ಅಲೋಕ್ ಕುಮಾರ್ ಮನೆ ಮೇಲಿನ ಸಿಬಿಐ ದಾಳಿಗೂ ನನಗೂ ಸಂಬಂಧ ಇಲ್ಲ: ಕುಮಾರಸ್ವಾಮಿ
ಬೆಂಗಳೂರು, ಸೆ. 26: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನಿವಾಸದ ಸಿಬಿಐ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರ ನಿವಾಸದ ಮೇಲಾದರೂ ದಾಳಿ ನಡೆಯಲಿ. ನನ್ನನ್ನು ಏಕೆ ಪ್ರಶ್ನೆ ಮಾಡ್ತೀರಿ. ಅದಕ್ಕೂ ನನಗೂ ಏನು ಸಂಬಂಧ? ಎಲ್ಲರ ಅವಧಿಯಲ್ಲಿಯೂ ಟೆಲಿಫೋನ್ ಕದ್ದಾಲಿಕೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಟೆಲಿಫೋನ್ ಕದ್ದಾಲಿಕೆ ಯಾರ ಯಾರ ಅವಧಿಯಲ್ಲಿ ಹೇಗೆ ನಡೆಸಿದ್ದಾರೆಂದು ಸಿಬಿಐ ತನಿಖೆ ನಡೆಸುತ್ತಿದೆ. ಅದಕ್ಕೆ ನಾನು ಏಕೆ ತಲೆ ಕೆಡಿಸಿಕೊಳ್ಳಲ್ಲ ಎಂದು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈಗಲೂ ನಾನು ಹೇಳುತ್ತಿದ್ದೇನೆ, ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ದಕ್ಷ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.
ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಮನೆಗೂ ವಿಚಾರಣೆಗೆ ಬಂದರೆ ಬರಲಿ. ದೇಶದ ಕಾನೂನು ವ್ಯವಸ್ಥೆಯಡಿ ಯಾರನ್ನು ಬೇಕಾದರು ತನಿಖೆ ಮಾಡಬಹುದು ಎಂದ ಕುಮಾರಸ್ವಾಮಿ, ನಾನು ಯಾವುದೇ ಕಾರಣಕ್ಕೂ ಗಾಬರಿ ಪಡುವುದಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದರು.