ಯಡಿಯೂರಪ್ಪಗೆ 'ಪಕ್ಷ ನಿಷ್ಠೆ'ಯ ಉಪದೇಶ ನೀಡಿದರೇ ಈಶ್ವರಪ್ಪ ?
ಶಿವಮೊಗ್ಗ, ಸೆ. 28: ಒಂದೆಡೆ ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರನ್ನು ಪಕ್ಷದ ಆಯಕಟ್ಟಿನ ಹುದ್ದೆಗಳಿಂದ ತೆಗೆಯುತ್ತಿದ್ದಾರೆ. ಇನ್ನೊಂದೆಡೆ ಬಿಎಸ್‍ವೈ, ತಮ್ಮ ಆಪ್ತರಿಗೆ ಸರಕಾರದಲ್ಲಿ ಮಣೆ ಹಾಕುತ್ತಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಶನಿವಾರ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪರ 'ಪಕ್ಷ ನಿಷ್ಠೆ' ಹೇಳಿಕೆಯು, ಬಿಎಸ್‍ವೈ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿರುವುದು ಕುತೂಹಲ ಮೂಡಿಸಿದೆ.
ಕಟೀಲ್‍ರವರು ಬಿಎಸ್‍ವೈ ಆಪ್ತರಾದ ಬಿ.ಜೆ.ಪುಟ್ಟಸ್ವಾಮಿ ಹಾಗೂ ಶಂಕರಗೌಡ ಪಾಟೀಲರನ್ನು, ಪಕ್ಷದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ್ದರು. ಈ ನಡುವೆ ಬಿ.ಜೆ.ಪುಟ್ಟಸ್ವಾಮಿಗೆ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಹಾಗೂ ಶಂಕರಗೌಡ ಪಾಟೀಲರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿ ಸಿಎಂ ಬಿಎಸ್‍ವೈ ಆದೇಶಿಸಿದ್ದಾರೆ.
ಇದು ಬಿಜೆಪಿಯಲ್ಲಿ, ಪಕ್ಷ - ಸರ್ಕಾರದ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ವೇಳೆ ಕೆ.ಎಸ್.ಈಶ್ವರಪ್ಪ ನೀಡಿದ 'ಪಕ್ಷ ನಿಷ್ಠೆ' ಹೇಳಿಕೆಯು, ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿಸಿದೆ. ಈಶ್ವರಪ್ಪ ಹೇಳಿಕೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಬಿಎಸ್‍ವೈರವರೇ ಟಾರ್ಗೆಟ್ ಆಗಿರುವುದು ಕಂಡುಬರುತ್ತದೆ.
ಪಕ್ಷ ಮೊದಲು: 'ಯಾವುದೇ ವ್ಯಕ್ತಿಗೆ ಸ್ಥಾನಮಾನ ಶಾಶ್ವತರಲ್ಲ. ಇದು ತಮಗಿರಬಹುದು. ಇಲ್ಲ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪಗಿರಬಹುದು. ಅವರು ಸಿಎಂ ಆಗಿದ್ದಾಗ, ಸ್ಥಾನಮಾನ ಸಿಕ್ಕಾಗ ಪಕ್ಷದ ಜೊತೆ ಯಾವ ರೀತಿ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುವುದು ಮುಖ್ಯವಾಗುತ್ತದೆ'.
ಸರ್ವಾಧಿಕಾರಿ ನಿಲುವುಗಳಿಂದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು, ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಕೂಡ ನಾಶವಾಯಿತು. ಇದು ಎಲ್ಲರಿಗೂ ಪಾಠ. ಇದನ್ನು ಬರೀ ತಾವು ಸಿದ್ದರಾಮಯ್ಯಗೆ ಹೇಳಲು ಬಯಸುವುದಿಲ್ಲ. ಯಾವುದೇ ವ್ಯಕ್ತಿ ಪಕ್ಷದ ಸಹಕಾರವಿಲ್ಲದೆ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟಿ ಎಷ್ಟು ಸೀಟು ತೆಗೆದುಕೊಂಡರು. ಸಂಘಟನೆ ಮೀರಿ ಬೆಳೆಯಲು ಹೋದವರ ಯಶಸ್ಸು ತಾತ್ಕಾಲಿಕ. ಯಾವುದೇ ಲಾಭವಾಗುವುದಿಲ್ಲ. ಅಧಿಕಾರದಲ್ಲಿದ್ದಾಗ ಪಕ್ಷಕ್ಕೆ ಏನು ಕೆಲಸ ಮಾಡಿದೆ ಎಂಬುವುದು ಮುಖ್ಯ. ಆಗ ಪಕ್ಷದ ಜೊತೆ ಬೆಳೆಯಲು ಸಾಧ್ಯ' ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಎಸ್‍ವೈ ಗುರಿ: ಪ್ರಸ್ತುತ ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿದರೆ, ಕೆಎಸ್‍ಈ ಹೇಳಿಕೆಯು ಬಿಎಸ್‍ವೈ ಸುತ್ತಲೇ ಗಿರಕಿ ಹೊಡೆಯುತ್ತಿರುವುದು ಸ್ಪಷ್ಟವಾಗುತ್ತದೆ. ನಳೀನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾದ ನಂತರ ಪಕ್ಷದ ಮೂಲ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ವಿಶೇಷವಾಗಿ ಬಿಎಸ್‍ವೈ ಆಪ್ತರನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ಹೊರಗಿಡುತ್ತಿದ್ದಾರೆ. ಇದು ಸಹಜವಾಗಿಯೇ ಬಿಎಸ್‍ವೈರ ಕಣ್ಣು ಕೆಂಪಗಾಗಿಸಿದೆ.
ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದ ಹುದ್ದೆಗೇರುವಲ್ಲಿ, ಆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪಾತ್ರ ಮುಖ್ಯವಾದದ್ದು. ಮೊದಲಿನಿಂದಲೂ ಈಶ್ವರಪ್ಪ ಕೂಡ ಬಿ.ಎಲ್.ಸಂತೋಷ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಟೀಲ್ ಅಧ್ಯಕ್ಷರಾಗುತ್ತಿದ್ದಂತೆ, ಶಿವಮೊಗ್ಗದ ತಮ್ಮ ಆಪ್ತ ಹಾಗೂ ಈ ಹಿಂದೆ ಬಿಎಸ್‍ವೈ ವಿರುದ್ಧ ಬಹಿರಂಗವಾಗಿ ಸಿಡಿದಿದ್ದ ಎಂ.ಬಿ.ಭಾನುಪ್ರಕಾಶ್‍ಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಈಶ್ವರಪ್ಪ ಸಫಲರಾಗಿದ್ದರು. ಇದೀಗ ಈಶ್ವರಪ್ಪರವರು, ಸಿದ್ದರಾಮಯ್ಯರನ್ನು ನೆಪವಾಗಿಟ್ಟುಕೊಂಡು ಬಿಎಸ್‍ವೈಗೆ ಪರೋಕ್ಷವಾಗಿ ಪಕ್ಷ ನಿಷ್ಠೆಯ ಉಪದೇಶದ ಮಾತುಗಳನ್ನಾಡಿದ್ದಾರೆ. ಪಕ್ಷ ಕಟ್ಟಿ ಎಷ್ಟು ಸೀಟುಗಳನ್ನು ಯಡಿಯೂರಪ್ಪ ಪಡೆದುಕೊಂಡಿದ್ದರು ಎಂದು ಕೂಡ ನೆನಪಿಸಿದ್ದಾರೆ.
ಒಟ್ಟಾರೆ ಈಶ್ವರಪ್ಪ ಹೇಳಿಕೆಯು, ಬಿಜೆಪಿ ಪಾಳಯದಲ್ಲಿ ಹಲವು ರೀತಿಯ ಚರ್ಚೆಗೆಡೆ ಮಾಡಿಕೊಟ್ಟಿದೆ. ಬಿಎಸ್‍ವೈ-ಈಶ್ವರಪ್ಪ ನಡುವೆ ಮತ್ತೊಂದು ಸುತ್ತಿನ ಹಣಾಹಣಿಗೂ ಇದು ಕಾರಣವಾಗಲಿದೆಯಾ? ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಬಿಎಸ್‍ವೈ-ಕೆಎಸ್‍ಈ ವೈಮನಸ್ಸಿಗೆ ದಶಕದ ಇತಿಹಾಸ!
ಒಂದಾನೊಂದು ಕಾಲದಲ್ಲಿ ಆತ್ಮೀಯರಾಗಿದ್ದ, ರಾಮ-ಲಕ್ಷ್ಮಣ ಬಿರುದಾಂಕಿತರಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವಿನ ವೈಮನಸ್ಸು-ಜಟಾಪಟಿಗೆ ದಶಕದ ಇತಿಹಾಸವಿದೆ. 2009 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿಎಂ ಆಗಿದ್ದ ಬಿಎಸ್‍ವೈ ಮತ್ತು ಸಚಿವರಾಗಿದ್ದ ಈಶ್ವರಪ್ಪ ನಡುವೆ ದೊಡ್ಡ ಜಟಾಪಟಿಯೇ ನಡೆದಿತ್ತು. ಬಹಿರಂಗವಾಗಿಯೇ ಇಬ್ಬರು ನಾಯಕರು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಬಿಎಸ್‍ವೈ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ನಂತರವಂತೂ ಇಬ್ಬರ ನಡುವಿನ ವೈಮನಸ್ಸು ಹೆಮ್ಮರವಾಗಿ ಬೆಳೆದಿತ್ತು.
2014 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಸೋಲಿಗೂ ಕಾರಣವಾಗಿತ್ತು. ಬಿಎಸ್‍ವೈ ಬಿಜೆಪಿ ಮರು ಪ್ರವೇಶದ ನಂತರ ಈ ಇಬ್ಬರು ನಾಯಕರ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿತ್ತು. ನಂತರ ಈ ಇಬ್ಬರು ನಾಯಕರ ಬೆಂಬಲಿಗರು ನಾನಾ ಸಂದರ್ಭಗಳಲ್ಲಿ ಪರಸ್ಪರ ಟೀಕಿಸಿಕೊಳ್ಳುತ್ತಿದ್ದರು. 2019 ರಲ್ಲಿ ಬಿಎಸ್‍ವೈ ಮತ್ತೆ ಸಿಎಂ ಆಗಿದ್ದಾರೆ. ಈಶ್ವರಪ್ಪ ಸಚಿವರಾಗಿದ್ದಾರೆ. ಪ್ರಸ್ತುತ ಬಿಜೆಪಿ ಸರ್ಕಾರ ಹಾಗೂ ಪಕ್ಷದಲ್ಲಿನ ವಿದ್ಯಮಾನ ಗಮನಿಸಿದರೆ, ಈ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಮತ್ತೆ ಭುಗಿಲೇಳಲಿದೆಯಾ? ವೈಮನಸ್ಸಿನ ಇತಿಹಾಸ ಮರುಕಳಿಸಲಿದೆಯಾ? ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.