'ಹೌಡಿ ಮೋದಿ’ ಭಾರತದ ದುಸ್ಥಿತಿಯನ್ನು ಮರೆಸೀತೇ?
ದೇಶದ ಕೃಷಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರವನ್ನು ಮೇಲೆತ್ತುವ ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಮೋದಿ ಸರಕಾರ ಕೇವಲ ತಾಯಿಯೊಂದಿಗೆ ಊಟದಂತಹ ಕ್ಯಾಮರಾ ಮುಂದಿನ ಕಾರ್ಯಕ್ರಮಗಳ ಮೂಲಕ ಬಿಟ್ಟಿ ಭಾವನಾತ್ಮಕಗೊಳಿಸುವ ಪ್ರಚಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಸಾಗುತ್ತಿದೆ. ಈಗ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಸಂಘಟಿಸಿದ್ದೆಂದು ಹೇಳಲಾಗುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮ ಕೂಡ ಅದರ ಅಂತರ್‌ರಾಷ್ಟ್ರೀಯ ಮಟ್ಟದ ಮುಂದುವರಿಕೆಯೇ ವಿನಹ ಬೇರೇನಲ್ಲ.
ಈಗ ‘ಹೌಡಿ ಮೋದಿ’ ಹವಾ ಅಮೆರಿಕದಲ್ಲಿ ಜೋರಾಗಿಯೇ ಇದೆಯೆಂದು ಸುದ್ದಿ ಸಂಸ್ಥೆಗಳ ವರದಿಗಳು ಹೇಳುತ್ತಿವೆ. ಆದರೆ ಅಮೆರಿಕದಲ್ಲಿ ಮೋದಿಯ ವಿರುದ್ಧ ದೊಡ್ಡ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಅದರ ಬಗೆಗಿನ ವರದಿಗಳು ಭಾರತದ ಮಾಧ್ಯಮಗಳಲ್ಲಿ ಅಷ್ಟಾಗಿ ಬರುತ್ತಿಲ್ಲ. ಪ್ರತಿಭಟನಾಕಾರರು ಮೋದಿಯನ್ನು ‘ಭಯೋತ್ಪಾದಕ’ ಎಂದು ಭಿತ್ತಿಪತ್ರಗಳೊಂದಿಗೆ ಪ್ರತಿಭಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ನರೇಂದ್ರ ಮೋದಿ, ಅಮಿತ್ ಶಾ, ಹಾಗೂ ಸೇನೆಯ ಜನರಲ್ ಧಿಲ್ಲೋನ್ ವಿರುದ್ಧ ಕಾಶ್ಮೀರದ ವಿಚಾರದಲ್ಲಿ ಅಮೆರಿಕದ ಹ್ಯೂಸ್ಟನ್‌ನ ಟೆಕ್ಸಾಸ್ ನ್ಯಾಯಾಲಯದಲ್ಲಿ ಮೊಕದ್ದಮೆಯೊಂದನ್ನು ಹೂಡಲಾಗಿದೆ. ಅದರನ್ವಯ ನ್ಯಾಯಾಲಯ ಈ ಮೂವರಿಗೂ ಸಮನ್ಸ್ ಕಳುಹಿಸಿದೆ ಎಂಬ ಸುದ್ದಿಯೂ ಇದೆ. ಕಾಶ್ಮೀರಿಗಳ ಮೇಲೆ ಮತ್ತು ಸಿಖ್ ಸಮುದಾಯದವರ ಮೇಲೆ ನಡೆಸಿದ ದೌರ್ಜನ್ಯಗಳು ಮಾನವ ಹಕ್ಕು ಹರಣಗಳ ಮೇಲೆ ಈ ಮೊಕದ್ದಮೆಯನ್ನು ಹೂಡಲಾಗಿದೆ. ಇದರ ಪರಿಣಾಮಗಳ ಬಗ್ಗೆ ಈಗ ಅಷ್ಟೇನೂ ಪ್ರಸ್ತುತತೆ ಇಲ್ಲದೇ ಇದ್ದರೂ ಅಂತರ್‌ರಾಷ್ಟ್ರೀಯವಾಗಿ ಮೋದಿ ಸರಕಾರಕ್ಕಾದ ಮುಜುಗರ ಮಾತ್ರ ಅಪ್ರಸ್ತುತವಾಗುವುದಿಲ್ಲ. ಅದರ ಪರಿಣಾಮ ದೀರ್ಘಕಾಲಿಕವಾಗಿ ಇರುವ ಸಾಧ್ಯತೆಯಿದೆ.
ಮೋದಿಯ ಬಗೆಗಿನ ಹವಾ ಭಾರತದಲ್ಲಿ ದಿನದಿಂದ ದಿನಕ್ಕೆ ಕುಸಿತಕ್ಕೊಳಗಾಗುತ್ತಿರುವ ಸಂದರ್ಭ ಇದಾಗಿದೆ. ಮೋದಿಯ ಆಡಳಿತದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದಾಖಲೆ ಪ್ರಮಾಣಕ್ಕೆ ಕುಸಿಯುತ್ತಾ ಹೋಗುತ್ತಿದೆ. ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಆದಾಯ ಗಿಟ್ಟದ ಸ್ಥಿತಿ ಬಂದಿದೆ. ಬ್ಯಾಂಕುಗಳು ಕಾರ್ಪೊರೇಟ್ ಸಾಲ ಮರುಪಾವತಿಯಾಗದ್ದರಿಂದ ಬರಿದಾಗಿ ಅದನ್ನು ಜನಸಾಮಾನ್ಯರ ಜೇಬುಗಳಿಗೆ ನೇರವಾದ ಕನ್ನ ಹಾಕುವ ಇಲ್ಲವೇ ವಿಲೀನಗಳ ಮೂಲಕ ತುಂಬಿಸುವ ಕಾರ್ಯ ನಡೆದಿದೆ. ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿದ್ದ ಮೀಸಲು ನಿಧಿಯಿಂದ ಒಂದೂ ಮುಕ್ಕಾಲು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಸರಕಾರ ಬಲವಂತವಾಗಿ ಎತ್ತಿಕೊಂಡಿದೆ. ಅದಾದ ಕೆಲವೇ ದಿನಗಳಲ್ಲಿ ಕಾರ್ಪೊರೇಟ್‌ಗಳು ನೀಡಬೇಕಿದ್ದ ತೆರಿಗೆಯನ್ನು ಕಡಿತ ಮಾಡಿ ಸರಕಾರದ ಬೊಕ್ಕಸಕ್ಕೆ 1,40,000 ಕೋಟಿ ರೂಪಾಯಿ ಹೊರೆ ಮಾಡಿಕೊಂಡಿದೆ. ಪ್ರಧಾನಿ ಮೋದಿ ಈ ತೆರಿಗೆ ಕಡಿತ 130 ಕೋಟಿ ಭಾರತೀಯರ ಗೆಲುವು ಎಂದು ಬಣ್ಣಿಸಿ ಹೇಳಿಕೆ ನೀಡಿದ್ದರು. ಆದರೆ ಅದು ಹಾಸ್ಯಾಸ್ಪದ ಅವಹೇಳನ ಬಿಟ್ಟರೆ ಬೇರೇನೂ ಅಲ್ಲ. ಯಾಕೆಂದರೆ ಭಾರತದಲ್ಲಿ ಸುಮಾರು ಶೇ1. ರಷ್ಟು ಮಾತ್ರ ಕಾರ್ಪೊರೇಟ್‌ಗಳಿರುವುದು. ಇನ್ನು ನೂರಾ ಮೂವತ್ತು ಕೋಟಿ ಜನರಿಗೆ, ಇಂತಹ ಕಾರ್ಪೊರೇಟ್ ತೆರಿಗೆ ವಿನಾಯಿತಿಯು, ಅವರ ಭಾರವನ್ನು ಹೆಚ್ಚಿಸುವುದು ಬಿಟ್ಟರೆ ಬೇರೇನಲ್ಲ.
ಆಯವ್ಯಯ ಕೂಡ ಸುಮಾರು ಒಂದು ಮುಕ್ಕಾಲು ಲಕ್ಷ ಕೋಟಿಗಳಷ್ಟು ಕೊರತೆಯಿಂದ ಕೂಡಿದ್ದನ್ನು ಇಲ್ಲಿ ಗಮನಿಸಬೇಕು. ಅದನ್ನು ತುಂಬಿಸುವ ಮಾರ್ಗವನ್ನು ಆಯವ್ಯಯ ಪತ್ರದಲ್ಲಿ ಹೇಳಿದಂತೆ ಕಾಣಲಿಲ್ಲ. ರಿಸರ್ವ್ ಬ್ಯಾಂಕಿನಲ್ಲಿದ್ದ ಒಂದೂ ಮುಕ್ಕಾಲು ಲಕ್ಷ ಕೋಟಿಗೂ ಹೆಚ್ಚು ಮೀಸಲು ಹಣ ಸರಕಾರ ಎತ್ತಿಕೊಂಡಾಗ ಅದು ಆಯವ್ಯಯ ಕೊರತೆಯನ್ನು ನೀಗಿಸಲು ಇರಬೇಕು ಎಂಬ ಆರ್ಥಿಕ ವಿಶ್ಲೇಷಣೆಗಳೂ ಬಂದವು. ಕಾರ್ಪೊರೇಟ್‌ಗಳಿಗೆ ಬಂಡವಾಳದ ಕೊರತೆಯನ್ನು ನೀಗಿಸಲು ಮೋದಿ ಸರಕಾರ ರಿಸರ್ವ್ ಬ್ಯಾಂಕ್ ಮೀಸಲು ಹಣಕ್ಕೂ ಕೈ ಹಾಕಿದೆ ಎಂಬ ವಿಶ್ಲೇಷಣೆಗಳೂ ಕೂಡ ಇದ್ದವು. ಕೊನೆಗದು ಭಾರೀ ಮೊತ್ತದ ತೆರಿಗೆ ಕಡಿತದ ಮೂಲಕ ಕಾರ್ಪೊರೇಟ್‌ಗಳ ಬಾಯಿಗಳಿಗೆ ಪರೋಕ್ಷವಾಗಿ ಸುರಿಯುವ ಪ್ರಕಟನೆ ಹೊರಬಿದ್ದಾಯಿತು. ದೇಶದ ಆರ್ಥಿಕ ಸ್ಥಿತಿ ಕುಸಿತದತ್ತ ಧಾವಿಸುವಂತೆ ಮಾಡಿರುವುದು ಒಂದು ಕಡೆಯಾದರೆ ಅದರ ನೆಪದಲ್ಲಿ ಸಾರ್ವಜನಿಕ ರಂಗವನ್ನೆಲ್ಲಾ ಭಾರೀ ಕಾರ್ಪೊರೇಟ್‌ಗಳ ದುರಾಸೆಗಳ ಹಿಡಿತಕ್ಕೆ ಒಪ್ಪಿಸುತ್ತಿರುವುದು ಮತ್ತೊಂದು ಕಡೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಕರ್ನಾಟಕ ಮೂಲದ ಪ್ರಹ್ಲಾದ ಜೊಷಿಯಂತಹವರು ಸಾರ್ವಜನಿಕ ರಂಗದ ಕಾಲ ಮುಗಿಯಿತು, ಇನ್ನೇನಿದ್ದರೂ ಖಾಸಗಿಯವರೊಂದಿಗೆ ಕೈ ಜೋಡಿಸಿ ಅಭಿವೃದ್ಧಿ ಸಾಧಿಸಬೇಕು ಎಂಬ ಹುಕುಂ ಮಾಡಿರುವ ವರದಿಯಿದೆ.
ಜೊತೆಗೆ ಬ್ಯಾಂಕುಗಳೂ ಸೇರಿದಂತೆ ಸಾರ್ವಜನಿಕ ರಂಗವನ್ನೂ ಅಪ್ರಸ್ತುತಗೊಳಿಸಿ ಕಾರ್ಪೊರೇಟ್‌ಗಳ ಬಾಯಿಗೆ ಹಾಕುವ ಹತ್ತು ಹಲವು ತಂತ್ರ ಕುತಂತ್ರಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜಾರಿ ಮಾಡಲಾಗುತ್ತಿದೆ. ಅದಕ್ಕೆ ರಕ್ಷಣಾ ಕ್ಷೇತ್ರವೂ ಹೊರತಾಗದೇ ಹೋಗಿದೆ. ತುಂಡು ತುಂಡುಗಳಾಗಿ ದುಗ್ಗಾಣಿ ಬೆಲೆಗೆ ಮಾರುವ ಇಲ್ಲವೇ ಒಟ್ಟಾರೆಯಾಗಿ ಅಗ್ಗದ ಬೆಲೆಗೆ ಕಾರ್ಪೊರೇಟ್‌ಗಳಿಗೆ ನೀಡುವ ಕಾರ್ಯಗಳು ಬಿರುಸಾಗಿದೆ. ಇದಕ್ಕೆ ಈಗಿನ ಆರ್ಥಿಕ ಕೊರತೆಯನ್ನು ನಿಭಾಯಿಸಲು ಮಾಡುತ್ತಿರುವ ನಗದೀಕರಿಸುವ ಕ್ರಮಗಳೆಂದು ಬಹಳ ಆಕರ್ಷಕವೆನ್ನುವಂತೆ ಕರೆಯಲಾಗುತ್ತಿದೆ. ಉದ್ಯೋಗಾವಕಾಶ ಹಾಗೂ ದೇಶದ ಜನಸಾಮಾನ್ಯರ ಬದುಕಿನ ಆದಾಯ ಗಳಿಕೆಯ ಒಂದು ದೊಡ್ಡ ಮೂಲವಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹತ್ತು ಹಲವು ನಿಬಂಧನೆ, ತೆರಿಗೆ, ದಂಡಗಳ ಹೆಸರಿನಲ್ಲಿ ಇನ್ನಿಲ್ಲದಂತೆ ನಾಶಗೊಳಿಸಿದ್ದೂ ಅಲ್ಲದೇ ಅವುಗಳು ಮತ್ತೆ ಮೇಲೇಳದಂತೆ ಭಾರೀ ಕಾರ್ಪೊರೇಟ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ನೂರಕ್ಕೆ ನೂರು ವಿದೇಶಿ ನೇರಬಂಡವಾಳಕ್ಕೆ ತೆರೆದಿಡುವ ಕಾರ್ಯವನ್ನು ಮೋದಿ ಸರಕಾರ ಬಿರುಸುಗೊಳಿಸಿದೆ. ಇದರಿಂದೆಲ್ಲಾ ನಿರುದ್ಯೋಗ, ಬಡತನ, ಅಪೌಷ್ಟಿಕತೆಗಳು ಬಹುಸಂಖ್ಯಾತ ಜನಸಮುದಾಯಗಳಲ್ಲಿ ಹೆಚ್ಚಾಗತೊಡಗಿದೆ. ಸಾಮಾಜಿಕ ಭದ್ರತೆ ಮರೀಚಿಕೆಯಾಗತೊಡಗಿದೆ. ಜಾಗತಿಕ ಮಟ್ಟದಲ್ಲಿ ಭಾರತವಿಂದು ಅಪೌಷ್ಟಿಕತೆ, ಬಡತನ, ತಲಾ ಆದಾಯ, ನಿರುದ್ಯೋಗ, ವೇತನಮಟ್ಟ ಮೊದಲಾದ ವಿಚಾರಗಳಲ್ಲಿ ಅತ್ಯಂತ ಬಡದೇಶಗಳೆಂದು ಪರಿಗಣಿಸಲ್ಪಟ್ಟ ಬಾಂಗ್ಲಾದೇಶ, ಭೂತಾನ್, ಪಾಕಿಸ್ತಾನ, ಮಾಲ್ದೀವ್ಸ್ ಗಳಿಗಿಂತಲೂ ಬಹಳ ಹಿಂದೆ ಬಿದ್ದಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ.
ಇವನ್ನೆಲ್ಲಾ ಅವಲೋಕಿಸಿದಾಗ ‘‘ಆಗೆ ಅಚ್ಛೇ ದಿನ್ ಆಯೇಗಾ’’ ಎಂದು ಹೇಳುತ್ತಾ ಜನಸಾಮಾನ್ಯರನ್ನು ಯಾಮಾರಿಸುತ್ತಾ ಬಂದಿದ್ದರ ಮರ್ಮವೇನಿತ್ತು ಎನ್ನುವುದು ಅರ್ಥವಾಗುತ್ತದೆ. ಇದುವರೆಗೂ ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಮೇರು ಪಾತ್ರ ನಿರ್ವಹಿಸಿದ್ದ ಈಗಲೂ ಗ್ರಾಮೀಣ ಭಾರತದ ಪ್ರಧಾನ ದೂರ ಸಂಪರ್ಕ ಜಾಲ ಹೊಂದಿರುವ ಬಿಎಸ್‌ಎನ್‌ಎಲ್ ಅನ್ನು ಅತ್ಯಂತ ವ್ಯವಸ್ಥಿತವಾಗಿ ಮುಖೇಶ್ ಅಂಬಾನಿಗೆ ಹಸ್ತಾಂತರಿಸುವ ಭಾರೀ ಕುತಂತ್ರ ನಡೆದಿದೆ. ಈಗಾಗಲೇ ಮುಖೇಶ್ ಅಂಬಾನಿಯ ಜಿಯೋ ಕೇಬಲ್ ಜಾಲ ದೇಶದ ಎಲ್ಲಾ ಬಿಎಸ್‌ಎನ್‌ಎಲ್ ದೂರವಾಣಿ ವಿನಿಮಯ ಕೇಂದ್ರಗಳ ಬಾಗಿಲವರೆಗೆ ಹಾಕಲಾಗಿದೆ. ಇನ್ನು ಕೇವಲ ಜಿಯೋ ಸಂಪರ್ಕವನ್ನು ಬಿಎಸ್‌ಎನ್‌ಎಲ್ ಸಂಪರ್ಕ ಜಾಲದೊಂದಿಗೆ ಜೋಡಿಸುವ ಕೆಲಸ ಮಾತ್ರ ಬಾಕಿ, ಅಷ್ಟೇ ಎಂದು ಬಿಎಸ್‌ಎನ್‌ಎಲ್ ಸಿಬ್ಬಂದಿಯೇ ಹೇಳುತ್ತಿದ್ದಾರೆ. ಅಂದರೆ ಸಾರ್ವಜನಿಕರ ಹಣದಿಂದ ಕಟ್ಟಿ ಬೆಳೆಸಿದ ಬಿಎಸ್‌ಎನ್‌ಎಲ್‌ನಂತಹ ದೈತ್ಯ ಉದ್ದಿಮೆಗಳನ್ನು ಎಷ್ಟು ಸಲೀಸಾಗಿ ಅಂಬಾನಿಯಂತಹ ಕಾರ್ಪೊರೇಟ್‌ಗಳ ಕೈಗಳಿಗೆ ತಲುಪಿಸಲಾಗುತ್ತಿದೆ ಎನ್ನುವುದಕ್ಕೆ ಒಂದು ಉದಾಹರಣೆ ಇದಾಗಿದೆ.
ಇದೇ ತರಹದ ನಡೆಗಳು ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿಯಾದ ಒಎನ್‌ಜಿಸಿ, ಭಾರತೀಯ ರೈಲ್ವೆ, ಸೇನೆ ಹಾಗೂ ಪೊಲೀಸ್ ಬಲಗಳಿಗೆ ಮದ್ದುಗುಂಡು ಪೂರೈಸುತ್ತಿದ್ದ ಇಂಡಿಯನ್ ಆರ್ಡಿನನ್ಸ್ ಫ್ಯಾಕ್ಟರಿ, ಭಾರತೀಯ ಗಣಿ ನಿಗಮ ಹೀಗೆ ಪಟ್ಟಿ ಸಾಗುತ್ತದೆ. ಆದರೆ ದೇಶದ ಕೃಷಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರವನ್ನು ಮೇಲೆತ್ತುವ ಅದಕ್ಕೆ ಪೂರಕ ವಾತಾವರಣ ನಿರ್ಮಿಸುವ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಮೋದಿ ಸರಕಾರ ಕೇವಲ ತಾಯಿಯೊಂದಿಗೆ ಊಟದಂತಹ ಕ್ಯಾಮರಾ ಮುಂದಿನ ಕಾರ್ಯಕ್ರಮಗಳ ಮೂಲಕ ಬಿಟ್ಟಿ ಭಾವನಾತ್ಮಕಗೊಳಿಸುವ ಪ್ರಚಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಸಾಗುತ್ತಿದೆ. ಈಗ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಸಂಘಟಿಸಿದ್ದೆಂದು ಹೇಳಲಾಗುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮ ಕೂಡ ಅದರ ಅಂತರ್‌ರಾಷ್ಟ್ರೀಯ ಮಟ್ಟದ ಮುಂದುವರಿಕೆಯೇ ವಿನಹ ಬೇರೇನಲ್ಲ. ಈ ಅನಿವಾಸಿ ಭಾರತೀಯರು ಭಾರತದ ತೆರಿಗೆದಾರರ ಹಣದಿಂದ ನಿರ್ಮಿತವಾದ ಎಲ್ಲಾ ಸೌಲಭ್ಯಗಳನ್ನು ತಮಗಾಗುವಷ್ಟು ಪಡೆದುಕೊಂಡು ಭಾರತದಿಂದ ಹೊರಹೋಗಿ ಅಮೆರಿಕದ ಶ್ರೇಷ್ಠತೆಯ ಗುಂಗಿನಲ್ಲಿ ಕಳೆದುಹೋದವರೇ ಹೆಚ್ಚಿನವರು.
ಇವರ ನಿಷ್ಠೆಯಿರುವುದು ಅಮೆರಿಕದ ಕಾರ್ಪೊರೇಟ್‌ಗಳಿಗೇ ಹೊರತು ಭಾರತಕ್ಕಲ್ಲ. ಭಾರೀ ಕಾರ್ಪೊರೇಟ್ ಡೊನಾಲ್ಡ್ ಟ್ರಂಪ್ ಪರವಾಗಿ ಲಾಬಿ ಮಾಡುತ್ತಾ ಪ್ರಚಾರ ಮಾಡಿದವರಲ್ಲಿ ಈ ಅನಿವಾಸಿ ಭಾರತೀಯರದು ಒಂದು ಪ್ರಮುಖ ಪಾತ್ರವಿದೆ. ಹಾಗೆಯೇ ಮೋದಿಯ ಬಿಜೆಪಿಯನ್ನು ಗೆಲ್ಲಿಸಲು ಶ್ರಮ ಹಾಗೂ ಹಣಕಾಸು ವ್ಯವಸ್ಥೆ ಮಾಡಿದವರಲ್ಲೂ ಇವರಿಗೆ ಒಂದು ಪ್ರಮುಖ ಪಾತ್ರವಿದೆ. ಜನಾಂಗೀಯ ದ್ವೇಷ ಹರಡುವುದರಲ್ಲೂ ಇವರದು ಒಂದು ಪ್ರಮುಖ ಪಾತ್ರವಿದೆ. ಇವರಿಗೆ ಭಾರತ ದೇಶ ಮತ್ತದರ ಜನಸಾಮಾನ್ಯರ ಬಗ್ಗೆ ಕಾಳಜಿಯಿಲ್ಲ. ನರೇಂದ್ರ ಮೋದಿಯ ಬಗ್ಗೆ, ಡೊನಾಲ್ಡ್ ಟ್ರಂಪ್ ಬಗ್ಗೆ ಮಾತ್ರ ಕಾಳಜಿ. ಹಾಗಂತ ಸಾರಾ ಸಗಟಾಗಿ ಎಲ್ಲಾ ಅನಿವಾಸಿ ಭಾರತೀಯರೂ ಇದೇ ಪ್ರವೃತ್ತಿಯವರು ಎಂದಲ್ಲ. ಈಗ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದವರಲ್ಲೂ ಅನಿವಾಸಿ ಭಾರತೀಯರಿದ್ದಾರೆ. ಮೋದಿ, ಅಮಿತ್ ಶಾ, ಧಿಲ್ಲೋನ್ ವಿರುದ್ಧ ಮೊಕದ್ದಮೆ ಹೂಡಿದವರು ಕೂಡ ಅನಿವಾಸಿ ಭಾರತೀಯರೇ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಭಾರತದ ಸಾರ್ವಜನಿಕ ರಂಗದ ನೌಕರ ವರ್ಗ ಇದೀಗ ಎಚ್ಚೆತ್ತವರಂತೆ ಬೀದಿಗೆ ಇಳಿಯತೊಡಗಿವೆ. ತಮ್ಮ ಮೂಲಗಳೇ ಉರುಳ ತೊಡಗಿರುವಾಗಲೂ ಅವರದು ಸಂಬಳ ಸವಲತ್ತು ಹೆಚ್ಚಿಸಿಕೊಳ್ಳುವ ಹಕ್ಕೊತ್ತಾಯಗಳಿಗಿಂತ ಆಚೆ ಈಚೆ ಹೊರಳಿ ನೋಡುವ ಅಭ್ಯಾಸ ಬೆಳೆಸಿಕೊಂಡವರಲ್ಲ. ಜೊತೆಗೆ ಸಾರ್ವಜನಿಕರೊಂದಿಗೆ ಅಸಡ್ಡೆಯ ಹಾಗೂ ಅನಾಗರಿಕವೆನ್ನಬಹುದಾದ ವರ್ತನೆಗಳು, ದುರಂಹಕಾರಿತನಗಳನ್ನೂ ಮೈಗೂಡಿಸಿಕೊಂಡಿದ್ದರು. ತಾವು ಹೇಗಿದ್ದರೂ ಸುಭದ್ರರು ತಮ್ಮ ಉದ್ಯೋಗಗಳು ಗಟ್ಟಿ ಎಂದೆಲ್ಲಾ ಗರ್ವ ಬೆಳೆಸಿಕೊಂಡವರೇ ಹಲವರು. ಇದರಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಾರ್ವಜನಿಕರ ವಿಶ್ವಾಸ ಗಳಿಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನೂ ರೂಢಿಸಿಕೊಳ್ಳದೆ ಹೋಗಿದ್ದರ ಪರಿಣಾಮ ಇವರ ಹೋರಾಟಗಳಿಗೆ, ಹಕ್ಕೊತ್ತಾಯಗಳಿಗೆ ಸಾರ್ವಜನಿಕ ಮನ್ನಣೆಯಾಗಲೀ ಬೆಂಬಲವಾಗಲೀ ಅಷ್ಟಕ್ಕಷ್ಟೇ ಇತ್ತು. ಈಗ ಆಳುವ ಶಕ್ತಿಗಳು ಸಾರ್ವಜನಿಕ ಆಕ್ರೋಶಗಳನ್ನು ತಮ್ಮ ಪರವಾಗಿ ಬಳಸಿಕೊಂಡು ಸೇವಾ ಮನೋಭಾವವಿಲ್ಲದ ಸಾರ್ವಜನಿಕ ರಂಗವನ್ನು ಕಾರ್ಪೊರೇಟ್‌ಗಳಿಗೆ ನೀಡಿದರೆ ಉತ್ತಮ ಸೇವೆ ಸಾರ್ವಜನಿಕರಿಗೆ ಲಭಿಸುತ್ತದೆ ಎಂಬ ಅಭಿಪ್ರಾಯಗಳನ್ನು ರೂಪಿಸತೊಡಗಿದೆ.
ಸಾರ್ವಜನಿಕರಿಗೆ ಸಾರ್ವಜನಿಕ ರಂಗ ಕೊನೆಗೊಂಡರೆ ಆಗುವ ಅಪಾಯಗಳೇನು ಎನ್ನುವುದನ್ನು ಹತ್ತು ಹಲವು ಉದಾಹರಣೆಗಳ ಮೂಲಕ ಅರ್ಥ ಪಡಿಸುವ, ತಮ್ಮ ಈ ಹಿಂದಿನ ಸಾರ್ವಜನಿಕ ವಿರೋಧಿ ಧೋರಣೆಗಳ ಬಗ್ಗೆ ಜನಸಾಮಾನ್ಯರಲ್ಲಿ ಕ್ಷಮೆ ಯಾಚಿಸುವ ಹೊಣೆಗಾರಿಕೆ ಕೂಡ ಎಲ್ಲಾ ಸಾರ್ವಜನಿಕ ಕ್ಷೇತ್ರದ ನೌಕರರು, ಕಾರ್ಮಿಕರಿಗಿದೆ. ಸರಕಾರದೊಂದಿಗೆ ಶಾಮೀಲಾಗುತ್ತ ನೌಕರರ, ಕಾರ್ಮಿಕರ ಹಾಗೂ ಸಾರ್ವಜನಿಕರ ಹಿತಾಸಕ್ತಿಗಳನ್ನು ಬಲಿಕೊಡುತ್ತಾ ಬಂದಿರುವ ಹಳೆಯ ನಾಯಕತ್ವವನ್ನು ಬದಲಾಯಿಸದೆ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಈಗಲಾದರೂ ಅರಿತುಕೊಳ್ಳದಿದ್ದರೆ ಅವನತಿ ಬಿಟ್ಟರೆ ಉದ್ಧಾರವಿಲ್ಲ. ಇದೀಗ ಅಖಿಲ ಭಾರತ ಮಟ್ಟದಲ್ಲಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ ಬ್ಯಾಂಕುಗಳ ವಿಲೀನ, ಖಾಸಗೀಕರಣಗಳ ವಿಚಾರಕ್ಕಿಂತಲೂ ಸಂಬಳ ಸವಲತ್ತುಗಳ ಹಕ್ಕೊತ್ತಾಯಗಳೇ ಆದ್ಯತೆ ಪಡೆದಂತೆ ಅನಿಸುತ್ತಿದೆ. ಸಾರ್ವಜನಿಕ ರಂಗವನ್ನು ಉಳಿಸಿ ಬೆಳೆಸಬೇಕೆಂಬ ಬದ್ಧತೆಯೊಂದಿಗೆ ದೇಶದ ಎಲ್ಲಾ ಸಾರ್ವಜನಿಕ ರಂಗದ ಕಾರ್ಮಿಕರು, ನೌಕರರು ಸಾರ್ವಜನಿಕರೊಂದಿಗೆ ಒಗ್ಗೂಡಿ ಹೋರಾಟ, ಪ್ರಚಾರಾಂದೋಲನ ನಡೆಸಬೇಕಾದ ತುರ್ತನ್ನು ಮನಗಾಣದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿಯೇ ಆಗುತ್ತದೆ. ಸಾರ್ವಜನಿಕರಿಗೂ ದೇಶಕ್ಕೂ ತುಂಬಲಾಗದ ನಷ್ಟ ಸಂಭವಿಸುತ್ತದೆ. ‘ಹೌಡಿ ಮೋದಿ’ಯ ಭ್ರಮೆಯಾಗಲೀ, ಅತೀ ರಂಜಿತ ಹುಸಿ ಕಾರ್ಯಕ್ರಮಗಳಿಗಾಗಲೀ ಮರುಳಾಗದೆ ತಮ್ಮ ಸಂಸ್ಥೆ, ಉದ್ಯೋಗ, ಬದುಕು, ದೇಶದ ಸಂಪತ್ತು ಹಾಗೂ ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಾದುದು ಇಂದು ಎಲ್ಲರ ಕರ್ತವ್ಯವಾಗಿದೆ.
ಮಿಂಚಂಚೆ: nandakumarnandana67gmail.com