ಮೆಟ್ರೋ ನಿಲ್ದಾಣಗಳಲ್ಲಿ ಎಲ್ಇಡಿ ಪರದೆಯಲ್ಲಿ ಬಸ್ಗಳ ಮಾಹಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.26: ನಗರದ ಮೆಟ್ರೋ ನಿಲ್ದಾಣಗಳಲ್ಲಿ ಜಿಪಿಎಸ್ ಆಧಾರಿತ ಬಿಎಂಟಿಸಿ ಬಸ್ಗಳ ಆಗಮನದ ಕುರಿತು ನಿಖರ ಮಾಹಿತಿ ನೀಡುವ ಎಲ್ಇಡಿ ಫಲಕಗಳನ್ನು ಅಳವಡಿಸಲು ಬಿಎಂಟಿಸಿ ಮುಂದಾಗಿದೆ.
ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಪ್ರಯಾಣ ಮುಗಿಸಿ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ನಗರ ಸಾರಿಗೆ ಸಂಸ್ಥೆಯ ಬಸ್ ಎಷ್ಟು ಸಮಯಕ್ಕೆ ಬರಲಿದೆ ಎಂಬ ನಿಖರ ಮಾಹಿತಿಯನ್ನು ಈ ಫಲಕಗಳು ನೀಡಲಿವೆ. ಇದರಿಂದ ಪ್ರಯಾಣಿಕರಿಗೆ ಕಾಯುವುದು ತಪ್ಪಲಿದೆ.
ಇದಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯು ಬಿಎಂಆರ್ಸಿಎಲ್ನೊಂದಿಗೆ ಮಾತುಕತೆ ನಡೆಸಿದೆ. ಪ್ರತಿ ನಿಲ್ದಾಣದಲ್ಲಿ ಕನಿಷ್ಠ ಎರಡು 40 ಇಂಚು ಗಾತ್ರದ ಎಲ್ಇಡಿ ಮಾಹಿತಿ ಫಲಕಗಳನ್ನು ಅಳವಡಿಕೆಗೆ ಚಿಂತನೆ ನಡೆದಿದ್ದು, ಬಸ್ಗಳಲ್ಲಿರುವ ಜಿಪಿಎಸ್ ವ್ಯವಸ್ಥೆ ದುರಸ್ತಿಗೊಳ್ಳುತ್ತಿದ್ದಂತೆ ಒಂದಕ್ಕೊಂದು ಲಿಂಕ್ ಮಾಡಲಾಗುವುದು. ಆ ಮೂಲಕ ನಿಖರ ರಿಯಲ್ ಟೈಮ್ ಸೇವೆಗೆ ಕಲ್ಪಿಸಲಾಗುವುದು.
ಮೆಟ್ರೋ ನಿಗಮದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಅಂತಿಮ ಮಾಡುವ ಉದ್ದೇಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯವಾಗಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವ ಬಸ್ ಎಷ್ಟೊತ್ತಿಗೆ ಬರುತ್ತದೆ ಎಂಬ ಮಾಹಿತಿ ಸಿಗಲ್ಲ.
ಅಲ್ಲದೆ, ಮಾಹಿತಿ ನೀಡುವ ಸಿಬ್ಬಂದಿಯೂ ಇಲ್ಲ. ನಿಗಮದ ಸಿಬ್ಬಂದಿಗೂ ಗೊತ್ತಿಲ್ಲ. ಪರಿಣಾಮ ಜನ ಅನಿವಾರ್ಯವಾಗಿ ಬಸ್ ಬದಲಿಗೆ ಆಟೋ ಅಥವಾ ಓಲಾ, ಉಬರ್ ಕ್ಯಾಬ್ಗಳತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ, ಈ ಪಲಕಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಖರ ಮಾಹಿತಿ ಕೊರತೆ: ವರ್ಷದ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ಕಡೆ ಪರಿಚಯಿಸಲಾಗಿತ್ತು ಎನ್ನಲಾಗಿದೆ. ಆದರೆ, ಐಟಿ ವ್ಯವಸ್ಥೆ ನಿರ್ವಹಣೆ ಮಾಡುವ ಕಂಪನಿಯು ಆರ್ಥಿಕ ಮುಗ್ಗಟ್ಟು ಎದುರಿಸಿದ ಬೆನ್ನಲ್ಲೇ ವ್ಯವಸ್ಥೆ ನನೆಗುದಿಗೆ ಬಿದ್ದಿತು. ಇದಲ್ಲದೆ, ಜಿಪಿಎಸ್ ಸೇವೆ ಇಲ್ಲದಿರುವುದರಿಂದ ಈ ಬಸ್ ಆಗಮನದ ನಿಖರ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ.
ಜಾಹೀರಾತು ಆಲೋಚನೆ: 160 ಕಡೆಗಳಲ್ಲಿರುವ ಎಲ್ಇಡಿ ಫಲಕಗಳನ್ನು ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಇದರಿಂದ ಪ್ರತಿ ಫಲಕದಿಂದ ತಲಾ 4 ಸಾವಿರ ರೂ.ಗಳಂತೆ ಟೆಂಡರ್ ಪಡೆದ ಏಜೆನ್ಸಿಯೇ ತಿಂಗಳಿಗೆ ಹಣ ಪಾವತಿ ಮಾಡುತ್ತದೆ.
ಫಲಕಗಳಲ್ಲಿ ಶೇ.50 ರಷ್ಟು ಮಾಹಿತಿ ಹಾಗೂ ಸಂಸ್ಥೆಯ ಸೇವೆಗಳ ಬಗ್ಗೆ ಇದ್ದರೆ, ಶೇ.50 ರಷ್ಟು ಜಾಹೀರಾತಿಗೆ ಅವಕಾಶವಿದೆ. ಇದೇ ಮಾದರಿಯನ್ನು ಮೆಟ್ರೋ ನಿಲ್ದಾಣಗಳಲ್ಲಿಯೂ ಅನುಸರಿಸಲು ಚಿಂತನೆ ನಡೆಸಿದ್ದು, ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.