ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ
ಭಾರತೀಯ ಕ್ಯಾಂಪಸ್‌ಗಳ ಮೇಲೆ ಆಕ್ರಮಣ-1
ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್), ಭಾರತೀಯ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತ ಜನತಾ ನ್ಯಾಯಮಂಡಳಿಯನ್ನು ಸಂಘಟಿಸಿತ್ತು. ಈ ನ್ಯಾಯಮಂಡಳಿಯು ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್, ನ್ಯಾಯಮೂರ್ತಿ (ನಿವೃತ್ತ) ಬಿ.ಜಿ ಕೋಲ್ಸೆ-ಪಾಟೀಲ್, ಪ್ರೊ. ಅಮಿತ್ ಬಡೂರಿ, ಡಾ. ಉಮಾ ಚಕ್ರವರ್ತಿ, ಪ್ರೊ. ಟಿ.ಕೆ. ಊಮ್ಮನ್, ಪ್ರೊ. ವಸಂತಿ ದೇವಿ, ಪ್ರೊ. ಘನಶ್ಯಾಮ್ ಶಾ, ಪ್ರೊ. ಮೆಹರ್ ಇಂಜಿನಿಯರ್, ಪ್ರೊ. ಕಲ್ಪನಾ ಕಣ್ಣಬೀರನ್, ಪಮೇಲಾ ಫಿಲಿಪೋಸ್ ಅವರನ್ನು ಒಳಗೊಂಡಿತ್ತು. ಅದರ ವರದಿಯ ಆಧಾರದಲ್ಲಿ ಈ ಲೇಖನ ಸರಣಿಯನ್ನು ಸಿದ್ಧಪಡಿಸಲಾಗಿದ್ದು, ಮೊದಲನೆಯ ಕಂತು ಇಲ್ಲಿದೆ.
ದೇಶದ ಕಡು ಬಡವರನ್ನೂ ಒಳಗೊಂಡಂತೆ ನಾಗರಿಕರಿಂದ ತೆರಿಗೆ ರೂಪದಲ್ಲಿ ಸರಕಾರಕ್ಕೆ ಬರುವ ಹಣವು ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿಯೇ ಇದೆ. ಶಿಕ್ಷಣವು ಈ ಕಾರ್ಯದಲ್ಲಿ ಅತೀ ಮುಖ್ಯ ಸ್ಥಾನ ಹೊಂದಿದೆ. ಆದರೆ, 1992ರಲ್ಲಿ ಭಾರತೀಯ ಆರ್ಥಿಕತೆಯ ಉದಾರೀಕರಣ ಆರಂಭವಾದಂದಿನಿಂದ ವಿವಿಧ ಸರಕಾರಗಳು ಶಿಕ್ಷಣದ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡಿವೆ. ಹಲವಾರು ರಾಜ್ಯಗಳ ವಿಶ್ವವಿದ್ಯಾನಿಲಯಗಳಲ್ಲಿ ಸೂಕ್ತವಾದ ಬೋಧಕ ಸಿಬ್ಬಂದಿ ಮತ್ತು ಮೂಲಭೂತ ಸೌಲಭ್ಯಗಳು ಕೂಡಾ ಇಲ್ಲ. ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಶಿಕ್ಷಣದಲ್ಲಿ ಹಿಂಜರಿತದ ಪ್ರಕ್ರಿಯೆ ತೀವ್ರಗೊಳ್ಳುತ್ತಿದೆ. ವಾಸ್ತವವಾಗಿ ವಿಶ್ವವಿದ್ಯಾನಿಲಯಗಳು ಕೇವಲ ಪರೀಕ್ಷಾ ಮಂಡಳಿಗಳಾಗಿಬಿಟ್ಟಿವೆ. ಆದರೆ, ಶಿಕ್ಷಣದ ಖಾಸಗೀಕರಣವು ಇನ್ನೊಂದು ಆಯಾಮವನ್ನೂ ಪರಿಚಯಿಸಿದೆ. ಅದು ಉನ್ನತ ಕಲಿಕೆಯ ಸಂಸ್ಥೆಗಳು ಉಳಿಯಬೇಕೆಂದಾದರೆ, ಲಾಭವನ್ನು ಹೆಚ್ಚಿಸುವುದೊಂೇ ದಾರಿ ಎಂಬ ತತ್ವವನ್ನು ಆಧರಿಸಿದೆ.
ಉದಾರೀಕರಣೋತ್ತರದ ಅವಧಿಯಲ್ಲಿ ಬೇರೂರಿದ ಈ ವಿದ್ಯಮಾನಗಳು ಪ್ರಸ್ತುತ ಎನ್‌ಡಿಎ ಆಡಳಿತದಲ್ಲಿ ಇನ್ನಷ್ಟು ಗಟ್ಟಿಗೊಂಡಿವೆ. ತಥಾಕಥಿತ ‘ಶಿಕ್ಷಣ ಸುಧಾರಣೆಗಳು’ ಉನ್ನತ ಶಿಕ್ಷಣದ ಖಾಸಗೀಕರಣವನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಲ್ಲದೆ, ಈ ಕ್ಷೇತ್ರಕ್ಕೆ ಸರಕಾರಿ ಅನುದಾನವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿವೆ. ಪರಿಣಾಮವಾಗಿ, ಬಜೆಟ್ ಅನುದಾನದಲ್ಲಿ ಕಡಿತ ಮತ್ತು ವಿದ್ಯಾರ್ಥಿಗಳ ಪ್ರವೇಶಾವಕಾಶದ ವಿಷಯದಲ್ಲಿ ಕಡಿತ ಉಂಟಾಗಿದೆ. ಖಾಸಗೀಕರಣವು ಒಂದು ಸಂಕೀರ್ಣ ಪ್ರಕ್ರಿಯೆ. ಸಾರ್ವಜನಿಕ ಶಿಕ್ಷಣವನ್ನು ಖಾಸಗೀಕರಣಗೊಳಿಸಿದಾಗ, ತಾತ್ಕಾಲಿಕ ಕ್ರಮಗಳು ಗಣನೀಯವಾಗಿ ಏರುತ್ತವೆ. ಖಾಸಗಿ ಪಾಲುದಾರರಿಗೆ ಸ್ವಯಂ ಹಣಕಾಸಿನ ಕೋರ್ಸುಗಳನ್ನು ಆರಂಭಿಸಿ, ಗರಿಷ್ಠ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟು, ಅದು ಕೊನೆಗೊಂದು ನಿಯಮವೇ ಆಗಿಬಿಡುತ್ತದೆ. ಉನ್ನತ ಶಿಕ್ಷಣದ ಬೇಡಿಕೆಯು ತ್ವರಿತವಾಗಿ ಬೆಳೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಖಾಸಗೀಕರಣದಿಂದ ನೋಂದಣಿಯಲ್ಲಿ ಭಾರೀ ಹೆಚ್ಚಳವಾದರೂ, ಕರ್ಮಠತೆ ಮತ್ತು ಸಂಪ್ರದಾಯಶೀಲತೆಯ ತತ್ವಗಳು ಜೊತೆಗೇ ಬೆಳೆಯುತ್ತವೆ.
ಉನ್ನತ ಶಿಕ್ಷಣದಲ್ಲಿ ನೋಂದಣಿ ಪ್ರಮಾಣವು ಕಾಲು ಶತಮಾನಕ್ಕೆ ಮೊದಲು 11 ಶೇಕಡಾ ಇದ್ದದ್ದು, ಇಂದು 25 ಶೇಕಡಾವನ್ನು ಮೀರಿದೆ. ಪ್ರಸ್ತುತ ವಿದ್ಯಾರ್ಥಿನಿಯರ ಶೇಕಡಾವಾರು 46ರಷ್ಟಿದೆ. ಬೋಧಕ ವರ್ಗದ ಸಮುದಾಯಾಧರಿತ ಸಂರಚನೆಯು ಬದಲಾಗದೇ ಹೋದರೂ, ವಿದ್ಯಾರ್ಥಿಗಳ ಸಂರಚನೆ ತೀರಾ ಬದಲಾಗಿದೆ. ಈ ಹಿನ್ನೆಲೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಬಂಡಾಯ ಪ್ರವೃತ್ತಿಯನ್ನು ಕಾಣಬೇಕು ಮತ್ತು ಅರ್ಥೈಸಬೇಕು. ವಿದ್ಯಾರ್ಥಿಗಳಲ್ಲಿ ದಮನಿತ ಸಮುದಾಯಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬೋಧಕರಲ್ಲಿ ಇನ್ನೂ ಮುಂದುವರಿದ ಜಾತಿಗಳದ್ದೇ ಪ್ರಾಬಲ್ಯ.
ವಿಶ್ವವಿದ್ಯಾನಿಲಯಗಳ ಹಣಕಾಸಿನ ಅನುದಾನ ನೀಡಿಕೆಯು ತೀರಾ ಏರುಪೇರಿನದ್ದಾಗಿದೆ ಮತ್ತು ಪರಿಣಾಮವಾಗಿ ಅದು ಸಾಮಾಜಿಕ ಅಸಮಾನತೆಯನ್ನು ಬಲಗೊಳಿಸುತ್ತದೆ. ಇಂದು ಕೇಂದ್ರ ವಿಶ್ವವಿದ್ಯಾನಿಲಯಗಳು ರಾಜ್ಯ ವಿಶ್ವವಿದ್ಯಾನಿಲಯಗಳಿಗಿಂತ ನಾಲ್ಕು ಪಟ್ಟು ಹಣಕಾಸಿನ ನೆರವು ಪಡೆಯುತ್ತಿವೆ. ಈ ಪ್ರಕ್ರಿಯೆಯಲ್ಲಿ, ಹೆಚ್ಚು ಬಡವರು ಮಾತ್ರವಲ್ಲದೆ, ದೂರದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿರುವ ಚಿಕ್ಕ ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಅಸಮರ್ಥವಾಗುತ್ತವೆ. ಇದರ ಪರಿಣಾಮವಾಗಿ ಉನ್ನತ ಶಿಕ್ಷಣವು ಶ್ರೀಮಂತರು, ಅನುಕೂಲವಂತರಿಗೆ ಮಾತ್ರ ಸಿಗುತ್ತಿರುವುದು ಮುಂದುವರಿದಿದೆ. ಯಾರಿಗೆ ಈ ಸಂಪನ್ಮೂಲಗಳನ್ನು ನಿಜವಾಗಿಯೂ ನೀಡಬೇಕಾಗಿತ್ತೋ, ಅಂತಹ ಬಡವರು ಮತ್ತು ಕಡೆಗಣಿಸಲ್ಪಟ್ಟವರಿಂದ ಅದು ಹೆಚ್ಚುಹೆಚ್ಚು ದೂರದೂರಕ್ಕೆ ಸರಿಯುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ.
ಈ ಪ್ರಕ್ರಿಯೆಯಲ್ಲಿ, ಸಾಮಾಜಿಕ ಸಮಸ್ಯೆಗಳನ್ನು ಸುಧಾರಿಸಬೇಕಾಗಿದ್ದ ಉನ್ನತ ಶಿಕ್ಷಣವು ಜನಸಾಮಾನ್ಯರ ವಾಸ್ತವದಿಂದ ಹೆಚ್ಚುಹೆಚ್ಚು ದೂರವಾಗುತ್ತಾ ಹೋಗುತ್ತಿದೆ. 1990ರ ದಶಕದ ಬಿರ್ಲಾ ಅಂಬಾನಿ ವರದಿಯು ಉನ್ನತ ಶಿಕ್ಷಣದ ಖಾಸಗೀಕರಣ ಮತ್ತು ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಕಡಿತಕ್ಕೆ ನೀಲನಕ್ಷೆಯನ್ನು ಒದಗಿಸಿತ್ತು. ಇದು ಖಾಸಗಿ ಸಂಸ್ಥೆಗಳು ನಾಯಿಕೊಡೆಗಳಂತೆ ಎದ್ದೇಳುವುದಕ್ಕೆ ಮತ್ತು ಅನ್ಯಾಯ, ಅಕ್ರಮಗಳಿಗೆ ದಾರಿಮಾಡಿಕೊಟ್ಟಿತ್ತು. ಇಂತಹ ಸಂಸ್ಥೆಗಳು ಕಾರ್ಯಾಚರಿಸಲು ಪರವಾನಿಗೆ ಪಡೆಯುವ ಆರಂಭಿಕ ಪ್ರಕ್ರಿಯೆಯಿಂದಲೇ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿವೆ. ಇಂತಹ ಒಂದು ವಾಸ್ತವಿಕತೆಯ ಪರಿಣಾಮಗಳಿಗೆ ಮಧ್ಯಪ್ರದೇಶದ ವ್ಯಾಪಂ ಹಗರಣ ಒಂದು ‘ಉತ್ತಮ’ ಉದಾಹರಣೆಯಾಗಿದೆ. ಇಂದು ದೇಶದ ಉದ್ದಗಲಕ್ಕೂ ಸರಕಾರಗಳು ಶಿಕ್ಷಣಕ್ಕೆ ಹಣಕಾಸು ಒದಗಿಸುವ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಇದರಿಂದ ದೊಡ್ಡ ಉದ್ದಿಮೆಗಳು ಮತ್ತು ಕಾರ್ಪೊರೇಟ್‌ಗಳು ಭಾರೀ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಪ್ರವೇಶ ಮಾಡಿವೆ. ಇದರ ಋಣಾತ್ಮಕ ಪರಿಣಾಮಗಳು ಅನೇಕವಾಗಿದ್ದು, ದೇಶದ ಸಾಕ್ಷರತಾ ಪ್ರಮಾಣವು ಶೇಕಡಾ 75ರಲ್ಲೇ ಸ್ಥಗಿತಗೊಳ್ಳುವುದಕ್ಕೆ ಒಂದು ಕಾರಣವಾಗಬಹುದು.
ಸರಕಾರದ ನೆರವಿಲ್ಲದೆ ಸ್ವಯಂ ಹಣಕಾಸು ಒದಗಿಸಿಕೊಳ್ಳುವ ವ್ಯವಸ್ಥೆಯು ಬೋಧಕ ಸಿಬ್ಬಂದಿಯನ್ನು ನಿರಂತರ ಅತಂತ್ರ ಸ್ಥಿತಿಯಲ್ಲಿ ಮತ್ತು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇರಿಸಿದೆ. ಇದು ಇಡೀ ವ್ಯವಸ್ಥೆಯ ಹೃದಯದ ಮೇಲೆಯೇ ದುಷ್ಪರಿಣಾಮ ಬೀರುತ್ತಿದೆ. ಬೋಧಕ ಸಿಬ್ಬಂದಿಯ ನೇಮಕಾತಿಯಲ್ಲಿಯೇ ಬೆಳೆಯುತ್ತಿರುವ ತಾತ್ಕಾಲಿಕತೆಯ ಮನೋವೃತ್ತಿಯು ಶಿಕ್ಷಕರಲ್ಲಿ ವ್ಯಾಪಕವಾದ ಆತಂಕ ಉಂಟುಮಾಡಿರುವುದಲ್ಲದೆ, ಅದು ಶಿಕ್ಷಕರು ಮಾತ್ರವಲ್ಲದೇ, ವಿದ್ಯಾರ್ಥಿಗಳಲ್ಲಿಯೂ ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಶ್ನಿಸುವ ಮನೋಭಾವವನ್ನೇ ತೀವ್ರವಾಗಿ ಕುಗ್ಗಿಸಿದೆ.
ಸಾಕಷ್ಟು ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿಲ್ಲದೆಯೇ ಸಣ್ಣ ಶಾಲೆಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವು ಹೆಸರಿನಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಒಂದು ಜನಪ್ರಿಯ ಬ್ರಾಂಡ್ ಹೆಚ್ಚು ಬಿಡ್ ಮಾಡಿದವರಿಗೆ ಫ್ರಾಂಚೈಸಿ ನೀಡುವಂತಹ ವ್ಯವಸ್ಥೆ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ಮಾದರಿಯನ್ನು ಕೆಲವೆಡೆ ಅನುಸರಿಸಲಾಗಿದೆ. ವ್ಯಾಪಾರವೇ ಶಿಕ್ಷಣವನ್ನು ನಿರ್ದೇಶಿಸುತ್ತಿದೆಯೇ ಹೊರತು, ಸ್ಥಳೀಯ ಸಮುದಾಯಗಳು ಅಥವಾ ಒಟ್ಟಾರೆಯಾಗಿ ಸಮಾಜದ ಅಗತ್ಯಗಳಲ್ಲ. ಇನ್ನೊಂದು ಪ್ರವೃತ್ತಿ ಎಂದರೆ, ಶಿಕ್ಷಣವು ಹೆಚ್ಚುಹೆಚ್ಚಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣಗೊಳ್ಳುವುದರ ಜೊತೆಗೆಯೇ ಹೆಚ್ಚುಹೆಚ್ಚು ಕೇಂದ್ರೀಕರಣಗೊಳ್ಳುತ್ತಿರುವುದು. ತುರ್ತುಪರಿಸ್ಥಿತಿ (1975)ಯ ತನಕ ಶಿಕ್ಷಣವು ಕೇಂದ್ರಪಟ್ಟಿಯಲ್ಲಿತ್ತು. 1975ರ ಬಳಿಕ ಅದನ್ನು ಸಮಾನಪಟ್ಟಿಗೆ ಸೇರಿಸಲಾಯಿತು. ಇಂದು ಮತ್ತೆ ಕೇಂದ್ರ ಸರಕಾರವು ಉನ್ನತ ಶಿಕ್ಷಣದ ಸ್ವರೂಪವನ್ನೇ ರೂಪಿಸುವಲ್ಲಿ ಸಂಪೂರ್ಣ ನಿಯಂತ್ರಣವನ್ನು ಹೇರುವಲ್ಲಿಯ ವರೆಗೆ ಬಂದಿದೆ. ಇದು ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಹಿನ್ನಡೆ ಮತ್ತು ಸರ್ವಾಧಿಕಾರಿ ವ್ಯವಸ್ಥೆಯ ಬೆಳವಣಿಗೆಯನ್ನು ಪ್ರತಿಫಲಿಸುತ್ತದೆ.
ಸ್ಥಳೀಯ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸಮಾಡುವ ಕೆಲವು ನಿರ್ದಿಷ್ಟ ಪ್ರವೇಶ ಪರೀಕ್ಷಾ ಮಾದರಿಗಳನ್ನು ಕೇಂದ್ರ ಸರಕಾರವು ಹೇರಿರುವುದು ಸೇರಿದಂತೆ ಹಲವಾರು ಕ್ರಮಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ. ಈ ಅಂಶಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಮಿಳುನಾಡಿನ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿಗೆ ಸೇರಿದ ಅನಿತಾ ಎಂಬ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ, ವೈದ್ಯಕೀಯ ಅಧ್ಯಯನ ಮಾಡಲು ಬಯಸಿದ್ದರೂ, ಪ್ರವೇಶ ಪರೀಕ್ಷೆಯ ಹೊಸ ಮಾದರಿಯಾದ ‘ನೀಟ್’ (ಎನ್‌ಇಇಟಿ)ನ ಹೇರಿಕೆಯಿಂದಾಗಿ ಹಾಗೆ ಮಾಡಲಾಗಲಿಲ್ಲ. ಈ ರೀತಿಯ ಪ್ರವೇಶ ಪರೀಕ್ಷೆಗಳು ದೇಶದ ಒಕ್ಕೂಟ ವ್ಯವಸ್ಥೆಯನ್ನು ಕಡೆಗಣಿಸುವುದರ ಜೊತೆಗೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಉನ್ನತ ಶಿಕ್ಷಣದ ಪ್ರವೇಶಾವಕಾಶ ವ್ಯವಸ್ಥೆಯನ್ನೇ ಏಕರೂಪಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ. ಈ ಪ್ರಕರಣದಲ್ಲಿ ಅನಿತಾ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದರು. ಆದರೆ, ಅಲ್ಲಿ ಸೋತಾಗ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಂಡರು. ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗುವಂತೆ ಪಠ್ಯವಿನ್ಯಾಸ, ಪಠ್ಯಕ್ರಮ ಮತ್ತು ಶೈಕ್ಷಣಿಕ ನೀತಿಗಳನ್ನು ರೂಪಿಸುವ ವಿಷಯದಲ್ಲಿ ರಾಜ್ಯ ಸರಕಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಬೇಕು. ಅನಿತಾ ಅವರ ದುರಂತ ಸಾವು ಶಿಕ್ಷಣದಲ್ಲಿ ಕೇಂದ್ರೀಕೃತ ನೀತಿನಿರೂಪಣೆಯ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ.
ಸ್ವಾಯತ್ತೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತಗಳಿಗೆ ಪ್ರವೇಶಾತಿಗಳನ್ನು ನಿಯಂತ್ರಿಸುವ, ಪಠ್ಯವಿಷಯ, ಪಠ್ಯ ಪುಸ್ತಕಗಳನ್ನು ನಿರ್ಧರಿಸುವ ವಿಷಯದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. ಇದು ಬಹಳಷ್ಟು ಬಾರಿ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇದೇ ಹೊತ್ತಿಗೆ, ಪಠ್ಯ ವಿಷಯಗಳನ್ನು ನಿರ್ಧರಿಸುವ ಶಿಕ್ಷಕರ ಸ್ವಾಯತ್ತೆಯನ್ನು ಹೆಚ್ಚುಹೆಚ್ಚಾಗಿ ಕಡಿತಗೊಳಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ನಿಧಿಯನ್ನು ಕಡಿತಗೊಳಿಸುವುದರ ಮೂಲಕ ಶೈಕ್ಷಣಿಕ ಸಾಲವನ್ನು ತೆಗೆದುಕೊಳ್ಳುವಂತೆ ಸರಕಾರವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಜೊತೆಗೆ ವಿದ್ಯಾರ್ಥಿವೇತನಗಳ ಸಂಖ್ಯೆ ಕಡಿಮೆ ಮಾಡುತ್ತಿದೆ.
ಇದರ ಪರಿಣಾಮವಾಗಿ ಹೆಚ್ಚು ತೊಂದರೆಗೆ ಒಳಗಾಗುವವರೆಂದರೆ, ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಇತರ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು. ವಿದ್ಯಾರ್ಥಿವೇತನಗಳ ವಿತರಣೆಯಲ್ಲಿ ವಿಳಂಬ ಕೂಡಾ- ದುರ್ಬಲ ವರ್ಗಗಳ ವಿದ್ಯಾರ್ಥಿಗಳನ್ನು ಅತೀ ಹೆಚ್ಚು ಬಾಧಿಸುತ್ತಿದೆ. ಕಾಲಬದ್ಧ ಕ್ರಮದಲ್ಲಿ ನಿಧಿ ವರ್ಗಾವಣೆ ಆಗದಿರುವುದರಿಂದ ಅತೀ ಹೆಚ್ಚು ತೊಂದರೆಯಾಗುತ್ತಿರುವುದು ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ. ನ್ಯಾಯಮಂಡಳಿಯ ಮುಂದೆ ಸಲ್ಲಿಸಲಾದ ಸಾಕ್ಷ್ಯಗಳಲ್ಲಿ ಒಂದು ಕರುಣಾಜನಕವಾಗಿದೆ. ಬಿಹಾರದ ಎಸ್ಸಿ ವರ್ಗಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ತನಗೆ ಬರಬೇಕಾದ ವಿದ್ಯಾರ್ಥಿವೇತನದ ಹಣ ಸಮಯಕ್ಕೆ ಸರಿಯಾಗಿ ಬರದೇ ಇದ್ದುದರಿಂದ ಶಿಕ್ಷಣವನ್ನೇ ಕೈಬಿಡಬೇಕಾಯಿತು. ವೈದ್ಯನಾಗುವ ಕನಸನ್ನು ಬಿಟ್ಟು ತಾನು ಮತ್ತು ತನ್ನ ಕುಟುಂಬವನ್ನು ಸಾಕಲು ಎನ್‌ಆರ್‌ಇಜಿಎಯಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು.
ಇಂದು ವಿದ್ಯಾರ್ಥಿವೇತನ ಕುರಿತ ಧೋರಣೆಗಳನ್ನು ಆರ್ಥಿಕ ನೀತಿಗೆ ಥಳಕು ಹಾಕಲಾಗುತ್ತಿದೆ ಮತ್ತು ವಿದ್ಯಾರ್ಥಿವೇತನದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಸಾಲ ನೀಡಿ ಅವರ ಹೆಸರಿನಲ್ಲಿ ಲಾಭಮಾಡಿಕೊಳ್ಳುವಂತೆ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿವೇತನಗಳ ಸಂಖ್ಯೆ ಕಡಿಮೆಯಾಗುತ್ತಿರುವಂತೆಯೇ ಮತ್ತು ಅವುಗಳ ವಿತರಣೆ ಹೆಚ್ಚು ಎರ್ರಾಬಿರ್ರಿಯಾಗುತ್ತಿರುವಂತೆಯೇ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಹಣ ಹೊಂದಿಸಿಕೊಳ್ಳಲು ಬ್ಯಾಂಕ್ ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯವಾಗುತ್ತಿದೆ. ಸದಾಸಿದ್ಧರಾಗಿರುವ ಬ್ಯಾಂಕಿಂಗ್ ಕ್ಷೇತ್ರದ ಪ್ರತಿನಿಧಿಗಳು ಇಂತಹ ವಿದ್ಯಾರ್ಥಿಗಳ ಬೆನ್ನುಹತ್ತಿ, ಆಕರ್ಷಕವಾಗಿ ಕಾಣುವ ಯೋಜನೆಗಳನ್ನು ಮುಂದಿಡುತ್ತಾರೆ. ಆದರೆ, ಇಂತಹ ಯೋಜನೆಗಳಿಂದ ನೆರವು ಪಡೆದ ಯುವಜನರ ಅನುಭವ ದುರಂತಕಾರಿಯಾಗಿದೆ. ಕೆಲವು ಪ್ರಕರಣಗಳಲ್ಲಿ ಇಂತಹ ಸಾಲಗಳು ಹೆಚ್ಚುಕಡಿಮೆ ಅವರನ್ನು ಗುಲಾಮಗಿರಿಗೆ ತಳ್ಳಿವೆ ಮತ್ತು ಅನೇಕರು ಈ ಸಾಲಗಳನ್ನು ತೀರಿಸುವುದಕ್ಕಾಗಿ ಕಡಿಮೆ ಸಂಬಳದ ಕೆಲಸಗಳಿಗೆ ಸೇರಿಕೊಳ್ಳುವ ಒತ್ತಾಯಕ್ಕೊಳಗಾಗಿದ್ದಾರೆ. ಇದು ಶಿಕ್ಷಣ ಕ್ಷೇತ್ರದ ದುರಂತಗಳಲ್ಲಿ ಒಂದು ಮಾತ್ರ.