ವಾಟ್ಸ್ ಆ್ಯಪ್ ನಲ್ಲಿ GIF ಕಳುಹಿಸುವುದು ಅಪಾಯಕಾರಿಯಾಗಬಹುದು; ಕಾರಣ ಇಲ್ಲಿದೆ
ಹೊಸದಿಲ್ಲಿ: ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿನ ಮಾಹಿತಿ ಹ್ಯಾಕರ್ ಗಳಿಗೆ ಲಭ್ಯವಾಗಲು ಅನುವು ಮಾಡಿಕೊಡುವ ಬಗ್ ಅನ್ನು ಸೆಕ್ಯುರಿಟಿ ಸಂಶೋಧಕರೊಬ್ಬರು ಪತ್ತೆ ಹಚ್ಚಿದ ನಂತರ ವಾಟ್ಸ್ ಆ್ಯಪ್ ತಪ್ಪಾದ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ವಾಟ್ಸ್ ಆ್ಯಪ್ ಬಳಕೆದಾರರು ಖುಷಿಯಲ್ಲಿ ಕಳುಹಿಸುವ GIF ಇಮೇಜ್ ಫೈಲ್ ಗಳನ್ನು ವಾಟ್ಸ್ ಆ್ಯಪ್ ಹೇಗೆ ನಿಭಾಯಿಸುತ್ತಿದೆ ಎಂಬುದರ ಮೇಲೆ ಈ ಅಪಾಯದ ಮಟ್ಟ ಅವಲಂಬಿತವಾಗಿದೆ.
GIF ಫೈಲ್ ಅನ್ನು ಹ್ಯಾಕರ್ ಒಬ್ಬ ವಂಚನೆ ನಡೆಸುವ ಉದ್ದೇಶದಿಂದಲೇ ತಯಾರಾದ ಕೋಡ್ ಜತೆ ಒಂದು ಫೋನ್ ನೊಳಗೆ ಪ್ರವೇಶಿಸುವಂತೆ ಮಾಡಬಹುದಾಗಿದೆ. ಇದು ಮೆಸೇಜ್, ಇಮೇಲ್ ಅಥವಾ ಥರ್ಡ್ ಪಾರ್ಟಿ ಆ್ಯಪ್ ಮುಖಾಂತರ ಕೂಡ ಆಗಬಹುದು. ವಾಟ್ಸ್ ಆ್ಯಪ್ ಬಳಕೆದಾರ GIF ಅನ್ನು ತನ್ನ ಆಂಡ್ರಾಯ್ಡ್ ಫೋನ್ ಗೆ ಡೌನ್ ಲೋಡ್ ಮಾಡಿ ನಂತರ ವಾಟ್ಸ್ ಆ್ಯಪ್ ಒಳಗಿನ ಗ್ಯಾಲರಿಯಲ್ಲಿ ಓಪನ್ ಮಾಡಿದಾಗ ಆ ಕೋಡ್ 'ರಿಮೋಟ್ ಆಂಡ್ರಾಯ್ಡ್ ಎಕ್ಸಿಕ್ಯುಶನ್' ಅಟ್ಯಾಕ್ ಗೆ ಅನುಮತಿಸಿ ವಾಟ್ಸ್ ಆ್ಯಪ್ ಬಳಕೆದಾರನ ಆಂಡ್ರಾಯ್ಡ್ ಫೋನ್ ಮಾಹಿತಿ ಹ್ಯಾಕರ್ ಗೆ ಲಭ್ಯವಾಗುತ್ತದೆ.
ಅವೇಕನ್ಡ್ ಎಂಬ ಸೆಕ್ಯುರಿಟಿ ರಿಸರ್ಚರ್ ಈ ಬಗ್ ಪತ್ತೆ ಹಚ್ಚಿದ್ದು ಅವರು ತಮ್ಮ ಪೋಸ್ಟ್ ನಲ್ಲಿ ವಾಟ್ಸ್ ಆ್ಯಪ್ ಬಳಕೆದಾರರಿಗೆ ಲೇಟೆಸ್ಟ್ ವಾಟ್ಸ್ ಆ್ಯಪ್ ವರ್ಷನ್ ಗೆ ಅಪ್ಡೇಟ್ ಮಾಡುವಂತೆಯೂ ಸಲಹೆ ನೀಡಿದ್ದಾರೆ.