varthabharthi


ಭೀಮ ಚಿಂತನೆ

ಜಾತಿಭೇದದಿಂದಲೇ ಅಸ್ಪೃಶ್ಯತೆಯ ಉಗಮ

ವಾರ್ತಾ ಭಾರತಿ : 27 Sep, 2019

1928ರ ಸೆಪ್ಟಂಬರ್ 25ನೇ ಮಂಗಳವಾರದಂದು ರಾತ್ರಿ ಎಂಟು ಗಂಟೆಗೆ ಮುಂಬೈ ದಾದರ್ ಗಣೇಶೋತ್ಸವದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪುಣೆಯ ಬಾಪುಸಾಹೇಬ್ ಮಾಟೆಯವರ ವ್ಯಾಖ್ಯಾನಗಳನ್ನು ಒಂದೇ ದಿನ ಆಯೋಜಿಸಲಾಗಿತ್ತು. ಆದರೆ ಮಾಟೆಯವರು ತಮ್ಮ ಗಂಟಲು ನೋವಿನ ಕಾರಣ ಹೇಳಿ ವ್ಯಾಖ್ಯಾನ ಕೊಡಲು ಬರಲಿಲ್ಲ. ಅವರು ಬರಲಾಗುವುದಿಲ್ಲ ಅನ್ನುವುದನ್ನು ಕೇಳಿ ಬ್ರಾಹ್ಮಣರು, ವಿಶೇಷವಾಗಿ ಸನಾತನಧರ್ಮದ ಜನರಿಗೆ ಬೇಸರವಾಗಿತ್ತು. ಅಲ್ಲದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮಾಡುವಾಗ ಅವರಿಗೆ ತೊಂದರೆ ಕೊಡುವ, ಗದ್ದಲ ಮಾಡುವ, ಅವರನ್ನು ತೊಂದರೆಯಲ್ಲಿ ಸಿಲುಕಿಸುವ ಎಲ್ಲ ಯೋಜನೆಗಳು ತೆಲೆಕೆಳಗಾಗಿದ್ದವು. ಇಷ್ಟಿದ್ದರೂ ಈ ಭಾಷಣದಲ್ಲಿ ಅಂಬೇಡ್ಕರ್ ಅವರು ಬ್ರಾಹ್ಮಣರ ಬಗ್ಗೆ ಏನಾದರೂ ಹೆಚ್ಚು ಕಡಿಮೆ ಮಾತಾಡಿದರೆ ಅವರನ್ನು ಯಾವ ರೀತಿಯಲ್ಲಿ ತರಾಟೆಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಯೋಚಿಸಿ ಇಟ್ಟಿದ್ದರು. ಈ ಎಲ್ಲ ಸುದ್ದಿ ಗುರುವರ್ಯರಾದ ಕೇಳುಸ್ಕರ್ ಅವರಿಗೆ ತಿಳಿದಾಗ ಅವರು ಖುದ್ದಾಗಿ ಸಭೆಗೆ ಹಾಜರಾಗಿದ್ದರು.

ಆದರೆ ಡಾ. ಅಂಬೇಡ್ಕರ್ ಅವರ ಭಾಷಣ ವಿಷಯಕ್ಕಂಟಿಕೊಂಡು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿತ್ತು. ಸಭೆಯಲ್ಲಿ ಗದ್ದಲ ಎಬ್ಬಿಸುವ ಉದ್ದೇಶದಿಂದ ಬಂದ ಜನ ಕೂಡ ಶಾಂತವಾಗಿ ಅವರ ಭಾಷಣ ಕೇಳಿ ಅವರ ವಿದ್ವತ್ತಿನ ಗುಣಗಾನ ಮಾಡುತ್ತಲೇ ತಮ್ಮ ತಮ್ಮ ಮನೆಗೆ ಹೋದರು.

ಈ ಸಭೆಯನ್ನು ಗೆದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ,

‘‘ದಲಿತರು ಅಸ್ಪಶ್ಯತೆ ನಿವಾರಣೆಗಾಗಿ ನಡೆಸಿರುವ ಚಳವಳಿ ಹಾಗೂ ಬ್ರಾಹ್ಮಣಾದಿ ಮೇಲ್ಜಾತಿಯವರು ಈ ಚಳವಳಿಗೆ ತೆಗೆದುಕೊಂಡ ಆಕ್ಷೇಪದ ಬಗ್ಗೆ ನಾನಿಂದು ಮಾತನಾಡಲಿದ್ದೇನೆ. ವಿಷಯ ಸಾಕಷ್ಟು ದೊಡ್ಡದಿದೆ, ಆದರೆ ನಮ್ಮಲ್ಲಿ ಸಮಯದ ಅಭಾವದಿಂದಾಗಿ ಅದರ ಚರ್ಚೆ ನೀರಸವಾಗಬಾರದು ಅನ್ನುವುದು ನನ್ನಿಚ್ಛೆಯಾಗಿದೆ.

ನಮ್ಮ ಚಳವಳಿಯ ಮೇಲೆ ಮೂರು ಆಕ್ಷೇಪಗಳಿವೆ, ಮೊದಲನೆಯದು: ನಾವು ಮೇಲ್ಜಾತಿಯವರಿಗೆ ಸಹಕರಿಸದೆ ಸ್ವಾತಂತ್ರ ಚಳವಳಿ ನಡೆಸುತ್ತೇವೆ. ಎರಡನೆಯದು: ನಾವು ಜನರ ಮೇಲೆ ದಬ್ಬಾಳಿಕೆ ನಡೆಸುತ್ತೇವೆ ಹಾಗೂ ಮೂರನೆಯದು ನಾವು ಜಾತಿಭೇದ ಹಾಗೂ ಅಸ್ಪಶ್ಯತೆ ಅನ್ನುವ ಎರಡು ಬೇರೆ ಹಾಗೂ ಸ್ವತಂತ್ರ ಪ್ರಶ್ನೆಗಳನ್ನು ಒಂದು ಮಾಡಿ ವಿನಾಕಾರಣ ಕಲಸುಮೇಲೋಗರ ಮಾಡುತ್ತಿರುವುದರಿಂದ ಅಸ್ಪಶ್ಯತೆ ತೊಲಗಲು ತಡವಾಗುತ್ತಿದೆ.

ಈ ಮೂರರ ಪೈಕಿ ಮೊದಲನೆಯ ಆಕ್ಷೇಪಣೆಯ ಬಗ್ಗೆ ಯೋಚಿಸುವುದಾದರೆ, ಸಹಕಾರ ಕೊಡದೇ ಇರುವುದರ ಅರ್ಥ ಸ್ವತಂತ್ರವಾಗಿ ಸ್ವಾವಲಂಬನೆಯ ತತ್ವದ ಮೇಲೆ ಚಳವಳಿ ಮಾಡುವುದು ಎಂದಾದರೆ ಈ ಆಕ್ಷೇಪಣೆ ಯತಾರ್ಥವಾಗಿದೆ. ಆದರೆ ಇದರರ್ಥ ನಾವು ಯಾವುದೇ ಮೇಲ್ಜಾತಿ ಜನರಿಗೆ ಸಹಕಾರ್ಯ ಕೊಡುತ್ತಿಲ್ಲ ಎಂದೋ ಇಲ್ಲವೆ ಯಾರ ಸಹಾಯವನ್ನೂ ಪಡೆಯಲಿಚ್ಛಿಸುವುದಿಲ್ಲ ಎಂದಿದ್ದರೆ ಈ ಆಕ್ಷೇಪಣೆ ಸುಳ್ಳು. ಈತ ನಮ್ಮವನು ಎಂದು ನಮಗೆ ಅನಿಸಿದಾಗ ಆತ ಯಾವ ಜಾತಿಯವನೇ ಆಗಿರಲಿ ಅವನಿಗೆ ನಾವು ಸಹಾಯ ಮಾಡಲು ಯಾವತ್ತೂ ಸಿದ್ಧ. ಈ ಸಂಘದ ಅಧ್ಯಕ್ಷನಾಗುವ ಭಾಗ್ಯ ನನಗೆ ದೊರೆತಿದೆ. ಹಿಂದೂ ಸಮಾಜದಿಂದ ಜಾತಿಭೇದ ಹಾಗೂ ಅಸ್ಪಶ್ಯತೆಯನ್ನು ಬೇರುಸಹಿತ ಕಿತ್ತೆಸೆಯಲು ಪ್ರಯತ್ನಿಸುತ್ತಿರುವ ಈ ಸಮಾಜ ಸಮತಾಸಂಘದಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರರು, ದಲಿತರು ಹೀಗೆ ಎಲ್ಲ ಜಾತಿಯ ಜನರಿದ್ದಾರೆ. ಈ ಸಂಘದಲ್ಲಿ ಸೇರಿಕೊಳ್ಳಲು ಯಾರನ್ನೂ ನಾವು ಬೇಡ ಅನ್ನುವುದಿಲ್ಲ. ಇಷ್ಟೆಲ್ಲ ಜನರಿದ್ದರೂ ಈ ಚಳವಳಿಯ ಸೂತ್ರಗಳನ್ನು ದಲಿತರು ತಮ್ಮ ಕೈಯಲ್ಲಿ ತೆಗೆದುಕೊಂಡಿದ್ದಾರೆ ಅನ್ನುವುದರಲ್ಲಿ ಆಶ್ಚರ್ಯವೇನಿಲ್ಲ. ತೀರಾ ಕೆಳವರ್ಗದ ಸಮಾಜವನ್ನು ಮೇಲೆತ್ತಲು, ಅದನ್ನು ಸುಸ್ಥಿತಿಗೆ ತರಲು ಮೇಲ್ವರ್ಗದ ಸಮಾಜ ತನ್ನ ಸಹಾಯ ಹಸ್ತ ಚಾಚಿ ತನ್ನ ಸ್ಥಿತಿಗೆ ತರಲು ಮುಂದಾಗುತ್ತದೆ. ನಮ್ಮ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸ್ಥಾಪಿಸಲು ಉದಾರಮತವಾದಿ ಲಿಬರಲ್ ಪಕ್ಷದ ಜನರ ಸಹಾಯ ಮುಖ್ಯವಾಗಿತ್ತು. ಆದರೆ ಹಿಂದುಳಿದ ಜನರಿಗೆ ಮೇಲ್ವರ್ಗದ ಜನರ ಸಹಾಯ ಒಂದು ಹಂತದವರೆಗೆ ಮಾತ್ರ ಸಿಗಲು ಸಾಧ್ಯ. ಆ ಹಂತದ ಮುಂದೆ ಮೇಲ್ವರ್ಗದ ಜನ ಹಿಂದುಳಿದ ಜನರ ಜೊತೆ ನಡೆಯಲಾರರು. ಅಷ್ಟೇಯಲ್ಲ ಮೊದಲು ಸಹಾಯಕರಾಗಿ ಬರುವ ಈ ಕೈವಾರಿಗಳು ಬರು ಬರುತ್ತ ಇವರ ಪ್ರತಿಸ್ಪರ್ಧಿಗಳು, ಶತ್ರುಗಳು ಹಾಗೂ ವಿರೋಧಿಗಳಾಗುತ್ತಾರೆ. ಒಂದು ಕಾಲದಲ್ಲಿ ಸಹಾಯಕರೂ ಹಾಗೂ ಆಶ್ರಯದಾತರಾಗಿದ್ದ ಲಿಬರಲ್ ಪಕ್ಷ ಇಂದು ಕಾರ್ಮಿಕ ಪಕ್ಷದ ತೀವ್ರ ಶತ್ರು ಹಾಗೂ ಪ್ರತಿಸ್ಪರ್ಧಿಯಾಗಿರುವುದನ್ನು ಕಾಣಬಹುದು. ಸಹಾಯಕ ಪಕ್ಷವೇ ಈಗ ಶತ್ರುವಾಗಿದೆ ಅಂದ ಮಾತ್ರಕ್ಕೆ ಕಾರ್ಮಿಕ ಪಕ್ಷ ಕೃತಜ್ಞವಾಗಿದೆ, ಅದು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಕೂಡದು ಎಂದು ಯಾವುದೇ ಜಾಣ ಮನುಷ್ಯ ಅನ್ನಲಾರ.

 ಅಸ್ಪಶ್ಯ ಚಳವಳಿಯ ಇತಿಹಾಸವೂ ಹಾಗೇ ಇದೆ. ಬ್ರಾಹ್ಮಣಾದಿ ಕುಲದ ಕೆಲವು ಉಚ್ಚ ಜಾತಿಯ ಜನ ದಲಿತರಿಗೆ ಸಹಾಯ ಹಸ್ತ ಚಾಚಿದರು. ಕೈ. ಅಗರಕರ್, ರಾನಡೆಯಂತಹ ಕೆಲವು ಜನ ಅಸ್ಪಶ್ಯರನ್ನು ಮುಟ್ಟಲು ಅಡ್ಡಿಯಿಲ್ಲ ಅನ್ನುತ್ತಿದ್ದರು ಹಾಗೂ ದಲಿತರ ಸಭೆಗೆ ಹಾಜರಿದ್ದು ಅವರಿಗೆ ಸುಧಾರಣೆಯ ಕೆಲವು ಸಹಾನುಭೂತಿಪರ ವಿಷಯಗಳನ್ನೂ ಹೇಳುತ್ತಿದ್ದರು. ಇದರಿಂದ ಅವರು ತಮ್ಮ ಜಾತಿಯವರಿಂದ ನಿಂದನೆಗೆ ಒಳಗಾದರು. ಮೇಲ್ಜಾತಿಯವರಿಗೆ ಅವರ ಜಾತಿಯಲ್ಲೇ ಕೆಲವು ಸುಧಾರಣೆಗಳನ್ನು ತರುವುದಿತ್ತು. ಬ್ರಾಹ್ಮಣ ಸ್ತ್ರೀಯರ ಪುನರ್ವಿವಾಹ ಮಾಡಬೇಕೆ ಬೇಡವೇ? ವಿಧವೆಯರು ತಲೆ ಬೋಳಿಸುವುದು ಶಾಸ್ತ್ರ ಸಮ್ಮತವೆ ಇಲ್ಲ ಧರ್ಮಶಾಸ್ತ್ರದ ವಿರುದ್ಧವೇ? ಗಂಡಸರು ಕೂದಲನ್ನು ಬೆಳೆಸಬೇಕೆ ಇಲ್ಲ ಕತ್ತರಿಸಬೇಕೇ? ಸ್ತ್ರೀಯರಿಗೆ ಶಿಕ್ಷಣ ಕೊಡಿಸಬೇಕೆ ಬೇಡವೇ? ಅನ್ನುವ ಪ್ರಶ್ನೆಗಳ ಚರ್ಚೆಯಲ್ಲೇ ಇವರ ಸಾಕಷ್ಟು ಸಮಯ ಹಾಳಾಗುತ್ತಿತ್ತು. ದಲಿತರ ಹಿತಕ್ಕೂ ಈ ಚರ್ಚೆಗೂ ಯಾವುದೇ ಸಂಬಂಧವಿರಲಿಲ್ಲ. ಬ್ರಾಹ್ಮಣ ಸ್ತ್ರೀಯರ ಪುನರ್ವಿವಾಹ ಆಗಲಿ ಆಗದಿರಲಿ. ವಿಧವೆಯರ ತಲೆ ಬೋಳಿಸುವ ಪದ್ಧತಿ ನಿಂತರೂ ದಲಿತರ ರೂಢಿ ಪರಂಪರೆಗಳ ಮೇಲೆ ಇದರಿಂದ ಯಾವುದೇ ಪರಿಣಾಮವಾಗುವಂತಿರಲಿಲ್ಲ.

ಇದು ರಾನಡೆ, ಅಗರಕರ್‌ರಂತಹ ಮಹಾರಾಷ್ಟ್ರದ ಬ್ರಾಹ್ಮಣ ಸುಧಾರಕರ ಅಸ್ಪಶ್ಯತೆ ನಿವಾರಣೆಯ ದಾರಿ ಹಾಗೂ ಇತಿಮಿತಿಗಳ ಬಗ್ಗೆಯಾಯಿತು. ಇತ್ತೀಚೆಗೆ ಹಿಂದೂ ಸಭೆಯವರು ತಮ್ಮ ಪ್ರಯತ್ನ ಜೋರಾಗಿ ನಡೆಸಿದ್ದಾರೆ. ಆದರೆ ರಾನಡೆ, ಅಗರಕರ್‌ರಲ್ಲಿ ಕಾಣುತ್ತಿದ್ದ ಸುಧಾರಣೆಯ ಕಳಕಳಿ ಮಹಾರಾಷ್ಟ್ರದ ಹಿಂದೂ ಶುದ್ಧಿ ಸಂಘಟನೆಗಳಲ್ಲಿ ಕಾಣುತ್ತಿಲ್ಲ. ಆತ್ಮ ಶುದ್ಧಿಗಿಂತ ಪರಧರ್ಮೀಯರ ಶುದ್ಧಿ ಹಾಗೂ ಸಂಘಟನೆಗಿಂತ ಹಿಂದೂಧರ್ಮದಲ್ಲಿ ಜನಸಂಖ್ಯೆ ಹೆಚ್ಚಿಸುವುದರೆಡೆ ಅವರ ಗಮನವಿದೆ. ನಿಜವಾದ ಸಾಮರ್ಥ್ಯ ಅಂಕಿ ಅಂಶಗಳಲ್ಲಿದೆ ಅನ್ನುವುದಾದರೆ ಇಂದು ಕೂಡ ಹಿಂದೂಗಳೇ ಬಹುಸಂಖ್ಯಾತರಾಗಿದ್ದಾರೆ. ಆದರೆ ಅವರಲ್ಲಿ ಸಂಘಟನೆ ಇಲ್ಲದ ಕಾರಣ ಯಾವ ಉಪಯೋಗಕ್ಕೂ ಬಾರದವರಾಗಿದ್ದಾರೆ. ಈ ವಿಷಯ ಅವರಿಗೆ ಗೊತ್ತಿದ್ದರೂ ಅವರದನ್ನು ಕಡೆಗಣಿಸುತ್ತಿದ್ದಾರೆ. ಇವರಲ್ಲಿರುವ ಅನೇಕ ನಾಯಕರು ಗಾಳಿ ಬಂದಲ್ಲಿ ತೂರಿಕೊಳ್ಳುತ್ತಿದ್ದಾರೆ. ಇಂತಹವರನ್ನು ನಂಬಿಕೊಂಡು ಅಸ್ಪಶ್ಯತೆಯಿಂದ ನಮ್ಮ ಬಿಡುಗಡೆಯಾಗುವುದಿಲ್ಲ ಎಂದು ದಲಿತರಿಗನಿಸಿದಲ್ಲಿ ತಪ್ಪೇನು?

ಒಂದು ಮಾನವ ಜಾತಿಯನ್ನು ಸ್ವಕೀಯರ ಗುಲಾಮಗಿರಿಯಿಂದ ಬಿಡುಗಡೆ ಮಾಡಲು ಮತ್ತೊಂದು ಮಾನವ ಜಾತಿಯು ಮನಸಾರೆ ಪ್ರಯತ್ನಿಸಿರುವುದು ಜಗತ್ತಿನಲ್ಲಿ ಒಂದೇ ಉದಾಹರಣೆ ಸಿಗುತ್ತದೆ. ಅದು ನೀಗ್ರೋಗಳನ್ನು ಗುಲಾಮಗಿರಿಯಿಂದ ಮುಕ್ತ ಮಾಡಲು ಶ್ರಮಿಸಿದ ಬಿಳಿಯ ಅಮೆರಿಕನ್ನರು. ಅಣ್ಣ ತಮ್ಮನೊಡನೆ, ಮಗಳು ತಂದೆಯೊಡನೆ, ಗೆಳೆಯ ಗೆಳೆಯನೊಡನೆ ನೀಗ್ರೋಗಳಿಗಾಗಿ ಹೋರಾಡಿದರು. ಜಾತಿಭೇದವನ್ನು ಬೇರು ಸಹಿತ ಕಿತ್ತೆಸೆಯಲು ಹಾಗೂ ಅಸ್ಪಶ್ಯತೆಯ ಪಾಪವನ್ನು ತೊಡೆದು ಹಾಕಲು ಒಬ್ಬ ಧರ್ಮವೀರನು ಭಾರತದಲ್ಲಿ ಜನಿಸಿರುವುದೇ ಆದರೆ ಆತ ಕೇವಲ ಗೌತಮ ಬುದ್ಧ ಒಬ್ಬನೇ. ಆದರೆ ಅಮೆರಿಕದಂತಹ ಪ್ರಸಂಗ ಹಾಗೂ ಗೌತಮ ಬುದ್ಧನ ಜನ್ಮದಂತಹ ಘಟನೆಗಳು ಮತ್ತೆ ಮತ್ತೆ ಘಟಿಸಲಾರವು. ಅಂತಹ ಹುಚ್ಚು ಆಸೆಯ ಮೇಲೆ ನಾವು ಬದುಕಲಾರೆವು ಕೂಡ.

ನಾವು ದಬ್ಬಾಳಿಕೆ ನಡೆಸುತ್ತೇವೆ, ನಮ್ರತೆಯಿಂದ ತಲೆಬಾಗಿ ನಮಗೆ ಬೇಕಿರುವುದನ್ನು ಬೇಡುವುದಿಲ್ಲ ಹಾಗಾಗಿ ಅಸ್ಪಶ್ಯತೆ ನಿವಾರಣೆ ಸಮರ್ಥಿಸುವ ಜನ ಕೂಡ ಅಸ್ಪಶ್ಯತೆ ನಿವಾರಣೆಯನ್ನು ವಿರೋಧಿಸುತ್ತಾರೆ ಅನ್ನುವ ಮತ್ತೊಂದು ಆರೋಪ ನಮ್ಮ ಮೇಲಿದೆ. ಹೀಗೆನ್ನುವವರಿಗೆ ತಮ್ಮ ಬಗ್ಗೆಯೇ ನಾಚಿಕೆಯಾಗಬೇಕು. ದಲಿತರಷ್ಟು ನಮ್ರ ಹಾಗೂ ಕೈಲಾಗದ ಸಮಾಜ ಜಗತ್ತಿನಲ್ಲಿ ಬೇರಾವುದಿದೆ? ನೂರಾರು ವರ್ಷಗಳಿಂದ ನಾವು ನಮ್ರರಾಗಿ ವರ್ತಿಸಲಿಲ್ಲವೇ? ಕಲ್ಲು ಕೂಡ ಕರಗುವಂತಹ ದೀನ ಹಾಗೂ ನಮ್ರತೆಯಲ್ಲಿ ನಾವು ಬದುಕಲಿಲ್ಲವೇ? ಈಗಲಾದರೂ ನಮಗೆ ನಮ್ರತೆಯ ಹಾಗೂ ವಿನಯತೆಯ ಪಾಠ ಕಲಿಸುವುದನ್ನು ನಿಲ್ಲಿಸಿ ಇವುಗಳೆಲ್ಲವನ್ನು ಮೇಲ್ಜಾತಿಯವರಿಗೆ ಹೇಳಿ ಕೊಡಿ. ವಿನಂತಿ, ಅರ್ಜಿ, ಶಿಷ್ಟಮಂಡಳಿ ಇವುಗಳ ಸಹಾಯದಿಂದ ಕಳೆದುಕೊಂಡ ಸ್ವಾತಂತ್ರ ಹಾಗೂ ಕಸಿದುಕೊಂಡಿರುವ ನಮ್ಮ ಹಕ್ಕುಗಳನ್ನು ಮರಳಿ ಪಡೆಯುವಂತಿದ್ದರೆ ಈಗಿರುವ ಪಕ್ಷದ ಜನ ಈ ದೇಶದ ರಾಜರಾಗಿರುತ್ತಿದ್ದರು ಹಾಗೂ ಹಿಂದೂ ಧರ್ಮ ದಲಿತರ ಮನೆಯಲ್ಲಿ ಕಾಲುಮರಿದು ಬಿದ್ದಿರುತ್ತಿತ್ತು! ದಬ್ಬಾಳಿಕೆ ಮಾಡುವ ಇಲ್ಲವೇ ಆಢ್ಯತೆಯಿಂದ ನಡೆದುಕೊಳ್ಳುವ ಅಭ್ಯಾಸ ನಮಗಿಲ್ಲ! ದಿನವೆಲ್ಲ ಮೈಮುರಿದು ದುಡಿದಾಗ ಎರಡು ತುತ್ತು ಹೇಗೆ ಸಿಕ್ಕೀತು ಅನ್ನುವ ಪ್ರಶ್ನೆಯೇ ನಮ್ಮ ದಿನದ ಸಂಗಾತಿ! ಆದರೆ ಅನ್ನಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂದು ತಿಳಿದು ನಾವು ಇದನ್ನೆಲ್ಲ ಮಾಡುತ್ತಿದ್ದೇವೆ. ತಟ್ಟದೆ ಯಾರೂ ತಮ್ಮ ಬಾಗಿಲು ತೆರೆಯುವುದಿಲ್ಲ ಹಾಗೂ ಕಸಿದುಕೊಳ್ಳದೆ ಮನುಷ್ಯತ್ವದಂತಹ ಸಾಧಾರಣ ಹಕ್ಕುಗಳನ್ನೂ ನೀವು ಕೊಡುವುದಿಲ್ಲ. ಮೂರನೆಯ ಆರೋಪಕ್ಕೆ ಉತ್ತರಿಸುವ ಮುನ್ನ ನಾನು ನಿಮಗೆ ಹೇಳುವುದಿಷ್ಟೆ. ಅಸ್ಪಶ್ಯತಾ ನಿವಾರಣೆಯ ಈ ಚಳವಳಿಯು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಇಡೀ ಹಿಂದೂ ಸಮಾಜದ ಈ ಹುಟ್ಟು ಅಸ್ಪಶ್ಯತೆಯನ್ನು ನಾಶ ಮಾಡುವುದೇ ನಮ್ಮ ಈ ಚಳವಳಿಯ ಮುಖ್ಯ ಉದ್ದೇಶ. ಈ ಉದ್ದೇಶ ಸಫಲವಾಗುವುದು ಸುಲಭವಲ್ಲ ಅನ್ನುವುದು ನಮಗೆ ಗೊತ್ತಿದೆ. ಆದರೆ ಹಿಂದೂ ಸಮಾಜಕ್ಕಂಟಿಕೊಂಡಿರುವ ಈ ರೋಗವನ್ನು ನಾಶ ಮಾಡುವ ಕಳಕಳಿ ಯಾರಿಗಾದರೂ ಇರುವುದಾದರೆ ಅದು ಕೇವಲ ನಮಗೆ ಮಾತ್ರ. ಬ್ರಾಹ್ಮಣರನ್ನು ಬಿಟ್ಟರೆ ಎಲ್ಲ ಜಾತಿಯವರಿಗೆ ಈ ಸಾಮಾಜಿಕ ಹಾಗೂ ಧಾರ್ಮಿಕ ಅಸ್ಪಶ್ಯತೆಯ ಧಗೆ ತಗುಲಿದೆ ಹಾಗೂ ತಗಲುತ್ತಿದೆ. ಮುಖ್ಯವಾಗಿ ಬ್ರಾಹ್ಮಣರು ಹಾಗೂ ಅಬ್ರಾಹ್ಮಣರಲ್ಲೇ ಅಸ್ಪಶ್ಯತೆ ಹಾಗೂ ಉಚ್ಚನೀಚತೆಯ ಭಾವನೆಗಳಿವೆ. ಚಿತ್ಪಾವನ ಬ್ರಾಹ್ಮಣ ಪೂಜೆಗೆ ಕುಳಿತಾಗ ಪಳಶೀಕರ ಬ್ರಾಹ್ಮಣ ಎದುರಾದರೆ ಮೈಲಿಗೆ ಅನಿಸುತ್ತದೆ. ಕಾಯಸ್ಥ ಜಾತಿಯ ಹೆಣ್ಣು ಮುಟ್ಟಿದರೆ ತನ್ನ ಬಟ್ಟೆ ಮೈಲಿಗೆಯಾಗುತ್ತದೆ ಅಂದುಕೊಂಡು ಆಕೆಗೆ ಕುಂಕುಮ ಕೊಡುವಾಗ ಬ್ರಾಹ್ಮಣ ಹೆಣ್ಣು ಕುಂಕುಮದ ಬಟ್ಟಲನ್ನು ನೆಲದ ಮೇಲಿಡುತ್ತಾಳೆ. ಈ ರೀತಿ ಮೇಲ್ಜಾತಿಯವರಲ್ಲೇ ಅಸ್ಪಶ್ಯತೆ ನೆಲೆಸಿದೆಯಾದರೂ ದಲಿತರಲ್ಲಿ ಅಸ್ಪಶ್ಯತೆ ಸಾಕಷ್ಟು ಪ್ರಮಾಣದಲ್ಲಿದೆ ಅನ್ನುವುದೇ ವ್ಯತ್ಯಾಸ. ಅದನ್ನು ಹೊಡೆದೋಡಿಸುವುದಾದರೆ ರೋಟಿ-ಬೇಟಿ ವ್ಯವಹಾರ (ಇತರ ಜಾತಿಯವರೊಡನೆ ಕುಳಿತು ಊಟ ಮಾಡುವುದು-ಜಾತಿಯ ಹೊರಗಿನಿಂದ ಹೆಣ್ಣು ತರುವುದು ಹಾಗೂ ಹೆಣ್ಣುಕೊಡುವ ವ್ಯವಹಾರ) ಆರಂಭವಾಗಲೇ ಬೇಕು. ಇಲ್ಲದಿದ್ದರೆ ಅಸ್ಪಶ್ಯತೆಯಂತಹ ರೋಗ ನಾಶವಾಗಲಾರದು. ಈ ರೋಗ ಬೇರು ಸಹಿತ ನಾಶವಾಗಬೇಕೆಂದೇ ನಾವು ಕಷ್ಟಪಡುತ್ತಿದ್ದೇವೆ. ಕೇವಲ ಸ್ಪರ್ಶಪಾವನವೇ ಆಗಬೇಕೆಂದಿದ್ದರೆ ಯಾವತ್ತೋ ಪರಧರ್ಮವನ್ನು ಸ್ವೀಕರಿಸಿ ನಮಗೆ ಆ ಸನ್ಮಾನ ಸಿಗುತ್ತಿತ್ತು, ಇಷ್ಟೊಂದು ಕಷ್ಟಪಡುವ ಅಗತ್ಯವೂ ಇರುತ್ತಿರಲಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)