ಎಂಎಚ್‌ಆರ್‌ಡಿ ಹೊರಡಿಸಿದ್ದ ಸುತ್ತೋಲೆ ರದ್ದು ಕೋರಿದ್ದ ಅರ್ಜಿ ಹೈಕೋರ್ಟ್‌ನಿಂದ ವಿಲೇವಾರಿ
ಬೆಂಗಳೂರು, ಸೆ.30: ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆಗಳನ್ನು ಶಿಕ್ಷಣ ಸಂಸ್ಥೆಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯೊಂದಿಗೆ ಜೋಡಿಸುವ ಬಗ್ಗೆ ಎಂಎಚ್‌ಆರ್‌ಡಿ ಹೊರಡಿಸಿದ್ದ ಸುತ್ತೋಲೆ ರದ್ದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ತುಮಕೂರಿನ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಾಮಾಜಿಕ ಜಾಲತಾಣಗಳ ಖಾತೆ ಜೋಡಣೆ ಸಂಬಂಧ ಎಂಎಚ್‌ಆರ್‌ಡಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದೆಯೇ ಹೊರತು, ಅದನ್ನು ಕಡ್ಡಾಯ ಮಾಡಿಲ್ಲ. ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಇತ್ಯರ್ಥಪಡಿಸಿತು.
ಉನ್ನತ ಶಿಕ್ಷಣದಲ್ಲಿನ ಬೆಳವಣಿಗೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ಶಿಕ್ಷಕರು, ವಿದ್ಯಾರ್ಥಿಗಳು ಟ್ವಿಟರ್, ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಆಯಾ ಉನ್ನತ ಶಿಕ್ಷಣ ಸಂಸ್ಥೆಗಳ ಅಧಿಕೃತ ಖಾತೆಗಳೊಂದಿಗೆ ಜೋಡಿಸಬೇಕು. ಅಂತಿಮವಾಗಿ ಅದನ್ನು ಉನ್ನತ ಶಿಕ್ಷಣದ ಖಾತೆಗೆ ಲಿಂಕ್ ಮಾಡಬೇಕೆಂದು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿ ಎಂಎಚ್‌ಆರ್‌ಡಿ ಜು.3ರಂದು ಸುತ್ತೋಲೆ ಹೊರಡಿಸಿತ್ತು.