ಮಹಿಳೆಯರು ಸಿಟ್ಟನ್ನು ವ್ಯಕ್ತಪಡಿಸದೆ ನಿಯಂತ್ರಿಸುತ್ತಿದ್ದರೆ...
ಆರೋಗ್ಯ
ಮಹಿಳೆಯರಿಗೆ ಕಹಿ ಮಾಹಿತಿಯೊಂದು ಇಲ್ಲಿದೆ. ನಿಮ್ಮ ಆತ್ಮೀಯರು ಮತ್ತು ಪ್ರೀತಿಪಾತ್ರರ ಬಗ್ಗೆ ಸಿಟ್ಟು ಬರುತ್ತದೆಯೇ ಅಥವಾ ನಿಮ್ಮ ಸಂಬಂಧದಲ್ಲಿ ಋಣಾತ್ಮಕ ಭಾವನೆಯನ್ನು ಹೊರಹಾಕುವುದು ನಿಮಗೆ ಕಷ್ಟವಾಗುತ್ತಿದೆಯೇ ಅಥವಾ ನಿಮ್ಮ ಸಿಟ್ಟನ್ನು ವ್ಯಕ್ತಪಡಿಸುವುದು ನಿಮಗೆ ಸಾಧ್ಯವಾಗುತ್ತಿಲ್ಲವೇ? ನೂತನ ಸಂಶೋಧನೆಯೊಂದು ನಿಮ್ಮ ಆಂತರಿಕ ಭಾವನೆಗಳನ್ನು ಮತ್ತು ಸಿಟ್ಟನ್ನು ಹಂಚಿಕೊಳ್ಳುವಲ್ಲಿ ನಿಮಗೆ ಸಮಸ್ಯೆಯಾಗುತ್ತಿದ್ದರೆ ನೀವು ಮಿದುಳಿನ ಆಘಾತ ಅಥವಾ ಪಾರ್ಶ್ವವಾಯುವಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದೀರಿ ಎನ್ನುವುದನ್ನು ಬೆಟ್ಟು ಮಾಡಿದೆ. ವೆಸ್ಟರ್ನ್ ವಾಷಿಂಗ್ಟೋನಿಯನ್ ವಿವಿಯ ಮನೋವೈಜ್ಞಾನಿಕ ವಿಭಾಗವು 40ರಿಂದ 60 ವರ್ಷ ವಯೋಮಾನದ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ತಮ್ಮ ಕೋಪತಾಪಗಳನ್ನು ಒಳಗೊಳಗೆ ಅದುಮಿಟ್ಟುಕೊಂಡ ಮಹಿಳೆಯರು ಗರ್ಭಕಂಠದ ಅಪಧಮನಿಯಲ್ಲಿ ಪ್ಲೇಕ್ ಅಥವಾ ಪಾಚಿ ಸಂಗ್ರಹಗೊಳ್ಳುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದು ಬೆಳಕಿಗೆ ಬಂದಿದೆ.
ಸಂಬಂಧದಲ್ಲಿ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದು ಅಥವಾ ಮನಸ್ಸಿಗೆ ವಿರುದ್ಧವಾಗಿ ಯಾವುದಕ್ಕೂ ಮತ್ತು ಎಲ್ಲದಕ್ಕೂ ಒಪ್ಪಿಕೊಳ್ಳುವುದು ಮಹಿಳೆಯರಲ್ಲಿ ಸಿಟ್ಟನ್ನು ಹೆಚ್ಚಿಸಬಲ್ಲದು. ಇವೆಲ್ಲವೂ ಮಹಿಳೆಯರನ್ನು ಪ್ರಕ್ಷುಬ್ಧ ಸ್ಥಿತಿಗೆ ತಳ್ಳುತ್ತವೆ ಎನ್ನುತ್ತಾರೆ ಮುಖ್ಯ ಸಂಶೋಧಕ ಡೆನಾ ಜಾಕ್.
ತಮ್ಮ ಅಗತ್ಯಗಳು ಮತ್ತು ಭಾವನೆಗಳ ಕುರಿತು ಕಡಿಮೆ ಮಾತನಾಡುವ ಮಹಿಳೆಯರ ಗರ್ಭಕಂಠದ ಅಪಧಮನಿಯಲ್ಲಿ ಪಾಚಿ ಅಥವಾ ಲೋಳೆಯಂತಹ ವಸ್ತು ಸಂಗ್ರಹಗೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯ ಕರೆನ್ ಝಾಕೊವಸ್ಕಿ. ಇಂತಹ ಪ್ರಕರಣಗಳಲ್ಲಿ ಈ ಸಾಧ್ಯತೆಯು ಶೇ.14ರಷ್ಟು ಅಧಿಕ ಎಂದು ತಿಳಿಸಿರುವ ಅವರು, ತಮ್ಮ ಅಪಧಮನಿಗಳಲ್ಲಿ ಹೆಚ್ಚು ಪಾಚಿ ಸಂಗ್ರಹಗೊಂಡಿರುವ ಮಹಿಳೆಯರಿಗೆ ಹೋಲಿಸಿದರೆ ಕಡಿಮೆ ಪಾಚಿಯಿರುವ ಮಹಿಳೆಯರು ಮಾತನಾಡುವುದು ಹೆಚ್ಚು. ಅಪಧಮನಿಯಲ್ಲಿ ಹೆಚ್ಚು ಪ್ಲೇಕ್ ಸಂಗ್ರಹಗೊಂಡರೆ ಅದು ರಕ್ತಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದ್ರೋಗಗಳಿಗೆ ಕಾರಣವಾಗುತ್ತದೆ. ನಿಕಟ ಸಂಬಂಧಗಳಲ್ಲಿ ಸ್ವಯಂ ಅಭಿವ್ಯಕ್ತಿಯನ್ನು ಅಳೆಯಲು ಜಾಕ್ ಮಾಪಕವೊಂದನ್ನು ಅಭಿವೃದ್ಧ್ಧಿಗೊಳಿಸಿದ್ದಾರೆ. ಅವರು ಹೇಳುವಂತೆ ನೀವು ವೌನವಾಗಿದ್ದರೆ ಮತ್ತು ಜನರಿಂದ ದೂರವಿದ್ದರೆ ಅದು ಇತರರಿಂದ ನಿಮ್ಮನ್ನು ಪ್ರತ್ಯೇಕಗೊಳಿಸುವುದು ಮಾತ್ರವಲ್ಲ, ನೀವು ಖುದ್ದು ನಿಮ್ಮಿಂದಲೂ ದೂರವಾಗುತ್ತೀರಿ.
ಹೆಚ್ಚಿನ ಪ್ರಕರಣಗಳಲ್ಲಿ ನಾವು ನಮ್ಮ ಹೃದಯದಲ್ಲಿರುವುದನ್ನು ಧ್ವನಿಯ ಮೂಲಕ ಹೊರಹಾಕುತ್ತೇವೆ. ಆದರೆ ಭಾವನೆಗಳನ್ನು ಒಳಗೇ ದಮನಿಸಿಕೊಂಡರೆ ಮತ್ತು ವೌನವಾಗಿದ್ದರೆ ಮಹಿಳೆಯರಿಗೆ ತಮ್ಮ ಭಾವನೆಗಳ ಬಗ್ಗೆಯೇ ಗೊಂದಲವುಂಟಾಗುತ್ತದೆ. ತಾನೇನೋ ತಪ್ಪು ಮಾಡಿದ್ದೇನೆ ಎಂಬ ಭಾವನೆ ಮಹಿಳೆಯರಲ್ಲಿ ಮೂಡತೊಡಗುತ್ತದೆ ಮತ್ತು ಇದು ಅವರಲ್ಲಿ ಸಿಟ್ಟನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ಮಹಿಳೆಯರು ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಾರೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ ಎನ್ನುತ್ತಾರೆ ಜಾಕ್.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 304 ಮಹಿಳೆಯರು ಸ್ಪಂದಿಸಿದ ರೀತಿ ಜಾಕ್ ಅವರ ಮಾಪನಕ್ಕೆ ಆಧಾರವಾಗಿತ್ತು. ರಕ್ತದೊತ್ತಡ, ಎತ್ತರ, ತೂಕ ಇತ್ಯಾದಿ ದತ್ತಾಂಶಗಳನ್ನು ಜಾಕ್ ಪಡೆದುಕೊಂಡಿದ್ದರು. ಜೊತೆಗೆ ಜನಸಂಖ್ಯಾ ಸ್ವರೂಪ, ವೈದ್ಯಕೀಯ ಇತಿಹಾಸ ಮತ್ತು ಒತ್ತಡ ಆಧರಿಸಿದ ಸ್ವಯಂ-ವರದಿಗಳನ್ನೂ ಅವರು ಸಂಗ್ರಹಿಸಿದ್ದರು.
ಕೋಪತಾಪಗಳನ್ನು ತನ್ನೊಳಗೇ ದಮನಿಸಿಕೊಂಡು ಮೌನವಾಗಿರುವ ಮಹಿಳೆ ಒತ್ತಡ ಮತ್ತು ಸಿಟ್ಟಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ ಮತ್ತು ಇವೆರಡೂ ಹೃದ್ರೋಗಗಳೊಂದಿಗೆ ತಳುಕು ಹಾಕಿಕೊಂಡಿವೆ ಎಂದು ಸಂಶೋಧನಾ ವರದಿಯು ಹೇಳಿದೆ.