ರಾಜ್ಯದ ಅಂಗನವಾಡಿಗಳಲ್ಲಿ ಆರಂಭವಾಗಲಿದೆ ಹೈಟೆಕ್ 'ಇ-ಹಾಜರಾತಿ'
ಕಾರ್ಯಕರ್ತೆಯರ ಕೈ ಸೇರಲಿದೆ ಸ್ಮಾರ್ಟ್ ಮೊಬೈಲ್ ಫೋನ್
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಸೆ. 28: ಎಲ್ಲ ಅಂದುಕೊಂಡಂತೆ ನಡೆದರೆ ಶೀಘ್ರವೇ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಹೈಟೆಕ್ 'ಇ-ಹಾಜರಾತಿ' ವ್ಯವಸ್ಥೆ ಆರಂಭವಾಗಲಿದೆ. ಕಾರ್ಯಕರ್ತೆಯರಿಗೆ ಅತ್ಯಾಧುನಿಕ 'ಸ್ಮಾರ್ಟ್ ಮೊಬೈಲ್ ಫೋನ್' ಕೂಡ ಲಭ್ಯವಾಗಲಿದೆ.
ಅಂಗನವಾಡಿ ಆಡಳಿತದಲ್ಲಿ ಸರ್ವಾಂಗೀಣ ಸುಧಾರಣೆಗೆ, ಮಕ್ಕಳು-ಮಹಿಳೆಯರಿಗೆ ಕೇಂದ್ರ-ರಾಜ್ಯ ಸರ್ಕಾರಗಳ ಸೌಲಭ್ಯ ಪರಿಣಾಮಕಾರಿಯಾಗಿ ತಲುಪಿಸುವುದು ಹಾಗೂ ಪ್ರಸ್ತುತ ಕೇಳಿಬರುತ್ತಿರುವ ನಾನಾ ಆರೋಪಗಳಿಗೆ ಪೂರ್ಣ ಪ್ರಮಾಣದಲ್ಲಿ ಇತಿಶ್ರೀ ಹಾಕಲು, 'ಪೋಷಣ್ ಅಭಿಯಾನ'ದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತಂತ್ರಾಂಶ ಆಧಾರಿತ 'ಜಿಯೋ ಟ್ಯಾಗ್' ವ್ಯವಸ್ಥೆ ಅನುಷ್ಠಾನಕ್ಕೆ ಮುಂದಾಗಿದೆ.
ಇದರಡಿ ಮೊಬೈಲ್ ಫೋನ್ ಮೂಲಕವೇ, ಅಂಗನವಾಡಿಗಳ ಸಮಗ್ರ ಮೇಲುಸ್ತುವಾರಿ ನಿರ್ವಹಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಪ್ರತಿಯೊಂದು ಅಂಗನವಾಡಿ ವ್ಯಾಪ್ತಿಗಳಲ್ಲಿ, ದತ್ತಾಂಶ ಸಂಗ್ರಹ ಕಾರ್ಯ ಭರದಿಂದ ನಡೆಯುತ್ತಿದೆ. ವ್ಯಾಪಕ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಏನೀದು ವ್ಯವಸ್ಥೆ?: ಬೆಳಗ್ಗೆ ಕೇಂದ್ರದ ಬಾಗಿಲು ತೆರೆಯುವ ಮುನ್ನ, ಮೊಬೈಲ್ ಫೋನ್ನಲ್ಲಿ ಆ್ಯಪ್ ಮೂಲಕ ಫೋಟೋ ತೆಗೆಯಬೇಕು. ಮಕ್ಕಳ ಫೋಟೋ (ಫೇಸ್ ರೆಕಗ್ನಿಶನ್) ತೆಗೆಯುವ ಮೂಲಕ ಹಾಜರಾತಿ ಹಾಕಲಾಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಆಹಾರ ಸಾಮಗ್ರಿ ವೆಚ್ಚವಾಗಿದೆ-ಉಳಿದುಕೊಂಡಿದೆ ಎಂಬುವುದರ ವಿವರ ಆ್ಯಪ್ನಲ್ಲಿ ಕ್ಷಣಮಾತ್ರದಲ್ಲಿ ಲಭಿಸಲಿದೆ.
ಆಯಾ ಅಂಗನವಾಡಿ ವ್ಯಾಪ್ತಿಗಳಲ್ಲಿರುವ ಗರ್ಭೀಣಿಯರು ಹಾಗೂ ಅವರಿಗೆ ನೀಡಲಾಗುವ ಪೌಷ್ಠಿಕಾಂಶದ ವಿವರದ ಮಾಹಿತಿಯೂ ಇದರಲ್ಲಿರಲಿದೆ. ಕಾರ್ಯಕರ್ತೆಯರು ಅವರ ಮನೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರಾ? ಅವರಿಗೆ ಸೌಲಭ್ಯ ವಿತರಿಸುತ್ತಿದ್ದಾರಾ? ಎಂಬುವುದರ ವಿವರವು ಭಾವಚಿತ್ರದ ಸಮೇತ ಆ್ಯಪ್ನಲ್ಲಿ ದಾಖಲಾಗಲಿದೆ. ಸ್ಥಳ, ಸಮಯವೂ ದಾಖಲಾಗಲಿದೆ.
ಮೊಬೈಲ್ ಫೋನ್ನಲ್ಲಿ ಸಮಗ್ರ ಮಾಹಿತಿಯನ್ನೊಳಗೊಂಡ ಆ್ಯಪ್ ಇರಲಿದೆ. ಡೇಟಾದ ಜೊತೆಗೆ ಜಿಪಿಎಸ್ ತಂತ್ರಾಂಶವಿರಲಿದೆ. ಈ ಮೊಬೈಲ್ ಮೂಲಕ ತೆಗೆಯಲಾಗುವ ಫೋಟೋಗಳಲ್ಲಿ ಸ್ಥಳ, ಅಕ್ಷಾಂಶ-ರೇಖಾಂಶ, ಸಮಯದ ವಿವರಗಳು ಲಭ್ಯವಾಗಲಿವೆ. ಅತ್ಯಂತ ಸುಲಭವಾಗಿ ಮೊಬೈಲ್ ಆಪರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸಹಕಾರಿ: ಈ ವ್ಯವಸ್ಥೆಯಿಂದ ಅಂಗನವಾಡಿಗಳಿಗೆ ಪ್ರತಿನಿತ್ಯ ಆಗಮಿಸುವ ಮಕ್ಕಳ ವಿವರ ಹಾಗೂ ವ್ಯಯವಾದ ಆಹಾರ ಸಾಮಗ್ರಿ, ಉಳಿಕೆಯ ವಿವರದ ಮಾಹಿತಿ ಲಭ್ಯವಾಗಲಿದೆ. ಇದರಿಂದ ಸುಳ್ಳು ಹಾಜರಾತಿ ಸೃಷ್ಟಿಸಿ ಆಹಾರ ಸಾಮಗ್ರಿಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳಿಗೂ ಕಡಿವಾಣ ಬೀಳಲಿದೆ.
ನಿಗದಿತ ಸಮಯಕ್ಕೆ ಕಾರ್ಯಕರ್ತೆ-ಸಹಾಯಕಿಯರು ಕೇಂದ್ರಕ್ಕೆ ಆಗಮಿಸಿ, ಆ್ಯಪ್ನಲ್ಲಿ ಪೋಟೋ ಅಪ್ಲೋಡ್ ಮಾಡಬೇಕಾಗಿದೆ. ಒಂದು ವೇಳೆ ತಡವಾದರೆ, ಅದರ ಮಾಹಿತಿ ಆ್ಯಪ್ನಲ್ಲಿ ದಾಖಲಾಗಲಿದೆ. ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗೆ ಮಾಹಿತಿ ನೀಡಬೇಕಾಗುತ್ತದೆ. ಹಾಗೆಯೇ ಗರ್ಭೀಣಿಯರಿರುವ ಸ್ಥಳಕ್ಕೆ ಖುದ್ದು ತೆರಳಿ ಸೌಲಭ್ಯ ವಿತರಣೆಯಾಗಲಿದೆ.
ಅಂಗನವಾಡಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆಯು ಆ್ಯಪ್ನಲ್ಲಿ ದಾಖಲಾಗುವುದರಿಂದ ಕಾರ್ಯಕರ್ತೆಯರಿಗೆ ನಾನಾ ದಾಖಲಾತಿ ಸಿದ್ಧಪಡಿಸುವ ಸಂಕಷ್ಟವು ತಪ್ಪಲಿದೆ. ಒಟ್ಟಾರೆ ನೂತನ ವ್ಯವಸ್ಥೆಯ ಬಗ್ಗೆ ಕಾರ್ಯಕರ್ತೆಯರ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದು ಯಾವ ರೀತಿ ಬದಲಾವಣೆ ತರಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
'ಸಾಕಷ್ಟು ಅನುಕೂಲವಾಗಲಿದೆ: ಸಚಿವೆ ಶಶಿಕಲಾ ಜೊಲ್ಲೆ
ಸರ್ಕಾರಿ ಕಚೇರಿಗಳಲ್ಲಿ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿರುವ ಹಾಗೆ, ಅಂಗನವಾಡಿಗಳಲ್ಲಿ ಮಕ್ಕಳ ಮುಖ ಚಹರೆ ಗುರುತಿಸಿ ಹಾಜರಾತಿ ಹಾಕುವ ತಾಂತ್ರಿಕ ವ್ಯವಸ್ಥೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಸೂಕ್ತ ರೀತಿಯಲ್ಲಾಗಲಿದೆ. ದುರ್ಬಳಕೆಯ ಆರೋಪಗಳಿಗೆ ಕಡಿವಾಣ ಬೀಳಲಿದೆ' ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರು ಇತ್ತೀಚೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು.
ಸಮಗ್ರ ಮಾಹಿತಿ ಸಂಗ್ರಹ: ಶಿವಮೊಗ್ಗ ಸಿಡಿಪಿಓ ಚಂದ್ರಪ್ಪ
ಶಿವಮೊಗ್ಗ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಜಿಯೋ ಟ್ಯಾಗ್ ವ್ಯವಸ್ಥೆ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭರದಿಂದ ದತ್ತಾಂಶ ಕಲೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ 22 ಅಂಗನವಾಡಿಗಳಿವೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ತಾಲೂಕು ಪಂಚಾಯತ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾ.ಪಂ. ಸಾಮಾನ್ಯ ಸಭೆಯಲ್ಲಿಯೂ ಈ ವಿಷಯ ಚರ್ಚೆಯಾಗಿದೆ. ಆದಷ್ಟು ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಅಂಗನವಾಡಿಗಳಲ್ಲಿ ಜಿಯೋ ಟ್ಯಾಗ್ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಕೈ ಬೆರಳ ತುದಿಯಲ್ಲಿಯೇ ಅಂಗನವಾಡಿಯ ದತ್ತಾಂಶ ಲಭ್ಯವಾಗಲಿದೆ' ಎಂದು ಶಿವಮೊಗ್ಗ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಚಂದ್ರಪ್ಪರವರು ಮಾಹಿತಿ ನೀಡುತ್ತಾರೆ.
ಬೆಂಗಳೂರು, ತುಮಕೂರಲ್ಲಿ ತರಬೇತಿ : ನಿರ್ದೇಶಕ ಕೆ.ಎ.ದಯಾನಂದ್
ಅಂಗನವಾಡಿಗಳಲ್ಲಿ ಇ-ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಲಾಗುವುದು. ಮೊಬೈಲ್ ಆ್ಯಪ್ ಬಳಕೆ ಮಾಡುವುದು ಹೇಗೆಂಬುವುದರ ಬಗ್ಗೆ ಕೂಲಂಕಷ ಮಾಹಿತಿ ನೀಡಲಾಗುವುದು. ಈಗಾಗಲೇ ಬೆಂಗಳೂರಿನ ಯಲಹಂಕ ಹಾಗೂ ತುಮಕೂರು ತಾಲೂಕುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು' ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಕೆ.ಎ.ದಯಾನಂದ್ರವರು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.