ಕಾರ್ಮಿಕರಿಗೆ ಸೇವಾ ನಿಯಮಾವಳಿ ರೂಪಿಸಬೇಕು: ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ರಾಧಾಕೃಷ್ಣ
ಫುಡ್ ಡೆಲಿವರಿ ಪಾರ್ಟ್‌ನರ್ಸ್ ಸಮಾವೇಶ
ಬೆಂಗಳೂರು, ಅ.3: ರಾಜ್ಯದಲ್ಲಿನ ಫುಡ್ ಡೆಲಿವರಿ ಪಾರ್ಟ್‌ನರ್ಸ್ ಕಾರ್ಮಿಕರ ಸಂಬಂಧ ರಾಜ್ಯ ಸರಕಾರ ಸೇವಾ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ರಾಧಾಕೃಷ್ಣ ಆಗ್ರಹಿಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರಂನ ಗುಂಡೂರಾವ್ ಸಭಾಂಗಣದಲ್ಲಿ ಎಐಡಿವೈಓ ನೇತೃತ್ವದಲ್ಲಿ ಆಯೋಜಿಸಿದ್ದ ಫುಡ್ ಡೆಲಿವರಿ ಪಾರ್ಟ್‌ನರ್ಸ್‌ಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಾದ್ಯಂತ ಹಲವಾರು ಆನ್‌ಲೈನ್ ಆಹಾರ ಸರಬರಾಜು ಮಾಡುವ ಕಂಪೆನಿಗಳಿವೆ. ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ದುಡಿಯುತ್ತಿದ್ದು, ಅವರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ದೀರ್ಘ ಕೆಲಸದ ಅವಧಿ ಹಾಗೂ ಕಠಿಣ ಕೆಲಸದ ಪರಿಸ್ಥಿತಿಗೆ ಅವರು ತುತ್ತಾಗುತ್ತಿದ್ದಾರೆ. ಅಲ್ಲದೆ, ಹಲವಾರು ರೋಗಗಳಿಗೆ ಕಾರಣವಾಗಿ ಮರಣ ಹೊಂದುತ್ತಿದ್ದಾರೆ. ಹೀಗಾಗಿ, ಅವರ ಕೆಲಸದ ಕುರಿತು ನಿಯಮಾವಳಿಗಳ ಅಗತ್ಯತೆ ಇದೆ ಎಂದರು.
ದೇಶದಲ್ಲಿ ಕಾರ್ಮಿಕ ಕಾನೂನುಗಳನ್ನು ನಿರಂತರವಾಗಿ ತಿದ್ಧುಪಡಿ ಮಾಡುವ ಮೂಲಕ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸಲಾಗುತ್ತಿದೆ. 90ರ ದಶಕದ ಬಳಿಕ ಜಾಗತೀಕರಣ, ಖಾಸಗೀಕರಣದಿಂದಾಗಿ ಕಾರ್ಮಿಕರ ಶೋಷಣೆ ಆರಂಭವಾಗಿದೆ. ದೇಶದಲ್ಲಿ ಚಾಲ್ತಿಯಲ್ಲಿಲ್ಲದ ಗುತ್ತಿಗೆ ಪದ್ಧತಿ ಇಂದು ಬೇರೂರಿದ್ದು, ಖಾಸಗಿ ವಲಯವಲ್ಲದೆ ಸರಕಾರಿ ವಲಯಕ್ಕೂ ವಿಸ್ತರಣೆಯಾಗಿರುವುದು ದುರಂತ ಎಂದು ಹೇಳಿದರು.
ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಕಾರ್ಪೋರೇಟ್, ಬಂಡವಾಳಶಾಹಿಗಳ ಪರವಿದೆ. ಸರಕಾರಿ ವಲಯ ಖಾಸಗಿಯವರಿಗೆ ಅಡವಿಡಲು ಮುಂದಾಗಿದ್ದಾರೆ ಎಂದ ಅವರು, ನಮ್ಮಲ್ಲಿ ಇಂದು ಆಶಾ ಕಾರ್ಯಕರ್ತೆಯರು, ಬಿಸಿಯೂಟ, ಅಂಗನವಾಡಿ ನೌಕರರಿಂದ ಹಿಡಿದು ಎಲ್ಲದರಲ್ಲಿಯೂ ಗುತ್ತಿಗೆ ಪದ್ಧತಿ ತುಂಬಿ ತುಳುಕುತ್ತಿದೆ ಎಂದರು.
ಜಗತ್ತಿನಾದ್ಯಂತ ಬಂಡವಾಳಶಾಹಿ ತೀವ್ರ ಬಿಕ್ಕಟ್ಟಿನಲ್ಲಿದೆ. ಕಾರು, ಬೈಕ್, ಆಟೋ ಸೇರಿದಂತೆ ಎಲ್ಲವೂ ಇದೀಗ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರ ನಡುವೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಾರ್ಮಿಕರು, ರೈತರು, ಯುವಜನರು ಆತ್ಮಹತ್ಯೆ ಮಾಡಿಕೊಳ್ಳಬೇಕಾದಂತಹ ಸ್ಥಿತಿ ತಲುಪಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೈಕೋರ್ಟ್ ವಕೀಲ ಕೆ.ಸುಬ್ಬರಾವ್ ಮಾತನಾಡಿ, 90 ರ ದಶಕದಲ್ಲಿ ಉದಾರೀಕರಣ, ಜಾಗತೀಕರಣದ ವೇಳೆ ಗುತ್ತಿಗೆ ಪದ್ಧತಿಯನ್ನು ಜಾರಿ ಮಾಡಲು ಕಾರ್ಮಿಕ ಸಂಘಟನೆಗಳು ಬಿಡಬಾರದಿತ್ತು ಎಂದ ಅವರು, ಅಂದು ಗುತ್ತಿಗೆ ಪದ್ಧತಿ ಬಂದ ಪರಿಣಾಮವಿಂದು ಎಲ್ಲ ರಂಗದಲ್ಲಿಯೂ ವ್ಯಾಪಕವಾಗಿ ಹರಡಿಕೊಂಡಿದೆ. ಎಚ್‌ಎಎಲ್ ಅಂತಹ ದೊಡ್ಡ ಸಂಸ್ಥೆಯಲ್ಲಿಯೇ ಬಹುತೇಕರು ಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸ್ಥಿತಿ ಭೀಕರವಾಗಲಿದೆ ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಎಐಡುವೈಓನ ರಾಜ್ಯಕಾರ್ಯದರ್ಶಿ ಶಶಿಕುಮಾರ್, ಜಿಲ್ಲಾಧ್ಯಕ್ಷ ಕೃಷ್ಣಾ, ಹೋರಾಟ ಸಮಿತಿ ಅಧ್ಯಕ್ಷ ವಿನಯ್ ಸಾರಥಿ, ಕಾರ್ಯದರ್ಶಿ ಬಾಗ್ಯರಾಜು ಸೇರಿದಂತೆ ಹಲವರಿದ್ದರು.
ಒಗ್ಗಟ್ಟಿನಲ್ಲಿ ಬಲವಿದೆ
ದೇಶದಲ್ಲಿ ಲಕ್ಷಾಂತರ ಕಾರ್ಮಿಕರಿದ್ದಾರೆ. ಅವರಲ್ಲಿ ಒಂದು ವರ್ಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಷ್ಟ ಬಂದಿದೆ ಅಥವಾ ಸಮಸ್ಯೆಗಳು ಎದುರಾಗಿವೆ ಎಂದಾಗ ಎಲ್ಲರೂ ಸ್ಪಂದಿಸಬೇಕು. ಆದರೆ, ಇಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ಹಾಗೂ ಕಾರ್ಮಿಕ ಸಂಘಟನೆಗಳ ಹಾದಿಯಲ್ಲಿಯೇ ನ್ಯೂನತೆಗಳಿವೆ. ನಮ್ಮಲ್ಲಿ ಅನೇಕ ಕಾರ್ಮಿಕ ಸಂಘಟನೆಗಳಿವೆ. ಆದರೆ, ಅವರವರ ನಡುವೆಯೇ ಹಲವಾರು ಭಿನ್ನಾಭಿಪ್ರಾಯಗಳಿವೆ. ಇದರಿಂದ ಏನೂ ಸಾಧನೆ ಮಾಡಲಾಗಲ್ಲ.
-ಕೆ.ಸುಬ್ಬರಾವ್, ಹೈಕೋರ್ಟ್ ವಕೀಲ