varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ವೆವಿಧ್ಯವನ್ನು ಎತ್ತಿ ಹಿಡಿಯುವ ‘ಮರು ರೂಪಗಳು’

ವಾರ್ತಾ ಭಾರತಿ : 23 Sep, 2019
-ಕಾರುಣ್ಯಾ

ಈ ದೇಶದ ಬಹು ಸಂಸ್ಕೃತಿಯನ್ನು ಏಕಸಂಸ್ಕೃತಿಯ ಪಾತ್ರೆಯಲ್ಲಿ ಕರಗಿಸುವ ಪ್ರಯತ್ನ ನಡೆಸುತ್ತಿರುವ ದಿನಗಳು ಇವು. ಇಡೀ ದೇಶದ ಭಾಷೆಯನ್ನು, ಮಾತನ್ನು, ಅಭಿವ್ಯಕ್ತಿಯನ್ನು ಹಿಂದಿಯ ಮೂಲಕ ಹಿಡಿದಿಡಲು ಪ್ರಭುತ್ವ ಪ್ರಯತ್ನಿಸುತ್ತಿದೆ. ಈಗಾಗಲೇ ಇಂಗ್ಲಿಷ್ ದಾಳಿಯಿಂದ ತತ್ತರಿಸಿರುವ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಇನ್ನೊಂದು ಸವಾಲಾಗಿ ಪರಿಣಮಿಸಿದೆ. ಇಂಗ್ಲಿಷ್‌ಗಿಂತ ಹಿಂದಿ ಭಿನ್ನವಾದುದು. ಅವಕಾಶಗಳನ್ನು ತನ್ನದಾಗಿಸಲು ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇಂಗ್ಲಿಷನ್ನು ಪ್ರಾದೇಶಿಕ ಭಾಷೆಯ ಜೊತೆ ಜೊತೆಗೇ ಒಪ್ಪಿಕೊಂಡಿದ್ದಾರೆ. ಆದರೆ ಹಿಂದಿಯನ್ನು ಆ ರೀತಿಯಲ್ಲಿ ಒಪ್ಪಿಕೊಳ್ಳುವುದಕ್ಕೆ ಯಾವುದೇ ಕಾರಣವಿಲ್ಲ. ಈ ದೇಶದ ಸಾಂಸ್ಕೃತಿಕ ಏಕ ಸೂತ್ರಕ್ಕೆ ತರುವ ದುರುದ್ದೇಶ ಬಿಟ್ಟರೆ ಅದರ ಹಿಂದೆ ಇನ್ನೇನೂ ಇಲ್ಲ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಬೇರೆ ಬೇರೆ ಭಾಷೆಗಳನ್ನು ಇನ್ನಿತರ ಭಾಷೆಗಳಿಗೆ ಭಾಷಾಂತರಿಸುತ್ತಾ ದೇಶದ ವೈವಿಧ್ಯಗಳನ್ನು ಎತ್ತಿ ಹಿಡಿಯುವ ಅನಿವಾರ್ಯ ಹಿಂದೆಂದಿಗಿಂತ ಹೆಚ್ಚಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರತಿ ವರ್ಷ ಅನುವಾದ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಳು ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
‘ಮರು ರೂಪಗಳು’ ಪ್ರಾಧಿಕಾರದ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಈ ಕೃತಿಯಲ್ಲಿ ಹತ್ತು ಭಾಷೆಗಳಲ್ಲಿ ಬಂದಿರುವ ಕವಿತೆಗಳನ್ನು ಒಟ್ಟು ಸೇರಿಸಲಾಗಿದೆ. ಪ್ರಾದೇಶಿಕ ಭಾಷೆಗಳು ಹೇಗೆ ತನ್ನ ವೈವಿಧ್ಯಗಳ ಮೂಲಕವೇ ಈ ದೇಶವನ್ನು ಸುಂದರವಾಗಿಸಿದೆ ಎನ್ನುವುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಹಿರಿಯ ಕವಿ ಎಚ್. ಎಸ್. ಶಿವಪ್ರಕಾಶ್ ಅವರು ಸುಮಾರು 25 ವರ್ಷಗಳ ಹಿಂದೆ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಕವಿತೆಗಳ ಸಂಕಲನ ಇದು. ಹಿಂದಿ, ಉರ್ದು, ಕಾಶ್ಮೀರಿ, ಇಂಗ್ಲಿಷ್, ನೈಜೀರಿಯಾ, ಐರ್ಲೆಂಡ್, ತಮಿಳು, ಪಾಕಿಸ್ತಾನಿ, ಬಂಗಾಳಿ, ಜರ್ಮನಿ, ಚಿಲಿ, ಒರಿಯಾ ಸೇರಿದಂತೆ ಹಲವು ಭಾಷೆಗಳ, ದೇಶಗಳ ಕವಿತೆಗಳು ಇಲ್ಲಿವೆ. ಗಜಾನನ ಮಾಧವ ಮುಕ್ತಿಬೋಧ್, ನೂನ್ ಮೀಮ್ ರಾಶಿದ್, ಬೋರಿಸ್ ಪಾಸ್ತರ್‌ನಾಕ್, ಸಂತ ತುಕರಾಮ, ವಿಲಿಯಂ ಬಟ್ಲರ್ ಏಟ್ಸ್, ತಿರುನಾವುಕ್ಕರಸ್ ಅಪ್ಪರ್, ವಿಲಿಯಂ ಬ್ಲೇಕ್, ಅಖ್ತರ್ ಉಲ್ ಈಮಾನ್, ವೊಲೆಪೊಯಿಂಕಾ, ಕಾಳಿದಾಸ, ರವೀಂದ್ರನಾಥ ಠಾಗೋರ್, ಪಾಬ್ಲೋ ನೆರೂಡ, ಹೀಬಾ ಖಾತೂನ್, ರಮಾಕಾಂತ ರಥ, ವಿಲಿಯಂ ಶೇಕ್ಸ್‌ಪಿಯರ್, ಜಫರ್ ಇಕ್ಬಾಲ್...ಹೀಗೆ ಬೇರೆ ಬೇರೆ ಭಾಷೆಗಳ ಕವಿಗಳು ಇಲ್ಲಿ ಕಾವ್ಯದ ಮೂಲಕ ಒಂದಾಗಿದ್ದಾರೆ.
‘ಈ ಕರಗಳ ಝಣಕಾರವೇ...ಅರಿವಿನ ಮುಂಗಣ್ಣು’’ ಎಂದು ಉರ್ದುವಿನಲ್ಲಿ ಬರೆಯುವ ನೂನ್ ಮೀಮ್ ರಾಶಿದ್, ‘‘ಇದು ಕೆಟ್ಟ ಕಾಲ, ಹಾಡು ಕವಿತೆಗಳು ಕೆಟ್ಟಜನರ ಕಸುಬು/ಕಪಟ ವೇಷಿಗಳು ನೆಲಕೆ ನೆಲವನ್ನ ಲೂಟಿ ಹೊಡೆದವರಿಂದ...’’ ಎಂದು ಬರೆಯುವ ಸಂತ ತುಕರಾಮ, ‘ತುಂಬಾ ನಾಚಿಕೆ ನನಗೆ/ನಾನೂನು ನಿಮ್ಮ ಜೊತೆ ಹರಿಸಲಿಲ್ಲ ರಕ್ತ...’ ಎಂದು ವರ್ತಮಾನವನ್ನು ಹಿಂದಿಯಲ್ಲಿ ವ್ಯಂಗ್ಯ ಮಾಡುವ ಗಜಾನನ ಮಾಧವ ಮುಕ್ತಿಬೋಧ್, ‘ಬಾ ಬಾರೋ ಗೆಣೆಕಾರ...’ ಎಂದು ಕಾಶ್ಮೀರಿ ಭಾಷೆಯಲ್ಲಿ ಹಾಡುವ ಹೀಬಾ ಖಾತೂನ್....ಇಲ್ಲಿರುವ ಎಲ್ಲ ಕವಿತೆಗಳು ವರ್ತಮಾನದ ಕಲ್ಲೆದೆಯನ್ನು ತಟ್ಟುವಂಥವುಗಳು. 190 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)