ಬಾಳೆಹಣ್ಣು ಮತ್ತು ಬಾಳೆಕಾಯಿ: ಇವುಗಳಲ್ಲಿ ಯಾವುದು ಹೆಚ್ಚು ಒಳ್ಳೆಯದು?
ಬಾಳೆಹಣ್ಣು ಮತ್ತು ಬಾಳೆಕಾಯಿ ಎರಡೂ ನಮ್ಮ ಆರೋಗ್ಯಕ್ಕೆ ಲಾಭದಾಯವಾಗಿವೆಯಾದರೂ ಅವುಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಎರಡೂ ಸಮೃದ್ಧ ಪೋಷಕಾಂಶಗಳನ್ನು ಹೊಂದಿವೆ. ಸಿಹಿಯಾಗಿರುವ ಹಣ್ಣಿಗೆ ಹೋಲಿಸಿದರೆ ಬಾಳೆಕಾಯಿ ಸ್ವಲ್ಪ ಕಹಿರುಚಿ ಹೊಂದಿದೆ. ಇವೆರಡನ್ನು ಸೇವಿಸುವುದರ ಲಾಭ-ನಷ್ಟಗಳ ಕುರಿತು ಮಾಹಿತಿಯಿಲ್ಲಿದೆ.
► ಬಾಳೆಹಣ್ಣು
ಬಾಳೆಹಣ್ಣು ಎಲ್ಲ ಕಡೆಗಳಲ್ಲಿಯೂ ಸುಲಭವಾಗಿ ಲಭ್ಯವಿದೆ. ಅಗ್ಗದ ದರಗಳಲ್ಲಿ ಸಿಗುವ ಇದು ನಮ್ಮ ಭಾರತದಲ್ಲಿ ಅದೆಷ್ಟೋ ಜನರ ಪಾಲಿನ ಊಟವಾಗಿದೆ ಎಂದರೆ ಅಚ್ಚರಿಯೇನಿಲ್ಲ.
ಹಳದಿ ಬಣ್ಣದ ಅಥವಾ ಸರಿಯಾಗಿ ಪಕ್ವಗೊಂಡ ಬಾಳೆಹಣ್ಣು ಸುಲಭವಾಗಿ ಜೀರ್ಣಗೊಳ್ಳುತ್ತದೆ. ಅದು ಹಣ್ಣಾಗುವಾಗ ಅದರಲ್ಲಿಯ ಪ್ರತಿರೋಧಿ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುವುದು ಇದಕ್ಕೆ ಕಾರಣ. ಬಾಳೆಹಣ್ಣು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು,ಇದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಚೆನ್ನಾಗಿ ಪಕ್ವಗೊಂಡ ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ಬಾಳೆಹಣ್ಣು ಪಕ್ವಗೊಂಡಾಗ ತನ್ನಲ್ಲಿಯ ಕೆಲವು ಕಿರು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಬಾಳೆಹಣ್ಣಿನಲ್ಲಿ ಅಧಿಕ ಸಕ್ಕರೆಯ ಅಂಶವಿರುವುದರಿಂದ ಅದರ ಸೇವನೆಯು ಟೈಪ್-2 ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.
► ಬಾಳೆಕಾಯಿ
ಬಾಳೆಕಾಯಿ ಹಸಿಯಾಗಿ ತಿಂದಾಗ ಅಹಿತಕರ ರುಚಿಯನ್ನು ಹೊಂದಿರುವುದರಿಂದ ಹೆಚ್ಚಿನ ಜನರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ಅವುಗಳನ್ನು ಅಡುಗೆಯಲ್ಲಿ ಬಳಸುವ ಮೂಲಕ ಸೇವಿಸಲಾಗುತ್ತದೆ. ಚಿಪ್ಸ್,ಫ್ರೈ ಇತ್ಯಾದಿ ಸಿದ್ಧ ಆಹಾರಗಳ ತಯಾರಿಕೆಗೆ ಬಾಳೆಕಾಯಿ ಬಳಕೆಯಾಗುತ್ತದೆ.
ಬಾಳೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ಪ್ರತಿರೋಧಿ ಪಿಷ್ಟವು ಬಾಳೆಹಣ್ಣಿನಂತೆ ಸಕ್ಕರೆಯ ರೂಪಕ್ಕೆ ಪರಿವರ್ತನೆಯಾಗಿರುವುದಿಲ್ಲ. ಇದರಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಿರುವುದರಿಂದ ಕಡಿಮೆ ಸಕ್ಕರೆಯ ಆಹಾರ ಕ್ರಮವನ್ನು ಪಾಲಿಸುವವರಿಗೆ ಸೂಕ್ತವಾಗಿದೆ. ಮಧುಮೇಹಿಗಳು ಯಾವುದೇ ಚಿಂತೆ ಇಲ್ಲದೆ ಬಾಳೆಕಾಯಿಯನ್ನು ತಿನ್ನಬಹುದು. ಬಾಳೆಕಾಯಿಯಲ್ಲಿ ಕೆಲವು ಪ್ರೊಬಯಾಟಿಕ್ ಬ್ಯಾಕ್ಟೀರಿಯಾ ಇರುವುದರಿಂದ ಅದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಶರೀರವು ಪೋಷಕಾಂಶಗಳನ್ನು ತ್ವರಿತವಾಗಿ ಹೀರಿಕೊಳ್ಳಲೂ ಅದು ನೆರವಾಗುತ್ತದೆ.
ಆದರೆ ಪಕ್ವಗೊಂಡ ಬಾಳೆಹಣ್ಣಿಗೆ ಹೋಲಿಸಿದರೆ ಕಾಯಿಯಲ್ಲಿ ಕೆಲವೇ ಉತ್ಕರ್ಷಣ ನಿರೋಧಕಗಳಿರುತ್ತವೆ. ಅದರಲ್ಲಿಯ ಪ್ರತಿರೋಧಿ ಪಿಷ್ಟವು ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ.
ಒಟ್ಟಾರೆಯಾಗಿ ಹೇಳಬೇಕಿದ್ದರೆ ಬಾಳೆಹಣ್ಣಾಗಲಿ ಅಥವಾ ಬಾಳೆಕಾಯಿಯಾಗಲಿ,ಆರೋಗ್ಯಕ್ಕೆ ಎರಡೂ ಉತ್ತಮವೇ. ಆದರೆ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿರುವವರು ಬಾಳೆಹಣ್ಣು ತಿನ್ನುವುದರಿಂದ ದೂರವಿರಬೇಕು. ಬದಲಿಗೆ ವಿವಿಧ ರೂಪಗಳಲ್ಲಿ ಬಾಳೆಕಾಯಿಯನ್ನು ತಿನ್ನಬಹುದು.
ನೀವು ಬಾಳೆಹಣ್ಣು ಅಥವಾ ಬಾಳೆಕಾಯಿ ತಿನ್ನಿರಿ,ಆದರೆ ನಿಮ್ಮ ಶರೀರವು ಹೇಗೆ ಅದನ್ನು ಸಂಸ್ಕರಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಅವೆರಡರ ಪೈಕಿ ಯಾವುದನ್ನು ತಿನ್ನಬೇಕು ಎನ್ನುವುದು ನಿಮ್ಮದೇ ಆಯ್ಕೆಯಾಗಿದೆ.