ಭಾರತೀಯರಲ್ಲಿ ಸಾಮಾನ್ಯವಾಗಿರುವ ಐದು ಪೋಷಕಾಂಶ ಕೊರತೆಗಳು
ಉತ್ತಮ ಆರೋಗ್ಯಕ್ಕೆ ಹಲವಾರು ಪೋಷಕಾಂಶಗಳು ಅಗತ್ಯವಾಗಿವೆ. ನಮ್ಮ ಶರೀರವು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಪೋಷಕಾಂಶಗಳು ಅಗತ್ಯವಾಗಿದ್ದರೂ ಈ ಪೈಕಿ ಹೆಚ್ಚಿನವನ್ನು ಅದು ಸ್ವತಃ ಉತ್ಪಾದಿಸುವುದಿಲ್ಲ ಮತ್ತು ಅವುಗಳನ್ನು ಪಡೆಯಲು ನಾವು ನಮ್ಮ ಆಹಾರವನ್ನು ಅವಲಂಬಿಸಿರುತ್ತೇವೆ. ಇದಕ್ಕಾಗಿ ಸಂತುಲಿತ ಆಹಾರವನ್ನು ಸೇವಿಸಬೇಕಾಗುತ್ತದೆ.
ಆದರೆ ವಾತಾವರಣ,ಪ್ರದೇಶ,ದೇಶ ಇತ್ಯಾದಿಗಳು ನಮ್ಮ ಆಹಾರ ಸೇವನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತೀಯ ಆಹಾರವು ಅತ್ಯಂತ ಪೌಷ್ಟಿಕ ಎಂದು ಪರಿಗಣಿಸಲಾಗಿದೆಯಾದರೂ ಜನರಲ್ಲಿ ಕೆಲವು ಸಾಮಾನ್ಯ ಪೋಷಕಾಂಶ ಕೊರತೆಗಳಿವೆ. ಅಂತಹ ಕೆಲವು ಕೊರತೆಗಳ ಕುರಿತು ಮಾಹಿತಿಯಿಲ್ಲಿದೆ.
► ಕಬ್ಬಿಣ
ಶರೀರದಲ್ಲಿ ಕಬ್ಬಿಣದ ಕೊರತೆಯು ಜಾಗತಿಕ ಸಮಸ್ಯೆಯಾಗಿದೆ. ವಿಶ್ವದ ಶೇ.30ಕ್ಕೂ ಅಧಿಕ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಹೆಚ್ಚಾಗಿ ಹದಿಹರೆಯದ ಬಾಲಕಿಯರಲ್ಲಿ ಈ ಕೊರತೆ ಕಂಡು ಬರುತ್ತದೆ. ಈ ಕೊರತೆಯನ್ನು ನೀಗಿಸಲು ಕಬ್ಬಿಣದ ಪೂರಕಗಳನ್ನು ಸೇವಿಸಬೇಕಾಗುತ್ತದೆ ಅಥವಾ ಸಮೃದ್ಧ ಕಬ್ಬಿಣವನ್ನು ಹೊಂದಿರುವ ಹಸಿರು ತರಕಾರಿಗಳು,ಇಡಿಯ ಧಾನ್ಯಗಳು,ಹುರುಳಿ ಕಾಯಿ, ಬದಾಮ ನಂತಹ ಬೀಜಗಳು ಇರುವ ಆಹಾರವನ್ನು ಸೇವಿಸಬೇಕು.
► ವಿಟಾಮಿನ್ ಡಿ
ಇದು ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಕೊರತೆಯಾಗಿದೆ. ನಮ್ಮ ಶರೀರವು ವಿಟಾಮಿನ್ ಡಿ ಅನ್ನು ಆಹಾರದಿಂದ ಮತ್ತು ಮುಖ್ಯವಾಗಿ ಸೂರ್ಯನ ಬಿಸಿಲಿನಿಂದ ಪಡೆಯುತ್ತದೆ. ತಲೆ ಅತಿಯಾಗಿ ಬೆವರುವುದು ತೀವ್ರ ವಿಟಾಮಿನ್ ಡಿ ಕೊರತೆಯನ್ನು ಸೂಚಿಸುವ ಸಂಕೇತಗಳಲ್ಲೊಂದಾಗಿದೆ. ವಿಟಾಮಿನ್ ಡಿ ಕೊರತೆಯು ಮೂಳೆಗಳು ಮತ್ತು ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ. ಈಗಾಗಲೇ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಮೀನು ಸೇವನೆಯು ವಿಟಾಮಿನ್ ಡಿ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಆಹಾರದಲ್ಲಿ ವಿಟಾಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿರುವುದಿಲ್ಲ,ಹೀಗಾಗಿ ಪೂರಕಗಳನ್ನೂ ಸೇವಿಸಬೇಕಾಗುತ್ತದೆ.
► ಅಯೊಡಿನ್
ನಮ್ಮ ಥೈರಾಯ್ಡ ಗ್ರಂಥಿಯ ಸೂಕ್ತ ಕಾರ್ಯನಿರ್ವಹಣೆಗೆ ಅಯೊಡಿನ್ ಅಗತ್ಯವಿದೆ. ದೇಹತೂಕವನ್ನು ನಿಯಂತ್ರಿಸಲು ಮತ್ತು ಬೆಳವಣಿಗೆ ಹಾರ್ಮೋನ್‌ನ ಸ್ರವಿಸುವಿಕೆಗೆ ಅದು ಬೇಕು. ನಮ್ಮ ಶರೀರವು ಖುದ್ದಾಗಿ ಅಯೊಡಿನ್ ಅನ್ನು ತಯಾರಿಸಿಕೊಳ್ಳುವುದಿಲ್ಲ,ಹೀಗಾಗಿ ನಾವು ಅದನ್ನು ಆಹಾರಗಳ ಮೂಲಕ ಪಡೆಯಬೇಕಾಗುತ್ತದೆ. ಅಯೊಡೈಸ್ಡ್ ಉಪ್ಪು ನಮ್ಮ ದೈನಂದಿನ ಆಹಾರದಲ್ಲಿ ಅಯೊಡಿನ್‌ನ ಅತ್ಯುತ್ತಮ ಮತ್ತು ಅತ್ಯಂತ ಅನುಕೂಲಕರ ಮೂಲವಾಗಿದೆ. ಚೀಸ್,ಆಕಳ ಹಾಲು,ಮೊಟ್ಟೆ ಮತ್ತು ಮೊಸರು ಇವು ಅಯೊಡಿನ್‌ನ ಇತರ ಮೂಲಗಳಲ್ಲಿ ಸೇರಿವೆ.
► ವಿಟಾಮಿನ್ ಎ
ವಿಟಾಮಿನ್ ಎ ಕೊರತೆಯು ಕಣ್ಣುಗಳ ನಿಶ್ಶಕ್ತಿಗೆ ಕಾರಣವಾಗುತ್ತದೆ. ಅದು ಅಂಧತ್ವವನ್ನೂ ಉಂಟು ಮಾಡಬಹುದು. ಮಗು ಜನಿಸಿದ ಬಳಿಕ ಮೊದಲ ಆರು ತಿಂಗಳು ಎದೆಹಾಲು ಉಣಿಸುವುದರಿಂದ ಮಕ್ಕಳಲ್ಲಿ ವಿಟಾಮಿನ್ ಎ ಕೊರತೆಯುಂಟಾಗುವುದನ್ನು ನಿವಾರಿಸಬಹುದು. ಖಿನ್ನತೆಯ ವಿರುದ್ಧ ಹೋರಾಡಲು ನೆರವಾಗುವ ವಿಟಾಮಿನ್ ಎ ಮೂಳೆಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಜ್ಜರಿ,ದೊಣ್ಣೆ ಮೆಣಸಿನಕಾಯಿ,ಕಾಡ್‌ಲಿವರ್ ಎಣ್ಣೆ,ಸಿಹಿಗೆಣಸು ಇತ್ಯಾದಿಗಳು ಸಮೃದ್ಧ ವಿಟಾಮಿನ್ ಎ ಅನ್ನು ಹೊಂದಿವೆ.
► ವಿಟಾಮಿನ್ ಸಿ
ಸದೃಢ ರೋಗ ನಿರೋಧಕ ವ್ಯವಸ್ಥೆ ಮತ್ತು ಆರೋಗ್ಯಕರ ಚರ್ಮಕ್ಕಾಗಿ ವಿಟಾಮಿನ್ ಸಿ ಮುಖ್ಯವಾಗಿದೆ. ಭಾರತದಲ್ಲಿ 60 ವರ್ಷಕ್ಕಿಂತ ಮೇಲಿನ ಶೇ.73ರಷ್ಟು ಜನರು ವಿಟಾಮಿನ್ ಸಿ ಕೊರತೆಯನ್ನು ಹೊಂದಿದ್ದಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ತಂಬಾಕು ಸೇವನೆಯ ಚಟವನ್ನು ಹೊಂದಿದವರು ಅದನ್ನು ಕಡಿಮೆ ಮಾಡಿದರೆ ಶರೀರದಲ್ಲಿ ವಿಟಾಮಿನ್ ಸಿ ಮಟ್ಟ ಹೆಚ್ಚಬಹುದು. ಕಿತ್ತಳೆ,ಕಿವಿ ಮತ್ತು ಲಿಂಬೆಯಂತಹ ಸಿಟ್ರಸ್ ಹಣ್ಣುಗಳು ಹಾಗೂ ಕಾಲಿಫ್ಲವರ್,ಬ್ರಾಕೊಲಿ,ದೊಣ್ಣೆಮೆಣಸುಗಳಂತಹ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ವಿಟಾಮಿನ್ ಸಿ ಕೊರತೆಯನ್ನು ನೀಗಿಸಿಕೊಳ್ಳಬಹುದು.