ಸ್ವತಂತ್ರ ಭಾರತದ ಸಮರ್ಥ ಸೇನಾನಿ ಯಾರು?
ಭಾಗ-2
ರಾಷ್ಟ್ರೀಯ ದೈನಿಕವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಬಿಜೆಪಿಗೆ ತನ್ನ ಚಿಕ್ಕಪ್ಪನಲ್ಲಿ ಆಸಕ್ತಿ ಇಲ್ಲದಿರುವುದನ್ನು ವಿಕ್ರಂ ಸಾವರ್ಕರ್ ಬಯಲು ಮಾಡಿದ್ದರು. ಆ ವರದಿಯ ಪ್ರಕಾರ ‘‘ಪೋರ್ಟ್ ಬ್ಲೇರ್ ಸೆಲ್ಯೂಲರ್ ಜೈಲಿನಲ್ಲಿದ್ದ ತನ್ನ ಚಿಕ್ಕಪ್ಪನ ಭಿತ್ತಿಫಲಕವನ್ನು ಕಿತ್ತು ಹಾಕಿರುವುದನ್ನು ಗಮನಿಸಿದ ಬಳಿಕವೂ ಆ ಬಗ್ಗೆ ಮೌನ ವಹಿಸಿದ್ದಕ್ಕಾಗಿ’’ ಪಿಎಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆತ ಹೇಳಿದ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ನ ಅಂದಿನ ಲೆಫ್ಟಿನೆಂಟ್ ಗವರ್ನರ್ ರಾಮ್ ಕಪ್ಸೆ ಮತ್ತು ಮಾಜಿ ಸಂಸದ ರಾಮ ನಾಯಕ್ (ಇಬ್ಬರೂ ಕೂಡ ಬಿಜೆಪಿ ಕಾರ್ಯಕರ್ತರು) ‘‘ಭಿತ್ತಿಫಲಕವನ್ನು ಕಿತ್ತು ಹಾಕಿದಾಗ ಚಕಾರವೆತ್ತಲಿಲ್ಲ.’’
ಮುಂದುವರಿಸಿ ವಿಕ್ರಮ್ ಸಾವರ್ಕರ್ ಹೇಳಿದರು: ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಅವರ (ಸಾವರ್ಕರ್)ಸಿದ್ಧಾಂತ ಇಷ್ಟವಿಲ್ಲವೆಂದು ನಮಗೆ ಚೆನ್ನಾಗಿ ಗೊತ್ತಿದೆ’’ ಬಿಜೆಪಿಗೆ ದಿಢೀರನೆ ಅವರ ಮೇಲೆ ಉಂಟಾಗಿರುವ ಪ್ರೀತಿ ಕಣ್ಣೊರೆಸುವ ಒಂದು ತಂತ್ರ. ‘‘ಅದು ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆಗಳಲ್ಲಿ ಮತದಾರರನ್ನು ಓಲೈಸುವ ಒಂದು ತಂತ್ರ’’. (ಆಗಸ್ಟ್ 30, 2004 ಇಂಡಿಯನ್ ಎಕ್ಸ್‌ಪ್ರೆಸ್)
ಸಾವರ್ಕರ್ ಅವರ ಈ ‘ಶ್ರೇಷ್ಠತೆ’ಯನ್ನು ಹಿಂದುತ್ವ ಬಣದೊಳಗಿನ ಒಳಜಗಳಗಳ ಮಟ್ಟಿಗೆ ಸೀಮಿತಗೊಳಿಸದೆ ಈ ವಿಷಯವನ್ನು ವ್ಯಾಪಕವಾಗಿ ಪರಿಶೀಲಿಸುವ ಅಗತ್ಯವಿದೆ.
ಸಾವರ್ಕರ್ ಅವರ ಜೀವನದಲ್ಲಿ ನಾವು ಸ್ಪಷ್ಟವಾಗಿ ಎರಡು ಹಂತಗಳನ್ನು ಗುರುತಿಸಬಹುದಾಗಿದೆ.
ಅವರನ್ನು ಅಂಡಮಾನ್‌ಗೆ ಕಳುಹಿಸಿದ ಬಳಿಕ ಕೆಲವು ವರ್ಷಗಳವರೆಗೆ ಮೊದಲ ಹಂತ. ಈ ಹಂತದಲ್ಲಿ ಅವರು ಸಂಪೂರ್ಣವಾಗಿ ಹಿಂದೂ-ಮುಸ್ಲಿಂ ಏಕತೆಯ ಪರವಾಗಿದ್ದರು. ಆದರೆ ಎರಡನೇ ಹಂತದಲ್ಲಿ ಅವರು ಹಿಂದೂ ಐಕ್ಯತೆಯನ್ನು ಪ್ರತಿಪಾದಿಸಿ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಮುಂದು ಮಾಡಿದರು.
1883ರ ಮೇ 28ರಂದು ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಾವರ್ಕರ್ ಬ್ರಿಟಿಷ್ ವಿರೋಧಿ ಚಳವಳಿಗಳಿಂದ ಆಕರ್ಷಿತರಾದರು ಮತ್ತು ಅಭಿನವ್ ಭಾರತ್ ಸೊಸೈಟಿಯ ಸ್ಥಾಪನೆಯಲ್ಲಿ ಮುಖ್ಯಪಾತ್ರ ವಹಿಸಿದ್ದರು. ಅವರು ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋದರು. ಅಲ್ಲಿ ತೀವ್ರಗಾಮಿ ರಾಜಕೀಯ ಚಟುವಟಿಕೆಗಳಲ್ಲಿ ತನ್ನನ್ನು ಇನ್ನಷ್ಟು ತೊಡಗಿಸಿಕೊಂಡರು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯಿಂದ ಸ್ಫೂರ್ತಿ ಪಡೆದು ಅವರು ಮರಾಠಿಯಲ್ಲಿ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ಆಫ್ 1857’ ಎಂಬ ಒಂದು ಪುಸ್ತಕವನ್ನು ಕೂಡ ಬರೆದರು. ಆ ಪುಸ್ತಕದಲ್ಲಿ ಈ ಯುದ್ಧದಲ್ಲಿ ಹಿಂದೂ ಮುಸ್ಲಿಮರ ಜೊತೆಯಾಗಿ ಹೋರಾಡಿದ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನು ಬರೆದರು. ತರುವಾಯ ಲಂಡನ್‌ನಲ್ಲಿ ಹಾಗೂ ಭಾರತದಲ್ಲಿ ತೀವ್ರಗಾಮಿ ಹಿಂಸಾತ್ಮಕ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಟ್ಟ ಆಪಾದನೆಯ ಮೇರೆಗೆ ಎರಡು ಜೀವಾವಧಿ ಶಿಕ್ಷೆಗಳಿಗೆ ಗುರಿಯಾಗಿ ಅಂಡಮಾನ್‌ನ ಸೆಲ್ಯೂಲರ್ ಜೈಲಿಗೆ ಕಳುಹಿಸಲ್ಪಟ್ಟರು. ಜೈಲಿನಲ್ಲಿ ಅವರ ಕಠಿಣ ಬದುಕು ಅವರ ಚೈತನ್ಯವನ್ನೇ ಉಡುಗಿಸಿತ್ತು ಅನ್ನಿಸುತ್ತದೆ. ಅವರು ತನ್ನನ್ನು ಬೇಗನೆ ಜೈಲಿನಿಂದ ಬಿಡುಗಡೆ ಮಾಡುವಂತೆ ವಿನಂತಿಸಿ ಬ್ರಿಟಿಷ್ ಸರಕಾರಕ್ಕೆ ಪತ್ರಗಳನ್ನು ಬರೆದರು. ಬಹಳ ಸಮಯದ ಬಳಿಕ ಬ್ರಿಟಿಷ್ ಸರಕಾರ ಅವರ ವಿನಂತಿಯನ್ನು ಮನ್ನಿಸಿ ಅವರನ್ನು ಮನೆಗೆ ಕಳುಹಿಸಲು, ಅವರ ಮೇಲೆ ಷರತ್ತುಗಳನ್ನು ವಿಧಿಸಿ ರಾಜಕೀಯ ಚಟುವಟಿಕೆಗಳಲ್ಲಿ ಅವರು ಭಾಗವಹಿಸ ಕೂಡದೆಂದು ಆದೇಶಿಸಿತು. ಅಂತಿಮವಾಗಿ ಮುಂಬೈ ಪ್ರಾಂತದಲ್ಲಿ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಸಾವರ್ಕರ್ ಭಾರತದ ಪ್ರಧಾನಿ ಆಗಿದ್ದಲ್ಲಿ ಭಾರತದ ವಿಭಜನೆಯಾಗದೆ ಒಂದೇ ದೇಶವಾಗಿ ಉಳಿಯುತ್ತಿತ್ತು ಎಂಬ ಠಾಕ್ರೆ ಅವರ ವಾದಕ್ಕೆ ಈಗ ಮರಳಿದರೆ ಸಾವರ್ಕರ್ ನಿಜವಾಗಿಯೂ ಅವಿಭಜಿತ ಭಾರತದ ಪರವಾಗಿ ಇದ್ದರೇ ಎಂಬ ಪ್ರಶ್ನೆಯೇಳುತ್ತದೆ. ಖಂಡಿತವಾಗಿಯೂ ಇರಲಿಲ್ಲ. ಆಗಸ್ಟ್ 1943ರಲ್ಲಿ ಒಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ ಮಾತುಗಳು ಹೀಗಿದ್ದವು:
‘‘ಕಳೆದ ಮೂವತ್ತು ವರ್ಷಗಳಿಂದ ನಾವು ಭಾರತದ ಭೌಗೋಳಿಕ ಏಕತೆಗೆ ಹೊಂದಿಕೊಂಡಿದ್ದೇವೆ. ಆದರೆ ಈಗ ದಿಢೀರನೆ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ತಾನು ಒಂದು ಪ್ರತ್ಯೇಕ ರಾಷ್ಟ್ರ ಎಂಬ ವಾದವನ್ನು ಮಂಡಿಸಿದೆ. ಜಿನ್ನಾರವರ ದ್ವಿ-ರಾಷ್ಟ್ರ ಸಿದ್ಧಾಂತದ ಬಗ್ಗೆ ನನ್ನ ತಕರಾರಿಲ್ಲ. ನಾವು ಹಿಂದೂಗಳು ನಮ್ಮ ಪಾಡಿಗೆ, ನಾವೇ ಒಂದು ರಾಷ್ಟ್ರ ಮತ್ತು ಹಿಂದೂಗಳು ಹಾಗೂ ಮುಸ್ಲಿಮರು ಎರಡು ಪ್ರತ್ಯೇಕ ರಾಷ್ಟ್ರಗಳೆಂಬುದು ಒಂದು ಐತಿಹಾಸಿಕ ಸತ್ಯ.’’
ಆದ್ದರಿಂದ ಉದ್ಧವ್ ಠಾಕ್ರೆ ಅವರ ಊಹೆ, ಅಭಿಪ್ರಾಯ ಅರ್ಥಹೀನ. ಅದು ಸ್ವಾತಂತ್ರ್ಯದ ಬಳಿಕ ಜಿನ್ನಾ ಅವರು ಒಂದು ಸಂಯುಕ್ತ ಭಾರತವನ್ನು ಮುನ್ನಡೆಸಬಹುದಾಗಿತ್ತು ಎಂದು ಹೇಳಿದಂತೆ.
ಆದರೆ 1940ರ ದಶಕದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ವ್ಯಕ್ತಿಗಳು ಕಾಂಗ್ರೆಸ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ‘ಮಾಡು ಇಲ್ಲವೇ ಮಡಿ’ ಹೋರಾಟ ನಡೆಸುತ್ತಿದ್ದಾಗ ಸ್ವತಃ ಸಾವರ್ಕರ್ ಅವರ ಪರಿಸ್ಥಿತಿ ಏನಾಗಿತ್ತು? ಆಗ ಆರೆಸ್ಸೆಸ್ ‘ಭಾರತ ಬಿಟ್ಟು ತೊಲಗಿರಿ ಚಳವಳಿ’ಯಿಂದ ದೂರ ಉಳಿಯಲು ಬಯಸಿ ತನ್ನ ವಿಭಾಜಕ ಕಾರ್ಯಸೂಚಿಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿತ್ತು. ಸಾವರ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿ ಪ್ರವಾಸ ಕೈಗೊಂಡು ಹಿಂದೂ ಯುವಕರಿಗೆ ಸೇನೆಗೆ ಸೇರುವಂತೆ ಕರೆ ನೀಡಿದರು.
ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ತನ್ನ ನೇತೃತ್ವದ ರಾಜ್ಯ ಸರಕಾರಗಳಿಗೆ ರಾಜೀನಾಮೆ ನೀಡುವಂತೆ ಹೇಳಿತು. ಆದರೆ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ಮುಸ್ಲಿಂ ಲೀಗ್ ಜೊತೆ ಅಧಿಕಾರ ಹಂಚಿಕೊಂಡು ಸಿಂಧ್ ಮತ್ತು ಬಂಗಾಳದಲ್ಲಿ ಮೈತ್ರಿ ಸರಕಾರಗಳನ್ನು ಮುಂದುವರಿಸಿತು ಮತ್ತು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು.
ಕುತೂಹಲದ ವಿಷಯವೆಂದರೆ ಸಾವರ್ಕರ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೀಗೆ ಹಲವು ರೀತಿಯಲ್ಲಿ ತನ್ನ ಸೇವೆಗಳನ್ನು ಸಲ್ಲಿಸಿದರೂ ಕೂಡ, ಬ್ರಿಟಿಷರಿಗೆ ಅವರು ‘ಇನ್ನು ಉಪಯೋಗವಿಲ್ಲದ ಒಂದು ಶಕ್ತಿ’ ಆಗಿದ್ದರು....
ಒಟ್ಟಿನಲ್ಲಿ ಈಗ ಶಿವಸೇನೆ ಸಾವರ್ಕರ್ ಅವರನ್ನು ಉದಾತ್ತ ನಾಯಕನಾಗಿ ಹಾಡಿ ಹೊಗಳುತ್ತಿರುವುದು 1990ರ ದಶಕದಲ್ಲಿ ಶಿವಸೇನೆ-ಬಿಜೆಪಿ ನೇತೃತ್ವದ ಸರಕಾರದ ನಿಲುವಿಗೆ ವಿರೋಧವಿರುವಂತೆ ಕಾಣಿಸುತ್ತದೆ. ಅಂದು ತನ್ನ ಬಳಿ ಸರಕಾರದ ರಿಮೋಟ್ ಕಂಟ್ರೋಲ್ ಇದೆ ಎಂದು ಉದ್ಧವ್ ಠಾಕ್ರೆಯವರ ತಂದೆ ಬಾಳಾ ಠಾಕ್ರೆ ಜಂಬದಿಂದ ಹೇಳುತ್ತಿದ್ದರು. ಆಗ ಅವರು (ಶಿವಸೇನೆಯಾಗಲೀ, ಬಿಜೆಪಿಯಾಗಲೀ) ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಸಾವರ್ಕರ್‌ರವರ ಚಿತ್ರವನ್ನು ಇಡುವ ಬಗ್ಗೆ ಯಾಕೆ ಒಂದು ಬಾರಿ ಕೂಡಾ ಯೋಚಿಸಲಿಲ್ಲ.? ಎಂದು ಉದ್ಧವ್ ಉತ್ತರಿಸಬೇಕಾಗಿದೆ.
ಕೃಪೆ: countercurrents.org