'ಇಂದಿರಾ ಕ್ಯಾಂಟೀನ್' ಆರ್ಥಿಕ ಹೊರೆ ಭರಿಸಲು ಸರಕಾರ ಹಿಂದೇಟು: ಬಿಬಿಎಂಪಿಗೆ ಸಂಕಷ್ಟ ಸಾಧ್ಯತೆ
ಬೆಂಗಳೂರು, ಸೆ.26: ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ಯೋಜನೆಗೆ ಶೇ. 50 ರಷ್ಟು ಆರ್ಥಿಕ ಹೊರೆ ಭರಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಹೆಚ್ಚು ಆರ್ಥಿಕ ಹೊರೆ ಬೀಳಲಿದ್ದು, ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಶೇ.100 ರಷ್ಟು ಆರ್ಥಿಕ ಹೊರೆಯನ್ನು ಭರಿಸಬೇಕು ಎಂದು ಬಿಬಿಎಂಪಿಯು ಬೇಡಿಕೆಯಿಟ್ಟಿತ್ತು. ಆದರೆ, ರಾಜ್ಯ ಸರಕಾರ ಅದನ್ನು ಒಪ್ಪದೇ ಶೇ.50 ರಷ್ಟು ನೀಡಲು ಒಪ್ಪಿಕೊಂಡಿತ್ತು. ಇದೀಗ, ಶೇ.25 ರಷ್ಟೇ ನೆರವು ನೀಡಲು ಮುಂದಾಗಿದೆ. ಹೀಗಾದರೆ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ.
ಪಾಲಿಕೆಯು ರಾಜ್ಯ ಸರಕಾರ ಅರ್ಧದಷ್ಟು ಆರ್ಥಿಕ ನೆರವು ನೀಡಿದರಷ್ಟೇ ಇಂದಿರಾ ಕ್ಯಾಂಟೀನ್ ಮುಂದುವರಿಸಲು ಸಾಧ್ಯ ಎಂದು ಹೇಳಿದೆ. ಆದರೆ, ನಿರೀಕ್ಷಿತ ನೆರವು ಸಿಗದಿದ್ದಲ್ಲಿ ಕ್ಯಾಂಟೀನ್ ನಡೆಸಲು ಸಾಧ್ಯವಿದೆಯಾ ಎಂದು ಪಾಲಿಕೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅದಕ್ಕೆ ಸರಕಾರ ಹೇಗೆ ಸ್ಪಂದಿಸಲಿದೆ ಎಂದು ನೋಡಬೇಕಿದೆ.
ಬಿಬಿಎಂಪಿಗೆ ಶೇ. 50 ಅನುದಾನ ನೀಡಿದರೆ ಇಂದಿರಾ ಕ್ಯಾಂಟಿನ್ ಯೋಜನೆ ಮುಂದುವರಿಸಲು ಸಾಧ್ಯ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಅನುದಾನ ವಿಷಯದಲ್ಲಿ ಪಾಲಿಕೆ ಸರಕಾರದಿಂದ ಸ್ಪಷ್ಟ ಉತ್ತರ ಪಡೆಯಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹೇಳಿದ್ದಾರೆ.
ಅನುದಾನವೇ ಸಿಕ್ಕಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. 18 ಕಡೆ ಸಂಚಾರಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾರಂಭದಲ್ಲಿ ಕಾಂಗ್ರೆಸ್ ಸರಕಾರ ಯೋಜನೆಗೆ 100 ಕೋಟಿ ರೂ. ಅನುದಾನ ನೀಡಿತ್ತು. ಬಳಿಕ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಅನುದಾನ ನೀಡಿರಲಿಲ್ಲ. ಬಿಜೆಪಿ ನೇತೃತ್ವದ ಸರಕಾರವೂ ಅನುದಾನ ನೀಡದೇ ಯೋಜನೆಯಲ್ಲಿನ ಅವ್ಯವಹಾರ ಆರೋಪ ತನಿಖೆಗೆ ಸೂಚಿಸಿದೆ.