ಕೇಂದ್ರ-ರಾಜ್ಯ ಸರಕಾರ ದಿವಾಳಿಯಾಗಿದೆ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಅ.4: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ದಿವಾಳಿಯಾಗಿದೆ. ಆದುದರಿಂದಲೇ, ನೆರೆ ಪರಿಹಾರ ಘೋಷಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಸರಕಾರ ಆಯಾ ಕಾಲಕ್ಕೆ ಆದಾಯ ಹೆಚ್ಚಳ ಮಾಡುವ ಮೂಲಕ ಜನತೆಯ ದುಃಖ ದುಮ್ಮಾನಗಳಿಗೆ ಭಾಗಿಯಾಗಿ ಸಹಕರಿಸಬೇಕು ಎಂದರು. ಕೇಂದ್ರ ಸರಕಾರ ನಮ್ಮ ರಾಜ್ಯದಿಂದ ತೆರಿಗೆ ಸಂಗ್ರಹ ಮಾಡುತ್ತದೆ. ಅದರಲ್ಲಿ ನಮ್ಮ ರಾಜ್ಯಕ್ಕೆ ಇಂತಿಷ್ಟು ಪ್ರಮಾಣವನ್ನು ಕೊಡಬೇಕು ಎಂಬುದು ಸಂವಿಧಾನಿಕ ನಿಯಮ. ರಾಜ್ಯದಲ್ಲಿ ಇವತ್ತು ಅಪ್ಪಮಕ್ಕಳ ರಾಜಕೀಯ ನಡೀತಿದೆ. ಯಡಿಯೂರಪ್ಪ ಒಂದು ಹೇಳಿಕೆ ಕೊಡುತ್ತಾರೆ, ಅವರ ಮಗ ಮತ್ತೊಂದು ಹೇಳಿಕೆ ಕೊಡುತ್ತಾರೆ. ಆಡಳಿತ ಹಿಡಿಯಲು ಒಂದು ಸಾವಿರ ಕೋಟಿ ರೂ.ಖರ್ಚು ಮಾಡಿ ಆಡಳಿತ ಹಿಡಿದವರು ಇವರು ಎಂದು ಉಗ್ರಪ್ಪ ಆರೋಪಿಸಿದರು.
ಕೇಂದ್ರದ ಅಧ್ಯಯನ ಸಮಿತಿ ಕಾಟಾಚಾರಕ್ಕೆ ಬಂದು ಹೋಗಿದೆ. ನೆರೆ ಪೀಡಿತ ಎಲ್ಲ ತಾಲೂಕುಗಳಿಗೆ ಸಮಿತಿ ಭೇಟಿ ನೀಡಿಲ್ಲ. ಕೇಂದ್ರ ಸರಕಾರದ ಪ್ರತಿನಿಧಿಗಳು ವಿಹಾರಕ್ಕೆ ಬಂದಿದ್ರಾ ಅಥವಾ ಸಂತ್ರಸ್ತರಿಗೆ ಪರಿಹಾರ ಕೊಡಲು ಬಂದಿದ್ರಾ? ಈ ಕೇಂದ್ರ ಸರಕಾರಕ್ಕೆ ಮನುಷ್ಯತ್ವ ಇದೆಯೋ ಇಲ್ಲವೋ ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಶೋಕಿಲಾಲ. ಅವರಿಗೆ ವಿದೇಶಗಳಿಗೆ ಹೋಗಲು ಸಮಯ ಇರುತ್ತದೆ. ನಮ್ಮ ರಾಜ್ಯದಲ್ಲಿನ ಅನಾಹುತದ ಬಗ್ಗೆ ಕನಿಷ್ಠ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿಗೆ ಕಾಲಾವಕಾಶ ಸಿಕ್ಕಿಲ್ಲವೇ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರು ಕೆಲವು ಕಡೆ ಹೋಗಿದ್ದರು ಅಷ್ಟೇ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಹಣ ಕೊಡುವ ಅಗತ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಹಣ ಕೊಡಲು ವಿಧಾನವಿದೆ ಎಂದು ಕೆಲವರು ಹೇಳುತ್ತಾರೆ. ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ, ಈ ಹಿಂದೆ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ಮೊನ್ನೆ ಸಂತ್ರಸ್ತರ ಮೇಲೆ ಪೊಲೀಸ್ ದೌರ್ಜನ್ಯ ಮಾಡಿಸಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿಯಲ್ಲಿ ನಳೀನ್ ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಒಂದು ತಂಡವಾದರೆ, ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ತಂಡವಿದೆ. ಜನರ ಸೇವೆ ಮಾಡಲು ಬದ್ಧತೆ ಸರಕಾರ ನಡೆಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ, ನೆರೆ ಪರಿಹಾರ ವಿಚಾರದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದರಿಗೆ ಬುದ್ಧಿ ಹೇಳಲು ಆ ಪಕ್ಷದ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಗೆ ಆಗುತ್ತಿಲ್ಲವೆ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಎರಡನೆ ಬಾರಿ ಪರಿಹಾರ ಬಿಡುಗಡೆ ಮಾಡುವುದನ್ನು ತಿರಸ್ಕರಿಸಿದೆ. ಕೇಂದ್ರ ಸರಕಾರದ ಇದೇ ಧೋರಣೆ ಮುಂದುವರೆದರೆ, ನಾವು ಸದನದ ಒಳಗೆ ಹಾಗು ಹೊರಗೆ ಖಂಡಿತವಾಗಿಯೂ ಹೋರಾಟ ಮಾಡುತ್ತೇವೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.