ಪೊಲೀಸ್ ಠಾಣಾ ವ್ಯಾಪ್ತಿ ಕೇಳದೆ ದೂರು ದಾಖಲಿಸಿಕೊಳ್ಳಿ: ಪೊಲೀಸ್ ಇಲಾಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ಸೆ.20: ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿ, ಒಂದು ತಿಂಗಳಲ್ಲಿ ಆದೇಶ ಹೊರಡಿಸುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ವಕೀಲ ಎಸ್.ಉಪಮಾತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಸಾರ್ವಜನಿಕರು ದೂರು ದಾಖಲಿಸಲು ಬಂದಾಗ ಠಾಣಾ ವ್ಯಾಪ್ತಿ ಕೆಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಮೂಲಕ ನಿರ್ದೇಶಿಸಬೇಕು. ಈ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ವ್ಯಾಪಕ ತಿಳಿವಳಿಕೆ ಮೂಡಿಸಬೇಕು. ಠಾಣಾ ವ್ಯಾಪ್ತಿ ನೆಪ ಹೇಳಿ ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋಟ್ ನಿರ್ದೇಶನ ನೀಡಿದೆ.