ಫರಂಗಿಪೇಟೆಯಲ್ಲಿ ಬಸ್ ‘ನಿಲುಗಡೆ’ ಸಮಸ್ಯೆ
ಪ್ರಯಾಣಿಕರಿಗೆ ತಾಸುಗಟ್ಟಲೆ ಕಾಯುವ ಸಂಕಷ್ಟ

ಫರಂಗಿಪೇಟೆ, ಸೆ.23: ಫರಂಗಿಪೇಟೆಯಲ್ಲಿ ಹೆಚ್ಚಿನ ಬಸ್‌ಗಳು ಪ್ರಯಾಣಿಕರಿಗಾಗಿ ನಿಲುಗಡೆ ಒದಗಿಸದಿರುವುದರಿಂದ ವಿದ್ಯಾರ್ಥಿಗಳು, ನಾಗರಿಕರು ತಾಸುಗಟ್ಟಲೆ ಕಾಯುವ ಪರಿಸ್ಥಿತಿ ದಿನನಿತ್ಯದ ಸಮಸ್ಯೆಯಾಗಿದೆ. ಬಸ್‌ಗಳ ಈ ಸಮಸ್ಯೆಯಿಂದ ಮಂಗಳೂರು ಹಾಗೂ ಇನ್ನಿತರ ಸ್ಥಳಗಳಿಗೆ ಪ್ರಯಾಣಿಸುವವರು ಸಂಕಷ್ಟ ಎದುರಿಸುವಂತಾಗಿದೆ.
ಬೆಳಗ್ಗೆ ಪುತ್ತೂರು ಹಾಗೂ ಬಿ.ಸಿ.ರೋಡ್ ಕಡೆಯಿಂದ ಬರುವ ಬಹುತೇಕ ಬಸ್‌ಗಳು ಫರಂಗಿಪೇಟೆ ತಲುಪುವ ಮೊದಲೇ ಪ್ರಯಾಣಿಕರಿಂದ ತುಂಬಿರುತ್ತದೆ. ಕೆಳವು ಸರಕಾರಿ ಬಸ್‌ಗಳು ಕೂಡಾ ಫರಂಗಿಪೇಟೆಯಲ್ಲಿ ನಿಲ್ಲಿಸದೆ ಸಂಚರಿಸುತ್ತವೆ. ಇನ್ನು ಕೆಲವು ಬಸ್‌ಗಳು ನಿಲುಗಡೆ ಕಲ್ಪಿಸಿದರೂ ಪ್ರಯಾಣಿಕರಿಂದ ಭರ್ತಿಯಾಗಿರುವುದರಿಂದ ಅದರಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ.
ಈ ಹಿಂದೆ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ ಮತ್ತು ಸಂಜೆ ಫರಂಗಿಪೇಟೆಯಿಂದ ಮಂಗಳೂರಿಗೆ ಸೀಮಿತ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಮಾತ್ರವಲ್ಲದೆ ನಾಗರಿಕರ ಬೇಡಿಕೆಗೆ ಸ್ಪಂದಿಸಿದ ಕೆಎಸ್ಸಾರ್ಟಿಸಿ ಅಧಿಕಾರಿಗಳ ಸೂಚನೆಯಂತೆ ಫರಂಗಿಪೇಟೆಯಲ್ಲಿ ಕೆಲವು ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಫರಂಗಿಪೇಟೆಯಿಂದ ಮಂಗಳೂರಿಗೆ ಸಂಚರಿಸುವ ಪ್ರತ್ಯೇಕ ಬಸ್ ಸೌಕರ್ಯ ಇಲ್ಲದೆ ಪ್ರಯಾಣಿಕರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಸಮಸ್ಯೆಯ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ಕೆಎಸ್ಸಾರ್ಟಿಸಿ ವಿಭಾಗೀಯ ಅಧಿಕಾರಿಗಳನ್ನು ಭೇಟಿ ಮಾಡಿ ಅಲವತ್ತುಕೊಂಡಿದ್ದು, ಅಧಿಕಾರಿಗಳು ಸರಕಾರಿ ಬಸ್‌ಗಳನ್ನು ನಿಲ್ಲಿಸಿ ನಿರ್ವಾಹಕರಿಂದ ಸಹಿ ಪಡೆದು, ತುಂಬಿದ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸುತ್ತಿದ್ದಾರೆ.
ಫರಂಗಿಪೇಟೆ ಬಸ್ ತಂಗುದಾಣಕ್ಕೆ ಸುತ್ತಮುತ್ತಲ ಅನೇಕ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದು ದಿನಂಪ್ರತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿನಿಯಗೆ ಮತ್ತು ಮಹಿಳೆಯರಿಗೆ ಬೆಳಗ್ಗಿನ ಸಮಯದಲ್ಲಿ ಬಸ್ ಸಂಚಾರವೇ ಸವಾಲಾಗಿದೆ.
-ನಿಯಾಝ್ ತುಂಬೆ,
ಸಿಎಫ್‌ಐ ಫರಂಗಿಪೇಟೆ ವಲಯ ಉಸ್ತುವಾರಿ
ಶಾಲಾ ಕಾಲೇಜುಗಳಿಗೆ ಹಾಗೂ ವಿವಿಧ ಅಗತ್ಯಗಳಿಗೆ ಹೆಚ್ಚಿನ ಪ್ರಯಾಣಿಕರು ಸರಕಾರಿ ಮತ್ತು ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದು, ತುಂಬಿದ ಬಸ್‌ಗಳ ಫುಟ್‌ಬೋರ್ಡಿನಲ್ಲಿ ನೇತಾಡಿ ಪ್ರಯಾಣಿಸುತ್ತಿರುವುದು ಅಪಾಯಕಾರಿಯಾಗಿದೆ. ಫರಂಗಿಪೇಟೆಯಿಂದ ಮಂಗಳೂರಿಗೆ ಮತ್ತು ಬಿಸಿರೋಡಿನಿಂದ ಮಂಗಳೂರಿಗೆ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಪ್ರತ್ಯೇಕ ಬಸ್‌ಗಳ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು.
-ಎಫ್.ಎ.ಖಾದರ್ ಅಧ್ಯಕ್ಷರು,
ನಿವೃತ್ತ ಕೆಎಸ್ಸಾರ್ಟಿಸಿ ನೌಕರರ ಸಂಘ ಮಂಗಳೂರು ಡಿವಿಜನ್
ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವ ಮಂಗಳೂರಿನ ಹೊರವಲಯದ ಕೇವಲ 14 ಕಿಮೀ ವ್ಯಾಪ್ತಿಗೆ ಬರುವ ಫರಂಗಿಪೇಟೆಯಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು, ಪ್ರಯಾಣಿಕರು ಗಂಟೆಕಟ್ಟಲೆ ಕಾಯುತ್ತಿರುವುದು ಕೇದಕರ. ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮತ್ತು ಕೆಎಸ್ಸಾರ್ಟಿಸಿ ಅಧಿಕಾರಿಗಳು ಶಾಶ್ವತ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು.
- ಇಕ್ಬಾಲ್ ಅಮೆಮಾರ್ , ಅಧ್ಯಕ್ಷರು ಎಸ್ಡಿಪಿಐ ಪುದು ಗ್ರಾಮ ಸಮಿತಿ