ಭೀಮಾ-ಕೋರೆಗಾಂವ್ ಪ್ರಕರಣ: ನವ್ಲಾಖಾ ಮನವಿ ವಿಚಾರಣೆ ನಿರಾಕರಿಸಿದ ಐದನೇ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್
ಗೌತಮ್ ನವ್ಲಾಖಾ
ಹೊಸದಿಲ್ಲಿ, ಸೆ. 3: ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸಲು ಬಾಂಬೆ ಉಚ್ಚ ನ್ಯಾಯಾಲಯದ ನಿರಾಕರಿಸಿರುವುದನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ನಿರಾಕರಿಸಿದ್ದಾರೆ.
ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಈ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸುತ್ತಿರುವ ಐದನೇ ನ್ಯಾಯಮೂರ್ತಿ. ಸೆಪ್ಟಂಬರ್ 30ರಂದು ಗೌತಮ್ ನವ್ಲಾಖಾ ಅವರ ಮನವಿಯ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನಿರಾಕರಿಸಿದ್ದರು. ಒಂದು ದಿನದ ಬಳಿಕ, ಅಂದರೆ ಅಕ್ಟೋಬರ್ 1ರಂದು ಈ ಮನವಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಆರ್. ಸುಭಾಷ್ ರೆಡ್ಡಿ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ ನಿರಾಕರಿಸಿತ್ತು. ಮನವಿಯ ವಿಚಾರಣೆ ಗುರುವಾರ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಶರಣ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠದ ಮುಂದೆ ಬಂದಾಗ, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮನವಿಯ ವಿಚಾರಣೆಗೆ ನಿರಾಕರಿಸಿದರು.
ಬಾಂಬೆ ಉಚ್ಚ ನ್ಯಾಯಾಲಯ ನವ್ಲಾಖಾ ಅವರಿಗೆ ನೀಡಿದ್ದ ಮೂರು ವಾರಗಳ ಮಧ್ಯಂತರ ಜಾಮೀನು ಶುಕ್ರವಾರ ಅಂತ್ಯಗೊಳ್ಳಲಿದೆ ಎಂದು ಪೀಠ ಗೌತಮ್ ನವ್ಲಾಖಾ ಅವರ ವಕೀಲರಿಗೆ ತಿಳಿಸಿತು. ಈ ಸಂದರ್ಭ ಮನವಿಯನ್ನು ಇನ್ನೊಂದು ಪೀಠ ನಾಳೆ ವಿಚಾರಣೆ ನಡೆಸಲಿದೆ ಎಂದು ಹೇಳಿತು.