ಭಾರತದ ಮೊತ್ತಮೊದಲ ಚಿಟ್ಟೆ ಸಾಕ್ಷ್ಯಚಿತ್ರ ಲೆಫ್ ಆಫ್ ಬಟರ್‌ಪ್ಲೈಸ್
► ಜನಸಾಮಾನ್ಯರಿಗೆ ಚಿಟ್ಟೆಯ ಬಗ್ಗೆ ಆಸಕ್ತಿ ಮೂಡಿ ಅದನ್ನು ಸಂರಕ್ಷಿಸುವ ಉದ್ದೇಶ ಇಟ್ಟುಕೊಂಡು ಈ ಸಾಕ್ಷಚಿತ್ರವನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಈ ಸಾಕ್ಷಚಿತ್ರವನ್ನು ತೋರಿಸುವ ಇರಾದೆಯನ್ನು ಹೊಂದಿದ್ದೇನೆ. ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಿದರೆ ಮುಂದೆ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಈ ಸಾಕ್ಷಚಿತ್ರವನ್ನು ಪ್ರದರ್ಶಿಸುವ ಚಿಂತನೆ ನನ್ನಲ್ಲಿದೆ.
ಸಮ್ಮಿಲನ್ ಶೆಟ್ಟಿ, ಚಿಟ್ಟೆ ಸಂರಕ್ಷಕ
ಆಹಾರ ಸರಪಳಿಯ ಕೊಂಡಿ ಯಾಗಿ ಹಾಗೂ ಪರಾಗ ಸ್ಪರ್ಶದ ಮೂಲಕ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಚಿಟ್ಟೆಗಳ ಸಮಗ್ರ ಜೀವನ ಕುರಿತ ‘ಲೈಫ್ ಆಫ್ ಬಟರ್‌ಪ್ಲೈಸ್’ ಭಾರತದ ಮೊತ್ತ ಮೊದಲ ಸಾಕ್ಷಚಿತ್ರವು ಚಿಟ್ಟೆ ಸಂರಕ್ಷಕ ಸಮ್ಮಿಲನ್ ಶೆಟ್ಟಿ ಪರಿಕಲ್ಪನೆಯಲ್ಲಿ ಮೂಡಿಬಂದಿದೆ.
ಚಿಟ್ಟೆ ಸಾಕ್ಷ್ಯ ಚಿತ್ರ
ಈ ಸಾಕ್ಷಚಿತ್ರವನ್ನು ಸಮ್ಮಿಲನ್ ಶೆಟ್ಟಿ, ಮೂಡುಬಿದಿರೆ ಬೆಳ್ವೆಯಲ್ಲಿರುವ ತನ್ನ ಚಿಟ್ಟೆ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಿದ್ದು, ಕಳೆದ ನಾಲ್ಕು ವರ್ಷಗಳ ಪರಿಶ್ರಮದ ಫಲವಾಗಿ ಈ ಸಾಕ್ಷಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿಟ್ಟೆಯ ಜೀವನದ ವಿವಿಧ ಘಟ್ಟಗಳು, ಸವಾಲುಗಳು, ಆಹಾರ ಮತ್ತು ಚಿಟ್ಟೆಗಳಿಗೆ ಸಂಬಂಧಿಸಿದ ಕೆಲವೊಂದು ಅತ್ಯಂತ ಸೂಕ್ಷ್ಮ ಮಾಹಿತಿಗಳ ಬಗ್ಗೆ ಈ ಸಾಕ್ಷಚಿತ್ರ ಬೆಳಕು ಚೆಲ್ಲುತ್ತದೆ. 2013ರಲ್ಲಿ ಸಮ್ಮಿಲನ್ ಶೆಟ್ಟಿ ತನ್ನ ಮನೆಯ 7.35 ಎಕರೆ ಜಾಗದಲ್ಲಿ ‘ಸಮ್ಮಿಲನ್ ಶೆಟ್ಟಿ’ ಚಿಟ್ಟೆ ಪಾರ್ಕ್‌ನ್ನು ಸ್ಥಾಪಿಸಿದ್ದು, ಕರ್ನಾಟಕ ರಾಜ್ಯದ ಪ್ರಥಮ ಖಾಸಗಿ ಚಿಟ್ಟೆ ಪಾರ್ಕ್ ಎಂಬ ಖ್ಯಾತಿಯನ್ನು ಇದು ಪಡೆದುಕೊಂಡಿದೆ. ಕಳೆದ ಏಳು ವರ್ಷಗಳಿಂದ ಈ ಪಾರ್ಕ್‌ನಲ್ಲಿ ಒಟ್ಟು 151 ಪ್ರಬೇಧದ ಚಿಟ್ಟೆಗಳು ಕಂಡುಬಂದಿವೆ. 100 ನಿಮಿಷಗಳ ಸಾಕ್ಷಚಿತ್ರ: ಪರಿಸರದಲ್ಲಿ ಚಿಟ್ಟೆಗಳ ಪಾತ್ರ ಹಾಗೂ ಜನ ಸಾಮಾನ್ಯರಲ್ಲಿ ಚಿಟ್ಟೆಗಳ ಸಂರಕ್ಷಣೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಮ್ಮಿಲನ್ ಶೆಟ್ಟಿ, ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಪಾರ್ಕ್‌ನಲ್ಲಿ ಕಂಡು ಬಂದ ವಿವಿಧ ಪ್ರಬೇಧಗಳ ಚಿಟ್ಟೆಗಳನ್ನು ಅತ್ಯಾಧುನಿಕ ಕ್ಯಾಮರಾ ಹಾಗೂ ಮ್ಯಾಕ್ರೋ ಲೆನ್ಸ್‌ಗಳನ್ನು ಬಳಸಿ ಈ ಸಾಕ್ಷಚಿತ್ರವನ್ನು ನಿರ್ಮಿಸಿದ್ದಾರೆ. ಚಿಟ್ಟೆಗಳನ್ನು ಪ್ರತಿದಿನ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತ ರಾತ್ರಿ ಹಗಲು ಶ್ರಮ ವಹಿಸಿ ಚಿಟ್ಟೆಗಳ ಪ್ರಯಾಣ ಹಾಗೂ ಬದುಕನ್ನು ಸೆರೆಹಿಡಿಯಲಾಗಿದೆ. ಇದರ ಪರಿಣಾಮವಾಗಿ ಅಂತರ್‌ರಾಷ್ಟ್ರೀಯ ಗುಣಮಟ್ಟದಲ್ಲಿ ಈ ಸಾಕ್ಷಚಿತ್ರ ಹೊರ ಬಂದಿದೆ. ಇದರಲ್ಲಿ ಡಾ.ಪೃಥ್ವಿರಾಜ್ ಉಮೇಶ್, ಡ್ರೋನ್ ಕ್ಯಾಮರಾದ ಮೂಲಕ ಏರಿಯಲ್ ಚಿತ್ರೀಕರಣ ಮಾಡಿದ್ದಾರೆ.
ಸುಮಾರು 100 ನಿಮಿಷಗಳ ಈ ಸಾಕ್ಷಚಿತ್ರವನ್ನು ಸಮ್ಮಿಲನ್ ಶೆಟ್ಟಿ ಒಬ್ಬರೇ ಸಂಪೂರ್ಣ ಚಿತ್ರೀಕರಣ ಮಾಡಿ ರುವು ದಾಗಿದೆ. ಆಂಗ್ಲ ಭಾಷೆಯಲ್ಲಿರುವ ಈ ಸಾಕ್ಷಚಿತ್ರಕ್ಕೆ ಹಿನ್ನೆಲೆಯ ಧ್ವನಿಯನ್ನು ಭಾಸ್ಕರ್ ಗೌರಿಬಿದನೂರು ನೀಡಿದ್ದಾರೆ. ಸಾಕ್ಷಚಿತ್ರವನ್ನು ಅತ್ಯಂತ ಸುಂದರವಾಗಿ ಜಾಯ್ ಡಿಕೋಸ್ತ ಹಾಗೂ ಬಾಬು ಎಡಿಟಿಂಗ್ ಮಾಡಿದ್ದಾರೆ. ಮಹೇಶ್ ನಾಯಕ್ ಕಂಟೆಂಟ್ ಸ್ಕ್ರಿಪ್ಟ್ ರಚಿಸಿದ್ದಾರೆ. ಚಿಟ್ಟೆಗಳ ಬದುಕಿನ ಪಯಣ: ಈ ಸಾಕ್ಷಚಿತ್ರದಲ್ಲಿ ಬಹಳ ಮುಖ್ಯವಾಗಿ ಕರ್ನಾಟಕದ ರಾಜ್ಯ ಚಿಟ್ಟೆಯಾಗಿರುವ ‘ಸದರ್ನ್ ಬರ್ಡ್‌ವಿಂಗ್’ ಹಾಗೂ ಪಶ್ಚಿಮಘಟ್ಟದಲ್ಲಿ ಸ್ಥಳೀಯವಾಗಿ ಮಾತ್ರ ಕಂಡುಬರುವ ಅತ್ಯಂತ ಸುಂದರ ಚಿಟ್ಟೆಯಾಗಿರುವ ‘ಮಲಬಾರ್ ಬ್ಯಾಂಡೆಂಡ್ ಪಿಕಾಕ್’ ಇವುಗಳ ಜೀವನ ಚಕ್ರದ ಮೇಲೆ ಬೆಳಕು ಚೆಲ್ಲಲಾಗಿದೆ.
ಚಿಟ್ಟೆಗಳಲ್ಲಿ ಅತ್ಯಂತ ದೊಡ್ಡ ಗಾತ್ರದ ರೆಕ್ಕೆಗಳನ್ನು ಹೊಂದಿ ರುವ ಸದರ್ನ್ ಬರ್ಡ್‌ವಿಂಗ್, ಹೆಣ್ಣು ಚಿಟ್ಟೆಯನ್ನು ಅರಸಿ ಕೊಂಡು ಬಂದು ಮಿಲನದಲ್ಲಿ ತೊಡಗಿಸಿಕೊಳ್ಳುವುದು, ನಂತರ ತನ್ನ ಆತಿಥೇಯ ಸಸ್ಯವಾಗಿರುವ ಈಶ್ವರ ಬಳ್ಳಿಯನ್ನು ಹುಡುಕಿಕೊಂಡು ಅದರಲ್ಲಿ ಮೊಟ್ಟೆ ಇಡುವುದು, ಆ ಮೊಟ್ಟೆ ಒಡೆದು ಬರುವ ಲಾರ್ವ(ಹುಳ) ಬಳ್ಳಿಯ ಎಲೆಗಳನ್ನು ತಿಂದು ಕೋಶಾವಸ್ಥೆಗೆ ಹೋಗುವುದು ಮತ್ತು ಆ ಕೋಶದೊಳಗೆ ರೂಪಾಂತರಗೊಂಡು ಬೆಳೆದ ಚಿಟ್ಟೆ ಯಾಗಿ ಸುಂದರವಾಗಿ ಹೊರಬರುವ ದೃಶ್ಯಗಳನ್ನು ಈ ಸಾಕ್ಷಚಿತ್ರದಲ್ಲಿ ಅತ್ಯಂತ ಮನೋಜ್ಞವಾಗಿ ತೋರಿಸಲಾಗಿದೆ.
ಅದೇ ರೀತಿ ಮಲಬಾರ್ ಬ್ಯಾಂಡೆಂಡ್ ಪಿಕಾಕ್ ಚಿಟ್ಟೆಯ ಜೀವನ ಚಕ್ರವನ್ನು ಕೂಡ ದಾಖಲಿಸಲಾಗಿದೆ. ಅಲ್ಲದೆ ವಿವಿಧ ಪ್ರಭೇದಗಳ ಚಿಟ್ಟೆಗಳು ಮತ್ತು ಅದರ ಕಂಬಳಿಹುಳ ಎದುರಿಸುವ ಸವಾಲುಗಳು, ವೈರಿಗಳಿಂದ ರಕ್ಷಣೆ, ಆಹಾರ ಸೇವನೆ, ಮಣ್ಣಿನಲ್ಲಿನ ಲವಣಾಂಶ ಸೇವನೆ, ಮೊಟ್ಟೆ ಇಡುವ ಪ್ರಕ್ರಿಯೆ, ಕೋಶ ರಚಿಸುವ ರೀತಿ ಮತ್ತು ಇತರ ಕೀಟ, ಪಕ್ಷಿಗಳಿಗೆ ಆಹಾರವಾಗುವ ಕ್ಷಣಗಳನ್ನು ಕಣ್ಣ ಮುಂದೆ ಕಟ್ಟುವಂತೆ ಚಿತ್ರೀಕರಿಸಲಾಗಿದೆ.
ಹುಲ್ಲಿನಲ್ಲಿ ಮೊಟ್ಟೆ ಇಡುವ ಕ್ಷಣ ಜಗತ್ತಿನಲ್ಲೇ ಪ್ರಥಮ ದಾಖಲೆ
ಪ್ರತಿಯೊಂದು ಪ್ರಭೆೇದದ ಚಿಟ್ಟೆಗಳು ಕೂಡ ತನ್ನ ಆತಿಥೇಯ ಸಸ್ಯಗಳಲ್ಲಿ ಮೊಟ್ಟೆಗಳನ್ನು ಇಡುವುದು ಸಾಮಾನ್ಯ. ಆದರೆ ಕೆಲವೊಂದು ಬಾರಿ ವೈರಿಗಳಿಂದ ರಕ್ಷಿಸಿಕೊಳ್ಳಲು ಆತಿಥೇಯ ಸಸ್ಯಗಳ ಸಮೀಪದಲ್ಲೇ ಇರುವ ಇತರ ಜಾತಿಯ ಸಸ್ಯ ಅಥವಾ ಮರಗಳಲ್ಲಿಯೂ ಮೊಟ್ಟೆಗಳನ್ನು ಇಡುವುದು ಕೂಡ ದಾಖಲಾಗಿದೆ.
ಇಲ್ಲಿ ಸದರ್ನ್ ಬರ್ಡ್‌ವಿಂಗ್ ವೈರಿಯಿಂದ ತನ್ನ ಮೊಟ್ಟೆಗಳನ್ನು ರಕ್ಷಿಸಿ ಕೊಳ್ಳಲು ಹುಲ್ಲಿನ ಮೇಲೆ ಮೊಟ್ಟೆ ಇಡುವುದನ್ನು ಸಮ್ಮಿಲನ್ ಶೆಟ್ಟಿ ತನ್ನ ಕ್ಯಾಮರಾದ ಮೂಲಕ ಚಿತ್ರೀಕರಣ ಮಾಡಿದ್ದಾರೆ. ಹುಲ್ಲು ತನ್ನ ಭಾರವನ್ನು ಹೊತ್ತುಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಅರಿತುಕೊಳ್ಳುವ ಸದರ್ನ್ ಬರ್ಡ್‌ವಿಂಗ್ ಹುಲ್ಲಿನ ಮೇಲೆ ಕುಳಿತುಕೊಳ್ಳದೆ ಗಾಳಿಯಲ್ಲಿ ಹಾರಾಡುತ್ತಲೇ ಮೊಟ್ಟೆಯನ್ನು ಚಿಮ್ಮಿಸಿ ಮೊಟ್ಟೆ ಇಡುವ ಅಪರೂಪದ ದೃಶ್ಯ ಇದರಲ್ಲಿದೆ. ಇದು ಇಡೀ ಜಗತ್ತಿನಲ್ಲೇ ಕಂಡುಕೊಂಡ ಮೊತ್ತ ಮೊದಲ ಮಾಹಿತಿ ಹಾಗೂ ದಾಖಲೀಕರಣ ಆಗಿದೆ ಎನ್ನುತ್ತಾರೆ ಸಮ್ಮಿಲನ್ ಶೆಟ್ಟಿ.
► ಸೆರೆ ಹಿಡಿದ ಅಪರೂಪದ ದೃಶ್ಯಗಳು!
ಚಿಟ್ಟೆಗಳ ಸಮಗ್ರ ಜೀವನದ ಕುರಿತ ದೇಶದ ಪ್ರಥಮ ಸಾಕ್ಷಚಿತ್ರ ಎಂಬ ಖ್ಯಾತಿಗೆ ಒಳಪಟ್ಟಿರುವ ಇದರಲ್ಲಿ ಚಿಟ್ಟೆಗಳ ಹಲವು ವಿಶೇಷತೆಗಳನ್ನು ದಾಖಲಿಸಿ ಕೊಳ್ಳಲಾಗಿದೆ. ಮಲಬಾರ್ ಬ್ಯಾಂಡೆಡ್ ಸ್ವಲೋಟೈಲ್ ಚಿಟ್ಟೆಯು ಮೊತ್ತ ಮೊದಲ ದಾಖಲೆ ಎಂಬಂತೆ ಸಿಟ್ರಸ ಮೆಡಿಕ ಎಂಬ ಸಸ್ಯದ ಎಲೆಗಳಲ್ಲಿ ಒಂದರ ಮೇಲೊಂದರಂತೆ ಮೊಟ್ಟೆಗಳನ್ನು ಇಡುವುದನ್ನು ಚಿತ್ರೀಕರಿಸಲಾಗಿದೆ. ಅದೇ ರೀತಿ ಬ್ಲೂ ನವಾಬ್ ಚಿಟ್ಟೆಯು ಹಣ್ಣಿನ ರಸ ಹೀರುತ್ತಿರುವಾಗ ತನ್ನ ಕಾಲಿನಿಂದ ಕೆಂಪಿರುವೆಯನ್ನು ಒದ್ದೋಡಿಸುವ ದೃಶ್ಯಗಳನ್ನು ಕೂಡ ಅದ್ಭುತವಾಗಿ ಸೆರೆಹಿಡಿಯಲಾಗಿದೆ.