ಶಿಕ್ಷಣ ಕ್ಷೇತ್ರದಲ್ಲಿ ಭಿನ್ನಮತದ ಅಪರಾಧೀಕರಣ
ಭಾರತೀಯ ಕ್ಯಾಂಪಸ್ಗಳ ಮೇಲೆ ಆಕ್ರಮಣ
ಭಾಗ-2
ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್ಡಿಎಸ್), ಭಾರತೀಯ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತ ಜನತಾ ನ್ಯಾಯಮಂಡಳಿಯನ್ನು ಸಂಘಟಿಸಿತ್ತು. ಈ ನ್ಯಾಯಮಂಡಳಿಯು ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್, ನ್ಯಾಯಮೂರ್ತಿ (ನಿವೃತ್ತ) ಬಿ.ಜಿ ಕೋಲ್ಸೆ-ಪಾಟೀಲ್, ಪ್ರೊ. ಅಮಿತ್ ಬಡೂರಿ, ಡಾ. ಉಮಾ ಚಕ್ರವರ್ತಿ, ಪ್ರೊ. ಟಿ.ಕೆ. ಉಮ್ಮನ್, ಪ್ರೊ. ವಸಂತಿ ದೇವಿ, ಪ್ರೊ. ಘನಶ್ಯಾಮ್ ಶಾ, ಪ್ರೊ. ಮೆಹರ್ ಇಂಜಿನಿಯರ್, ಪ್ರೊ. ಕಲ್ಪನಾ ಕಣ್ಣಬೀರನ್, ಪಮೇಲಾ ಫಿಲಿಪೋಸ್ ಅವರನ್ನು ಒಳಗೊಂಡಿತ್ತು. ಅದರ ವರದಿಯ ಆಧಾರದಲ್ಲಿ ಈ ಲೇಖನ ಸರಣಿಯನ್ನು ಸಿದ್ಧಪಡಿಸಲಾಗಿದ್ದು, ಎರಡನೆಯ ಕಂತು ಇಲ್ಲಿದೆ.
ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಭಿನ್ನಮತದ ದಮನವು ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಭಿನ್ನಮತ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರೂ ಕಾನೂನು ಕ್ರಮ, ಶಿಸ್ತುಕ್ರಮ, ತರಗತಿ ಮತ್ತು ಕ್ಯಾಂಪಸಿನೊಳಗೆಯೇ ದಬ್ಬಾಳಿಕೆಯನ್ನು ಎದುರಿಸಿದ್ದಾರೆ. ಏಕೆಂದರೆ, ಭಿನ್ನಮತವನ್ನೇ ಇಂದು ದೇಶವಿರೋಧಿ ಕೃತ್ಯ ಎಂಬಂತೆ ಕಾಣಲಾಗುತ್ತಿದೆ. ಇಂತಹ ಅಂದಾದುಂದಿಯ, ಸರ್ವಾಧಿಕಾರಿ ಕ್ರಮಗಳಿಗೆ ವಿದ್ಯಾರ್ಥಿಗಳು ಮುಖ್ಯವಾಗಿ ಗುರಿಯಾಗುತ್ತಿದ್ದಾರೆ. ಇವೆಲ್ಲವನ್ನೂ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಮುದಾಯದಲ್ಲಿ ಸಂದಿಗ್ಧತೆಯ, ಭಯದ ಮತ್ತು ಆತಂಕದ ವಾತಾವರಣ ಉಂಟುಮಾಡುವ ಸಲುವಾಗಿ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಪರಸ್ಪರ ಮಾತನಾಡುತ್ತಿದ್ದಾರೆ ಎಂಬಂತಹ ಕ್ಷುಲ್ಲಕ ಕಾರಣಗಳಿಗಾಗಿ ವಿದ್ಯಾರ್ಥಿಗಳಿಗೆ ಶೋಕಾಸ್ (ಕಾರಣ ತೋರಿಸಿ) ನೋಟಿಸುಗಳನ್ನು ಜಾರಿ ಮಾಡಲಾಗಿದೆ. ಹಿಂದಿನ ಕಾಲದಲ್ಲೂ ಪಿಎಚ್.ಡಿ. ನೋಂದಣಿ ರದ್ದು ಮಾಡುವುದು ಮುಂತಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುವುದು, ರಾಜಕಾರಣಿಗಳು ವಿಶ್ವವಿದ್ಯಾನಿಲಯ ವ್ಯವಸ್ಥೆಯನ್ನು, ಅವುಗಳ ಆಡಳಿತ ಮಂಡಳಿಗಳನ್ನು ನಿಯಂತ್ರಿಸಲು ಯತ್ನಿಸಿದ ಹಲವಾರು ಪ್ರಕರಣಗಳು ನಡೆದಿವೆ. ಆದರೆ ಇಂದು ಕಣ್ಣಿಗೆ ರಾಚುವಂತಹದ್ದೆಂದರೆ, ಭಿನ್ನಮತದ ಧ್ವನಿಗಳನ್ನು ಅಡಗಿಸಲು ಮಾಡಲಾಗುತ್ತಿರುವ ಪ್ರಯತ್ನಗಳ ವ್ಯಾಪಕತೆ ಮತ್ತು ದಮನಕಾರಿ ಗುಣ. ಕೇವಲ ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂಬ ಕಾರಣಕ್ಕೆ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳ ವೇತನವನ್ನು ತಡೆಹಿಡಿಯುವುದು ಮಾತ್ರವಲ್ಲ, ಅಧಿಕಾರಸ್ಥರು ನ್ಯಾಯಾಲಯದ ಮೆಟ್ಟಿಲು ಹತ್ತುವ ಮಟ್ಟಿಗೂ ಹೋಗಿದ್ದಾರೆ. ಪ್ರತಿಭಟನೆಗಳಲ್ಲಿ ಭಾಗವಹಿಸಿದ ಅಥವಾ ಸಾರ್ವಜನಿಕವಾಗಿ ಟೀಕೆ ಮಾಡಿದ ದಲಿತ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಗುರಿ ಮಾಡಿದ ಪ್ರಕರಣಗಳು ಎದ್ದುಕಾಣುವಷ್ಟು ಹೆಚ್ಚಾಗಿವೆ. ಹಲವು ಪ್ರಕರಣಗಳಲ್ಲಿ ಅವರ ವಿರುದ್ಧ ದಾಖಲಿಸಿದ ಪ್ರಥಮ ವರ್ತಮಾನ ವರದಿಗಳಲ್ಲಿ ಅವರ ಜಾತಿ ಮತ್ತು ಧರ್ಮಗಳನ್ನೂ ನಮೂದಿಸಲಾಗಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಪೂರ್ವಗ್ರಹ ಮತ್ತು ಪೂರ್ವನಿರ್ಧರಿತ ರೀತಿಯಲ್ಲಿ ಇದನ್ನು ಸಾಧಿಸಲಾಗುತ್ತಿರುವುದು. ಹಲವಾರು ಬಾರಿ ಆಳುವ ಪಕ್ಷದ ಬೆಂಬಲಿಗರು ಮತ್ತವರ ಸಹವರ್ತಿಗಳ ವ್ಯವಸ್ಥಿತವಾದ ಸಂಘಟಿತ ಹಿಂಸಾಚಾರವನ್ನು ಛೂಬಿಡಲಾಗಿದೆ.
ಇಂತಹ ದುಷ್ಟತೆ, ದ್ವೇಷ ಮತ್ತು ಕಡುಗೋಪದ ಪ್ರದರ್ಶನಗಳು ವಿದ್ಯಾರ್ಥಿಗಳು ತೆಪ್ಪಗೆ ಕುಳಿತಿರುವಂತೆ ಅಥವಾ ಭೂಗತರಾಗುವಂತೆ ಮಾಡಿದ್ದು, ಅವರ ಶೈಕ್ಷಣಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಜಾತಿ ಮತ್ತು ಕೋಮುದ್ವೇಷದ ಅಬ್ಬರದ ಪ್ರಚಾರಗಳು, ಭಿನ್ನಮತೀಯರ ಮೇಲಿನ ದಾಳಿಗಳ ಸಂಭ್ರಮಾಚರಣೆ ಇತ್ಯಾದಿಗಳು ಇಂದು ಕ್ಯಾಂಪಸ್ಗಳಲ್ಲಿ ಸಾಮಾನ್ಯವಾಗಿದ್ದು, ಪೊಲೀಸರು ಮೌನ ಪ್ರೇಕ್ಷಕರಾಗಿಯೋ ಅಥವಾ ದಾಳಿಕೋರರ ಪರವಾಗಿಯೇ ಪಾತ್ರವಹಿಸಿಯೋ ಇರುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಂತೂ ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್ಗಳನ್ನು ನಿಯಂತ್ರಿಸಲು ಬಲಪಂಥೀಯ ಹಿಂಸಾಚಾರವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಇಡೀ ಪ್ರಕ್ರಿಯೆಯಲ್ಲಿ ಕರಗಿಹೋಗುವುದೆಂದರೆ ಸಾಂವಿಧಾನಿಕ ಮೌಲ್ಯಗಳು. ತಳಮಳಗೊಳಿಸುವ ವಿಷಯವೆಂದರೆ ಚರ್ಚೆಗಳು ಮತ್ತು ಸಂವಾದಗಳು ನಡೆಯುವ ಸ್ಥಳಗಳಾಗಬೇಕಿದ್ದ ಕ್ಯಾಂಪಸ್ಗಳು ಚಿಂತನೆಯ ನಿಯಂತ್ರಣ ಮತ್ತು ದಬ್ಬಾಳಿಕೆಯ ತಾಣಗಳಾಗುತ್ತಿರುವುದು.
2016ರಿಂದೀಚಿಗಿನ ಆತಂಕಕಾರಿ ಪ್ರವೃತ್ತಿ ಎಂದರೆ, ವಿದ್ಯಾರ್ಥಿಗಳನ್ನು ಮತ್ತು ಸಂಸ್ಥೆಗಳನ್ನು ಪ್ರತ್ಯೇಕಿಸಿ ಶಿಕ್ಷಿಸಲು ಅಧಿಕಾರಿಗಳು ಹೆಚ್ಚುಹೆಚ್ಚಾಗಿ ಕಾನೂನು ಕ್ರಮಗಳಿಗೆ ಮೊರೆಹೋಗುತ್ತಿರುವುದು. ನ್ಯಾಯಾಲಯಗಳ ತೀರ್ಪಿನಿಂದ ಅಥವಾ ಮಾತುಗಳಿಂದ ಸರ್ವಾಧಿಕಾರಿ ಕ್ರಮಗಳ ಬಗ್ಗೆ ಜನಪ್ರಿಯ ಒಮ್ಮತ ಮೂಡಿಸಲು ಸಾಧ್ಯವಿದೆ ಎಂದು ಅರಿವಾಗಿರುವುದೇ ಇದರ ಹಿಂದಿನ ಪ್ರೇರಣೆ. ‘ದೇಶದ್ರೋಹಿ’ ಹಣೆಪಟ್ಟಿ ಹಚ್ಚಲಾಗುತ್ತಿರುವುದು ಕೇವಲ ವಿದ್ಯಾರ್ಥಿಗಳನ್ನು ಒಂದೇ ಪಡಿಯಚ್ಚಿಗೆ ಹಾಕಿ ಪ್ರತ್ಯೇಕಿಸಲು ಮಾತ್ರ ಅಲ್ಲ; ಬದಲಾಗಿ ಅವರಿಗೆ ಕಳಂಕ ಹಚ್ಚಿ ಅವರ ಶೈಕ್ಷಣಿಕ ಭವಿಷ್ಯವನ್ನು ನಾಶಮಾಡುವ ಸಲುವಾಗಿ. ಕೆಲವೊಮ್ಮೆ ಕೇವಲ ಅಧಿಕೃತರನ್ನು ಟೀಕಿಸುವ ದೃಷ್ಟಿಕೋನವನ್ನೇ ’ದೇಶದ್ರೋಹ’ಕ್ಕೆ ಸಾಕ್ಷ್ಯ ಎಂಬಂತೆ ಪರಿಗಣಿಸಲಾಗುತ್ತಿದೆ.
ಇದಕ್ಕೊಂದು ಸೂಕ್ತ ಉದಾಹರಣೆ ಎಂದರೆ ಇಡಿಯಾಗಿ ಜೆಎನ್ಯುವನ್ನೇ ದೇಶವಿರೋಧಿಗಳನ್ನು ಹುಟ್ಟುಹಾಕುವ ಕೇಂದ್ರವೆಂಬಂತೆ ಬಿಂಬಿಸಿದ ರೀತಿ. ಇಂತಹ ದುರುದ್ದೇಶದ, ಆತಂಕಕಾರಿ ಮತ್ತು ಅಪಾಯಕಾರಿ ಬೆಳವಣಿಗೆಯನ್ನು ಪ್ರೋತ್ಸಾಹಿಸುವಲ್ಲಿ ಮಾಧ್ಯಮಗಳು ವಹಿಸಿದ ಪಾತ್ರ ವಿಶೇಷವಾಗಿ ವಿನಾಶಕಾರಿ. ಜೆಎನ್ಯು ಪ್ರಕರಣದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಒಂದು ವಿಭಾಗವು ದುಷ್ಟತನದಿಂದ ಕೂಡಿದ ಪಕ್ಷಪಾತದ ವರದಿಗಳನ್ನು ಪ್ರಸಾರ ಮಾಡಿ, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ‘ದ್ರೋಹಿಗಳು’ ಎಂದು ಕರೆಯಿತು. ಮಾಧ್ಯಮಗಳ ಪ್ರಸಾರ ವ್ಯಾಪ್ತಿಯನ್ನು ಪರಿಗಣಿಸಿದರೆ, ಈ ದೃಷ್ಟಿಕೋನವು ತ್ವರಿತವಾಗಿ ಸ್ಥಳೀಯ ಜನರ ಸಾರ್ವತ್ರಿಕ ಅಭಿಪ್ರಾಯವಾಗಿ ಮೂಡಿಬಂತು. ವಿಪರ್ಯಾಸ ಎಂದರೆ ದೇಶದಲ್ಲಿ ಅತ್ಯುನ್ನತ ಕಲಿಕೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಜೆಎನ್ಯುವನ್ನು ಈಗ ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಉತ್ತೇಜಿಸುವ, ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ತಾಣವಾಗಿ ಕಾಣದೆ, ‘ರಾಷ್ಟ್ರವಾದ ವಿರೋಧಿ’ ತಾಣವೆಂಬಂತೆ ಕಾಣಲಾಗುತ್ತಿರುವುದು.
ಭಿನ್ನಮತವನ್ನು ಹತ್ತಿಕ್ಕಲು ಬಳಸಲಾಗುತ್ತಿರುವ ಈ ವಿಧಾನ ದೂರಗಾಮಿ ದುಷ್ಪರಿಣಾಮಗಳನ್ನು ಬೀರಲಿದೆ ಮತ್ತು ಇದು ಒಟ್ಟಾರೆಯಾಗಿ ಇಡೀ ದೇಶದ ಒಳಿತಿಗೆ ಅತ್ಯಂತ ಹಾನಿಕಾರಕ. ಅನೇಕ ಪ್ರಕರಣಗಳಲ್ಲಿ ಮುಸ್ಲಿಂ ಮತ್ತು ದಲಿತ ವಿದ್ಯಾರ್ಥಿಗಳು, ಕಾಶ್ಮೀರ ಅಥವಾ ಈಶಾನ್ಯ ರಾಜ್ಯಗಳಿಂದ ಬಂದವರನ್ನು ‘ಇತರರು’, ‘ಹೊರಗಿನವರು’ ಎಂದು ಪ್ರತ್ಯೇಕಿಸಲಾಗುತ್ತಿದೆ. ಉದಾಹರಣೆಗೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ತಪ್ಪದೇ, ’ಭಯೋತ್ಪಾದಕರು’ಎಂಬ ಕಳಂಕ ಹಚ್ಚಲಾಗುತ್ತಿದೆ. ಕಾಶ್ಮೀರಿಗಳ ಮೇಲಿನ ದ್ವೇಷ ಶಾಲೆಗಳ ಮಟ್ಟದಲ್ಲಿ ಕೂಡಾ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.
ಭಾರತದಲ್ಲಿ ಇಂದು ಮೂರು ವಿಶಾಲ ವರ್ಗಗಳ ಉನ್ನತ ಶಿಕ್ಷಣ ಸಂಸ್ಥೆಗಳಿವೆ:
1. ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು- ಇವು ತಮ್ಮ ಕಾರ್ಯನಿರ್ವಹಣೆಯಲ್ಲಿ ಐತಿಹಾಸಿಕವಾಗಿ ಬಹುತೇಕ ಪ್ರಜಾಸತ್ತಾತ್ಮಕವಾಗಿವೆ.
2. ಐಟಿಐಗಳು ಮತ್ತು ಐಐಎಂಗಳು- ಇವು ಭಿನ್ನಮತಕ್ಕೆ ಅತೀ ಕಡಿಮೆ ಅವಕಾಶವಿರುವ ದಬ್ಬಾಳಿಕೆಯ ಸರ್ವಾಧಿಕಾರಿ ಮಾದರಿಯಲ್ಲಿ ಕಟ್ಟಿದಂತಹವುಗಳಾಗಿವೆ.
3. ಸಂಶೋಧನಾ ಸಂಸ್ಥೆಗಳು- ಇವು ಸ್ವಾಯತ್ತ ಅಥವಾ ಸರಕಾರಗಳು ನಡೆಸುವ ಸಂಸ್ಥೆಗಳಾಗಿದ್ದು, ಅಲ್ಲಿ ಅಧಿಕಾರಸ್ಥರ ಮರ್ಜಿಗೆ ಹೊಂದಿಕೊಂಡು ಸ್ವಲ್ಪ ಮಟ್ಟಿನ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಗೆ ಅವಕಾಶವಿರಬಹುದು.
ಐಐಟಿ ಮತ್ತು ಐಐಎಂಗಳನ್ನು ಸಾಮಾನ್ಯವಾಗಿ ನಿಯಂತ್ರಣಕ್ಕೆಂದೇ ಕಟ್ಟಲಾಗಿದೆ. ಅವು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುವ ವಿದ್ಯಾರ್ಥಿ ಸಂಘಗಳನ್ನು ಹೊಂದಿಲ್ಲ. ಉದಾಹರಣೆಗೆ ಹೆಚ್ಚಾಗಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆಗಳನ್ನು ನಡೆಸುವುದೇ ಇಲ್ಲ. ಬದಲಾಗಿ ಬಹುತೇಕ ನಾಮಕರಣದ ವಿಧಾನವನ್ನೇ ಅನುಸರಿಸಲಾಗುತ್ತದೆ. ಅವು ಅಧಿಕಾರಿಗಳ ಬಳಿ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವುದಿಲ್ಲ; ಬದಲಾಗಿ ವಿದ್ಯಾರ್ಥಿಗಳ ಬಳಿ ಅಧಿಕಾರಿಗಳನ್ನು ಪ್ರತಿನಿಧಿಸುತ್ತದೆ. ನೈಜವಾದ ವಿದ್ಯಾರ್ಥಿ ಪ್ರಾತಿನಿಧ್ಯವನ್ನು ಉತ್ತೇಜಿಸಬೇಕೆಂದರೆ, ಖಂಡಿತವಾಗಿಯೂ ಇವುಗಳಲ್ಲಿ ಸುಧಾರಣೆ ತರಬೇಕಾಗಿದೆ.
ಭಿನ್ನಮತದ ಹಕ್ಕು, ಚಿಂತನೆಯ ಹಕ್ಕು, ಅಭಿಪ್ರಾಯಭೇದದ ಹಕ್ಕು, ನಾವು ನಾವಾಗಿಯೇ ಉಳಿಯುವ ಹಕ್ಕುಗಳನ್ನು ರಕ್ಷಿಸಬೇಕಾದ ತುರ್ತು ಅಗತ್ಯವಿದೆ. ನ್ಯಾಯಮಂಡಳಿಗೆ ಸಾಕ್ಷ್ಯವನ್ನು ಸಲ್ಲಿಸಿದ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ಪ್ರತಿರೋಧ ಸಲ್ಲಿಸಿದ್ದು ಮತ್ತು ಸರ್ವಾಧಿಕಾರಿ ಒತ್ತಡಕ್ಕೆ ಯೋಚನಾರಹಿತವಾಗಿ ಒಪ್ಪಿಸಿಕೊಳ್ಳದಿರುವ ಮನೋಭಾವ ತೋರಿದ್ದು ಒಂದು ಆಶಾಕಿರಣ.
ಇಲ್ಲಿ ಸ್ಪಷ್ಟವಾಗಿ ಮೂಡಿಬಂದ ವಿಷಯವೆಂದರೆ, ವಿಶ್ವವಿದ್ಯಾನಿಲಯಗಳೊಳಗೆ ಪ್ರಜಾಸತ್ತಾತ್ಮಕ ಅವಕಾಶಗಳ ಮೇಲಿನ ಆಕ್ರಮಣದ ಉದ್ದೇಶ, ನವ ಉದಾರವಾದಿ ಮತ್ತು ಕೋಮುವಾದಿ ಕಾರ್ಯಕ್ರಮಗಳಿಗೆ ಇಂಬು ನೀಡುವುದು. ಸ್ಪಷ್ಟವಾದ ಇನ್ನೊಂದು ವಿಷಯವೆಂದರೆ, ಪಠ್ಯವಿನ್ಯಾಸ, ಪಠ್ಯಕ್ರಮ, ಬೋಧಕ ಸಿಬ್ಬಂದಿಯ ನೇಮಕಾತಿ, ಆಡಳಿತಾತ್ಮಕ ವಿಷಯಗಳಲ್ಲಿ ನಿರ್ಧಾರ ಮುಂತಾದವುಗಳ ನಿಯಂತ್ರಣಕ್ಕೆ ಅಧಿಕೃತರು ಮಾಡುತ್ತಿರುವ ಪ್ರಯತ್ನ. ತಮ್ಮ ತತ್ವ ವಿಚಾರಗಳು, ರಾಜಕೀಯ ನಿಲುವುಗಳತ್ತ ವಾಲಿರುವವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುವುದರ ಮೂಲಕ, ಅಧಿಕಾರಿಗಳು ಈಗ ತಮ್ಮ ಹುಕುಂಗಳನ್ನು ಅನುಷ್ಠಾನಗೊಳಿಸಲು ಶಕ್ತರಾಗಿದ್ದಾರೆ- ಅದು ಭಿನ್ನಮತ ತೋರಿದ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ಗಳ ದಮನವಾಗಿರಲಿ, ಹಿಂದುತ್ವದ ಪ್ರಸರಣೆಯಾಗಿರಲಿ ಅಥವಾ ಖಾಸಗೀಕರಣವನ್ನು ತ್ವರಿತಗೊಳಿಸುವುದೇ ಆಗಿರಲಿ.
ಏಕೆಂದರೆ ವಿಮರ್ಶಾತ್ಮಕ ಚಿಂತನೆಯು ಇಂತಹ ಯೋಜನೆಗೆ ಗಂಭೀರ ಸವಾಲೊಡ್ಡುತ್ತದೆ. ಆದುದರಿಂದ ಸ್ವತಂತ್ರವಾಗಿ ಈ ವಿಷಯಗಳನ್ನು ಪ್ರತಿಭಟಿಸುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನೇ ನಾಶಗೊಳಿಸುವ ಸಲುವಾಗಿ ನಡೆಯುತ್ತಿವೆ. ಇದರ ಜೊತೆಗೆ, ಪಕ್ಷಪಾತಿ ವಿದ್ಯಾರ್ಥಿ ಸಂಘಗಳು ಅಧಿಕಾರಕ್ಕೆ ಬರುವಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜೊತೆಗೆ, ಅದು ಸಾಧ್ಯವಾಗದೇ ಇದ್ದಾಗ ವಿದ್ಯಾರ್ಥಿ ಚುನಾವಣೆಗಳ ಮೇಲೆ ಪ್ರತಿಬಂಧಗಳನ್ನೂ ಹೇರಲಾಗುತ್ತಿದೆ. ನ್ಯಾಯಮಂಡಳಿಯ ಅಭಿಪ್ರಾಯವೆಂದರೆ, ಸ್ವಾಯತ್ತೆಯ ಹೆಸರಿನಲ್ಲಿ ಉಪಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರಬಾರದು. ಅದೇ ರೀತಿಯಲ್ಲಿ, ಸಂಸ್ಥೆಗಳ ಒಳಗಿನ ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ನಿಯಂತ್ರಿತ ವಾತಾವರಣಕ್ಕೆ ದಾರಿಮಾಡಿಕೊಡಬಹುದಾದ ಯಾವುದೇ ಪುನರ್ರಚನೆಯ ಪ್ರಯತ್ನ ಇರಬಾರದು.
ಯಾವ ರೀತಿಯಲ್ಲಿ ಶೈಕ್ಷಣಿಕ ವ್ಯಕ್ತಿಗಳನ್ನು ದೈಹಿಕ ದಾಳಿಗಳು, ಅವಮಾನ ಮತ್ತು ಅಧಿಕಾರಿಗಳು ಕೈಗೊಂಡ ತಾರತಮ್ಯದ ಕ್ರಮಗಳಿಗೆ ಗುರಿಪಡಿಸಲಾಗಿದೆ ಮಾತ್ರವಲ್ಲದೆ, ಕ್ಯಾಂಪಸಿನ ಒಳಗೆ ಮತ್ತು ಹೊರಗೆ ಅವರ ಮೇಲೆ ವ್ಯಾಪಕವಾದ ಕಣ್ಗಾವಲು ನಡೆಸಲಾಗುತ್ತಿದೆ ಎಂಬುದನ್ನು ನ್ಯಾಯಮಂಡಳಿಯು ಗಮನಿಸಿದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ, ಶಿಕ್ಷಕರ ವಿರುದ್ಧವೂ ದುರ್ಬಳಕೆ ಮಾಡಲಾಗುತ್ತಿದ್ದು, ಸಂವಿಧಾನವು ಖಾತರಿಪಡಿಸಿರುವ ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಯಾವುದೇ ರೀತಿಯ ಅವಿಧೇಯತೆಯನ್ನು ರಾಷ್ಟ್ರೀಯವಾದವನ್ನು ರಕ್ಷಿಸುವ ನೆಪದಲ್ಲಿ ಅಪರಾಧೀಕರಣಗೊಳಿಸಲಾಗುತ್ತಿದೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ‘ದೇಶದ್ರೋಹಿ’ ಹಣೆಪಟ್ಟಿ ಕಟ್ಟಲಾಗುತ್ತಿಲ್ಲ; ಶಿಕ್ಷಕರನ್ನೂ ಇಂತಹ ನಿಂದನೆಗೆ ಗುರಿಪಡಿಸಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಸತ್ತಾತ್ಮಕ ಅವಕಾಶವನ್ನು ಉಳಿಸುವ ಹೋರಾಟವು ದೇಶದ ರಾಜಧಾನಿಗೆ ವಾತ್ರ ಸೀಮಿತವಾಗದೆ, ದೇಶದಾದ್ಯಂತ- ದೂರದೂರದ ಪ್ರದೇಶಗಳಲ್ಲಿ ಕೂಡಾ ನಡೆಯಬೇಕು. ನಗರ ಪ್ರದೇಶಗಳ ಶಿಕ್ಷಣ ಸಂಸ್ಥೆಗಳು ಪಡೆದ ತಿಳುವಳಿಕೆಯನ್ನು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದಕ್ಕಿಂತಲೂ ದೊಡ್ಡದಾದ ಸವಾಲುಗಳನ್ನು ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳ ಒಳನಾಡುಗಳಿಗೂ ತಲಪಿಸಬೇಕಾಗಿದೆ.
ವಿದ್ಯಾರ್ಥಿಗಳಿಗೆ ಕ್ರಿಮಿನಲ್ ಕಾನೂನು ಮತ್ತು ತಮ್ಮ ರಕ್ಷಣೆಗೆ ಸಂಬಂಧಿಸಿದ ಹಕ್ಕುಗಳ ಕುರಿತು ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಸರ್ವಾಧಿಕಾರಿ ಮನೋವೃತ್ತಿಯ ವಿರುದ್ಧ ವಿದ್ಯಾರ್ಥಿ ಸಂಘಗಳು ಈ ತನಕ ನಡೆಸುತ್ತಾ ಬಂದಿರುವ ಹೊಸಹೊಸ ಪ್ರತಿಹೋರಾಟದ ವಿಧಾನಗಳು, ಶೈಕ್ಷಣಿಕ ಕ್ಷೇತ್ರದೊಳಗೆ ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಅವಕಾಶಗಳನ್ನು ರಕ್ಷಿಸಲು ಭವಿಷ್ಯದಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ನೆರವಾಗಬಹುದು.
ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ, ಶಿಕ್ಷಕರ ವಿರುದ್ಧವೂ ದುರ್ಬಳಕೆ ಮಾಡಲಾಗುತ್ತಿದ್ದು, ಸಂವಿಧಾನವು ಖಾತರಿಪಡಿಸಿರುವ ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಯಾವುದೇ ರೀತಿಯ ಅವಿಧೇಯತೆಯನ್ನು ರಾಷ್ಟ್ರೀಯವಾದವನ್ನು ರಕ್ಷಿಸುವ ನೆಪದಲ್ಲಿ ಅಪರಾಧೀಕರಣ ಗೊಳಿಸಲಾಗುತ್ತಿದೆ.