ಶಿಕ್ಷಣದ ಕೇಸರೀಕರಣ ಮತ್ತು ಜಾತಿ-ಧರ್ಮ ತಾರತಮ್ಯ
ಭಾರತೀಯ ಕ್ಯಾಂಪಸ್ಗಳ ಮೇಲೆ ಆಕ್ರಮಣ
ಭಾಗ-3
ಪೀಪಲ್ಸ್ ಕಮಿಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್ಡಿಎಸ್), ಭಾರತೀಯ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತ ಜನತಾ ನ್ಯಾಯಮಂಡಳಿಯನ್ನು ಸಂಘಟಿಸಿತ್ತು. ಈ ನ್ಯಾಯಮಂಡಳಿಯು ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್, ನ್ಯಾಯಮೂರ್ತಿ (ನಿವೃತ್ತ) ಬಿ.ಜಿ ಕೋಲ್ಸೆ-ಪಾಟೀಲ್, ಪ್ರೊ. ಅಮಿತ್ ಬಡೂರಿ, ಡಾ. ಉಮಾ ಚಕ್ರವರ್ತಿ, ಪ್ರೊ. ಟಿ.ಕೆ. ಉಮ್ಮನ್, ಪ್ರೊ. ವಸಂತಿ ದೇವಿ, ಪ್ರೊ. ಘನಶ್ಯಾಮ್ ಶಾ, ಪ್ರೊ. ಮೆಹರ್ ಇಂಜಿನಿಯರ್, ಪ್ರೊ. ಕಲ್ಪನಾ ಕಣ್ಣಬೀರನ್, ಪಮೇಲಾ ಫಿಲಿಪೋಸ್ ಅವರನ್ನು ಒಳಗೊಂಡಿತ್ತು. ಅದರ ವರದಿಯ ಆಧಾರದಲ್ಲಿ ಈ ಲೇಖನ ಸರಣಿಯನ್ನು ಸಿದ್ಧಪಡಿಸಲಾಗಿದ್ದು, ಕೊನೆಯ ಕಂತು ಇಲ್ಲಿದೆ.
ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣದ ಜೊತೆಗೆಯೇ ಸಾಮಾಜಿಕ-ರಾಜಕೀಯ-ಧಾರ್ಮಿಕ ಸಂಪ್ರದಾಯವಾದವೂ ಏರಿಕೆ ಕಂಡಿದೆ. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಸ್ವಂತ ಅಸ್ತಿತ್ವದ ಮೇಲಿನ ಅವಲಂಬನೆಯನ್ನು ಹೆಚ್ಚಿಸುವ ಸಲುವಾಗಿ ಕೇಸರಿ ಶಕ್ತಿಗಳು ಸಾಂಸ್ಕೃತಿಕ ನಂಬಿಕೆಗಳು ಮತ್ತು ಸಂಪನ್ಮೂಲಗಳನ್ನು ಆಕ್ರಮಿಸಿಕೊಳ್ಳುತ್ತಿವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಅಲ್ಲಿನ ಸಂತ-ವಿದ್ವಾಂಸರಾಗಿದ್ದ ಶಂಕರದೇವ್ ಅವರ ಹೆಸರಿನಲ್ಲಿ ಹಿಂದೂ ಧಾರ್ಮಿಕ ಮೂಲಭೂತವಾದಿಗಳು ನಡೆಸುವ ಸುಮಾರು 500 ಶಾಲೆಗಳಿದ್ದು, ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಾರೆ. ಈ ಶಂಕರದೇವ್ ಶಿಶು ನಿಕೇತನಗಳಲ್ಲಿ ಕಟ್ಟರ್ ಹಿಂದುತ್ವದ ವಿಚಾರಗಳನ್ನು ಮಕ್ಕಳ ತಲೆಗೆ ತುಂಬಿಸಲಾಗುತ್ತಿದೆ. ಇದು ಬಲಪಂಥೀಯ ಪರವಾದ ತೀರಾ ಸಂಪ್ರದಾಯವಾದಿ, ಕರ್ಮಠ ಶೈಕ್ಷಣಿಕ ಸಂಸ್ಕೃತಿಯನ್ನು ಬೆಳೆಸಿದೆ.
ಹಲವಾರು ಶಾಲೆಗಳಲ್ಲಿ ಸಂಸ್ಕೃತವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಸಂಸ್ಕೃತವನ್ನು ಕಲಿಸುವುದು ಚಿಂತೆಗೆ ಕಾರಣವಲ್ಲ- ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಶಾಸ್ತ್ರೀಯ ಭಾಷೆಗಳ ಕಲಿಕೆಗೆ ಸ್ಥಾನವಿದೆ- ಆದರೆ, ಅದಕ್ಕೆ ವಿಶೇಷ ಸ್ಥಾನ ಕಲ್ಪಿಸಿ, ಅದನ್ನು ಹಿಂದುತ್ವದ ಯೋಜನೆಗೆ ತಳಕುಹಾಕುವುದು ತೀರಾ ಸಮಸ್ಯಾತ್ಮಕವಾಗಿದೆ. ಹಿಂದುತ್ವದ ಸಿದ್ಧ ಅಚ್ಚಿಗೆ ಸರಿಹೊಂದುವಂತೆ ಶಿಕ್ಷಣವನ್ನು ರೂಪಾಂತರಿಸುವ ಬಲಪಂಥೀಯ ಅಭಿಯಾನದ ಯತ್ನದಲ್ಲಿ ದೇಶಾದ್ಯಂತದ ಹಲವಾರು ಶಾಲೆಗಳಲ್ಲಿ ಸಂಪೂರ್ಣ ಕಟ್ಟುಕತೆಯಲ್ಲದಿದ್ದರೂ, ಇತಿಹಾಸವನ್ನು ಪೂರ್ಣ ತಿರುಚಿದ ಪಠ್ಯ ಪುಸ್ತಕಗಳನ್ನು ಬಳಸುವಂತೆ ಬಲಾತ್ಕರಿಸಲಾಗಿದೆ. ಇದು ಅತ್ಯಂತ ಚಿಂತೆಗೆ ಕಾರಣವಾಗುವ ವಿಷಯವೇಕೆಂದರೆ, ಈ ಮೂಲಕ ಭಾರತದ ಭವಿಷ್ಯವನ್ನು ಶಾಲಾಕೊಠಡಿಯಲ್ಲಿ ರೂಪಿಸಲಾಗುತ್ತಿರುವುದು. ‘ಪುನರುತ್ಥಾನಗೊಳ್ಳುತ್ತಿರುವ ಭಾರತ’ವನ್ನು ಬಿಂಬಿಸುವ ಪ್ರಯತ್ನದಲ್ಲಿ ತರಗತಿಯ ಬೋಧನೆಯು ಹೆಚ್ಚಾಗಿ ಭಾರತದ ಕುರಿತು ತಿರುಚಿದ ಚಿತ್ರಣವನ್ನು ನೀಡುತ್ತಿದೆ. ಕೇಂದ್ರ ಸರಕಾರ ಮತ್ತು ಹಿಂದುತ್ವದ ಶಕ್ತಿಗಳು ಉನ್ನತ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಮತ್ತು ಚಿಂತನೆಯನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಕೂಡಾ ಮಾಡುತ್ತಿವೆ.
ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಕಲಿಕೆಯ ಸಂಸ್ಥೆಗಳು, ಭಾರತೀಯ ಜಾತ್ಯತೀತತೆಯ ಸ್ವರೂಪ ಮತ್ತು ಸ್ಥಿತಿಯಂತಹ ವಿವಿಧ ಚರ್ಚಾರ್ಹ ವಿಷಯಗಳ ಕುರಿತು ಚರ್ಚಿಸುವ ಸ್ವಾತಂತ್ರ್ಯ ಇರುವ ವೇದಿಕೆಗಳಾಗಬೇಕು ಮತ್ತು ಈ ಸ್ವಾತಂತ್ರ್ಯವನ್ನು ಉಳಿಸಿ, ರಕ್ಷಿಸಬೇಕು. ಇಂದು ಸರಕಾರದ ನಿರ್ದೇಶನಕ್ಕೆ ಬದ್ಧರಾಗಿರುವ ಸಲುವಾಗಿ ಶೈಕ್ಷಣಿಕ ಕ್ಷೇತ್ರದ ಅಧಿಕಾರಸ್ಥರು ಚಿಂತನಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉದ್ದೇಶಪೂರ್ವಕವಾಗಿಯೇ ಮೊಟಕುಗೊಳಿಸುತ್ತಿದ್ದಾರೆ.
ಇದರ ಜೊತೆಯಲ್ಲಿಯೇ ದಲಿತ, ಬುಡಕಟ್ಟು ಜನಾಂಗ, ಧಾರ್ಮಿಕ ಅಲ್ಪಸಂಖ್ಯಾತರು, ಈಶಾನ್ಯ ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಡೆಗಣಿಸುವಿಕೆಯು ತೀವ್ರಗೊಳ್ಳುತ್ತಿದೆ. ಲಿಂಗತ್ವ ಮತ್ತು ಲಿಂಗಾಧರಿತ ತಾರತಮ್ಯ ಮತ್ತು ಕಿರುಕುಳಗಳ ಕುರಿತೂ ಸಾಕಷ್ಟು ಸಾಕ್ಷಗಳಿವೆ.
ಈಗಾಗಲೇ ಹೇಳಿರುವಂತೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಜನಸಂಖ್ಯಾಧರಿತ ಸಾಮಾಜಿಕ ಸಂರಚನೆಯು ಬದಲಾಗಿದೆ. ಇದು ಸ್ಥಾಪಿತ ಹಿತಾಸಕ್ತಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದೆ. ಸಾರ್ವಜನಿಕ (ಸರಕಾರಿ) ವಿಶ್ವವಿದ್ಯಾನಿಲಯಗಳಲ್ಲಿ ಅವುಗಳ ವ್ಯವಸ್ಥೆಯ ಒಳಗೆಯೇ, ಅದರಲ್ಲೂ ಮುಖ್ಯವಾಗಿ ದಾಖಲಾತಿ, ವಿದ್ಯಾರ್ಥಿಗಳ ಸಾಮಾಜಿಕ ಸಂರಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದೇ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳನ್ನು ಅವರ ಅಸ್ಮಿತೆಯ ಆಧಾರದಲ್ಲಿ ಗುರಿಮಾಡಲಾಗುತ್ತಿರುವುದು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾಯತ್ತೆ ನೀಡಲು ನಿರ್ಧರಿಸಿರುವುದು, ಹೇಗೆ ಸರಕಾರವು ಬಡ ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳನ್ನು ಅಂಚಿಗೆ ತಳ್ಳಿ, ಅವರಿಗೆ ಸಮಾನ, ಗುಣಮಟ್ಟದ ಮತ್ತು ಕೈಗೆಟಕುವ ಶಿಕ್ಷಣವನ್ನು ನಿರಾಕರಿಸಲು ಟೊಂಕಕಟ್ಟಿ ನಿಂತಿದೆ ಎಂಬುದನ್ನು ಸೂಚಿಸುತ್ತದೆ.
ಹಲವಾರು ಪ್ರಕರಣಗಳಲ್ಲಿ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಮಹಿಳೆಯರು, ಮುಸ್ಲಿಮರು, ದಲಿತರು ಮತ್ತು ಆರ್ಥಿಕವಾಗಿ ಕಡೆಗಣಿಸಲ್ಪಟ್ಟ ವರ್ಗಗಳ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರಿಮಾಡುತ್ತಿವೆ. ಇಂತಹ ಮನೋಭಾವವು ಕೆಲವು ಸಲ ದೈಹಿಕ ಮತ್ತು ಆರ್ಥಿಕ ತಾರತಮ್ಯದ ಮೂಲಕ ‘ಬೌದ್ಧಿಕ-ಮಾನಸಿಕ ಗುಂಪು ಹಲ್ಲೆ’ಯ ಮಟ್ಟಕ್ಕೆ ಏರುತ್ತದೆ. ವಸತಿನಿಲಯ ಸೌಲಭ್ಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಾವಕಾಶದಲ್ಲಿ ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತಿದೆ. ಅವರನ್ನು ಕ್ಯಾಂಪಸಿನ ಒಳಗೆಯೇ ಅವರ ಗುರುತಿಗೆ ಸಂಬಂಧಿಸಿದಂತೆ ಅವಮಾನಕ್ಕೆ ಗುರಿಪಡಿಸಲಾಗುತ್ತಿದ್ದು, ಹಾಗೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲಾಗಿರುವುದು ಅಪರೂಪ.
ದಲಿತರು ಮತ್ತು ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಹಿತ ಹಲವು ಸೌಲಭ್ಯಗಳನ್ನು ನೀಡಿ ಸಮಾನ ಅವಕಾಶದ ಜೀವಂತ ಮತ್ತು ಉಜ್ವಲ ಉದಾಹರಣೆಗಳಾಗಿದ್ದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೂಡಾ ಇಂದು ಶುಲ್ಕದಲ್ಲಿ ಭಾರೀ ಏರಿಕೆಯಿಂದಾಗಿ ಇಂತಹ ಮನೋಭಾವ ತಿರುವುಮುರುವಾಗಿದೆ. ಸಂಬಂಧಪಟ್ಟ ಸರಕಾರಗಳು ಮತ್ತು ವಿಶ್ವವಿದ್ಯಾನಿಲಯಗಳ ಆಡಳಿತಗಳು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ. ಇದರ ಪರಿಣಾಮವಾಗಿ ಒಂದು ಕಾಲದಲ್ಲಿ ಸಾಕಷ್ಟು ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಇತರ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳನ್ನು ಹೊಂದಿದ್ದ ಸಂಸ್ಥೆಗಳು ಕೂಡಾ ಇಂದು- ಹೊಸ ಮತ್ತು ಕೈಗೆಟಕದ ಶುಲ್ಕ ವ್ಯವಸ್ಥೆಯ ಕಾರಣದಿಂದ-ಮತ್ತೆ ತಾವು ಹಿಂದೆ ಇದ್ದ ‘ಉಳ್ಳವರ’ ಸಂಸ್ಥೆಗಳಾಗಿ ಮಾರ್ಪಡುವ ಅಪಾಯ ಎದುರಾಗಿದೆ. ಅನೇಕ ವಿದ್ಯಾರ್ಥಿಗಳ ಸಾಕ್ಷ್ಯಗಳಿಂದ ಅವರು ಹತಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ ಎಂಬುದನ್ನು ನ್ಯಾಯಮಂಡಳಿ ಕಂಡುಕೊಂಡಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳನ್ನು ಒಂದೇ ವರ್ಗದಲ್ಲಿ ಸೇರಿಸಿರುವುದರಿಂದ ಬುಡಕಟ್ಟು ವಿದ್ಯಾರ್ಥಿಗಳ ನಿರ್ದಿಷ್ಟ ಸಮಸ್ಯೆಗಳನ್ನು ಅವಗಣಿಸಲಾಗುತ್ತಿದೆ. ಇದು ಕೇವಲ ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿದ ವಿಷಯವಲ್ಲ. ಅದು ದಶಕಗಳಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬೇರೂರಿದೆ. ಇದನ್ನು ಜನಸಂಖ್ಯಾ ವಿತರಣೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪರಿಶಿಷ್ಟ ಜಾತಿಯವರು ದೇಶದ ಉದ್ದಗಲಕ್ಕೂ ಹರಡಿಕೊಂಡಿದ್ದರೆ, ಬುಡಕಟ್ಟು ಜನರು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತರಾಗಿದ್ದಾರೆ. ಉದಾಹರಣೆಗೆ 54 ಶೇಕಡಾ ಬುಡಕಟ್ಟು ಜನರು ಐತಿಹಾಸಿಕವಾಗಿ ಛೋಟಾ ನಾಗ್ಪುರ್ ಎಂದು ಕರೆಯಲಾಗುತ್ತಿರುವ ಮಧ್ಯ ಭಾರತದಲ್ಲಿ ಇದ್ದರೆ, ಇನ್ನೂ 14 ಶೇಕಡಾ ಜನರು ಈಶಾನ್ಯ ರಾಜ್ಯಗಳಲ್ಲಿದ್ದಾರೆ. ಉಳಿದ ಸುಮಾರು 32 ಶೇಕಡಾ ಮಂದಿ ಮಾತ್ರ ದೇಶದಾದ್ಯಂತ ಹರಡಿಕೊಂಡಿದ್ದಾರೆ. ಈ ವಾಸ್ತವವನ್ನು ಸರಿಯಾಗಿ ಅರ್ಥೈಸಿಕೊಂಡು ಧೋರಣೆಗಳನ್ನು ರೂಪಿಸದೇ ಹೋದಲ್ಲಿ ಬುಡಕಟ್ಟು ಸಮುದಾಯಗಳಿಗೆ ಸೇರಿದ ಬಹಳಷ್ಟು ಮಂದಿ ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ, ಸುಮಾರು 30ರಿಂದ 40 ಕಿ. ಮೀ. ಸುತ್ತಳತೆಯಲ್ಲಿ ಇದ್ದವರು ಮಾತ್ರ ಸಾಮಾನ್ಯವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಾರೆ.
ಕೆಲವು ವರ್ಷಗಳ ಹಿಂದೆ ಭಾರತ ಸರಕಾರವು ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಆರಂಭಿಸಿತು. ಅವುಗಳಲ್ಲಿ ಕೆಲವು ಬುಡಕಟ್ಟು ಪ್ರದೇಶಗಳ ಕೇಂದ್ರ ಭಾಗಗಳಲ್ಲಿವೆ. ಆದರೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳ ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ನಗರದ ಬಂಧುಗಳ ಮಟ್ಟಕ್ಕೆ ತಲುಪಲು ಕೆಲವು ವರ್ಷಗಳೇ ಬೇಕಾಗಬಹುದು. ವಾಸ್ತವಿಕ ಭೌಗೋಳಿಕ ಅಡಚಣೆಗಳಿಗೆ ಹೆಚ್ಚುವರಿಯಾಗಿ ಇನ್ನೊಂದು ಸಮಸ್ಯೆ ಎಂದರೆ ಭಾಷೆಯದ್ದು. ಪ್ರತಿಯೊಂದು ಭಾರತೀಯ ಮಗು ಅದರ ಮಾತೃಭಾಷೆಯಲ್ಲಿಯೇ ಸಾರ್ವತ್ರಿಕ, ಕಡ್ಡಾಯ ಶಿಕ್ಷಣ ಪಡೆಯುವ ಸಾಂವಿಧಾನಿಕ ಹಕ್ಕು ಪಡೆದಿದ್ದರೂ, ಸರಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಅಸಂಗತತೆಯನ್ನು ನಿವಾರಿಸುವುದು ಸರಕಾರದ ಆದ್ಯತೆಯಾಗಬೇಕು. ಆದರೆ, ಈ ತನಕ ಈ ಸಮಸ್ಯೆಯತ್ತ ಗಮನಹರಿಸುವ ಯಾವುದೇ ಲಕ್ಷಣಗಳಿಲ್ಲ.
ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಾನ ಅನನುಕೂಲತೆ ಎಂದರೆ, ಒಂದು ಪಿಎಚ್.ಡಿ. ಪಡೆಯಲು ತಗಲುವ ಅವಧಿ. ಹೆಚ್ಚಿನವರು ತಮ್ಮ ಪಿಎಚ್.ಡಿ.ಗೆ ಸೇರುವಾಗಲೇ ಇಪ್ಪತ್ತರ ಹರೆಯದ ಕೊನೆಯ ಭಾಗದಲ್ಲಿರುತ್ತಾರೆ. ಇದರಿಂದ ಅವರು ವಯಸ್ಸು ಮೀರಿದ ಕಾರಣದಿಂದ ವಿದ್ಯಾರ್ಥಿ ಚುನಾವಣೆಗಳಲ್ಲಿ ಭಾಗವಹಿಸಲು ಅನರ್ಹರಾಗಿರುತ್ತಾರೆ. ಇದರಿಂದಾಗಿ ಅವರು ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಧೋರಣೆಗಳ ಮೇಲೆ ಪ್ರಭಾವ ಬೀರಬಹುದಾದ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಇದೇ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ಮೂಲೆುಂಪು ಮಾಡುವ ಗೆಟ್ಟೋ ಪದ್ಧತಿ (ghettoization) ಚಾಲ್ತಿಯಲ್ಲಿದೆ ಎಂದು ನ್ಯಾಯಮಂಡಳಿ ಗುರುತಿಸಿದೆ. ವ್ಯವಸ್ಥೆಯು ಅವರನ್ನು ಅವರದ್ದೇ ಧರ್ಮದವರಿರುವ ಚಿಕ್ಕ ಗುಂಪಿಗೆ ತಳ್ಳುತ್ತಿರುವಂತೆ ಕಂಡುಬರುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರಬೇಕಾದ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದ ವಂಚಿತರಾದ ಇಂತಹ ವಿದ್ಯಾರ್ಥಿಗಳು ಸಾಂಪ್ರದಾಯಿಕ ಮೌಲ್ಯಗಳನ್ನು ಅಪ್ಪಿಕೊಳ್ಳುತ್ತಾರೆ. ಆಧುನಿಕ, ಜಾತ್ಯತೀತ ದೃಷ್ಟಿಕೋನವನ್ನು ಪಡೆಯಲು ಶಿಕ್ಷಣವು ಒಂದು ಮುಖ್ಯ ಮಾರ್ಗವಾಗಿರುವುದರಿಂದ, ವ್ಯವಸ್ಥೆಯು ದೇಶದಾದ್ಯಂತದ ಕ್ಯಾಂಪಸ್ಗಳಲ್ಲಿ ಮುಸ್ಲಿಮರು ಹೆಚ್ಚಿನ ಪ್ರಾತಿನಿಧ್ಯ ಹೊಂದಿರಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕಿತ್ತೆಂಬುದು ನ್ಯಾಯಮಂಡಳಿಯ ಅಭಿಪ್ರಾಯವಾಗಿದೆ. ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಇರಿಸುವುದು ವ್ಯವಸ್ಥೆಯ ಗಂಭೀರ ವೈಫಲ್ಯ ಎಂದು ಅದು ಪರಿಗಣಿಸಿದೆ.
ದಲಿತರು ಇಮ್ಮಡಿ ತಾರತಮ್ಯ ಎದುರಿಸುತ್ತಿದ್ದಾರೆ. ಪ್ರತಿನಿತ್ಯದ ಪೂರ್ವಗ್ರಹಗಳು ಇರುವಂತೆಯೇ, ಅವರಿಗೆ ಸಿಗುತ್ತಿರುವ ಫೆಲೋಶಿಪ್ಗಳೂ ಕಡಿಮೆಯಾಗುತ್ತಿವೆ. ದಲಿತ ವರ್ಗಕ್ಕೆ ಸೇರಿದ ಮಹಿಳೆಯರು ಹೆಣ್ಣೆಂಬ ಕಾರಣಕ್ಕೆ ಹೆಚ್ಚುವರಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಮೀಸಲಾತಿ ಮತ್ತು ವಿದ್ಯಾರ್ಥಿವೇತನಗಳ ನಿರಾಕರಣೆಯಿಂದ ಈ ವರ್ಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪ್ರವೇಶದಿಂದ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಕಡೆಗಣಿಸಲಾಗಿರುವ ವರ್ಗಗಳಿಗೆ ಮೀಸಲಾದ ಶೈಕ್ಷಣಿಕ ನಿಧಿ ಮತ್ತು ವಿದ್ಯಾರ್ಥಿವೇತನಗಳನ್ನು ಇಂದು ರಾಜಕೀಯ ಮತ್ತು ಚುನಾವಣಾ ಲಾಭ ಗಳಿಸುವ ಆಯುಧಗಳಾಗಿ ಬಳಸಲಾಗುತ್ತಿರುವುದನ್ನು ಅತಿರೇಕ ಎಂದು ನ್ಯಾಯಮಂಡಳಿ ಬಣ್ಣಿಸಿದೆ.
ಪಿತೃಪ್ರಧಾನ ವ್ಯವಸ್ಥೆ ಮತ್ತು ಲಿಂಗತ್ವ ಕುರಿತ ಅಸೂಕ್ಷ್ಮತೆಯಿಂದಾಗಿ ಸಾಂಸ್ಥಿಕ ಅವಕಾಶದಲ್ಲಿ ಲೈಂಗಿಕ ಕಿರುಕುಳ ಮತ್ತು ತಾರತಮ್ಯವು ಪ್ರಮುಖ ಆತಂಕವಾಗಿದೆ. ಒಂದು ಕಡೆಯಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊತ್ತ ಬೋಧಕ ಸಿಬ್ಬಂದಿ ಅಧಿಕಾರಸ್ಥರಿಗೆ ಹತ್ತಿರದವರೆಂಬ ಕಾರಣದಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲರಾದರೆ, ಇನ್ನೊಂದು ಕಡೆಯಲ್ಲಿ ಅತಿನಿಯಂತ್ರಿತ ವಾತಾವರಣವು ವಿದ್ಯಾರ್ಥಿನಿಯರು ಕ್ಯಾಂಪಸ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ, ಕ್ಯಾಂಪಸ್ ಸೌಲಭ್ಯಗಳನ್ನು ಪೂರ್ಣವಾಗಿ ಬಳಸಿಕೊಳ್ಳದಂತೆ ಮತ್ತು ತಾವು ಬಯಸುವ ಶೈಕ್ಷಣಿಕ ಫಲಿತಾಂಶವನ್ನು ಸಾಧಿಸದಂತೆ ತಡೆಯುತ್ತಿವೆ. ವಿದ್ಯಾರ್ಥಿನಿಲಯಗಳ ಸಮಯದ ಪ್ರತಿಬಂಧಗಳು ವಿದ್ಯಾರ್ಥಿನಿಯರ ಮಟ್ಟಿಗೆ ಅತ್ಯಂತ ಸರ್ವವ್ಯಾಪಿ ವಿಷಯವಾಗಿದ್ದು, ದೇಶಾದ್ಯಂತದ ಹಲವಾರು ಕ್ಯಾಂಪಸ್ಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಆಂತರಿಕ ದೂರು ಸಮಿತಿ, ಲೈಂಗಿಕ ಕಿರುಕುಳ ಸಮಿತಿ ಮುಂತಾದ ಆಂತರಿಕ ವ್ಯವಸ್ಥೆಗಳು ಮುರಿದುಬಿದ್ದಿರುವುದರಿಂದ, ವಿದ್ಯಾರ್ಥಿಗಳು ಕೋರ್ಟು ಕೇಸು ಮುಂತಾದ ಹೊರಗಿನ ಕ್ರಮಗಳ ಮೊರೆಹೋಗಬೇಕಾಗಿದೆ. ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರು ಹೆಚ್ಚಾಗಿ ಮೌಖಿಕ, ದೈಹಿಕ ಮತ್ತು ಪೊಲೀಸ್ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಏಕೆಂದರೆ, ಅವರನ್ನು ಸಾಮಾಜಿಕವಾಗಿ ದಾರಿತಪ್ಪಿದವರೆಂಬಂತೆ ಕಾಣಲಾಗುತ್ತದೆ.
ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವೈಯಕ್ತಿಕ ಸಾಕ್ಷಿಗಳನ್ನು ಆಲಿಸಿದ ನ್ಯಾಯಮಂಡಳಿಯು, ಅವರು ಹೇಗೆ ಮುಸ್ಲಿಮರು ಮತ್ತು ಕಾಶ್ಮೀರಿಗಳು ಎಂಬ ನೆಲೆಯಲ್ಲಿ ಬಹುಮುಖವಾದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಕಂಡುಕೊಂಡಿದೆ. ತಮ್ಮನ್ನು ಹೇಗೆ ‘ರಾಷ್ಟ್ರ ವಿರೋಧಿಗಳು’, ‘ಇಸ್ಲಾಮಿಕ್ ಭಯೋತ್ಪಾದಕರು’ ಮತ್ತು ‘ಪಾಕಿಸ್ತಾನಿ ಏಜೆಂಟರು’ ಎಂದು ಹಂಗಿಸಲಾಗುತ್ತಿದೆ ಎಂದು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನ್ಯಾಯಮಂಡಳಿಗೆ ವಿವರಿಸಿದ್ದಾರೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ವ್ಯವಸ್ಥಿತ ಜನಾಂಗೀಯ ನಿಂದನೆಗೆ ಹೆಚ್ಚುಹೆಚ್ಚಾಗಿ ಗುರಿಪಡಿಸಲಾಗುತ್ತಿದೆ. ತಮ್ಮ ಬುಡಕಟ್ಟು ಗುರುತಿಗಾಗಿ ತಮ್ಮನ್ನು ಎಷ್ಟರ ಮಟ್ಟಿಗೆ ಬೇರೆಯವರಿಂದ ಪ್ರತ್ಯೇಕಿಸಲಾಗುತ್ತಿದೆ ಎಂದು ಆ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವರಿಸಿದ್ದಾರೆ. ತಮ್ಮ ಆಹಾರ ಪದ್ಧತಿ, ಉಡುಗೆ ತೊಡುಗೆ ಇತ್ಯಾದಿಗಳು ತುಚ್ಛವಾದ ತಮಾಷೆಗಳಿಗೆ ತುತ್ತಾಗಿದ್ದು, ತಮ್ಮ ಬಗ್ಗೆ ಕೊಳಕು ಮಾತುಗಳನ್ನು ಆಡಲಾಗುತ್ತಿದೆ ಮತ್ತು ಇದು ಭಾರತದ ಪ್ರಮುಖ ಭಾಗದ ಮನದೊಳಗೆ ತುಂಬಿಕೊಂಡಿರುವ ಕಳವಳಕಾರಿಯಾದ ಜನಾಂಗೀಯವಾದವನ್ನು ಸೂಚಿಸುತ್ತದೆ ಎಂದೂ ಅವರು ವಿವರಿಸಿದ್ದಾರೆ. ಈಶಾನ್ಯ ರಾಜ್ಯಗಳು ಏಕೆ ಹಿಂದಿನಿಂದಲೂ ಪ್ರತ್ಯೇಕತೆಯ ಭಾವವನ್ನು ಬೆಳೆಸಿಕೊಳ್ಳುತ್ತಿವೆ ಎಂದು ಹುಸಿ ದೇಶಪ್ರೇಮಿಗಳಿಗೆ ಇದರಿಂದ ಅರ್ಥವಾಗಬೇಕು.
ವಿಪರ್ಯಾಸ ಎಂದರೆ ಹೆಚ್ಚಿನ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿ ಬಹುತೇಕ ಮೇಲ್ಜಾತಿಯವರಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ವಿದ್ಯಾರ್ಥಿಗಳ ಸ್ವರೂಪವು ಹಿಂದೆ ಸೂಚಿಸಿರುವಂತೆ ಬಹಳಷ್ಟು ಮಿಶ್ರವಾಗಿದೆ. ಹೆಚ್ಚಿನ ತರಗತಿಗಳಲ್ಲಿ ಶಿಕ್ಷಕರು ಬಹುಸಂಖ್ಯಾತ (ಹಿಂದೂ) ಸಿದ್ಧಾಂತದ ಪ್ರತಿಪಾದನೆಯನ್ನು ಮುಂದುವರಿಸಿದ್ದಾರೆ. ಇಂತಹ ವೈಪರೀತ್ಯಗಳಿಗೆ ಅಧಿಕಾರಿ ವರ್ಗ ಕುರುಡಾಗಿರುವಂತೆ ಕಾಣುತ್ತಿದೆ. ಒಂದು ಸಮಾನತಾವಾದಿ ಸಮಾಜದಲ್ಲಿ ಉನ್ನತ ಶಿಕ್ಷಣವು ವೈವಿಧ್ಯಮಯವಾಗಿರುವುದು ಮತ್ತು ಸಮಾಜದ ವಿವಿಧ ವರ್ಗಗಳನ್ನು, ಅದರಲ್ಲೂ ಮುಖ್ಯವಾಗಿ ಹಲವಾರು ರೀತಿಗಳಲ್ಲಿ ಕಡೆಗಣಿಸಲಾಗಿರುವವನ್ನು ಪ್ರತಿಬಿಂಬಿಸುವಂತೆ ಇರಬೇಕಾದುದು ಅತ್ಯಗತ್ಯ.
ಚಿಂತಿಸುವ, ಹುಡುಕುವ, ಸಂಶೋಧಿಸುವ, ಚರ್ಚಿಸುವ, ಭಿನ್ನಮತ ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕಾಗಿದ್ದ ಉನ್ನತ ಶಿಕ್ಷಣ ಕ್ಷೇತ್ರವನ್ನು ರಕ್ಷಿಸಿ, ಅಭಿವೃದ್ಧಿಪಡಿಸಬೇಕಾದಲ್ಲಿ, ಅದನ್ನಿಂದು ಎಳೆಯ ಮನಸ್ಸುಗಳ ಮೇಲೆ ನಿಯಂತ್ರಣ ಹೇರಿ, ಅವುಗಳನ್ನು ಆಳುವ ಶಕ್ತಿಗಳ ಬಹುಸಂಖ್ಯಾತ ಕಾರ್ಯಕ್ರಮಕ್ಕೆ ಸರಿಹೊಂದುವ ರೀತಿಯಲ್ಲಿ ರೂಪಿಸುವ ವೇದಿಕೆಗಳನ್ನಾಗಿ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಅದನ್ನು ನಿಯಂತ್ರಿಸುವ ಮೌಲ್ಯಗಳಲ್ಲಿ ತೀವ್ರವಾದ ಇಳಿಕೆಯಾಗಿದೆ. ಈ ಇಳಿಕೆಯ ವಿವಿಧ ಆಯಾಮಗಳು ನ್ಯಾಯಮಂಡಳಿಯ ಮುಂದೆ ಮಂಡಿಸಲಾದ ಸಾಕ್ಷ್ಯಗಳಲ್ಲಿ ಬೆಳಕಿಗೆ ಬಂದವು. ಇವುಗಳಲ್ಲಿ ಖಾಸಗೀಕರಣದ ಋಣಾತ್ಮಕ ಪರಿಣಾಮಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಗಳು, ಬಾಯಿಮುಚ್ಚಿಸುವುದು, ಪಠ್ಯಕ್ರಮದ ಕೇಸರೀಕರಣ ಮತ್ತು ಮಹಿಳೆಯರಿಂದ ಹಿಡಿದು ತೃತೀಯ ಲಿಂಗಿಗಳ ತನಕ, ದಲಿತ, ಅಲ್ಪಸಂಖ್ಯಾತ, ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ತನಕ ವಿಶಾಲ ವರ್ಗಗಳ ವಿದ್ಯಾರ್ಥಿಗಳ ಕಡೆಗಣಿಸುವಿಕೆ ಮತ್ತು ದಮನ ಮುಖ್ಯವಾಗಿವೆ. ಇವೆಲ್ಲವೂ ಸರಿಯಾಗಿ ಆಶ್ರಯದಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.