varthabharthi


ಭೀಮ ಚಿಂತನೆ

ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ದಲಿತರಲ್ಲಿ ಜಗಳ ಹಚ್ಚುವ ಹಿತಶತ್ರುಗಳ ಆಟವನ್ನು ಗುರುತಿಸಿ

ವಾರ್ತಾ ಭಾರತಿ : 4 Oct, 2019

ಮೇ 29 1931ರಂದು ಡಿಲಾಯಿಟ್‌ರೋಡ್ ಮುಂಬೈಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ದಲಿತರ ಜಾಹೀರು ಸಭೆಯೊಂದು ಸೇರಿತ್ತು. ಸುಮಾರು ಐದರಿಂದ ಆರು ಸಾವಿರ ಜನ ಸಭೆಗೆ ಸೇರಿದ್ದರು. ಬೇರೆ ಬೇರೆ ಸ್ವಯಂಸೇವಕರ ದಳಗಳು ಒಳ್ಳೆಯ ರೀತಿಯಲ್ಲಿ ಸಭೆಯ ಬಂದೋಬಸ್ತು ಮಾಡಿ ಶಿಸ್ತು ಕಾಪಾಡಿಕೊಂಡಿದ್ದರು. ಸುಮಾರು ಒಂದು ಗಂಟೆಯ ತನಕ ಡಾ. ಅಂಬೇಡ್ಕರ್ ಮಾತನಾಡುತ್ತಿದ್ದರು. ತಮ್ಮ ಭಾಷಣದಲ್ಲವರು,

‘‘ಇಂದಿನ ಸಭೆಯಲ್ಲಿ ಯಾವುದೇ ವಿಶೇಷ ಕಾರ್ಯಕ್ರಮವಿಲ್ಲವಾದ್ದರಿಂದ ಹಾಗೂ ಸಭೆ ಸೇರುವ ಯಾವುದೇ ಕಾರಣವಿಲ್ಲದಿರುವುದರಿಂದ ನಾನು ಈ ಸಭೆಗೆ ಬರಬಾರದು ಅಂದುಕೊಂಡಿದ್ದೆ. ಆದರೆ ಸಭೆಯನ್ನು ಉತ್ಸಾಹದಿಂದ ಆಯೋಜಿಸಿದ ಜನ ನನ್ನನ್ನು ಬಿಡಲೇ ಇಲ್ಲ, ಹಾಗಾಗಿ ಬರಲೇಬೇಕಾಯಿತು. ಇವತ್ತು ಯಾವುದೇ ವಿಶೇಷ ಕಾರ್ಯಕ್ರಮವಿರದಿದ್ದರೂ ಇಷ್ಟೊಂದು ಜನ ಸೇರಬಹುದು ಅಂದುಕೊಂಡಿರಲಿಲ್ಲ. ನಾನಿಂದು ಬರದೇ ಇದ್ದಿದ್ದರೆ ಇಷ್ಟೊಂದು ಜನರಿಗೆ ಬೇಸರವಾಗುತ್ತಿತ್ತು. ನಮ್ಮ ಜನ ಎಷ್ಟು ಜಾಗರೂಕರಾಗಿದ್ದಾರೆ ಅನ್ನುವುದು ಗೊತ್ತಾಗಲು ಇಂತಹ ಸಭೆಗಳು ಸಹಾಯ ಮಾಡುತ್ತವೆ. ಸಭೆಯ ವಿಷಯವೂ ನಿರ್ಧಾರವಾಗಿರಲಿಲ್ಲವಾದ್ದರಿಂದ ನಾನೇನು ಮಾತಾಡಬೇಕು ಅನ್ನುವ ಯೊಚನೆಯಲ್ಲಿದ್ದೆ. ಆದರೆ ನೇತಾರರ ಒಗ್ಗಟ್ಟಿಗೆ ಸಂಬಂಧಿಸಿದಂತೆ ಈ ಸಭೆ ತಂದಿರುವ ಮಸೂದೆಗಳ ಬಗ್ಗೆ ಹಾಗೂ ಅದರ ಬಗ್ಗೆ ಇಂದಿನವರೆಗೆ ವಿವಿಧ ನೇತಾರರು ಮಾಡಿರುವ ಭಾಷಣಗಳನ್ನು ಗಮನದಲ್ಲಿಟ್ಟು ನಾನಿಂದು ಯಾವ ವಿಷಯದ ಬಗ್ಗೆ ಮಾತಾಡಿದರೆ ಸಮಯೋಚಿತವಾಗಬಹುದು ಅನ್ನುವುದು ನನಗೆ ಅರ್ಥವಾಯಿತು ಹಾಗೂ ವಿಷಯ ಕೂಡ ಸಿಕ್ಕಿತು. ನಮ್ಮ ದಲಿತ ಸಮಾಜದ ನನ್ನ ಟೀಕಾಕಾರರ ಟೀಕೆಗೆ ಎಲ್ಲರೆದುರು ಉತ್ತರ ಕೊಡುವುದೆಂದು ನಿರ್ಧರಿಸಿದ್ದೇನೆ. ಇತರ ಜಾತಿಯ ಹಾಗೂ ಪತ್ರಕರ್ತರ ಟೀಕೆಯನ್ನಿಲ್ಲಿ ನಾನು ಉಲ್ಲೇಖಿಸುತ್ತಿಲ್ಲ. ಅವರ ಟೀಕೆಯ ಸ್ವರೂಪ, ಕಾರಣ ಹಾಗೂ ಉದ್ದೇಶ ನಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿದೆ. ಅವರ ಆಕ್ಷೇಪಣೆಗಳಿಗೆ, ಟೀಕೆಗಳಿಗೆ ನಾನು ಆಗಾಗ ಉತ್ತರಕೊಡುತ್ತ ಬಂದಿದ್ದೇನೆ. ಅಗತ್ಯವಿದ್ದರೆ ಇನ್ನು ಮುಂದೆಯೂ ಕೊಡುತ್ತೇನೆ. ಇಂದು ಕೇವಲ ಕೆಲವು ದಲಿತರಿಂದಾಗುತ್ತಿರುವ ಆರೋಪಗಳು ಹಾಗೂ ಅವರಿಗೆ ನನ್ನ ಬಗ್ಗೆಯಿರುವ ಆಕ್ಷೇಪಣೆಗಳು ಎಷ್ಟು ಸುಳ್ಳು ಹಾಗೂ ನಿರಾಧಾರವಾಗಿದೆ ಅನ್ನುವುದನ್ನು ನಿಮಗೆ ಹೇಳಬೇಕಿದೆ. ದಲಿತರು ನನ್ನ ಬಗ್ಗೆ ಎರಡು ಭಿನ್ನರೀತಿಯ ಟೀಕೆಗಳನ್ನು ಮಾಡುತ್ತಾರೆ. ಚಮ್ಮಾರರಾದಿ ದಲಿತರು ಡಾ. ಅಂಬೇಡ್ಕರ್ ಮಾಂಗ್‌ರಾಗಿರುವುದರಿಂದ ದಲಿತರಿಗೆ ಸಿಗುವ ಸವಲತ್ತು ಹಾಗೂ ಲಾಭಗಳನ್ನು ಮಾಂಗ್‌ರಲ್ಲಿ ಹಂಚಲು ಹವಣಿಸುತ್ತಿರುತ್ತಾರೆ, ಚಮ್ಮಾರರಿಗೆ ಅದರಲ್ಲಿಯ ಸ್ವಲ್ಪ ಪಾಲೂ ಸಿಗುವುದಿಲ್ಲ ಅನ್ನುವುದು ಅವರ ಅಂಬೋಣ. ಈ ಆರೋಪ ಎಷ್ಟು ಸುಳ್ಳು ಹಾಗೂ ನಿರಾಧಾರವಾಗಿದೆಯೆಂದರೆ ಇದರತ್ತ ಗಮನ ಹರಿಸುವುದೂ ನನಗೆ ಅಗತ್ಯವೆನಿಸಲಿಲ್ಲ. ನನ್ನೊಂದಿಗೆ ಮತಭೇದಗಳಿರುವ ಜನ ಬೇರೆ ಜಾತಿಯಲ್ಲಿರುವಂತೆ ಚಮ್ಮಾರರಲ್ಲೂ ಇದ್ದಾರೆ ಅನ್ನುವುದು ನನಗೆ ಗೊತ್ತು. ಆದರೆ ಯಾವುದೇ ಪ್ರಾಮಾಣಿಕ ಹಾಗೂ ಜವಾಬ್ದಾರಿಯುಳ್ಳ ಚಮ್ಮಾರನು ಇಂತಹ ನೀಚ ಹಾಗೂ ಸುಳ್ಳು ಆರೋಪಕ್ಕೆ ಬೆಂಬಲಿಸಬಹುದು ಇಲ್ಲವೇ ಸಮ್ಮತಿಸಬಹುದೆಂದು ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಆದರೆ ರಾಷ್ಟ್ರೀಯ ಪತ್ರಿಕೆಯಲ್ಲಿ ಚಮ್ಮಾರರ ಸಭೆಯ ರಸಭರಿತ ಹಾಳೆಗಳನ್ನು ಓದಿದಾಗ ಚಮ್ಮಾರರಂತಹ ಒಳ್ಳೆಯ ಜಾತಿ ಅನಿಸಿಕೊಂಡ ಸಮಾಜದ ನಾಯಕರಿಂದ ಇಂತಹ ನೀಚ ಆರೋಪ ಬಂದಿರುವುದು ಗೊತ್ತಾಯಿತು. ರಾಷ್ಟ್ರೀಯ ಪತ್ರಿಕೆಯ ಈ ಸುದ್ದಿ ನಿಜವಾಗಿದ್ದಲ್ಲಿ ಚಮ್ಮಾರರ ಬಗ್ಗೆ ನನಗೆ ನಿಜವಾಗಿಯೂ ದುಃಖವಾಗುತ್ತದೆ. ನನ್ನ ಮೇಲೆ ಇಂತಹ ಸುಳ್ಳು ಹಾಗೂ ನಿರಾಧಾರವಾದ ಆರೋಪ ಹೊರಿಸಿ ತಮ್ಮ ಅದಃಪತನವನ್ನವರು ಮಾಡಿಕೊಳ್ಳಬಾರದಿತ್ತು. ನನ್ನನ್ನವರು ಆರೋಪಿಸಲೇಬೇಕೆಂದಿದ್ದರೆ ಬೇರೆ ವಿಷಯವೊಂದನ್ನೋ ಇಲ್ಲ ಬೇರೆ ಕಾರಣವನ್ನೋ ಹುಡುಕಬೇಕಿತ್ತು. ಆದರೆ ಸವಲತ್ತಿನ ಎಲ್ಲ ಲಾಭಗಳನ್ನು ನಾನು ಕೇವಲ ಮಾಂಗ್‌ರಿಗೇ ಕೊಡುತ್ತೇನೆ ಹಾಗೂ ಚಮ್ಮಾರರ ಮುಖಕ್ಕೆ ಸುಣ್ಣ ಬಳಿಯುತ್ತೇನೆ ಅನ್ನುವ ಆರೋಪ ಸುಳ್ಳು. ಇದು ಸುಳ್ಳೆನ್ನುವುದನ್ನು ನಾನು ಸಾಬೀತುಪಡಿಸಬಲ್ಲೆ.

ಥಾಣೆ, ಪುಣೆ, ಸೋಲಾಪುರ್, ಸತಾರಾನಂತಹ ನನಗೆ ಬಹಳ ಹತ್ತಿರದಿಂದ ಪರಿಚಯವಿರುವ ಹಾಗೂ ಒಳ್ಳೆಯ ಸಂಬಂಧವಿರುವ ಜಿಲ್ಲೆಗಳನ್ನು ತೆಗೆದುಕೊಂಡರೆ ಅಲ್ಲಿಯ ಮುನಿಸಿಪಾಲ್ಟಿ, ಜಾತಿಗಳನ್ನು ನೋಡಿಯೂ ನಾನು ಮಾಂಗ್‌ರಿಗೇ ಎಲ್ಲ ಲಾಭಗಳನ್ನು ಕೊಡುತ್ತೇನೆ ಅನ್ನುವ ಆರೋಪ ಸುಳ್ಳ್ಳು ಹಾಗೂ ದುಷ್ಟತನದಿಂದ ಮಾಡಿರುವಂತಹದ್ದು ಅನ್ನುವುದರ ಬಗ್ಗೆ ಖಾತ್ರಿಯಾದೀತು. ಠಾಣೆ ಜಿಲ್ಲೆಯಲ್ಲಿ ಉಳಿದ ಜಿಲ್ಲೆಗಳಲ್ಲಿರುವಂತೆ ಮಾಂಗ್‌ರ ಸಂಖ್ಯೆ ಹೆಚ್ಚಿದೆ. ಆದರೆ ಅವರಲ್ಲಿ ಯೋಗ್ಯ ಜನರಿದ್ದರೂ ಠಾಣೆ ಮುನಿಸಿಪಾಲ್ಟಿ, ಲೋಕಲ್ ಬೋರ್ಡ್, ಸ್ಕೂಲ್ ಬೋರ್ಡ್ ಗಳಲ್ಲಿ ಒಬ್ಬನೂ ಮಾಂಗ್ ಪ್ರತಿನಿಧಿಯಿಲ್ಲ. ಎಲ್ಲ ಪ್ರತಿನಿಧಿಗಳು ಚಮ್ಮಾರ ಜಾತಿಯವರಾಗಿದ್ದಾರೆ. ಸೋಲಾಪೂರ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿಯಿದೆ. ಅಲ್ಲಿಯ ಮುನಿಸಿಪಾಲ್ಟಿ ಶಾಲೆ ಬೋರ್ಡಿನಲ್ಲಿ ಹಾಗೂ ಮುನಿಸಿಪಾಲ್ಟಿಯಲ್ಲಿ ಚಮ್ಮಾರರು ಹಾಗೂ ಚರ್ಮಕಾರರ ಪ್ರತಿನಿಧಿಗಳಿದ್ದಾರೆ. ಮಾಂಗ್‌ರ ಒಬ್ಬ ಪ್ರತಿನಿಧಿಯೂ ಇಲ್ಲ. ಉಳಿದ ಜಾತಿಗಳಿಗಿಂತ ಮಾಂಗ್‌ರ ಸಂಖ್ಯೆ ಹೆಚ್ಚಿದೆ ಹಾಗೂ ಇವರಲ್ಲೇ ಹೆಚ್ಚು ಜಾಗೃತಿಯಾಗಿದೆ. ಪುಣೆ ಮುನಿಸಿಪಾಲ್ಟಿಯಲ್ಲೂ ಇಬ್ಬರು ಚಮ್ಮಾರ ಪ್ರತಿನಿಧಿಗಳಿದ್ದಾರೆ. ಸತಾರಾ ಡಿಸ್ಟ್ರಿಕ್ಟ್ ಬೋರ್ಡಿನಲ್ಲೂ ಮಾಂಗ್‌ರ ಒಬ್ಬ ಪ್ರತಿನಿಧಿಯೂ ಇಲ್ಲ. ಧಾರವಾಡ ವಿಜಾಪುರದಂತಹ ಕನ್ನಡ ರಾಜ್ಯದಲ್ಲೂ ಇದೇ ಪರಿಸ್ಥಿತಿಯಿದೆ. ಇದರಂತೆ ಸ್ಥಳೀಯ ದಲಿತರ ಪ್ರತಿನಿಧಿಗಳೆಂದು ಮಾಂಗ್‌ರೇ ತುಂಬಿದ್ದಾರೆ ಅನ್ನುವ ಆರೋಪ ಸುಳ್ಳು ಹಾಗೂ ಆಧಾರವಿಲ್ಲದ್ದು. ಪೊಲೀಸ್ ಖಾತೆಯು ಅಸ್ಪಶ್ಯರಿಗಾಗಿ ಮುಚ್ಚಿಹೋಗಿತ್ತು. ಕೌನ್ಸಿಲ್‌ಗೆ ಹೋದಾಗ ನಾನು ಮತ್ತು ನನ್ನ ಗೆಳೆಯರಾದ ಡಾ. ಸೋಳಂಕಿಯವರು ಈ ಪ್ರಶ್ನೆಗೆ ಚಾಲನೆ ಕೊಟ್ಟು ಈ ಖಾತೆ ದಲಿತರಿಗಾಗಿಯೂ ತೆರೆಯುವಂತೆ ಪ್ರಯತ್ನಿಸಿದೆವು. ಇತ್ತೀಚೆಗೆ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿ ಪೊಲೀಸ್ ಖಾತೆ ದಲಿತರಿಗೂ ತೆರೆಯಲ್ಪಟ್ಟಿದೆ ಅನ್ನುವಂತಹ ಸರಕಾರಿ ಜಾಹೀರು ಮಸೂದೆ ಇತ್ತೀಚೆಗಷ್ಟೆ ಪ್ರಕಟಗೊಂಡಿದೆ. ಅದರಂತೆ ಮೇಲ್ದರ್ಜೆಯ ಪೊಲೀಸ್ ಅಧಿಕಾರಿಯ ಜಾಗಕ್ಕೆ ನಾನು ಮಾಂಗ್ ಅಭ್ಯರ್ಥಿಯನ್ನು ಸೇರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ದಲಿತರಲ್ಲಿ ಮಾಂಗ್‌ರದ್ದು ಬಹುಸಂಖ್ಯಾತ ಜಾತಿಯಾಗಿದೆ. ಚಮ್ಮಾರರಂತಹ ಅಲ್ಪಸಂಖ್ಯಾಕ ಜಾತಿಯ ನಂಬಿಕೆ ಸಂಪಾದಿಸುವುದು ನನ್ನ ಕರ್ತವ್ಯವಾಗಿದೆಯೆಂದು ನಾನಂದುಕೊಳ್ಳುತ್ತೇನೆ. ಹಾಗಾಗಿ ಕೆಲವೊಮ್ಮೆ ಮಾಂಗ್‌ರ ರೋಷಕಟ್ಟಿಕೊಂಡು ಸಿಗುವ ಸವಲತ್ತಿನ ದೊಡ್ಡ ಭಾಗವನ್ನು ನಾನು ಚಮ್ಮಾರರಾದಿ ದಲಿತರ ಅಲ್ಪಸಂಖ್ಯಾತ ಜಾತಿಗಳಿಗೆ ಸಿಗುವಂತೆ ನೋಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ನಾನು ಮಾಂಗ್‌ರ ಕಣ್ಣಿಗೆ ಸುಣ್ಣ ಚಮ್ಮಾರರ ಕಣ್ಣಿಗೆ ಬಣ್ಣ ಹಚ್ಚುತೇನೆ ಎಂದು ಹೇಳಿ ನನ್ನ ಮೇಲೆ ಟೀಕೆ ಮಾಡುವವರು ನನ್ನ ಮೇಲೆ ಬೇಸರಿಸಿಕೊಳ್ಳುವ ಅನೇಕ ಮಾಂಗ್‌ರಿದ್ದಾರೆ ಅನ್ನುವುದನ್ನು ನಾನು ಬಲ್ಲೆ. ಇದೊಂದೇ ದೊಡ್ಡ ಆಕ್ಷೇಪಣೆಯನ್ನವರು ನನ್ನ ಮೇಲೆ ಹೊರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸವಲತ್ತಿನ ಎಲ್ಲ ಕೆನೆಯನ್ನು ಮಾಂಗ್‌ರಿಗೇ ತಿನ್ನಿಸುತ್ತೇನೆ. ಚಮ್ಮಾರರಾದಿ ಅಲ್ಪಸಂಖ್ಯಾಕರಿಗೆ ಏನೂ ಕೊಡುವುದಿಲ್ಲ ಅನ್ನುವ ಆರೋಪ ನೀಚತನದ್ದು ಹಾಗೂ ನಿರಾಧಾರವಾದದ್ದು. ಚಮ್ಮಾರರಲ್ಲಿರುವ ಜವಾಬ್ದಾರಿಯುತ ನೇತಾರರು ಇಂತಹ ಆರೋಪ ಹೊರಿಸಿರುವುದರಿಂದ ಮಾಂಗ್ ಜಾತಿಯ ಅನೇಕರು ಸಿಟ್ಟಿಗೆದ್ದಿದ್ದಾರೆ. ಸಿಟ್ಟಿಗೆದ್ದಿರುವ ಜನರಿಗೆ ‘‘ದಯವಿಟ್ಟು ನಿಮ್ಮ ಸಿಟ್ಟನ್ನು ಶಾಂತವಾಗಿಸಿ’’ ಎಂದು ಕೇಳಿಕೊಳ್ಳುತ್ತೇನೆ. ಮಾಂಗ್ ಬಹುಸಂಖ್ಯಾತರಾಗಿದ್ದಾರೆ. ಯಾರೇನೇ ಅಂದರೂ ಅವರ ಕರ್ತವ್ಯ ನಿಚ್ಚಳವಾಗಿದೆ. ಇತರ ಅಲ್ಪಸಂಖ್ಯಾತರಿಗೆ ಸಮಾಧಾನವಾಗುವಂತೆ ನಮ್ಮ ವರ್ತನೆಯಿರಬೇಕು. ಸುಮ್ಮನೆ ದೋಷಾರೋಪಣೆ ಮಾಡುವ ಜನರಿಗೆ ಹಚ್ಚಿಟ್ಟು ಮಾಂಗ್‌ರ ವಿರುದ್ಧ ಚಮ್ಮಾರರನ್ನು ಎತ್ತಿಕಟ್ಟಿ ನಾವು ಕೈಗೊಂಡಿರುವ ಕಾರ್ಯವನ್ನು ನಾಶಗೊಳಿಸಿ ಬೆಟ್ಟು ತೋರಿಸಿ ನಮ್ಮನ್ನು ನಗೆಗೀಡು ಮಾಡುವುದೇ ನಮ್ಮ ಹಿತಶತ್ರುಗಳ ಕೆಲಸ. ಅದನ್ನು ನಾವು ಮೆಟ್ಟಿ ನಿಲ್ಲಬೇಕಿದೆ. ಬಹುಸಂಖ್ಯಾಕ ಸಮಾಜಕ್ಕೆ ಸಂಬಂಧಿಸಿರುವುದರಿಂದ ಮಾಂಗ್‌ರ ಮೇಲೆ ಈ ಜವಾಬ್ದಾರಿ ಹೆಚ್ಚಿದೆ. ಹಾಗೆಯೇ ಈ ಜವಾಬ್ದಾರಿಯನ್ನವರು ವಹಿಸಿಕೊಳ್ಳಲೇ ಬೇಕು ಅನ್ನುವುದನ್ನು ನಾನವರಿಗೆ ಮತ್ತೆ ಮತ್ತೆ ಹೇಳುತ್ತಲೇ ಬಂದಿದ್ದೇನೆ. ಚಮ್ಮಾರರ ಈ ಆರೋಪಗಳಿಗೆ ನೀವು ಹಾಗೆಯೇ ಉತ್ತರ ಕೊಡಬಲ್ಲಿರಿ ಹಾಗೂ ಅವರು ನಿಮ್ಮಾಡನೆ ವರ್ತಿಸುವಂತೆ ನೀವೂ ಅವರೊಡನೆ ವರ್ತಿಸಬಹುದು, ಆದರೆ ಇದೆಲ್ಲದರಲ್ಲಿ ನಮ್ಮ ಚಳವಳಿಗೆ ಯಾವುದೇ ಲಾಭವಿಲ್ಲ. ಔದಾರ್ಯ ಹಾಗೂ ಕ್ಷಮಾಶೀಲತೆಯ ಬೆನ್ನು ನಾವು ಹತ್ತಬೇಕಿದೆ. ಈ ವರ್ತನೆಯೇ ನಮ್ಮ ಕಾರ್ಯಕ್ಕೆ ಹಾಗೂ ಉದ್ದೇಶಕ್ಕೆ ಮೆರಗು ಕೊಡಲಿದೆ.

ಮಾಂಗ್ ಜಾತಿಯ ಕೆಲವು ಜನರು ನಾನು ಕೇವಲ ಸತ್ಯಾಗ್ರಹ ಚಳವಳಿಗಳನ್ನು ಮಾಡುತ್ತೇನೆ. ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ನನ್ನನ್ನು ಟೀಕಿಸುತ್ತಾರೆ. ಶಿಕ್ಷಣದ ಅರ್ಥವನ್ನು ನನ್ನ ಟೀಕಾಕಾರರ ಬಾಂಧವರು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಅನ್ನುವುದು ತಿಳಿದರೆ ಅವರ ಅನುಮಾನವನ್ನು ಹೆಚ್ಚು ಸುಲಭವಾಗಿ ಪರಿಹರಿಸಬಹುದಿತ್ತು. ಸತ್ಯಾಗ್ರಹದ ಹಾಗೂ ಮನುಷತ್ವ ಮರಳಿ ಪಡೆಯುವ ಚಳವಳಿಗಳಲ್ಲಿ ಒಳ್ಳೆಯ ಶಿಕ್ಷಣ ಸಿಗಬಹುದು ಅನ್ನುವುದನ್ನವರಿಗೆ ಮನವರಿಕೆ ಮಾಡಿಕೊಡಬಹುದಿತ್ತು. ಆದರೆ ಅವರು ಯಾವುದನ್ನು ‘ಶಿಕ್ಷಣ’ ಅನ್ನುತ್ತಾರೋ ಆ ಶಿಕ್ಷಣ ಕೊಡಿಸುವ ವಿಷಯದಲ್ಲಿ ನನ್ನ ಪ್ರಯತ್ನ ಯಾವುದೇ ಟೀಕಾಕಾರನ ಪ್ರಯತ್ನಕ್ಕಿಂತ ಹೆಚ್ಚಿದೆ ಅನ್ನುವುದನ್ನು ನಾನು ಆಹ್ವಾನಪೂರ್ವಕವಾಗಿ ಹೇಳಬಲ್ಲೆ. ಥಾಣೆ, ಅಹಮದಾಬಾದ್, ಧಾರವಾಡಗಳಲ್ಲಿ ನಾನು ಬೋರ್ಡಿಂಗ್ ನಡೆಸುತ್ತಿದ್ದೇನೆ. ನನ್ನ ಈ ಪ್ರಯತ್ನದಿಂದ ಸುಮಾರು 70 ವಿದ್ಯಾರ್ಥಿಗಳು ಬಿಟ್ಟಿ ಶಿಕ್ಷಣದ ಲಾಭ ಪಡೆಯುತ್ತಿದ್ದಾರೆ. ನನ್ನ ಟೀಕಾಕಾರರು ಈ ನನ್ನ ಕೆಲಸದ ಬಗ್ಗೆ ವಿಚಾರಿಸಿಕೊಳ್ಳಲಿ ಹಾಗೂ ಅವರು ಈ ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಹಾಗೂ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದನ್ನು ಜನತೆಗೆ ಹೇಳಲಿ. ತಾವು ಸ್ವತಃ ಯಾವುದೇ ಕೆಲಸ ಮಾಡದೆ ಮತ್ತೊಬ್ಬರು ಹಾಗೆ ಮಾಡಬೇಕಿತ್ತು ಎಂದು ಹೇಳುವ ಪೊಳ್ಳುತನ ತೋರಿಸಬಾರದು. ಮೇಲೆ ಹೇಳಿರುವ ಟೀಕಾಕಾರರು ನನಗೆ ಹೆಚ್ಚಾಗಿ ನಾಸಿಕ್ ಜಿಲ್ಲೆಯಲ್ಲಿ ಕಂಡುಬಂದರು. ಅವರ ಟೀಕೆಯಲ್ಲಿ ಸ್ವಲ್ಪವಾದರೂ ಅರ್ಥವಿದೆ ಆದರೆ ಸಾತಾರಾ ಜಿಲ್ಲೆಯ ನಿಕಾಳಜೆಯಂತಹ ಮಾಂಗ್ ಜಾತಿಯ ಜನ ನನ್ನನ್ನು ಟೀಕಿಸುವುದರಲ್ಲಿ ತಲೆಬುಡವಿಲ್ಲ. ಸುಮ್ಮನೆ ವಿರುದ್ಧವಾದದ್ದನ್ನೇನೋ ಮಾಡಿ ಯದ್ವಾತದ್ವಾ ಮಾತಾಡುತ್ತ ನಾಯಕತ್ವ ಮೆರೆಯುವುದೇ ಇವರ ಜೀವನದ ಉದ್ದೇಶವಾಗಿದೆ. ಇತ್ತೀಚೆಗೆ ಈ ನಿಕಾಳಜೆ ಹಾಗೂ ಅಂತಹ ಕೆಲವು ಜನ ಸತಾರಾ ಜಿಲ್ಲೆಯ ವತಿಯಿಂದ ಮಾಂಗ್‌ರ ಒಂದು ಪರಿಷತ್ತನ್ನು ಆಯೋಜಿಸಿದ್ದರು ಹಾಗೂ ಅದರ ಅಧ್ಯಕ್ಷತೆಯನ್ನು ಪುಣೆಯ ಮುಜುಮದಾರ ಹಾಗೂ ಇನಾಮದಾರ್ ಸಾಹೇಬರಿಗೆ ಕೊಟ್ಟಿದ್ದರು. ಈ ಇನಾಮದಾರ ಸಾಹೇಬರು ಕೇವಲ ಜಾತಿಯಿಂದಷ್ಟೇಯಲ್ಲ ವೃತ್ತಿಯಿಂದ ಕೂಡ ಪೇಶ್ವೆಗಳ ನಿಜವಾದ ವಂಶಜರು. ಪುಣೆಯ ಪರ್ವತಿ ಸತ್ಯಾಗ್ರಹವನ್ನು ವಿರೋಧಿಸುವುದರಲ್ಲಿ ಇವರು ಪ್ರಮುಖರಾಗಿದ್ದರು. ಇಂತಹ ವ್ಯಕ್ತಿಗೆ ಅಧ್ಯಕ್ಷ ಪದಕೊಟ್ಟು ಚಳವಳಿಯ ಸೂತ್ರಗಳನ್ನು ಇಂತಹ ಹೊರಜಾತಿಯ ವ್ಯಕ್ತಿಯ ಕೈಗೆ ಕೊಟ್ಟು ನಿಕಾಳಜೆಯವರು ಸಾಬೀತು ಪಡಿಸಿದ್ದಾದರೂ ಏನನ್ನು? ದಲಿತರ ಚಳವಳಿಗಳು ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬಲದ ಮೇಲೆ ನಡೆಯುತ್ತಿವೆ. ಮುಜುಮದಾರ ಸಾಹೇಬರಂತಹವರನ್ನು ಅಧ್ಯಕ್ಷರನ್ನಾಗಿ ಮಾಡಿ ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಕೊಡುವಂತಹ ಕೆಲಸ ನಿಕಾಳಜೆ ಮಾಡಿದ್ದಾರೆ. ಇದಕ್ಕಿಂತ ಸ್ವತಃ ಅವರೇ ಇಲ್ಲದಿದ್ದರೆ ಅವರದೇ ಜಾತಿಯ ಪದವೀಧರನೊಬ್ಬನು ಅಧ್ಯಕ್ಷನಾಗಿದ್ದಿದ್ದರೂ ಜನರಿಗೆ ಇಷ್ಟವಾಗುತ್ತಿತ್ತು. ಆದರೆ ಇನಾಮದಾರ ಸಾಹೇಬರಿಗೆ ಅಧ್ಯಕ್ಷ ಸ್ಥಾನವನ್ನು ಕೊಟ್ಟು ಸಭೆಗೆ ಅವರೂ ಬರಲಿಲ್ಲ ಜನ ಕೂಡ ಹೆಚ್ಚು ಸೇರಲಿಲ್ಲ. ನಿಕಾಳಜೆಯಂತಹ ಜನರೊಂದಿಗೆ ನಾನು ಹೊಂದಿಕೊಳ್ಳುವುದಿಲ್ಲ ಅನ್ನುವ ಆರೋಪ ನನ್ನ ಮೇಲೆ ಹೊರಿಸಲಾಗುತ್ತದೆ. ಆದರೆ ಅವರೊಂದಿಗೆ ಹೊಂದಿಕೊಳ್ಳುವುದಾದರು ಹೇಗೆ? ತಮ್ಮ ತತ್ವಗಳ ಜ್ಞಾನವೇ ಇಲ್ಲದ, ಆ ಜ್ಞಾನವನ್ನು ಪಡೆಯಲೂ ಇಚ್ಛಿಸದ, ಸ್ವಾಭಿಮಾನದ ರುಚಿಯೇ ಇಲ್ಲದಿರುವ, ಕೇವಲ ತಮ್ಮ ಮಹತ್ವ ಹೆಚ್ಚಿಸಲು ಪ್ರಯತ್ನಿಸುವ ಜನರೊಂದಿಗೆ ಹೊಂದಿಕೊಳ್ಳುವದಾದರೂ ಹೇಗೆ? ಅವರಿಗೆ ತಿಳಿಸಿಹೇಳುವುದಾದರೂ ಹೇಗೆ? ಇಂತಹ ಜನರನ್ನು ನಿಮ್ಮಂತಹ ಸಾಮಾನ್ಯ ಜನರೇ ಸರಿದಾರಿಗೆ ತರಬೇಕು, ನಿಜವಾದ ಹಾಗೂ ಯೋಗ್ಯ ನೇತಾರರು ಯಾರು? ಹಾಗೂ ಯಾರು ತಮ್ಮ ಒಳ್ಳೆಯದನ್ನು ಬಯಸುತ್ತಾರೆ ಅನ್ನುವುದನ್ನು ಇನ್ನು ಮುಂದೆ ಜನತೆಯೇ ನಿರ್ಧರಿಸಬೇಕು. ‘ನನ್ನನ್ನು ನೇತಾರರೆನ್ನಿ’ ಅನ್ನುವುದರಿಂದ ಯಾರೂ ನೇತಾರನಾಗುವುದಿಲ್ಲ ಅನ್ನುವುದನ್ನು ನೇತಾರನಾಗ ಬಯಸುವವನಿಗೆ ಗೊತ್ತಿರಬೇಕು’’ ಅಂದರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)