ಸೆಕ್ಯುಲರ್ ಸೇನಾನಿ ಸುಭಾಷ್...
ಸುಭಾಷರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಮತ್ತು ಅನುಮಾನಪಡುವ ಮನಸ್ಥಿತಿಗೆ ಕಿರು ಕೃತಿಯಲ್ಲಿ ಉತ್ತರವಿದೆ. ಬ್ಯಾಂಕಾಂಕ್‌ನಿಂದ ಸುಭಾಷರು ಮಾಡಿದ ಬಾನುಲಿ ಭಾಷಣವೂ ಕೃತಿಯಲ್ಲಿದೆ. ಸುಭಾಷರು ಮುಸ್ಲಿಂ ಪಕ್ಷಪಾತಿ ಆಗಿದ್ದರು ಎಂದು ಆರೋಪಿಸುವವರು ಇಂಡಿಯನ್ ನ್ಯಾಶನಲ್ ಆರ್ಮಿಯ ಚಿಹ್ನೆ ನೆಗೆಯುತ್ತಿರುವ ಹುಲಿ ಟಿಪ್ಪ್ಪುಸುಲ್ತಾನರ ಸೇನೆಯಿಂದ ಪಡೆದುಕೊಂಡಿದ್ದಾರೆ ಎನ್ನುತ್ತಾರೆ. ಆ ವಿಚಾರವಾಗಿಯೂ ಲೇಖಕರು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.
ಭಾರತದ ಚರಿತ್ರೆಯಲ್ಲಿ ಸುಭಾಶ್ಚಂದ್ರ ಭೋಸರದ್ದು ಎದ್ದು ಕಾಣುವ ವ್ಯಕ್ತಿತ್ವ. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕತ್ವ ವಹಿಸಿ, ವಸಾಹತು ಶಾಹಿತ್ವದ ವಿರುದ್ಧದ ಧ್ವನಿಯಾಗಿದ್ದವರು. ಭೋಸರ ಬದುಕು ನಿರಂತರ ಹೋರಾಟಕ್ಕಿರುವ ಒಂದು ನಿದರ್ಶನ. ಇನ್ನು ಕ್ರಾಂತಿಕಾರಿ ಭೋಸರ ಇತಿಹಾಸ ದಾಖಲೆಗಳು ಇಂದಿಗೂ ಅಸ್ಪಷ್ಟವಾಗಿಯೇ ಉಳಿದಿದೆ. ಅವರ ಕೆಲವು ದಾಖಲೆಗಳು ಹೀಗೆ ಅಂತ ಪಕ್ಕಾ ಹೇಳಲು ಬರುವುದಿಲ್ಲ. ಪರ ವಿರೋಧದ ಚರ್ಚೆಯೇ ಸುಭಾಷರ ಸಾವಿನೊಟ್ಟಿಗೆ ಹುಟ್ಟು ಪಡೆದಿದೆ.
ಸುಭಾಷರು ಭಾರತೀಯ ತರುಣರನ್ನು ಬ್ರಿಟಿಷ್ ಆಧಿಪತ್ಯದ ವಿರುದ್ಧ ಎತ್ತಿ ಕಟ್ಟಿ, ವಿದೇಶದಲ್ಲಿ ಸೈನ್ಯ ಸಂಘಟಿಸಿ ತನ್ನ ದಾಖಲೆಯನ್ನು ಅಜ್ಞಾತವಾಗಿ ಉಳಿಸಿಹೋಗಿದ್ದಾರೆ. ಬಿ.ಎಂ.ಹನೀಫ್ ಅವರು ಸುಭಾಷರ ಬದುಕನ್ನು, ಹೋರಾಟದ ಕಿಚ್ಚನ್ನು, ಅವರ ಅಂತರ್ಯದ ಹಿಮ್ಮತ್ತನ್ನು ಸೆಕ್ಯುಲರಿಸಂ ಸರಣಿಯ ಮೊದಲ ಪುಸ್ತಕವಾಗಿ ರಚಿಸಿದ್ದಾರೆ. ಸುಭಾಷರ ಬದುಕು, ತತ್ವಗಳಿಗೆ ಬಿ. ಎಂ. ಅಕ್ಷರ ರೂಪ ಕೊಟ್ಟಿದ್ದಾರೆ. ಗಾಂಧಿ ಮತ್ತು ಸುಭಾಷರ ನಡುವಿನ ಭಿನ್ನಾಭಿಪ್ರಾಯ, ಸುಭಾಷ್ ಅವರಿಗೆ ಗಾಂಧಿಯೊಂದಿಗಿದ್ದ ಅಭಿಮಾನ, ಗೌರವದ ಬಗೆಯೆಲ್ಲಾ ಕೃತಿ ಮಾತಾಡುತ್ತದೆ. ಸೆಕ್ಯುಲರಿಸಂ ಅನ್ನುವ ಪದ ಇಂದು ಭಾರತದ ನಿತ್ಯ ಚರ್ಚೆಯ ವಸ್ತು. ದೇಶದ ಬಹುತ್ವದ ಮೂಲ ಆಶಯವಾಗಿರುವ ಸೆಕ್ಯುಲರಿಸಂ ಇಂದು ಅಳಿದು ಹೋಗುವ ಭೀತಿಯಲ್ಲಿದೆ. ಜಾತಿ, ಧರ್ಮ, ಭಾಷೆ, ರಾಜ್ಯ ಹೀಗೆ ವಿಷಯವಾರು ವಿಚಾರಗಳಿಗೆ ಬಡಿದಾಡಿಕೊಳ್ಳುವ ದುರಂತ ಸನ್ನಿವೇಶದಲ್ಲಿ ಸೆಕ್ಯುಲರಿಸಂ ದುರ್ಬಲಗೊಳ್ಳುತ್ತಾ ಸಾಗುತ್ತಿದ್ದು ಭಾರತದ ಅಸ್ಮಿತೆ ಮಂಕಾಗುತ್ತಿದೆ.
ಸೆಕ್ಯುಲರಿಸಂನ ವಿರೋಧ ಪದವಾಗಿರುವ ಕೋಮುವಾದಕ್ಕೆ ಲೇಖಕರು ಕಂಡುಕೊಳ್ಳುವ ಕಾರಣ ಪ್ರಸ್ತುತವಾದುದು. ಇತಿಹಾಸದ ವೈಭವೀಕರಣ ಇದರಲ್ಲಿ ಪ್ರಮುಖವಾದುದು. ಇತಿಹಾಸದಲ್ಲಿ ದೊರೆಗಳ ನಡುವಿನ ಕದನಗಳನ್ನು ಹಿಂದೂ ಮುಸ್ಲಿಂ ಯುದ್ಧವಾಗಿ ಕಂಡು ಮುಸ್ಲಿಂ ರಾಜರನ್ನು ಮುಸ್ಲಿಮರೂ ಹಿಂದೂ ರಾಜರನ್ನು ಹಿಂದೂಗಳೂ ಜಾತಿ ಪರಿಗಣನೆಯಲ್ಲಿ ಬೆಳೆಸಿಕೊಂಡು ಬಂದಿದ್ದಾರೆ. ಇತಿಹಾಸವನ್ನು ಇತಿಹಾಸವಾಗಿಯೇ ಕಾಣಬೇಕೇ ಹೊರತು ಜಾತ್ಯಾಧಾರಿತ ಮನೋಭಾವದಲ್ಲಿ ಅಲ್ಲ ಎನ್ನುವ ಲೇಖಕರ ಮಾತು ಅರ್ಥಪೂರ್ಣ. ಬಿ.ಎಂ. ಆಡಿದ ಈ ಮಾತು ಸೌಹಾರ್ದ ಭಾರತದ ಉಳಿವಿಗೆ ಸಾಮರಸ್ಯದ ಬದುಕಿನ ಹಳಿಗೆ ಮರಳುವ ದ್ಯೋತಕದಂತೆ ಅನಿಸುತ್ತದೆ. ಇತಿಹಾಸದಲ್ಲಿ ಇಂದು ಹಲವು ಮುಖಗಳಿವೆ. ತನ್ನ ಮೂಗಿನ ನೇರಕ್ಕೆ ಇತಿಹಾಸ ಸೃಷ್ಟಿಸಿ ಅದನ್ನು ನೈಜವೆಂದು ನಂಬಿಸುವ ಮನಸ್ಥಿತಿಗಳು ದೇಶದ ಮೂಲೆ ಮೂಲೆಗಳಿಂದಲೂ ಬೆಳೆದು ಬರುತ್ತಿದೆ. ಇದು ಸಫಲವಾದರೆ ನಂತರದ ಭಾರತ ಭಾರತವಾಗಿರುವುದಿಲ್ಲ. ಇಲ್ಲಿ ಘಟಿಸುತ್ತಿರುವುದು ಇದುವೇ. ಯಾವುದು ನಡೆಯಬಾರದೋ ಅದೇ ನಿತ್ಯವಾದರೆ ಭವಿಷ್ಯದ ಭಾರತದ ಬಾಳಿನ ದಿನಗಳು ಆಯೋಮಯವಾಗುವುದು ನಿಸ್ಸಂಶಯ. ಜನರು ಪರಸ್ಪರ ಹೊಡೆದಾಡಿಕೊಳ್ಳುವ ಕಾರಣಗಳಲ್ಲಿ ಇತಿಹಾಸವೂ ಒಂದು. ಇದಕ್ಕಾಗಿ ನೈಜ ಇತಿಹಾಸ ತಿಳಿದುಕೊಳ್ಳಲು ಇತಿಹಾಸದ ನಿರ್ಭಾವುಕ ಓದು ಅಗತ್ಯ ಎಂದು ಲೇಖಕರು ಅಭಿಪ್ರಾಯಿಸುತ್ತಾರೆ. ರಾಜಕೀಯ ಶೋಷಣೆಗೆ ಒಳಗಾದ ಜನರು ಎಚ್ಚೆತ್ತುಕೊಳ್ಳಲೇ ಬೇಕಾದ ಮಾತನ್ನು ಬಿ.ಎಂ. ಆಡಿದ್ದಾರೆ. ಕರ್ನಲ್ ಹಬೀಬ್ ರಹ್ಮಾನ್ ಮತ್ತು ಸುಭಾಷರ ನಡುವಿನ ಸಂಬಂಧದ ಸುತ್ತ ಕೃತಿ ಬೆಳಕು ಚೆಲ್ಲುತ್ತದೆ. ರಂಗೂನ್, ಬ್ಯಾಂಕಾಕ್, ಜರ್ಮನಿ, ಸಿಂಗಾಪುರ, ರಶ್ಯ ಮುಂತಾದೆಡೆ ನಿರಂತರ ಓಡಾಡಿ ಇಂಡಿಯನ್ ನ್ಯಾಶನಲ್ ಆರ್ಮಿ ಸಂಘಟಿಸಿದ ಸುಭಾಷರೊಂದಿಗೆ ಹಬೀಬ್ ರಹ್ಮಾನ್ ಜೊತೆಗಿದ್ದವರು. ಸುಭಾಷರ ಸಾವಿಗಿರುವ ಏಕೈಕ ಸಾಕ್ಷಿ ಅವರೇ.
ಜನರಲ್ ಷಾ ನವಾಝ್ ಖಾನ್, ಕರ್ನಲ್ ಪ್ರೇಮ್ ಕುಮಾರ್ ಸಹಗಲ್, ಕರ್ನಲ್ ಗುರುಭಕ್ಷ್ ಸಿಂಗ್ ಇವರು ಇಂಡಿಯನ್ ನ್ಯಾಶನಲ್ ಆರ್ಮಿಯ ಪ್ರಮುಖ ನಾಯಕರು. ಇವರ ನಡುವೆ ಇರುವ ನಿಜವಾದ ಭಾರತೀಯ ಸೆಕ್ಯುಲರಿಸಂ ಶ್ರೀಮಂತಿಕೆಯ ಎಳೆಯನ್ನು ಲೇಖಕರು ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಸುಭಾಷರ ಜಾತ್ಯತೀತ ಮನೋಭಾವಕ್ಕಿರುವ ಒಂದು ಸ್ಪಷ್ಟ ನಿದರ್ಶನವಿದು. 1943 ಸೆಪ್ಟಂಬರ್ 6 ರಂದು ಬರ್ಮಾದಲ್ಲಿರುವ ಬಹದುರ್ ಷಾ ಗೋರಿಗೆ ಪುಷ್ಪಾಂಜಲಿ ಸಲ್ಲಿಸಿದರು. ಬಹದೂರ್ ಷಾ ಅವರು ಭಾರತದ ಕೊನೆಯ ಚಕ್ರವರ್ತಿ. ಸುಭಾಷರು ಅಂದು ತನ್ನ ಭಾಷಣದಲ್ಲಿ ಬರ್ಮಾ ಮತ್ತು ಭಾರತದ ನಡುವಿನ ಉತ್ತಮ ಬಾಂಧವ್ಯವನ್ನು ಕೊಂಡಾಡಿದ್ದರು. ಮುಂದುವರಿದು ಮಾತಾಡಿದ ನೇತಾಜಿ ಭಾರತದ ಸ್ವಾತಂತ್ರದ ಕೊನೆಯ ಹೋರಾಟಗಾರನ ಭೌತಿಕ ಉಳಿಕೆಯ ಮುಂದೆ ನಾವಿದ್ದೇವೆ. ಬಹದೂರ್ ಷಾ ಅವರ ನೆನಪನ್ನು ಹೃದಯಲ್ಲಿ ಕಾಪಾಡಿಕೊಂಡು ಬಂದವರು ನಾವು ಎಂದಿದ್ದರು. ಭಾಷಣದ ಕೊನೆಯಲ್ಲಿ ಬಹದೂರ್ ಷಾ ರಚಿಸಿದ ದ್ವಿಪದಿಯ ಇಂಗ್ಲಿಷ್ ಅನುವಾದ ಭಾರತದ ಸ್ವಾತಂತ್ರ ಹೋರಾಟಗಾರನ ಆತ್ಮಗಳಲ್ಲಿ ವಿಶ್ವಾಸದ ಕೊನೆಯ ಕಣ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಭಾರತದ ಖಡ್ಗವು ಲಂಡನ್ನಿನ ಹೃದಯಕ್ಕೆ ಇರಿಯುವುದನ್ನು ಮುಂದುವರಿಸುತ್ತಲೇ ಇರುತ್ತದೆ ಎಂದು ಹೇಳಿ ಮುಗಿಸಿದ್ದರು. ಸುಭಾಷರ ವೈವಾಹಿಕ ಬದುಕಿನ ಪ್ರಸ್ತಾಪವೂ ಕೃತಿಯಲ್ಲಿದೆ. ಸುಭಾಷರ ಸರ್ವಧರ್ಮ ಸಮಭಾವ ದೃಷ್ಟಿ ಎಂಬ ತಲೆಬರಹದ ಲೇಖನದಲ್ಲಿ ದಾಖಲೆಗಳೊಂದಿಗೆ ಸುಭಾಷರ ಜೀವನದ ಮನೋಭಾವವನ್ನು ಕಾಣಬಹುದು.
ಧಾರ್ಮಿಕ ಆಚರಣೆಗಳಿಗೆ ಅನುದಾನ ಕೊಡುವ ಬಗ್ಗೆ ಬರ್ಮಾ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರಕ್ಕೆ ಮೊದಲ ಸಹಿ ಸುಭಾಷರದ್ದೇ ಆಗಿತ್ತು. ಸುಭಾಷರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಮತ್ತು ಅನುಮಾನಪಡುವ ಮನಸ್ಥಿತಿಗೆ ಕಿರು ಕೃತಿಯಲ್ಲಿ ಉತ್ತರವಿದೆ. ಬ್ಯಾಂಕಾಕ್‌ನಿಂದ ಸುಭಾಷರು ಮಾಡಿದ ಬಾನುಲಿ ಭಾಷಣವೂ ಕೃತಿಯಲ್ಲಿದೆ. ಸುಭಾಷರು ಮುಸ್ಲಿಂ ಪಕ್ಷಪಾತಿ ಆಗಿದ್ದರು ಎಂದು ಆರೋಪಿಸುವವರು ಇಂಡಿಯನ್ ನ್ಯಾಶನಲ್ ಆರ್ಮಿಯ ಚಿಹ್ನೆ ನೆಗೆಯುತ್ತಿರುವ ಹುಲಿ ಟಿಪ್ಪ್ಪುಸುಲ್ತಾನರ ಸೇನೆಯಿಂದ ಪಡೆದುಕೊಂಡಿದ್ದಾರೆ ಎನ್ನುತ್ತಾರೆ. ಆ ವಿಚಾರವಾಗಿಯೂ ಲೇಖಕರು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ಮೌಲಾನ ಉಬೈದುಲ್ಲಾ ಸಿಂಧಿಯವರು ಸುಭಾಷರ ಹೋರಾಟದ ಹಿಂದಿನ ಸ್ಫೂರ್ತಿಯಾಗಿದ್ದರು. ಅವರು ಸುಭಾಷರನ್ನು ವಿವಿಧ ಹೆಸರುಗಳಿಂದ ವಿದೇಶಗಳಿಗೆ ಕಳುಹಿಸಿ ಕೊಟ್ಟಿದ್ದರು ಎನ್ನುವ ವಿಷಯವನ್ನು ಲೇಖಕರು ಹೇಳಿದ್ದಾರೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಕೃತಿಯಿದು. ಒಟ್ಟಿನಲ್ಲಿ ಭಾರತೀಯ ರಾಷ್ಟ್ರೀಯತೆಯ ಪಕ್ಕಾ ಉದಾಹರಣೆಯಾಗಿರುವ ಸುಭಾಷರ ಬಗೆಗಿನ ಓದು ಒಂದೇ ಕಿರು ಕೃತಿಯಲ್ಲಿ ಹಿಡಿದಿಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಧನ್ಯವಾದಗಳು ಬಿ. ಎಂ.
ಬಿ.ಎಂ.ಹನೀಫ್