ಕೇಂದ್ರದ ವಿರುದ್ಧ ಬೀದಿಗಿಳಿದ ಕಟ್ಟಡ ಕಾರ್ಮಿಕರು: ಸಾಮಾಜಿಕ ಸುರಕ್ಷಾ ಸಂಹಿತೆ ಹಿಂಪಡೆಯಲು ಪಟ್ಟು
ಬೆಂಗಳೂರು, ಸೆ.19: ಕೇಂದ್ರ ಸರಕಾರ ಉದ್ದೇಶಿತ ಸಾಮಾಜಿಕ ಸುರಕ್ಷಾ ಸಂಹಿತೆ ಹಿಂಪಡೆಯಬೇಕೆಂದು ಆಗ್ರಹಿಸಿ ಕಟ್ಟಡ ಕಾರ್ಮಿಕರು ವಿಧಾನಸೌಧ ಚಲೋ ನಡೆಸಿದರು.
ಗುರುವಾರ ನಗರದ ಸಂಗೊಳ್ಳಿ ರಾಯಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಉದ್ದೇಶಿತ ಸಾರ್ವತ್ರಿಕ ಸಾಮಾಜಿಕ ಸುರಕ್ಷತಾ ಮಸೂದೆ -2018 ಹಾಗೂ ಈಗಾಗಲೇ ಸಂಸತ್ತಿನಲ್ಲಿ ಜಾರಿ ಮಾಡಿರುವ ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕಾನೂನು ಕಾರ್ಮಿಕರ ವಿರುದ್ಧವಾಗಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
1996ರ ಕಟ್ಟಡ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡುತ್ತಿರುವ ಕೇಂದ್ರ ಸರಕಾರದ ನೀತಿಗಳಿಂದ ಕಟ್ಟಡ ಕಾರ್ಮಿಕರ ಬದುಕಿನ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ, ತಮ್ಮ ಬೇಡಿಕೆಗಳು ಈಡೇರದಿದ್ದರೆ, ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ: ಕಟ್ಟಡ ಕಾರ್ಮಿಕ ಮಂಡಳಿಯ ಲಕ್ಷಾಂತರ ಕಾರ್ಮಿಕರಿಗೆ ಆನ್‌ಲೈನ್ ನೋಂದಣಿ ಸಮಸ್ಯೆ, ವಸತಿ ಸಮಸ್ಯೆ, ವಿದ್ಯಾರ್ಥಿವೇತನ, ಪಿಂಚಣಿ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮಂಡಳಿಯ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಐಎನ್‌ಟಿಯುಸಿ ಮುಖಂಡರಾದ ಎಚ್.ಸಿ.ಶಾಂತಕುಮಾರ್, ಎಐಟಿಯುಸಿ ಶಿವಣ್ಣ, ಎಚ್.ಕೆ. ರಾಮಚಂದ್ರಪ್ಪ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಕೆ.ಬಿ.ಉಮೇಶ್ ಸೇರಿದಂತೆ ಪ್ರಮುಖರಿದ್ದರು.