ಒಬೆಸೊಫೋಬಿಯಾ ಕಾರಣಗಳು ಮತ್ತು ಲಕ್ಷಣಗಳು
ನೀವು ನಿಮ್ಮ ಶರೀರದ ತೂಕದ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿದ್ದೀರಾ? ತೂಕ ಹೆಚ್ಚಬಹುದೆಂಬ ಅಥವಾ ಬೊಜ್ಜು ಬರಬಹುದೆಂಬ ಭೀತಿ ಸದಾ ನಿಮ್ಮನ್ನು ಕಾಡುತ್ತಿದೆಯೇ? ಈ ಭೀತಿಯನ್ನು ಒಬೆಸೊಫೋಬಿಯಾ ಎಂದು ಕರೆಯಲಾಗುತ್ತದೆ ಮತ್ತು ಇದು ನಿಮಗೆ ಗೊತ್ತಿಲ್ಲದೆ ನಿಮ್ಮ ಆಹಾರ ಸೇವನೆಯನ್ನು ನಿಯಂತ್ರಿಸುತ್ತಿರುತ್ತದೆ. ಈ ಫೋಬಿಯಾ ಹೊಂದಿರುವವರು ಅಗ್ನಿಮಾಂದ್ಯ ಅಥವಾ ಹಸಿವಿಲ್ಲದಿರುವಿಕೆ ಮತ್ತು ಹಸಿವು ರೋಗದಂತಹ ಇತರ ಮಾನಸಿಕ ಸಮಸ್ಯೆಗಳನ್ನೂ ಹೊಂದಿರಬಹುದು. ಇಂತಹವರು ಶರೀರದ ತೂಕವು ಹೆಚ್ಚುವ ಬಗ್ಗೆ ಭೀತಿಯನ್ನು ಹೊಂದಿರುವ ಜೊತೆಗೆ ಬೊಜ್ಜುದೇಹಿಗಳ ಬಗ್ಗೆ ದ್ವೇಷವನ್ನೂ ಬೆಳೆಸಿಕೊಂಡಿರುತ್ತಾರೆ. ಒಬೆಸೊಫೋಬಿಯಾ ಹೊಂದಿರುವ ವ್ಯಕ್ತಿಯು ಏನನ್ನೂ ತಿನ್ನಲು ಕಷ್ಟಪಡುತ್ತಾನೆ, ಹೊರಗೆ ಹೋದಾಗ ಹೋಟೆಲ್ಗಳಲ್ಲಿ ಆಹಾರ ಸೇವಿಸಲೂ ಹಿಂಜರಿಯಬಹುದು. ಈ ಫೋಬಿಯಾ ಅಥವಾ ಭೀತಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದೇ ಒಂದು ಗೀಳಾಗಿ ಪರಿಣಮಿಸಬಹುದು.
♦ಕಾರಣಗಳು
ಹಲವಾರು ಕಾರಣಗಳು ಒಬೆಸೊಫೋಬಿಯಾವನ್ನು ಉಂಟು ಮಾಡುತ್ತವೆ. ನಿಮ್ಮ ಸುತ್ತಲಿನ ಪರಿಸರ, ತೂಕಕ್ಕೆ ಸಂಬಂಧಿಸಿದಂತೆ ಬಾಲ್ಯದಲ್ಲಿಯ ಪ್ರತಿಕೂಲ ಅನುಭವ ನಿಮ್ಮಲ್ಲಿ ಬೊಜ್ಜು ಉಂಟಾಗುವ ಭೀತಿಯನ್ನು ಸೃಷ್ಟಿಸಬಹುದು. ಯಾವುದೇ ಫೋಬಿಯಾದೊಂದಿಗೆ ಮಾನಸಿಕ ಕಾಯಿಲೆಯ ಕುಟುಂಬದ ಇತಿಹಾಸವಿದ್ದರೆ ಅದು ಒಬೆಸೊಫೋಬಿಯಾಕ್ಕೆ ಕಾರಣವಾಗುವ ಹೆಚ್ಚಿನ ಸಾಧ್ಯತೆಯಿದೆ. ಇದೇ ವೇಳೆ ಸಾಮಾಜಿಕ ಒತ್ತಡದಿಂದಾಗಿ ಅಭದ್ರತೆಯೂ ಒಬೆಸೊಫೋಬಿಯಾವನ್ನು ಹೆಚ್ಚಿಸುತ್ತದೆ.
♦ ಲಕ್ಷಣಗಳು
ಆರೋಗ್ಯಯುತ ಆಹಾರಸೇವನೆಯ ಗೀಳು ಕೂಡ ಒಬೆಸೊಫೋಬಿಯಾ ಆಗಿರಬಹುದು. ವಾಸ್ತವದಲ್ಲಿ ಆರೋಗ್ಯಯುತ ಆಹಾರ ಸೇವನೆಯ ಕ್ರಮವನ್ನು ಪಾಲಿಸುವುದು ಒಬೆಸೊಫೋಬಿಯಾ ಅಲ್ಲ. ಆದರೆ ನೀವು ಸ್ಲಿಮ್ ಆಗಿರಲು ಕಠಿಣ ಪಥ್ಯ ಮತ್ತು ಅತಿಯಾಗಿ ವ್ಯಾಯಾಮವನ್ನು ಮಾಡುತ್ತಿದ್ದರೆ ಅದು ಮಾನಸಿಕ ರೋಗವನ್ನು ಸಂಕೇತಿಸುತ್ತದೆ. ಇದಿಷ್ಟೇ ಅಲ್ಲ, ಹೆಚ್ಚಿನ ಸಂದರ್ಭಗಳಲ್ಲಿ ಬೊಜ್ಜಿನ ಭೀತಿಯಿಂದಾಗಿ ವ್ಯಕ್ತಿಯು ಹಸಿವೆಯಿಂದಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾನೆ. ಇದೂ ಒಬೆಸೊಫೋಬಿಯಾವನ್ನು ಸೂಚಿಸುತ್ತದೆ.
ಇನ್ನೊಂದೆಡೆ ಒಬೆಸೊಫೋಬಿಯಾ ಹೊಂದಿರುವವರಲ್ಲಿ ಹೆಚ್ಚಿನವರು ಕಡಿಮೆ ಆತ್ಮವಿಶ್ವಾಸ ಮತ್ತು ಕಡಿಮೆ ಆತ್ಮಗೌರವ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಬೊಜ್ಜುದೇಹಿಯಾಗಬಹುದೆಂಬ ಭೀತಿ ಅವರು ಸಾಮಾಜಿಕವಾಗಿ ಬೆರೆಯಲು ಮತ್ತು ಇತರರೊಡನೆ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಲು ತಡೆಯಾಗುತ್ತದೆ. ಇಂತಹ ಜನರು ಬೇರೆಯವರು ತಯಾರಿಸಿದ ಆಹಾರವನ್ನೂ ಸೇವಿಸುವುದಿಲ್ಲ. ಅವರು ಎಲ್ಲಿಗೆ ಹೋಗುವುದಿದ್ದರೂ ತಮ್ಮ ಆಹಾರವನ್ನು ಹೊತ್ತುಕೊಂಡೇ ಹೋಗುತ್ತಾರೆ. ಒಬೆಸೊಫೋಬಿಯಾ ಹೊಂದಿರುವ ವ್ಯಕ್ತಿಗಳು ಯಾವುದೇ ಕಾರಣದಿಂದ ಹೊರಗೆ ಆಹಾರವನ್ನು ಸೇವಿಸುವ ಸಂದರ್ಭ ಒದಗಿದರೆ ಅದು ಅವರಿಗೆ ಅಹಿತಕರ ಅನುಭವ ಮತ್ತು ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲವು ಪ್ರಕರಣಗಳಲ್ಲಿ ಒಬೆಸೊಫೋಬಿಯಾ ಹೊಂದಿರುವವರು ತುಂಬ ಕಡಿಮೆ ಆಹಾರವನ್ನು ಸೇವಿಸುತ್ತಾರೆ ಮತ್ತು ಇದರಿಂದಾಗಿ ವಿವಿಧ ಫೋಷಕಾಂಶಗಳ ಕೊರತೆಯಿಂದ ಬಳಲಬಹುದು.
♦ಚಿಕಿತ್ಸೆ
ಒಬೆಸೊಫೋಬಿಯಾಕ್ಕೆ ಯಾವುದೇ ನಿಖರ ಚಿಕಿತ್ಸೆಯಿಲ್ಲ. ಆದರೆ ಅದಕ್ಕೆ ಚಿಕಿತ್ಸೆ ನೀಡಲು ವ್ಯಕ್ತಿಯಲ್ಲಿ ಈ ಕಾಯಿಲೆಯ ಹಿಂದಿನ ಕಾರಣಗಳನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಬಳಿಕ ಚಿಕಿತ್ಸೆಯ ಮೂಲಕ ವ್ಯಕ್ತಿಯ ಮನಸ್ಸಿನಲ್ಲಿಯ ಭೀತಿಯನ್ನು ನಿವಾರಿಸಲು ಪ್ರಯತ್ನಿಸಬೇಕಾಗುತ್ತದೆ. ಜೊತೆಗೆ ಕಾರ್ಡಿಯೊವಸ್ಕುಲರ್ ವ್ಯಾಯಾಮವು ಆತಂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದೇ ವೇಳೆ ಎರೋಬಿಕ್ಸ್ ಕೂಡ ಒಬೆಸೊಫೋಬಿಯಾ ಲಕ್ಷಣಗಳನ್ನು ನಿಭಾಯಿಸಲು ಉತ್ತಮ ಮಾರ್ಗವಾಗಿದೆ. ಈ ವಿಧದ ವ್ಯಾಯಾಮವು ಒತ್ತಡವನ್ನು ತಗ್ಗಿಸುವ, ಎಂಡಾರ್ಫಿನ್ಗಳೆಂದು ಕರೆಯಲಾಗುವ ಒಳ್ಳೆಯ ರಾಸಾಯನಿಕಗಳನ್ನು ಮಿದುಳಿನಲ್ಲಿ ಬಿಡುಗಡೆಗೊಳಿಸುತ್ತದೆ. ಒಬೆಸೊಫೋಬಿಯಾದಿಂದ ಪಾರಾಗಲು ಯೋಗವು ಕೂಡ ನೆರವಾಗುತ್ತದೆ. ಹಲವಾರು ಆಸನಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ನಿರ್ದಿಷ್ಟವಾಗಿ ಧ್ಯಾನವು ಆತಂಕವನ್ನು ನಿವಾರಿಸಲು ನೆರವಾಗುತ್ತದೆ.
ಬೊಜ್ಜು ಬೆಳೆಯಬಹುದೆಂಬ ಭೀತಿಯನ್ನು ನಿಯಂತ್ರಿಸಬೇಕೆಂದಿದ್ದರೆ ಅಂತಹವರು ಸೀಮಿತ ಪ್ರಮಾಣದಲ್ಲಿ ಕೆಫೀನ್ ಸೇವಿಸಬಹುದು. ಅತಿಯಾದ ಕೆಫೀನ್ ಸೇವನೆಯು ಮನಸ್ಸು ಮತ್ತು ಮಿದುಳಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಅದು ಹೃದಯಬಡಿತ ದರವನ್ನೂ ಹೆಚ್ಚಿಸುವ ಮೂಲಕ ಚಿಂತೆಗೀಡು ಮಾಡುತ್ತದೆ. ಒಬೆಸೊಫೋಬಿಯಾದಿಂದ ದೂರವಿರಲು ಆರೋಗ್ಯಕರ ಜೀವನ ಶೈಲಿ, ಸಮತೋಲಿತ ಆಹಾರ ಕ್ರಮ, ಒಳ್ಳೆಯ ನಿದ್ರೆ ಮತ್ತು ಶರೀರಕ್ಕೆ ಅನುಗುಣವಾದ ವ್ಯಾಯಾಮಕ್ರಮ ಅಗತ್ಯ.