ಸೆ.19: ಕಟ್ಟಡ ಕಾರ್ಮಿಕರಿಂದ ವಿಧಾನಸೌಧ ಚಲೋ
ಬೆಂಗಳೂರು, ಸೆ.18: ಕೇಂದ್ರ ಸರಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ(ಸಂಹಿತೆ) ಕಲ್ಯಾಣ ಮಸೂದೆ-2018 ಕೈ ಬಿಡಲು ಆಗ್ರಹಿಸಿ, ಕಟ್ಟಡ ಕಾರ್ಮಿಕ ಕಾನೂನು-1996 ರಕ್ಷಿಸಲು ಆಗ್ರಹಿಸಿ ನಾಳೆ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ಕಾರ್ಮಿಕರ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನವರೆಗೂ ಬೃಹತ್ ಮೆರವಣಿಗೆ ನಡೆಯಲಿದೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿಯಿಂದಾಗಿ ಕೋಟ್ಯಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸಾಮಾಜಿಕ ಸುರಕ್ಷತಾ ಮಸೂದೆ-2018 ರನ್ನು ಜಾರಿಗೊಳಿಸಲು ಮುಂದಾಗಿದೆ.
ಈಗಾಗಲೇ ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂದರ್ಭದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಪಾಸ್ ಮಾಡಿಕೊಳ್ಳಲಾಗಿದೆ. ಇದರಿಂದ 4 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಪಡೆಯುತ್ತಿರುವ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಕಾರ್ಮಿಕ ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆಯನ್ನಿಟ್ಟುಕೊಂಡು ಹೋರಾಟಕ್ಕಿಳಿಯಲಾಗಿದೆ ಎಂದು ಪ್ರಕಟನೆ ತಿಳಿಸಿದೆ.