ಜನ ಸಾಮಾನ್ಯರ ಬದುಕು ದುರ್ಬರ: ಎಸ್.ಆರ್.ಹಿರೇಮಠ್
ಬೆಂಗಳೂರು, ಅ. 2: ಯಾವುದೇ ಅರ್ಥವ್ಯವಸ್ಥೆ ಜನ ಕೇಂದ್ರಿತವಾಗಿರಬೇಕೇ ಹೊರತು, ಬಂಡವಾಳಶಾಹಿ ಕೇಂದ್ರಿತವಾಗಿರಬಾರದು. ಆದರೆ, ಇವತ್ತಿನ ಅರ್ಥ ವ್ಯವಸ್ಥೆಯಲ್ಲಿ ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದು, ಉಳಿದವರ ಜೀವನವೇ ದುರ್ಬರವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಗ್ರಾಮ ಸೇವಾ ಸಂಘ ಆಯೋಜಿಸಿರುವ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹದ ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಡವಾಳಶಾಹಿ ಆರ್ಥಿಕತೆಯಿಂದ ಅತಿ ಮಹತ್ವವಾದ ಪರಿಸರದ ಮೇಲೂ ಸಾಕಷ್ಟು ಹಾನಿಯಾಗಿದೆ. ಇದನ್ನು ವಿಜ್ಞಾನಿಗಳು, ಪರಿಸರವಾದಿಗಳು ಹೇಳಿದರೂ ಇವತ್ತಿನ ಅಧಿಕಾರಿಗಳಿಗೆ ಅದು ಅರ್ಥವಾಗುತ್ತಿಲ್ಲ. ಪರಿಸರ, ಸಂಸ್ಕೃತಿ ಮತ್ತು ಸಮಾಜದ ನಡುವೆ ಒಂದು ಮಧುರ ಸಂಬಂಧ ಮೂಡುವಂತಹ ಅಭಿವೃದ್ಧಿ ವಿಕಾಸದ ಕಲ್ಪನೆಯಲ್ಲಿ ನಾವು ಮುಂದೆ ಹೋಗಬೇಕು ಎಂದು ಅವರು ಹೇಳಿದರು.
ದುರಾಸೆ ಮತ್ತು ಇವತ್ತಿನ ಅರ್ಥವ್ಯವಸ್ಥೆ ನಮ್ಮನ್ನು ಮತ್ತು ನಮ್ಮ ಪರಿಸರವನ್ನು ವಿಷಮ ಪರಿಸ್ಥಿತಿಗೆ ದೂಡಿದೆ. ಗಾಂಧಿ ಹೇಳಿದ ಅರ್ಥ ವ್ಯವಸ್ಥೆಯನ್ನು ಮತ್ತು ಇವತ್ತಿನ ಪರಿಸ್ಥಿತಿಯನ್ನು ನಾವೆಲ್ಲ ಅರ್ಥಮಾಡಿಕೊಂಡು ನಮ್ಮ ಸಾಮೂಹಿಕ ಶಕ್ತಿಯನ್ನು ಬಳಸಿ ಪವಿತ್ರ ಆರ್ಥಿಕ ವ್ಯವಸ್ಥೆ ಕಡೆಗೆ ಹೋಗುವುದು ಗಂಭೀರ ಅವಶ್ಯಕತೆ ಇದೆ ಎಂದವರು ಹೇಳಿದರು.
ಗ್ರಾಕೂಸ್ ಸಂಘಟನೆಯ ಅಭಯ್ ಕುಮಾರ್ ಮಾತನಾಡಿ, ಹಳ್ಳಿಗಳಲ್ಲೂ ನಿರುದ್ಯೋಗ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಸುಶಿಕ್ಷಿತರಿಗೂ ಉದ್ಯೋಗ ಸಿಗದೆ ಪರದಾಡುವಂತಾಗಿದೆ. ಪರಿಸರ ಹಾನಿಯಿಲ್ಲದೆ ಜೀವನೋಪಾಯಗಳನ್ನು ಹಳ್ಳಿಗಳಲ್ಲೆ ಕಂಡುಕೊಳ್ಳುವ ಬಗ್ಗೆ ಗಾಂಧಿ ಕನಸು ಕಾಣುತ್ತಿದ್ದರು. ನಮ್ಮ ಬದುಕುಗಳನ್ನು ಸುಸ್ಥಿರವಾಗಿ ಕಟ್ಟಿಕೊಳ್ಳುವ ಅಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಇರುವುದು ಇದೊಂದೇ ದಾರಿ ಎಂದರು.
ಗ್ರಾಮ ಸೇವಾ ಸಂಘದ ಸಂಚಾಲಕ ಅಭಿಲಾಷ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅಭಯ ಕುಮಾರ್, ಸಾಮಾಜಿಕ ಕಾರ್ಯಕರ್ತೆ ಕುಸುಮಾ ಶಾನುಭಾಗ್ ಮತ್ತು ಕಲಾವಿದ ಹನುಮಂತು ಈಶ್ವರ್ ಮೊದಲ ದಿನದ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದರು.
‘ಗಾಂಧಿ ಸೇವಾ ಪ್ರಶಸ್ತಿ’ ಪುರಸ್ಕೃತ, ಸಮಾಜಸೇವಕ ಜಿ.ಎಸ್.ಜಯದೇವ್, ಕರ್ನಾಟಕ ರಾಷ್ಟ್ರ ಸಮಿತಿ ಸಂಸ್ಥಾಪಕ ರವಿಕೃಷ್ಣಾರೆಡ್ಡಿ, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ದಂಪತಿ, ಹಿರಿಯ ಪತ್ರಕರ್ತ ರವೀಂದ್ರ ತ್ರಿಪಾಠಿ, ಆರ್ಥಿಕತಜ್ಞ ವೆಂಕಟನಾಥನ್, ಗಾಂಧಿವಾದಿ ಪ್ರಸನ್ನ ಪಾಲ್ಗೊಂಡಿದ್ದರು.
ನಾಳೆ ವಂದನಾಶಿವ
‘ಜನಕೇಂದ್ರಿತ ಅರ್ಥ ವ್ಯವಸ್ಥೆಗೆ ಆಗ್ರಹಿಸಿ ನಾಳಿನ(ಎರಡನೆ ದಿನ) ಉಪವಾಸ ಸತ್ಯಾಗ್ರಹದಲ್ಲಿ ಖ್ಯಾತ ಪರಿಸರವಾದಿ ವಂದನಾಶಿವ ಅವರು ಭಾಗವಹಿಸಲಿದ್ದಾರೆ’