ನಮ್ಮ ರಾಜಕೀಯ ಭವಿಷ್ಯವನ್ನೇ ಸಮಾಧಿ ಮಾಡಿಬಿಟ್ಟಿರಿ: ಸಿಎಂ ವಿರುದ್ಧ ಅನರ್ಹ ಶಾಸಕರ ಆಕ್ರೋಶ
"ನಿಮ್ಮನ್ನು ನಂಬಿ ನಾವು ಹಾಳಾಗಿದ್ದೇವೆ, ನಮಗೆ ವಿಷ ಕೊಟ್ಟುಬಿಡಿ"
ಬೆಂಗಳೂರು, ಸೆ. 21: ‘ನಮ್ಮಿಂದ ನೀವು ಸಿಎಂ ಆಗಿದ್ದೀರಿ. ಆದರೆ, ಇದೀಗ ನಮ್ಮ ರಾಜಕೀಯ ಭವಿಷ್ಯವನ್ನೆ ಸಮಾಧಿ ಮಾಡಿಬಿಟ್ಟಿರಿ, ನಿಮ್ಮನ್ನು ನಂಬಿ ನಾವು ಹಾಳಾಗಿದ್ದೇವೆ, ನಮಗೆ ವಿಷ ಕೊಟ್ಟುಬಿಡಿ’ ಎಂದು ಅನರ್ಹ ಶಾಸಕರು, ಮುಖ್ಯಮಂತ್ರಿ ಯಡಿಯೂರಪ್ಪ ಮುಂದೆ ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಸದಾಶಿವ ನಗರದ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ಅನರ್ಹ ಶಾಸಕರಾದ ಬಿ.ಸಿ.ಪಾಟೀಲ್, ಕೆ.ಸುಧಾಕರ್, ಎಚ್.ವಿಶ್ವನಾಥ್, ಮುನಿರತ್ನ, ಆರ್.ಶಂಕರ್, ನಾರಾಯಣಗೌಡ, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಆರ್.ರೋಷನ್ ಬೇಗ್ ಅವರೊಂದಿಗೆ ಸಿಎಂ ಬಿಎಸ್‌ವೈ ದಿಢೀರ್ ಗೌಪ್ಯ ಸಮಾಲೋಚನೆ ನಡೆಸಿದರು.
‘ಯಾವುದೇ ಕಾರಣಕ್ಕೂ ನೀವು ಭಯ ಪಡುವ ಅಗತ್ಯವಿಲ್ಲ. ನಿಮ್ಮ ಪರವಾಗಿ ನಾನೇ ಖುದ್ದು ಹೊಸದಿಲ್ಲಿಗೆ ತೆರಳುತ್ತೇನೆ. ಚುನಾವಣೆಯಲ್ಲಿ ನೀವೇ ಸ್ಪರ್ಧಿಸುವುದು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದು, ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಯಡಿಯೂರಪ್ಪ ಅಭಯ ನೀಡಿದರೂ, ಅನರ್ಹ ಶಾಸಕರ ಅಸಮಾಧಾನ ಶಮನವಾಗಿಲ್ಲ ಎನ್ನಲಾಗಿದೆ.
ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಅವರೇ ‘ನಾವು (ಅನರ್ಹರು) ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿರುವಾಗ ‘ನಾವು ಎಲ್ಲಿ ಹೋಗಿ ನಿಲ್ಲಬೇಕು’ ಎಂದು ಅನರ್ಹ ಶಾಸಕರು, ಯಡಿಯೂರಪ್ಪನವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆಂದು ಗೊತ್ತಾಗಿದೆ.
ಅನರ್ಹ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಸಿಎಂ ಬಿಎಸ್‌ವೈ, ಡಿಸಿಎಂ ಲಕ್ಷ್ಮಣ ಸವದಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಕ್ಷರಶಃ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದ್ದು, ಇದೇ ವೇಳೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರೊಂದಿಗೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.
ಅನರ್ಹ ಶಾಸಕರು ಉಪ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಅ.21ಕ್ಕೆ ಆಯೋಗ ಚುನಾವಣೆ ಘೋಷಣೆ ಮಾಡಿದ್ದು, ಆ ದಿನಾಂಕ ಮುಂದೂಡಬೇಕು. ಜತೆಗೆ ಉಪ ಚುನಾವಣೆ ಸ್ಪರ್ಧೆಗೆ ತಮಗೆ ಅವಕಾಶ ನೀಡಬೇಕೆಂದು ಕೋರುವುದು ಸೇರಿದಂತೆ ಅನರ್ಹ ಶಾಸಕರ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಸಿಎಂ ದಿಲ್ಲಿಗೆ: ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಕಾನೂನು ಹೋರಾಟ ಹಾಗೂ ಉಪ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಸಿಎಂ ಬಿಎಸ್‌ವೈ ನಾಳೆಯೇ ದಿಲ್ಲಿಗೆ ತೆರಳುವ ಸಾಧ್ಯತೆಗಳಿವೆ.
‘ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಶಾಸಕತ್ವ ಅನರ್ಹಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಸೆ.22ಕ್ಕೆ ನಮ್ಮ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ’
-ಆರ್.ಶಂಕರ್, ಅನರ್ಹ ಶಾಸಕ
‘ನಮ್ಮ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ನಾಳೆ(ಸೆ.22) ವಿಚಾರಣೆಗೆ ಬರಲಿದ್ದು, ನಮಗೆ ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ. ಚುನಾವಣಾ ಆಯೋಗದ ತೀರ್ಮಾನವೇ ಅಂತಿಮವಲ್ಲ. ಹೀಗಾಗಿ ನಮಗೆ ಯಾವುದೇ ಆತಂಕವಿಲ್ಲ’
-ಎಸ್.ಟಿ.ಸೋಮಶೇಖರ್, ಅನರ್ಹ ಶಾಸಕ