'ದೇಶದ್ರೋಹಿ, ಭ್ರಷ್ಟ' ಹಣೆಪಟ್ಟಿ ಬಗ್ಗೆ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಹೇಳುವುದೇನು ?
ಐಎಎಸ್ ಬಿಟ್ಟ ದಿಟ್ಟ ಅಧಿಕಾರಿಯ ಮುಂದಿನ ಯೋಜನೆಗಳ ವಿವರ ಇಲ್ಲಿದೆ ನೋಡಿ
ಮಂಗಳೂರು, ಅ.2: ದಕ್ಷಿಣ ಕನ್ನಡದ ದಕ್ಷ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಸಿಕಾಂತ್ ಸೆಂಥಿಲ್‌ರವವರು ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಬಳಿಕ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಇಂದು ಕಾಣಿಸಿಕೊಂಡರು. ನಗರದ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದೇಶ ಪ್ರೇಮಿ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದು ಆಯೋಜಿಸಲಾಗಿದ್ದ 'ಗಾಂಧಿ 150 ಚಿಂತನಾ ಯಾತ್ರೆ'ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದ ಅವರು ತಮ್ಮ ಎಂದಿನ ಶೈಲಿಯಲ್ಲಿ ಅಲ್ಲಿದ್ದವರೊಂದಿಗೆ ಬೆರೆತರು.
ಈ ಸಂದರ್ಭ 'ವಾರ್ತಾಭಾರತಿ' ಜೊತೆ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದು ಹೀಗೆ,
ಅಧಿಕಾರಿಯಾಗಿದ್ದುಕೊಂಡು ನಿಮಗೆ ಇನ್ನಷ್ಟು ಜನರ ಸೇವೆ ಮಾಡಬಹುದಿತ್ತಲ್ಲವೇ?
ಸಸಿಕಾಂತ್ ಸೆಂಥಿಲ್: ಜನ ಸೇವೆ ಮಾಡಲು ಅಧಿಕಾರಿಯಾಗಿರಬೇಕೆಂದೇನಿಲ್ಲ. ಯಾವ ಸ್ತರದಲ್ಲಿಯೂ, ಯಾವ ಕ್ಷೇತ್ರದಲ್ಲಿದ್ದುಕೊಂಡು ಬೇಕಾದರೂ ಜನರ ಸೇವೆ ಮಾಡಬಹುದು.
ಅದು ಹೇಗೆ ಸಾಧ್ಯ?
ಸಸಿಕಾಂತ್ ಸೆಂಥಿಲ್: ಅದಕ್ಕಾಗಿಯೇ ನಾವು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವುದಲ್ಲವೇ?
ಜೀವನ ಈಗ ಹೇಗಿದೆ?
ಸಸಿಕಾಂತ್ ಸೆಂಥಿಲ್: ತುಂಬಾ ಚೆನ್ನಾಗಿದೆ. ಕಳೆದ 10 ವರ್ಷಗಳಿಂದ ನನ್ನ ಪತ್ನಿ ನನ್ನನ್ನು ಸರಿಯಾಗಿ ನೋಡಿಲ್ಲ ಎಂದು ಹೇಳುತ್ತಿದ್ದಳು. ಈಗ ಆಕೆ ತನ್ನ ಪತಿ ತನಗೆ ಸಿಕ್ಕಿದ್ದಾನೆಂಬ ಖುಷಿಯಲ್ಲಿದ್ದಾಳೆ. ಆಕೆ ಹಿಂದೆಂದಿಗಿಂತಲೂ ಸಂತಸದಿಂದಿದ್ದಾಳೆ.
ದಕ್ಷ ಅಧಿಕಾರಿ ಎಂಬುದಾಗಿ ಗುರುತಿಸಿಕೊಂಡಿದ್ದ ನೀವು ಒಂದೇ ದಿನದಲ್ಲಿ ಕೆಲವರಿಂದ ದೇಶದ್ರೋಹಿ ಎಂಬ ಟೀಕೆಗೆ ಗುರಿಯಾಗಿಬಿಟ್ಟಿರಲ್ಲ ?
ಸಸಿಕಾಂತ್ ಸೆಂಥಿಲ್: ಅದೆಲ್ಲಾ ನಿರೀಕ್ಷಿತ. ಹಾಗಾಗಿ ಅದರಿಂದ ಯಾವುದೇ ರೀತಿಯಲ್ಲಿ ನನಗೆ ನೋವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ.
ರಾಜೀನಾಮೆ ನೀಡಿದ ಬಳಿಕ ನೀವು ಮಾತನಾಡಿಲ್ಲ, ಕಾರಣ?
ಸಸಿಕಾಂತ್ ಸೆಂಥಿಲ್: ಕಾರಣವನ್ನು ನಾನು ನನ್ನ ಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ. ಕೇಂದ್ರ ಆಗಲಿ, ರಾಜ್ಯ ಸರಕಾರದಿಂದ ಯಾವುದೇ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ. ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದೇನೆ. ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ನನಗೆ ಎಲ್ಲ ಪಕ್ಷ, ಜನರ ಸಹಕಾರ ಸಿಕ್ಕಿದೆ. ನಾನು ರಾಜೀನಾಮೆ ನೀಡಿದ್ದು, ವೈಯಕ್ತಿಕ ಮತ್ತು ರಾಷ್ಟ್ರೀಯ ವಿಚಾರ.
ಈಗೇನು ಮಾಡಿಕೊಂಡಿದ್ದೀರಿ?
ಸಸಿಕಾಂತ್ ಸೆಂಥಿಲ್: ಮಾಡುವುದು ಬಹಳಷ್ಟಿದೆ. ಜೀವನ ಸಾಗುತ್ತಿದೆ. ಮುಂದೆ ಏನಾಗುತ್ತದೋ ನೋಡೋಣ.
ಗಾಂಧಿ ನಮ್ಮ ರಾಷ್ಟ್ರಪಿತ. ಆದರೆ ಈಗ ಪ್ರಧಾನಿ ಮೋದಿಯವರನ್ನು ರಾಷ್ಟ್ರಪಿತ ಎನ್ನಲಾಗುತ್ತಿದೆಯಲ್ಲ?
ಸಸಿಕಾಂತ್ ಸೆಂಥಿಲ್: ಗಾಂಧಿಯ 150ನೆ ಜನ್ಮ ದಿನದ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಅನ್ನಿಸುತ್ತದೆ.
ಮೋದಿಯನ್ನು ರಾಷ್ಟ್ರಪಿತ ಎಂದು ಬಿಂಬಿಸಲಾಗುತ್ತಿದೆಯಲ್ಲ?
ಸಸಿಕಾಂತ್ ಸೆಂಥಿಲ್: ಗಾಂಧೀಜಿ ಹೋರಾಟ ಮಾಡಿದ್ದು ಅದಕ್ಕಾಗಿಯೇ. ಎಲ್ಲರಿಗೂ ಎಲ್ಲಾ ವಿಷಯದಲ್ಲೂ ಮಾತನಾಡಲು, ಚರ್ಚಿಸಲು ಅವಕಾಶ ಇದೆ. ಅವರವರ ಮನಸ್ಸಿನಲ್ಲಿ ಇದ್ದದ್ದನ್ನು ಹೇಳಬೇಕು. ಒಪ್ಪುವುದು ಬಿಡುವುದು ಅವರವರ ವೈಯಕ್ತಿಕ.
ಮುಂದೆ ಏನಾದರೂ ಯೋಜನೆಗಳಿವೆಯೇ?
ಸಸಿಕಾಂತ್ ಸೆಂಥಿಲ್: ಅಂತಹ ಯೋಜನೆ ಎಂಬುದು ಏನಿಲ್ಲ. ತಳ ಮಟ್ಟದಲ್ಲಿ ಕೆಲಸ ಮಾಡುವ ಹುಮ್ಮಸ್ಸಿದೆ. ಇಂದಿನ ಕಾರ್ಯಕ್ರಮದಲ್ಲಿಯೂ ನನ್ನ ಜತೆ ಇದ್ದವರು ಬಂದಿದ್ದಾರೆ. ಸಮಸ್ಯೆಗಳಿವೆ. ನನ್ನ ಪಾತ್ರ ಏನು ಅದನ್ನು ನಿರ್ವಹಿಸುತ್ತೇನೆ.
ರಾಷ್ಟ್ರೀಯತೆಯ ವ್ಯಾಖ್ಯಾನದಲ್ಲಿ ಬದಲಾವಣೆ ಆಗಿದೆ ಅನಿಸುತ್ತಿದೆಯೇ?
ಸಸಿಕಾಂತ್ ಸೆಂಥಿಲ್: ಮಾನವೀಯತೆಯೇ ರಾಷ್ಟ್ರೀಯತೆ. ಅದು ಇಲ್ಲವಾದಲ್ಲಿ ಯಾವುದೇ ರಾಷ್ಟ್ರೀಯತೆ ವಾದಕ್ಕೆ ಅರ್ಥವಿಲ್ಲ. ಪ್ರತಿಯೊಬ್ಬರ ಅಭಿಪ್ರಾಯಗಳು ಭಿನ್ನವಾಗಿರಬಹುದು. ಆದರೆ ನಾವೆಲ್ಲರೂ ಸಹೋದರು ಎಂಬುದೇ ರಾಷ್ಟ್ರೀಯತೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಅದು ಮರೆಯಾಗುತ್ತಿದೆಯೇ?
ಸಸಿಕಾಂತ್ ಸೆಂಥಿಲ್: ನಾನು ಹಾಗೆ ಹೇಳುವುದಿಲ್ಲ. ಪ್ರತಿಯೊಂದು ಸ್ತರದಲ್ಲೂ ಸಮಾಜದಲ್ಲಿ ಇಂತಹ ಆತಂಕ, ಸೂಚನೆಗಳು ಇದ್ದೇ ಇರುತ್ತೆ. ಆದರೆ, ನಾವು ನಮ್ಮ ನಿಲುವುಗಳಲ್ಲಿ ಸ್ಪಷ್ಟವಾಗಿರುವವರೆಗೆ ಅದಕ್ಕೆ ಅವಕಾಶ ಆಗದು.
ರಾಜೀನಾಮೆ ಸ್ವೀಕಾರ ಆಗಿದೆಯೇ?
ಸಸಿಕಾಂತ್ ಸೆಂಥಿಲ್: ಅದೆಲ್ಲಾ ಸರಕಾರಕ್ಕೆ ಬಿಟ್ಟಿದ್ದು. ನಾನು ರಾಜೀನಾಮೆ ನೀಡಿದ್ದೇನೆ. ಸರಕಾರದ ವ್ಯವಸ್ಥೆಯಲ್ಲಿ ಅದಕ್ಕೆ ಸಮಯ ಹಿಡಿಯುತ್ತದೆ. ಜನರ ಸಮಸ್ಯೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಜಿಲ್ಲಾಧಿಕಾರಿಯಾಗಿದ್ದುಕೊಂಡು ಆಡಳಿತ ಸೇವೆಯಲ್ಲಿ ಒಂದಷ್ಟು ಮಿತಿಗಳಿರುತ್ತವೆ . ಆದರೆ, ಈಗ ನಾನು ಮುಕ್ತವಾಗಿದ್ದೇನೆ. ನಾನು ಅಭಿಪ್ರಾಯ ಹೇಳಿಕೊಳ್ಳಬಹುದು. ಬರೆಯಬಹುದು, ನಿಮ್ಮ ಜತೆಗಿರಬಹುದು. ಸರಕಾರದ ಮೇಲೆ ಪ್ರಭಾವ ಕೂಡಾ ಬೀರಬಹುದು. ನನ್ನ ರಾಜೀನಾಮೆಯಲ್ಲಿ ಯಾವುದೇ ನೆಗೆಟಿವಿಟಿ ಇಲ್ಲ. ಪ್ರಸಕ್ತ ರಾಷ್ಟ್ರೀಯ ಸನ್ನಿವೇಶಗಳಿಗೆ ನಾನು ಧ್ವನಿಯಾಗುವ ನೈತಿಕ ಜವಾಬ್ಧಾರಿ ನನಗೆ ಈಗ ಹೆಚ್ಚಾಗಿದೆ.
ಹಿಂದೆ ಮತ್ತು ಈಗ ಏನು ವ್ಯತ್ಯಾಸ?
ಸಸಿಕಾಂತ್ ಸೆಂಥಿಲ್: ಬಹಳಷ್ಟು ವ್ಯತ್ಯಾಸವಿದೆ. ನಾನೀಗ ತಳ ಮಟ್ಟದಲ್ಲಿದ್ದೇನೆ. ನಾನು ಸಾಕಷ್ಟು ಕಲಿಯಬಹುದಾಗಿದೆ. ಜಿಲ್ಲಾಧಿಕಾರಿಯಾಗಿ ನಾನು ಅರಿತುಕೊಳ್ಳುವುದಕ್ಕಿಂತಲೂ ಈಗ ನಾನು ಅರಿಯುವುದಕ್ಕೂ ವ್ಯತ್ಯಾಸವಿದೆ.
ಚೆನ್ನೈಯಲ್ಲಿದ್ದುಕೊಂಡು ನಿಮ್ಮ ಕಾರ್ಯ ಮುಂದುವರಿಸುತ್ತೀರಾ?
ಸಸಿಕಾಂತ್ ಸೆಂಥಿಲ್: ಇಲ್ಲ ನಾನು ಬೆಂಗಳೂರಿನಲ್ಲಿದ್ದುಕೊಂಡು ಕರ್ನಾಟದಲ್ಲಿದ್ದುಕೊಂಡು ಎಲ್ಲಿ ಸಮಸ್ಯೆ, ವಿಷಯಗಳಿವೆಯೋ ಅಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಲು ಇಚ್ಚಿಸಿದ್ದೇನೆ.
ಜಿಲ್ಲಾಧಿಕಾರಿಯಾಗಿದ್ದ 2 ವರ್ಷಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಬಹುವಾಗಿ ಕಾಡಿದ ಸಮಸ್ಯೆ?
ಸಸಿಕಾಂತ್ ಸೆಂಥಿಲ್: ನಾನು ಅನೇಕ ಸಲ ಹೇಳಿದ್ದೇನೆ. ದ.ಕ. ಜಿಲ್ಲೆಯಂತಹ ಪ್ರಜ್ಞಾವಂತರ ಜಿಲ್ಲೆ ಇನ್ನೊಂದಿಲ್ಲ. ಕೋಮುವಾದ ಸಮಸ್ಯೆಯನ್ನು ನಾನಿರುವ ಸಮಯದಲ್ಲಿ ಕೇಳಿಲ್ಲ. ಇತರ ಜಿಲ್ಲೆಗಳಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳೇ ಇಲ್ಲಿರುವುದು. ಇಲ್ಲಿನ ರಾಜಕಾರಣಿಗಳು ಕೂಡಾ ಒಳ್ಳೆಯವರು.
ನಿಮಗೆ ಯಾವುದೇ ರೀತಿಯಲ್ಲಿ ಬೆದರಿಕೆ ಬಂದಿದೆಯೇ?
ಸಸಿಕಾಂತ್ ಸೆಂಥಿಲ್: ನನಗೆ ಯಾರು, ಯಾಕೆ ಬೆದರಿಕೆ ಕೊಡುತ್ತಾರೆ.
ಯಾವುದೇ ರಾಜಕೀಯ ಪಕ್ಷದಿಂದ ಆಹ್ವಾನ?
ಸಸಿಕಾಂತ್ ಸೆಂಥಿಲ್: ಚುನಾವಣಾ ರಾಜಕೀಯದ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ. ನಾನು ಈ ಸೇವೆಗೆ ಬರುವ ಮೊದಲು ಕೂಡಾ ಜನರ ಜತೆಗಿದ್ದು ಕೆಲಸ ಮಾಡಬೇಕೆಂದು ಬಯಸಿದ್ದೆ. ಈಗಲೂ ಅದನ್ನೇ ಬಯಸುತ್ತೇನೆ. ಹಾಗಾಗಿ ಚುನಾವಣಾ ರಾಜಕೀಯ ನನಗೆ ಬೇಕಿಲ್ಲ.