ಚಿಕ್ಕಮಗಳೂರಿನಲ್ಲಿ ಜಲಪಾತಗಳ ದೃಶ್ಯಕಾವ್ಯ: ರಸ್ತೆಯುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಧಾರೆ
ಚಿಕ್ಕಮಗಳೂರು, ಅ.1: ಮುಗಿಲೆತ್ತರಕ್ಕೆ ಮೈಚಾಚಿ ನಿಂತಿರುವ ಗಿರಿಶ್ರೇಣಿಗಳು, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುವ ಹಚ್ಚಹಸಿರಿನ ಬೆಟ್ಟಗುಡ್ಡಗಳು ಕಾಫಿನಾಡಿನ ವೈಶಿಷ್ಟ. ಇಲ್ಲಿನ ರುದ್ರರಮಣೀಯ ಪ್ರಾಕೃತಿಕ ಸೌಂದರ್ಯವು ನಾಡಿನ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಈ ಕಾರಣಕ್ಕೆ ಕಾಫಿನಾಡಿಗೆ ‘ಪ್ರವಾಸಿಗರ ಸ್ವರ್ಗ’ ಎಂಬ ಅನ್ವರ್ಥನಾಮವಿದೆ.
ಇಂತಹ ‘ಪ್ರವಾಸಿಗರ ಸ್ವರ್ಗ’ ಜಿಲ್ಲಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನಲುಗಿದೆಯಾದರೂ ಇಲ್ಲಿನ ರುದ್ರರಮಣೀಯ ಪ್ರಾಕೃತಿಕ ಸೌಂದರ್ಯಕ್ಕೇನೂ ಕುಂದುಂಟಾಗಿಲ್ಲ. ಮಳೆಗಾಲದಲ್ಲಿ ಸದಾ ಹಸಿರಿನಿಂದ ಕಂಗೊಳಿಸುವ ಮಲೆನಾಡಿನಲ್ಲಿ ಜಲಪಾತಗಳು ಆಕರ್ಷಣೆಯ ಕೇಂದ್ರ ಬಿಂದು.
ಮಲೆನಾಡಿನ ಆಕರ್ಷಣೆಯಾಗಿದ್ದ ಈ ಜಲಪಾತಗಳು ಕಳೆದೊಂದು ದಶಕದಿಂದೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ನೀರಿಲ್ಲದೆ ಸೊರಗಿ ಕಣ್ಮರೆಯಾಗಿದ್ದವು. ಆದರೆ ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದ ಪರಿಣಾಮ ಸೊರಗಿ ಮಾಯವಾಗಿದ್ದ ಜಲಪಾತಗಳೀಗ ಜೀವಕಳೆಯಿಂದ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಕೆಲ ದಶಕಗಳಿಂದ ಮಲೆನಾಡಿನಲ್ಲೂ ಮಳೆಯ ಕೊರತೆ ಎದುರಾದ ಪರಿಣಾಮ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿದ್ದ ಈ ಜಲಪಾತಗಳು ಕ್ರಮೇಣ ನೀರಿಲ್ಲದೆ ಸೊರಗಿ ಹೋಗಿದ್ದವು. ಆದರೆ ಕಳೆದ ಬಾರಿ ಹಾಗೂ ಈ ಸಾಲಿನ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಪ್ರಾಕೃತಿ ವಿಕೋಪಗಳು ಸಂಭವಿಸಿ ಸಾವು ನೋವುಗಳಿಗೂ ಕಾರಣವಾಗಿದ್ದ ಅತಿವೃಷ್ಟಿ, ಮಲೆನಾಡಿನ ಪ್ರಾಕೃತಿಕ ಸೌಂದರ್ಯಕ್ಕೂ ಜೀವಕಳೆ ತುಂಬಿದೆ ಎಂದರೆ ತಪ್ಪಾಗಲಾರದು.
ಧಾರಾಕಾರ ಮಳೆಯಿಂದಾಗಿ ಮಲೆನಾಡಿನ ಬೆಟ್ಟಗುಡ್ಡಗಳು, ಗಿರಿಶ್ರೇಣಿಗಳು ಹಾಗೂ ಕಾಫಿತೋಟಗಳ ಸಂದಿಗೊಂದಿಗಳಿಂದ ನೀರಿಲ್ಲದೆ ಸೊರಗಿ ಮಾಯವಾಗಿದ್ದ ಜಲಪಾತಗಳು ಇತ್ತೀಚಿನ ವರ್ಷಗಳಲ್ಲಿ ಸುರಿದ ಮಳೆಯ ಪರಿಣಾಮ ಎಂಬಂತೆ ಇದೀಗ ಭರಪೂರ ನೀರಿನಿಂದ ಧುಮ್ಮಿಕ್ಕಿ ಹರಿಯುತ್ತಿದ್ದು, ಕಾಫಿನಾಡಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿವೆ.
ಚಿಕ್ಕಮಗಳೂರು ನಗರದಿಂದ ಮೂಡಿಗೆರೆ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಹೆದ್ದಾರಿಯ ಇಕ್ಕೆಲಗಳ ಬೆಟ್ಟಗುಡ್ಡಗಳು ಮಳೆಗಾಲದಲ್ಲಂತೂ ಹಚ್ಚ ಹಸಿರಿನಿಂದಾವೃತವಾಗಿ ಪ್ರವಾಸಿಗರ ಮನಸೂರೆಗೊಳ್ಳುತ್ತಿವೆ. ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಧಾರಾಕಾರ ಮಳೆಯಾಗುವುದರಿಂದ ಬೆಟ್ಟಗುಡ್ಡಗಳ ಸಂದುಗಳಲ್ಲಿ ಹಾಲ್ನೊರೆಯಂತೆ ಭಾಸವಾಗುತ್ತಾ ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಪಾತಗಳು ನೋಡುಗರ ಕಣ್ಣಿಗೆ ಹಬ್ಬದ ರಸದೌತಣ ನೀಡುತ್ತಿವೆ.
ರುದ್ರರಮಣೀಯ ಪರಿಸರದಲ್ಲಿ ಹೆಜ್ಜೆಹೆಜ್ಜೆಗೂ ಸಿಗುವ ಕೃತಕ ಜಲಪಾತಗಳು ಪ್ರವಾಸಿಗರ ಪಾಲಿಗೆ ಹೊಸದೊಂದು ವಿಸ್ಮಯ ಲೋಕವನ್ನು ಸಾಕ್ಷಾತ್ಕಾರ ಮಾಡಿಸುತ್ತಿವೆ. ಈ ಕಾರಣಕ್ಕೆ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಇನ್ನು ಕೊಟ್ಟಿಗೆಹಾರದಿಂದ ಕಳಸ ಸಂಪರ್ಕ ರಸ್ತೆ ಹಾಗೂ ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಮಾರ್ಗವಾಗಿ ಶೃಂಗೇರಿ ಸಂಪರ್ಕಿಸುವ ರಸ್ತೆ, ಬಾಳೆಹೊನ್ನೂರಿನಿಂದ ಕಳಸ ಸಂಪರ್ಕಿಸುವ ರಸ್ತೆ, ಜಯಪುರದಿಂದ ಬಸರೀಕಟ್ಟೆ ಸಂಪರ್ಕಿಸುವ ರಸ್ತೆಗಳ ಉದ್ದಕ್ಕೂ ಇಂತಹ ಜಲಪಾತಗಳು ಇದೀಗ ಮೈತುಂಬಿ ಹರಿಯುತ್ತಿವೆ.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾಬುಡಾನ್‌ಗಿರಿ ರಸ್ತೆಯಲ್ಲಿರುವ ಸಗೀರ್ ಫಾಲ್ಸ್, ಕಲ್ಲತ್ತಿಗಿರಿ ಫಾಲ್ಸ್, ಶೃಂಗೇರಿಯ ಸಿರಿಮನೆ ಫಾಲ್ಸ್, ಜಯಪುರ ತೀರ್ಥಕೆರೆ ಫಾಲ್ಸ್, ಕುದುರೆಮುಖ ಸಮೀಪದ ಹನುಮನಗುಂಡಿ ಫಾಲ್ಸ್, ಹೆಬ್ಬೆ ಜಲಪಾತ, ಝರಿ ಫಾಲ್ಸ್, ಕಡಂಬಿ ಫಾಲ್ಸ್, ಶಂಕರ್‌ಫಾಲ್ಸ್, ಹೊನ್ನಮ್ಮನಹಳ್ಳ ಫಾಲ್ಸ್‌ನಂತಹ ಪ್ರಮುಖ ಜಲಪಾತಗಳು ಸದ್ಯ ಭಾರೀ ನೀರಿನಿಂದ ಧುಮ್ಮಿಕ್ಕಿ ಹರಿಯುತ್ತಿವೆ.
ಕಾಫಿನಾಡಿನತ್ತ ಪ್ರವಾಸಿಗರ ಚಿತ್ತ
ಪ್ರಾಕೃತಿಕ ಸೌಂದರ್ಯವನ್ನು ಹೊದ್ದು ಮಲಗಿರುವ ಚಿಕ್ಕಮಗಳೂರು ಜಿಲ್ಲೆ ಈ ಹಿಂದೆ ಭಾರೀ ಮಳೆಗೆ ಹೆಸರಾಗಿತ್ತು. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಗಿರಿಶ್ರೇಣಿಗಳು, ಬೆಟ್ಟಗುಡ್ಡಗಳು, ಕಣಿವೆ ಪ್ರದೇಶಗಳೂ ಸೇರಿದಂತೆ ಕಣ್ಣು ಹಾಯಿಸಿದೆಲ್ಲೆಡೆ ಝರಿ, ಜಲಪಾತಗಳು ಕಂಡು ಬರುತ್ತಿದ್ದವು. ಮಲೆನಾಡಿನ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇಂತಹ ಝರಿ, ಜಲಪಾತಗಳ ಸೌಂದರ್ಯಗಳನ್ನು ನೋಡಲೆಂದು ದೂರದ ಪ್ರವಾಸಿಗರು ರಜಾ ದಿನಗಳಲ್ಲಿ ಕಾಫಿನಾಡಿನತ್ತ ದೌಡಾಯಿಸುತ್ತಿದ್ದಾರೆ.