವರು ಘೋಷಿಸುವ ಸಾಧ್ಯತೆಯಿದೆ.