ನಾನು ಯಾರ ಚೇಲಾನೂ ಅಲ್ಲ, ಯಾರ ಮನೆ ಬಾಗಿಲನ್ನೂ ಕಾದಿಲ್ಲ: ದಿನೇಶ್ ಗುಂಡೂರಾವ್
"ಅನರ್ಹರು ಬಿಜೆಪಿಗೆ ಟ್ರ್ಯಾಪ್ ಆಗಿದ್ದಾರೆ"
ಬೆಂಗಳೂರು, ಸೆ.27: ಅನರ್ಹ ಶಾಸಕರ ಎಸ್.ಟಿ.ಸೋಮಶೇಖರ್ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗುವುದಾಗಿ ಏನೇನೋ ಕನಸು ಕಂಡಿದ್ದರು. ಆದರೆ, ಅದು ಸಾಧ್ಯವಾಗದೆ ನೋವಿನಲ್ಲಿ ಮಾತನಾಡಿದ್ದಾರೆ. ಹತಾಶರಾಗಿ ನನ್ನ ವಿರುದ್ಧ ಕೆಟ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಅವರು ಎಲ್ಲಿದ್ದಾರೋ ಅವರಿಗೆ ಗೊತ್ತಿಲ್ಲ. ಯಾವ ಮನೆಯಲ್ಲಿದ್ದಾರೆ, ಯಾರೊಂದಿಗೆ ಸಂಬಂಧ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಅವರು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇರುವುದಾಗಿ ಭಾವಿಸಿದಂತಿದೆ. ನಾವು ಈಗಾಗಲೇ ಸೋಮಶೇಖರ್‌ರನ್ನು ಉಚ್ಛಾಟನೆ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ನಾನು ಸಿದ್ದರಾಮಯ್ಯ ಪರವಾಗಿಯೂ ಇಲ್ಲ, ಡಿ.ಕೆ.ಶಿವಕುಮಾರ್ ಪರವಾಗಿಯೂ ಇಲ್ಲ. ನಾನು ಯಾರ ಚೇಲಾನೂ ಅಲ್ಲ, ನಾನು ಬಕೆಟ್ ಹಿಡಿದಿಲ್ಲ, ಯಾರ ಮನೆ ಬಾಗಿಲನ್ನೂ ಕಾದಿಲ್ಲ. ಕೆಲವೊಮ್ಮೆ ಸಿದ್ದರಾಮಯ್ಯ ಕೈಗೊಂಡಿರುವ ನಿರ್ಧಾರವನ್ನು ನಾನು ವಿರೋಧಿಸಿದ್ದೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಬಣ, ಸಣ್ಣ ಬಣ ಎಲ್ಲವೂ ಇದೇ. ಅದೇ ರೀತಿ ಒನ್ ಮ್ಯಾನ್ ಆರ್ಮಿ ಕೂಡ ಇದೆ. ನಾನು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಅ.22ಕ್ಕೆ ಅನರ್ಹ ಶಾಸಕ ಶಾಸಕರ ಅರ್ಜಿ ವಿಚಾರಣೆಗೆ ಬರಲಿದೆ. ನ್ಯಾಯಾಲಯದ ಆದೇಶವನ್ನು ಬಿಜೆಪಿಯವರು ತಮ್ಮ ಬೇಕಾದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಅನರ್ಹರು ಬಿಜೆಪಿಗೆ ಟ್ರ್ಯಾಪ್ ಆಗಿದ್ದಾರೆ. ಉಪ ಮುಖ್ಯಮಂತ್ರಿಯೊಬ್ಬರು ಅನರ್ಹ ಶಾಸಕರನ್ನು ದರಿದ್ರರೆಂದು ಹೇಳಿದ್ದಾರೆ. ಇನ್ನಾದರೂ ಅನರ್ಹ ಶಾಸಕರು ಭ್ರಮೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.
ಬಹಳ ಪ್ರಮುಖ ವಿಚಾರಗಳನ್ನು ನಮ್ಮ ವಕೀಲರು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಅಧಿಕಾರ ಮತ್ತು ಹಣಕ್ಕಾಗಿ ಅನರ್ಹ ಶಾಸಕರು ಬಿಜೆಪಿಗೆ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಪ್ರೀಂಕೋರ್ಟ್ ಆದೇಶ ಬರುವವರೆಗೂ ಇವರು ಅನರ್ಹರೇ, ಜನತಾ ನ್ಯಾಯಾಲಯದ ಮುಂದೆಯೂ ಇವರು ಅನರ್ಹರೇ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಅದರ ಮೇಲಿನ ನಂಬಿಕೆ ಹೋಗಿದೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ಸ್ವಯಂಪ್ರೇರಣೆಯಿಂದ ಹೇಳಿಕೆ ನೀಡಿದ್ದು ನೋಡಿದರೆ, ಯಾರನ್ನೋ ಮೆಚ್ಚಿಸಲು ಮುಂದಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ಹೇಳಿದರು.
ಅನರ್ಹ ಶಾಸಕರಿಂದ ಬಿಜೆಪಿ ಅನುಕೂಲವಾಗಿದೆಯೇ ಹೊರತು, ಈ ಶಾಸಕರಿಗೆ ಯಾವುದೇ ಲಾಭ ಆಗಿಲ್ಲ. ಸುಪ್ರೀಂಕೋರ್ಟ್ ನಿನ್ನೆ ಚುನಾವಣೆ ಮುಂದೂಡಿಕೆಗೆ ಸೂಚನೆ ನೀಡಿದೆ. ಆದೇಶದ ಪೂರ್ಣ ಪ್ರತಿ ನೋಡಲು ನನಗೆ ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಅತೃಪ್ತರ ಅರ್ಜಿಗೆ ಹಿನ್ನಡೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಸ್ಪೀಕರ್ ಕೊಟ್ಟಿರುವ ಆದೇಶದ ಬಗ್ಗೆ ಅತೃಪ್ತರು ಲಘುವಾಗಿ ಮಾತನಾಡಿದರು. ಯಾವುದೇ ಕಾರಣವಿಲ್ಲದೇ ಚುನಾವಣೆ ಮುಂದೂಡಿರುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸಿಬಿಐ, ಆರ್‌ಬಿಐ, ಈಡಿ ಹೊಂದಾಣಿಕೆ ಮಾಡಿಕೊಂಡಿದ್ದರೆ ನಾವು ಯಾರನ್ನು ನಂಬಬೇಕು. ಚುನಾವಣೆ ಮುಂದೂಡಿಕೆ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಚುನಾವಣಾ ಆಯೋಗದ ನಿರ್ಧಾರ ನಾಚಿಕೆಗೇಡಿನ ವಿಚಾರ. ಯಾವ ಆಧಾರದಲ್ಲಿ ಉಪ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಕಾರಣ ಕೇಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ. ಚುನಾವಣಾ ಆಯೋಗ ಒಂದು ಪಕ್ಷದ ಏಜೆಂಟ್‌ನಂತೆ ಕೆಲಸ ಮಾಡಿದರೆ ನಾವು ಯಾರನ್ನು ನಂಬಬೇಕು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ