ಸ್ಪಷ್ಟವಾಗುತ್ತಿರುವ ಆರ್ಥಿಕ ಕುಸಿತ
ಆರ್ಥಿಕತೆಯು ಪುನಶ್ಚೇತನಗೊಳ್ಳಲು ಆರ್ಥಿಕ ಚಟುವಟಿಕೆಗಳು ವಿಸ್ತಾರಗೊಳ್ಳಲು ಬೇಕಾದ ಪ್ರೇರಣೆಗಳು ಇಂದು ಅತ್ಯಂತ ಅಗತ್ಯವಾಗಿದೆ.
ಭಾರತದ ನೈಜ ಒಟ್ಟು ರಾಷ್ಟ್ರೀಯ ಉತ್ಪಾದನೆ- ಜಿಡಿಪಿಯು ಹಾಲಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 5ಕ್ಕೆ ಕುಸಿದಿದೆ. ಇದು ಕಳೆದ ಹಲವಾರು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಪ್ರಮಾಣದ ದಾಖಲೆಯಾಗಿದೆ. ಈ ನಿರಾಶಾದಾಯಕ ಅರ್ಥಿಕ ದುಸ್ಥಿತಿಗೆ ಬಳಕೆ ಮತ್ತು ಹೂಡಿಕೆಯ ಎರಡೂ ಕ್ಷೇತ್ರಗಳಲ್ಲೂ ಆಗಿರುವ ಕುಸಿತವೇ ಕಾರಣವಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂತಿಮ ಖಾಸಗಿ ಬಳಕೆ ವೆಚ್ಚ (ಪ್ರೈವೇಟ್ ಫೈನಲ್ ಕನ್ಸಮ್ಷನ್ ಎಕ್ಸ್ಪೆಂಡಿಚರ್- ಪಿಎಫ್ಸಿಇ)ಯು ಶೇ.7.3ರ ದರದಲ್ಲಿ ಬೆಳೆದಿದ್ದರೆ ಈ ವರ್ಷ ಅದು ಶೇ.3.1ಕ್ಕೆ ಕುಸಿದಿದೆ. 2016-17ರ ಸಾಲಿನಲ್ಲಿ ನೋಟು ನಿಷೇಧದ ನಂತರದ ನಾಲ್ಕನೇ ತ್ರೈಮಾಸಿಕದಲ್ಲೂ ಪಿಎಫ್ಸಿಇ ಶೇ.4.1ಕ್ಕೆ ಕುಸಿದಿತ್ತು. ಒಟ್ಟಾರೆ ಸ್ಥಿರ ಬಂಡವಾಳ ಶೇಖರಣೆ (ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್-ಜಿಎಫ್ಸಿಎಫ್) ಸಹ ಇದೇ ರೀತಿಯ ಕುಸಿತವನ್ನು ದಾಖಲಿಸಿದೆ. ಅದು 2016-17ರ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.2ಕ್ಕೆ ಕುಸಿದಿತ್ತು ಮತ್ತು ಕಳೆದ ವರ್ಷ ಶೇ.13.3ರಷ್ಟು ಏರಿಕೆಯನ್ನು ದಾಖಲಿಸಿತ್ತು. ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ಶೇ.4ಕ್ಕೆ ಕುಸಿದಿದೆ.
ವಾಸ್ತವವಾಗಿ 2019-20ರ ಮೊದಲ ತ್ರೈಮಾಸಿಕದಲ್ಲಿ ಕಾರ್ಖಾನೆ ಉತ್ಪಾದನೆ, ಗಣಿ ಉದ್ಯಮ, ಕೃಷಿಯನ್ನು ಒಳಗೊಂಡಂತೆ ಬಹುಪಾಲು ಉತ್ಪಾದಕ ಕ್ಷೇತ್ರಗಳು ಗಂಭೀರವಾದ ಹಿನ್ನೆಡೆಯನ್ನು ಅನುಭವಿಸಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವು ಅತ್ಯಂತ ಹಿಂದ್ಸರಿತವನ್ನು ಎದುರಿಸುತ್ತಿದೆ. ಕಳೆದ ಸಾಲಿನ ಇದೇ ಕಾಲಘಟ್ಟದಲ್ಲಿ ಆ ಕ್ಷೇತ್ರವು ಶೇ.12.1ರಷ್ಟು ಏರಿಕೆಯನ್ನು ದಾಖಲಿಸಿದ್ದರೆ ಈ ಸಾಲಿನಲ್ಲಿ ಅದು ಕೇವಲ ಶೇ.0.6ರಷ್ಟು ಏರಿಕೆಯನ್ನು ಮಾತ್ರ ದಾಖಲಿಸಿದೆ. ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕಗಳ ಅಭಿವೃದ್ಧಿ ದರವು ಹೋದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕ್ಷೀಣವಾಗಿದೆ ಅಥವಾ ಮೊದಲಿಗಿಂತ ಕಡಿಮೆಯಾಗಿ ನಕಾರಾತ್ಮಕ ಬದಲಾವಣೆೆಯನ್ನು ದಾಖಲಿಸಿದೆ. ಜವುಳಿ ಕ್ಷೇತ್ರವು ಕೇವಲ ಶೇ.0.1ರಷ್ಟು ದರದಲ್ಲಿ ಕುಂಟುತ್ತಿದ್ದರೆ, ಚರ್ಮೋತ್ಪನ್ನಗಳು ಶೇ.0.2, ಕಾಗದ ಮತ್ತು ಕಾಗದೋತ್ಪನ್ನಗಳು ನಕಾರಾತ್ಮಕವಾದ ಶೇ.-14.2ರಷ್ಟು ಕುಸಿತವನ್ನೂ, ಲೋಹೇತರ ಖನಿಜಗಳು ಶೇ.-11, ಎರಕಕೀಕೃತ ಲೋಹೋತ್ಪನ್ನಗಳು ಶೇ.-9.8ರಷ್ಟು, ವಿದ್ಯುದೋಪಕರಣಗಳು ಶೇ.-4.6ರಷ್ಟು, ಇನ್ನಿತರ ಯಂತ್ರೋಪಕರಣಗಳು ಶೇ.-1.6ರಷ್ಟು, ಮೋಟರ್ವಾಹನಗಳು ಶೇ.-8.4ರಷ್ಟು, ಇನ್ನಿತರ ಸಾರಿಗೆ ಉಪಕರಣಗಳು ಶೇ.-1.7ರಷ್ಟು ನಕಾರಾತ್ಮಕ ಕುಸಿತವನ್ನು ದಾಖಲಿಸಿವೆ. ಈ ಎಲ್ಲಾ ಪ್ರಮುಖ ಉದ್ದಿಮೆಗಳಲ್ಲಿ ಕಂಡುಬರುತ್ತಿರುವ ಈ ಕುಸಿತವು ಒಟ್ಟಾರೆ ಆರ್ಥಿಕತೆಯಲ್ಲೂ ಅಪಾಯಕಾರಿ ಹಿನ್ನಡೆಯನ್ನು ತಂದಿದೆ ಮತ್ತು ಅದು ಇನ್ನೂ ಹಲವು ಕಾಲ ಮುಂದುವರಿಯುವ ಸೂಚನೆಗಳಿವೆ.
ಆರ್ಥಿಕತೆಯಲ್ಲಿನ ಈ ಕುಸಿತವು 2016ರ ನೋಟು ನಿಷೇಧವೆಂಬ ಕೆಟ್ಟ ಕ್ರಮಗಳ ನಂತರ ಹಾಗೂ ಅತ್ಯಂತ ಅಸಮರ್ಪಕವಾಗಿ ಜಾರಿ ಮಾಡಲಾದ ಜಿಎಸ್ಟಿ ವ್ಯವಸ್ಥೆಯ ನಂತರ ಸ್ಪಷ್ಟವಾಗಿ ಕಾಣತೊಡಗಿತ್ತು. ಸೌದಿ ಅರೇಬಿಯದ ಅತ್ಯಂತ ದೊಡ್ಡ ತೈಲ ಸಂಸ್ಕರಣ ಘಟಕವಾದ ಅರಾಮ್ಕೆ ಮೇಲೆ ಡ್ರೋನ್ ದಾಳಿಯಾದ ನಂತರದಲ್ಲಿ ಪಶ್ಚಿಮ ಏಶ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವು ಮುಂದುವರಿದು ಕಚ್ಚಾ ತೈಲದ ಬೆಲೆಗಳು ಏರತೊಡಗಿದಲ್ಲಿ ಭಾರತದ ಆರ್ಥಿಕತೆಯ ಇಳಿಮುಖವು ಇನ್ನಷ್ಟು ಬಿಗಡಾಯಿಸುವುದರಲ್ಲಿ ಸಂದೇಹವಿಲ್ಲ.
ಆರ್ಥಿಕ ಇಳಿಮುಖವು 2017-18ರಲ್ಲಿ ನಡೆದ ನಿಯತಕಾಲಿಕ ಶ್ರಮಶಕ್ತಿ ಸರ್ವೇ- (ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ)ಯ ಫಲಿತಾಂಶಗಳ ಮೇಲೂ ಪ್ರಭಾವವನ್ನು ಬೀರಿದೆ. ವಿಷಯವು ನಿಚ್ಚಳವಾಗಿದೆ. ನಗರದ ಶೇ.7.1ರಷ್ಟು ಹಾಗೂ ಗ್ರಾಮೀಣದ ಶೇ.5.8ರಷ್ಟು ಪುರುಷರು ಹಾಗೂ ನಗರದ ಶೇ.10.8ರಷ್ಟು ಮತ್ತು ಗ್ರಾಮೀಣದ ಶೇ.3.8ರಷ್ಟು ಮಹಿಳೆಯರು ಉದ್ಯೋಗರಹಿತರೆಂದು ದಾಖಲಾಗಿದೆ. ಹೀಗಾಗಿ ಇದು 1972-73 ರಿಂದಾಚೆಗಿನ ಕಳೆದ 45 ವರ್ಷಗಳಲ್ಲೇ ಎನ್ಎಸ್ಎಸ್ಒ ಸರ್ವೇಗಳು ನಡೆಸಿದ ಸಮೀಕ್ಷೆಗಳಲ್ಲಿ ಕಂಡುಬಂದ ಅತ್ಯಂತ ಹೆಚ್ಚಿನ ನಿರುದ್ಯೋಗ ಪ್ರಮಾಣವಾಗಿದೆ.
ವಿಶೇಷವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಹದಗೆಟ್ಟಿರುವ ನಿರುದ್ಯೋಗ ಪರಿಸ್ಥಿತಿಯಿಂದಾಗಿ ಬೇಡಿಕೆಯಲ್ಲೂ ಬಿಕ್ಕಟ್ಟು ಉಂಟಾಗಿದೆೆ. ಇದು ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ವಿಭಾಗಗಳ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆದರೆ ಅದರ ಪರಿಣಾಮವು ಸರಣಿಯೋಪಾದಿಯ ರೂಪವನ್ನು ಪಡೆದುಕೊಳ್ಳುತ್ತಿರುವುದು ಹೆಚ್ಚು ಚಿಂತೆಗೀಡುಮಾಡುವ ವಿಷಯವಾಗಿದೆ. ಮೋಟರ್ ವಾಹನಗಳ ಮಾರಾಟದ ಬೆಳವಣಿಗೆಯಲ್ಲಿ ಕಳೆದ ಕೆಲವಾರು ತಿಂಗಳಿಂದ ಸ್ಥಗಿತ ಕಂಡು ಬಂದಿರುವುದರಿಂದ ಮಾರುತಿ ಸುಝುಕಿ, ಅಶೋಕ್ ಲೇಲ್ಯಾಂಡ್ ಮತ್ತು ಟಾಟಾ ಮೋಟಾರ್ಸ್ನಂತಹ ಕಂಪೆನಿಗಳು ತಮ್ಮ ಕಾರ್ಖಾನೆಗಳಲ್ಲಿ ಕೆಲಸವಿಲ್ಲದ ದಿನಗಳ ಸಂಖ್ಯೆಯನ್ನು ಅರ್ಥಾತ್ ಸಂಬಳವಿಲ್ಲದ ರಜೆಯನ್ನು ಹೆಚ್ಚಿಸುತ್ತಿವೆ ಮತ್ತು ಪೂರಕ ಉಪಗುತ್ತಿಗೆಗಳನ್ನೂ ಸಹ ಕಡಿತಗೊಳಿಸುತ್ತಿವೆ. ಸಂಘಟಿತ ಕ್ಷೇತ್ರವೇ ಇಂತಹ ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಇನ್ನು ಅಸಂಘಟಿತ ಕ್ಷೇತ್ರದ ಪರಿಸ್ಥಿತಿ ಏನಾಗಿರಬಹುದೆಂಬುದನ್ನು ಯಾರೂ ಊಹಿಸಬಹುದು.
ಅಭಿವೃದ್ಧಿಯು ಸಂಕುಚಿತಗೊಂಡಿರುವುದು ತೆರಿಗೆ ಸಂಗ್ರಹದಲ್ಲಿ ಸಂಭವಿಸುತ್ತಿರುವ ಇಳಿಕೆಯಲ್ಲೂ ವ್ಯಕ್ತಗೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶಗಳು ಹೇಳುವಂತೆ ಈ ಹಾಲಿ ಹಣಕಾಸು ವರ್ಷದಲ್ಲಿ ಸೆಪ್ಟಂಬರ್ ಮಧ್ಯ ಭಾಗದವರೆಗೆ ತೆರಿಗೆ ಸಂಗ್ರಹವು ಶೇ. 6ರ ದರದಲ್ಲಿತ್ತು. ಆದರೆ ಇದೇ ಅವಧಿಯಲ್ಲಿ ಕಳೆದ ವರ್ಷ ಅದು ಶೇ.18ರಷ್ಟು ಏರಿಕೆಯನ್ನು ದಾಖಲಿಸಿತ್ತು. ಮತ್ತು 2016-17ರಲ್ಲಿ ಅದು ಶೇ.14ರಷ್ಟಾಗಿತ್ತು. ಈ ತೆರಿಗೆಯನ್ನು ಆಯಾ ಕ್ಷೇತ್ರದಲ್ಲಿ ಆದಾಯವು ಗಳಿಕೆಯಾದಾಗ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಈ ಇಳಿಕೆಯು ಸಂಘಟಿತ ಕ್ಷೇತ್ರದಲ್ಲಿ ಆದಾಯ ಹುಟ್ಟುವಳಿಯ ಮೇಲೆ ತೀವ್ರವಾದ ಪರಿಣಾಮ ಬಿದ್ದಿರುವುದನ್ನು ಸೂಚಿಸುತ್ತದೆ. ಹೀಗಾಗಿ ಎರಡನೇ ತ್ರೈಮಾಸಿಕದಲ್ಲೂ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿರುತ್ತದೆಂದು ಹೇಳಲು ಸಾಧ್ಯವಿಲ್ಲ.
ಮತ್ತೊಂದೆಡೆ ಆರ್ಬಿಐ, ಬ್ಯಾಂಕುಗಳಿಗೆ ವಿಧಿಸುವ ತನ್ನ ರೆಪೋ ದರವನ್ನು ಪ್ರತಿ ಸಲವೂ ಕಡಿಮೆ ಮಾಡುತ್ತಾ ಬಂದಿದೆ ಹಾಗೂ ಕಳೆದ ಆಗಸ್ಟ್ನಲ್ಲಿ ಮತ್ತೆ ಶೇ.0.35ರಷ್ಟು ಕಡಿಮೆ ಮಾಡಿದೆ. ಇದರ ಉದ್ದೇಶ ಬ್ಯಾಂಕುಗಳೂ ಸಹ ತಾವು ವಿಧಿಸುವ ಬಡ್ಡಿ ದರದ ಮೇಲೆ ಇದೇ ಪ್ರಮಾಣದಲ್ಲಿ ಬಡ್ಡಿಯನ್ನು ಕಡಿಮೆಗೊಳಿಸುವ ಮೂಲಕ ಹೂಡಿಕೆದಾರರಿಗೆ ಮತ್ತು ಬಳಕೆದಾರರಿಬ್ಬರಿಗೂ ಸುಲಭ ದರದಲ್ಲಿ ಸಾಲವು ದೊರೆತು ಆರ್ಥಿಕತೆಯು ಚೇತರಿಸಿಕೊಳ್ಳಬಹುದು ಎಂಬುದಾಗಿದೆ. ಆದರೆ ಈ ಲಾಭವು ಬ್ಯಾಂಕುಗಳ ಗ್ರಾಹಕರಿಗೆ ವರ್ಗಾವಣೆ ಆಗದಿರುವುದನ್ನು ಗಮನಿಸಿರುವ ರಿಸರ್ವ್ ಬ್ಯಾಂಕು, ಬ್ಯಾಂಕುಗಳು ತಮ್ಮ ಬಡ್ಡಿ ದರವನ್ನು ಆರ್ಬಿಐನ ರೆಪೊ ದರಗಳಿಗೆ ತಕ್ಕಂತೆ ಮಾರ್ಪಾಡು ಮಾಡಬೇಕೆಂದು ಆದೇಶಿಸಿದೆ. ಆದರೆ ಬ್ಯಾಂಕು ಉದ್ಯಮವು ವಿಚಿತ್ರವಾದ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಇತರ ಆಕರ್ಷಕ ಉಳಿತಾಯ ಯೋಜನೆಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಬ್ಯಾಂಕುಗಳ ಡಿಪಾಸಿಟ್ಗಳ ಸಂಗ್ರಹದ ವೇಗವೂ ಕಡಿತಗೊಳ್ಳುತ್ತಿದೆ.
ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆಗಸ್ಟ್ ಕೊನೆಯ ವಾರದಿಂದ ಸರಕಾರವು ಹಲವಾರು ಯೋಜನೆಗಳನ್ನು ಪ್ರಕಟಿಸುತ್ತಿದೆ. ಸಾರ್ವಜನಿಕ ಕ್ಷೇತ್ರದ ಹತ್ತು ಬ್ಯಾಂಕುಗಳನ್ನು ವಿಲೀನಗೊಳಿಸಿ ಗ್ರಾಹಕರಿಗೆ ಸಾಲ ನೀಡಲು ಅವುಗಳಿಗೆ 50,000 ಕೋಟಿ ಹೆಚ್ಚುವರಿ ಹಣವನ್ನು ಒದಗಿಸಿರುವುದು, ವಿದೇಶಿ ಶೇರು ಹೂಡಿಕೆದಾರರ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ತೆರಿಗೆಯನ್ನು ಹಿಂದೆಗೆದುಕೊಂಡಿರುವುದು, ಮೋಟರ್ ವಾಹನ, ವಸತಿ ಮತ್ತು ರಫ್ತು ಕ್ಷೇತ್ರಗಳಿಗೆ ನಿರ್ದಿಷ್ಟವಾದ ಮತ್ತು ವಿಶೇಷವಾದ ಯೋಜನೆಗಳನ್ನು ಪ್ರಕಟಿಸಿರುವುದು, ಇದೀಗ 400 ಜಿಲ್ಲೆಗಳಲ್ಲಿ ಸಾಲ ಮೇಳವನ್ನು ಘೋಷಿಸಿರುವುದು ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತಗೊಳಿಸಿರುವುದು...ಇತ್ಯಾದಿ. ಇನ್ನೂ ಸಾಕಷ್ಟು ಕ್ರಮಗಳೂ ಮುಂದೆಯೂ ಘೋಷಿತವಾಗಬಹುದೆಂಬ ನಿರೀಕ್ಷೆಯಿದೆ.
ಆದರೆ ಇವೆಲ್ಲವೂ ಸಣ್ಣ ಮಟ್ಟದ ಕ್ರಮಗಳಾಗಿವೆ. ಆದರೆ ಆರ್ಥಿಕತೆಯು ಇಂದು ಮೂಲಭೂತ (ಸ್ಟ್ರಕ್ಚರಲ್) ಹಾಗೂ ಸರ್ವೇ ಸಹಜವಾದ ಆವರ್ತನೀಯ (ಸೈಕ್ಲಿಕಲ್) ಸ್ವರೂಪದ ಎರಡೂ ಬಗೆಯ ಮಹಾನ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಇದು ಹಣಕಾಸು ಹಾಗೂ ವಿತ್ತೀಯ ಕ್ಷೇತ್ರಗಳೆರಡರಲ್ಲೂ ಆರ್ಥಿಕ ವಿಸ್ತರಣಾ ಪ್ರೇರಣೆಗಳನ್ನು ನೀಡಬಲ್ಲ ದೊಡ್ಡ ಮಟ್ಟದ ಮೂಲಭೂತ ಸುಧಾರಣೆಗಳನ್ನು ಅಪೇಕ್ಷಿಸುತ್ತಿದೆ. ಆರ್ಥಿಕತೆಯಲ್ಲಿ ಅದರಲ್ಲೂ ಗ್ರಾಮೀಣ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಹೂಡಿಕೆಗಳೆರಡನ್ನೂ ಹೆಚ್ಚಿಸಬಲ್ಲ ವಿತ್ತೀಯ ಹಾಗೂ ಹಣಕಾಸು ಒತ್ತಾಸೆಗಳನ್ನು ನೀಡುವುದು ಇಂದು ಅತ್ಯಗತ್ಯವಾಗಿದೆ. ತೆರಿಗೆ ಸಂಗ್ರಹದ ಪ್ರಮಾಣವು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕತೆಗೆ ಪುನಶ್ಚೇತನ ಒದಗಿಸಲು ಸರಕಾರಿ ವೆಚ್ಚವನ್ನು ಹೆಚ್ಚಿಸುವುದು ಹೇಗೆ ಎನ್ನುವುದೇ ದೊಡ್ಡ ಸವಾಲಾಗಿದೆ. ಆದರೆ ಇದಾಗಬೇಕೆಂದರೆ ವಿತ್ತೀಯ ಸದೃಢೀಕರಣದ ಬಗೆಗಿನ ನಮ್ಮ ಈವರೆಗಿನ ತಿಳುವಳಿಕೆಯನ್ನು ಆಮೂಲಾಗ್ರವಾಗಿ ಮರುಪರಿಶೀಲಿಸುವ ಅಗತ್ಯವಿದೆ.