ಹದೆಗೆಟ್ಟ ರಾ.ಹೆದ್ದಾರಿ: ಒಳರಸ್ತೆಯೇ ಬದಲಿ ದಾರಿ!
ಪಾಣೆಮಂಗಳೂರು, ನರಿಕೊಂಬು ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ
ಪಾಣೆಮಂಗಳೂರು, ಸೆ.20: ಮಂಗಳೂರಿನಿಂದ ಹಾಸನದವರೆಗಿನ ರಾಷ್ಟ್ರೀಯ ಹೆದ್ದಾರಿ ಇದೀಗ ಸಂಪೂರ್ಣ ಹದೆಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಇದೇ ಕಾರಣಕ್ಕೆ ಬಹುತೇಕ ಖಾಸಗಿ ವಾಹನಗಳು ಒಳ ರಸ್ತೆಯಲ್ಲೇ ಸುತ್ತಿಬಳಸಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.
ಪರ್ಯಾಯ ರಸ್ತೆ ಯಾ ವುದು: ಹೆದ್ದಾರಿಯ ಈ ಸಂಕಷ್ಟಕರ ಸಂಚಾರದ ಬವಣೆ ತಪ್ಪಿಸಲು ವಾಹನ ಸವಾರರು ತಾಲೂಕಿನ ಎರಡು ಒಳ ರಸ್ತೆಗಳನ್ನು ಬಳಸುತ್ತಿದ್ದಾರೆ. ಬಿ.ಸಿ.ರೋಡ್‌ನಿಂದ ಪುತ್ತೂರು, ಉಪ್ಪಿನಂಗಡಿ ಕಡೆಗೆ ತೆರಳುವ ಸವಾರರು ನರಿಕೊಂಬು-ದಾಸಕೋಡಿ ರಸ್ತೆಯನ್ನು ಬದಲಿ ಮಾರ್ಗವಾಗಿ ಬಳಸುತ್ತಿದ್ದಾರೆ. ಇದರ ಮಧ್ಯಭಾಗದಲ್ಲಿ ಸಿಗುವ ಪಾಣೆಮಂಗಳೂರಿನಿಂದ ಮೆಲ್ಕಾರ್‌ವರಗೆ ಹೆದ್ದಾರಿ ರಸ್ತೆಯಲ್ಲಿ ಡಾಮರಿಗಿಂತ ಹೊಂಡವೇ ಹೆಚ್ಚಾಗಿದೆ. ಇಲ್ಲಿನ ಮೂರು ಕಿ.ಮೀ. ಪ್ರಯಾಣ ತ್ರಾಸದಾಯಕ. ಈ ಜಂಟಾಟ ದಿಂದ ತಪ್ಪಿಸಿಕೊಳ್ಳಲು ವಾಹನ ಚಾಲಕರು ಪಾಣೆಮಂಗಳೂರು ಪೇಟೆಯ ಒಳರಸ್ತೆಯನ್ನು ಬಳಸುತ್ತಿದ್ದಾರೆ. ಇದರಿಂದ ಹಲವು ವರ್ಷಗಳ ಹಿಂದೆ ಪಾಣೆಮಂಗಳೂರು ಪೇಟೆಯಲ್ಲಿ ಕಂಡು ಬರುತ್ತಿದ್ದ ವಾಹನ ದಟ್ಟಣೆ ಈಗ ಮತ್ತೆ ಕಾಣಿಸಿ ಕೊಂಡಿದೆ. ಪೇಟೆಯೊಳಗೆ ಟ್ರಾಫಿಕ್ ಜಾಮ್ ಮಾಮೂಲಿಯಾಗುತ್ತಿದೆ.
ಅದೇರೀತಿ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಎದುರಿನಿಂದ ಮೆಲ್ಕಾರ್‌ವರೆಗಿನ ಹೆದ್ದಾರಿ ಹೊಂಡಗಳನ್ನು ತಪ್ಪಿಸಲು ವಾಹನ ಸವಾರರು ಬಿ.ಸಿ.ರೋಡ್ ಮಾರ್ಗದ ಹಳೆ ಸೇತುವೆಯನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ದೈವಸ್ಥಾನದ ಎದುರು ಎಡಭಾಗದಲ್ಲಿರುವ ನರಿಕೊಂಬು ರಸ್ತೆಯನ್ನು ಆಶ್ರಯಿಸಿ, ಅಲ್ಲಿಂದ ಶಂಭೂರು ಮಾರ್ಗವಾಗಿ ದಾಸರಕೋಡಿ ಎಂಬಲ್ಲಿ ಮುಖ್ಯರಸ್ತೆಯನ್ನು ಸೇರುತ್ತಾರೆ. ಹೊಂಡ ಮಯವಾಗಿರುವ ಹೆದ್ದಾರಿಯಲ್ಲಿ ಅಪಾಯಕಾರಿ ಸಂಚಾರಕ್ಕಿಂತ ಒಂದಿಷ್ಟು ಸುತ್ತು ಬಳಸಿಯಾದರೂ ಪೇಟೆಯ ಒಳರಸ್ತೆಗಳಲ್ಲಿ ಸುರಕ್ಷಿತವಾಗಿ ಸಂಚರಿಸುವುದು ಒಳಿತು ಎಂದು ವಾಹನ ಸವಾರರು ನಿರ್ಧರಿಸಿದಂತಿದೆ. ಇದರಿಂದ ಬೆಳಗ್ಗೆ ಹಾಗೂ ಸಂಜೆಯ ಪೀಕ್ ಅವರ್ ಮಾತ್ರವಲ್ಲದೆ ಮಧ್ಯಾಹ್ನವೂ ಪೇಟೆ ರಸ್ತೆಯಲ್ಲಿ ವಾಹನ ದಟ್ಟನೆ ಕಂಡುಬರುತ್ತಿದೆ. ಇದರಿಂದ ಪೇಟೆಗೆ ಬರಲು ತೊಡಕಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಶಿಥಿಲ ಸೇತುವೆಯಲ್ಲಿ ಘನ ವಾಹನಗಳ ಸಂಚಾರ
ಹೊಂಡಮಯವಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರ ತಪ್ಪಿಸಲು ಬಹುತೇಕ ವಾಹನಗಳು ಪಾಣೆಮಂಗಳೂರು ಹಳೆ(ನೇತ್ರಾವತಿ) ಸೇತುವೆಯನ್ನೇ ಬಳಸಿ ಸಂಚರಿಸುತ್ತಿವೆ. ಶಿಥಿಲಗೊಂಡಿರುವ ಈ ಹಳೆ ಸೇತುವೆಯಲ್ಲಿ ಘನವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಅದನ್ನು ನಿರ್ಲಕ್ಷಿಸಿ ಘನ ವಾಹನಗಳು ಎಗ್ಗಿಲ್ಲದೆ ಓಡಾಡುತ್ತಿವೆ. ದಿನದ ಹಿಂದೆ ಎರಡು ಘನ ವಾಹನಗಳು ಸೇತುವೆಯಲ್ಲಿ ಸಿಲುಕಿಗೊಂಡಿದ್ದರಿಂದ ಕೆಲಕಾಲ ಲಘು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಹೊಂಡವನ್ನು ತಪ್ಪಿಸಲು ಹೆಚ್ಚಿನ ವಾಹನಗಳು ಪೇಟೆಯ ರಸ್ತೆಯನ್ನು ಬರುತ್ತಿರುವುದರಿಂದ ಪೇಟೆಯೊಳಗೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದ್ದು, ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆೆ. ಇದೀಗ ಮಳೆ ಕಡಿಮೆಯಾಗಿದ್ದು, ಇನ್ನಾದರೂ ರಸ್ತೆ ಹೊಂಡಗಳನ್ನು ಮುಚ್ಚುವ ಅಥವಾ ತೇಪೆ ಹಾಕುವ ಕಾರ್ಯವಾಗಲಿ.
-ಇಮ್ರಾನ್, ಪಾಣೆಮಂಗಳೂರು