ಕರಾವಳಿ ಕರ್ನಾಟಕದಲ್ಲಿ ಕಾರ್ಗಿಲ್ ಮೀನುಗಳ ದರ್ಬಾರ್!
► ಸಂಕಷ್ಟದಲ್ಲಿ ಮತ್ಸ್ಯೋದ್ಯಮ ► ಕಡಲಶಾಸ್ತ್ರ ತಜ್ಞರಿಂದ ಅಧ್ಯಯನ
ಉಡುಪಿ, ಅ.4: ಭಾರತದ ಪಶ್ಚಿಮ ಕರಾವಳಿ(ಕರ್ನಾಟಕ ಸೇರಿದಂತೆ)ಯಲ್ಲಿ ಇದೀಗ ತಿನ್ನಲು ಯೋಗ್ಯವಲ್ಲದ ಕಾರ್ಗಿಲ್(ರೆಡ್ಟೂತ್ಡ್ ಟ್ರಿಗ್ಗರ್ಫಿಶ್) ಮೀನುಗಳದ್ದೇ ಕಾರುಬಾರು. ಹೇರಳ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಇವುಗಳ ಹೊರತಾಗಿ ಬೇರೆ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿಲ್ಲ. ಹಮಾಮಾನದ ವೈಪರೀತ್ಯದಿಂದ ತತ್ತರಿಸಿದ್ದ ಮೀನುಗಾರರು ಕಾರ್ಗಿಲ್ ಮೀನಿನಿಂದಾಗಿ ಈಗ ವುತ್ಸಕ್ಷಾಮದ ಆತಂಕ ಎದುರಾಗಿದೆ.
ತಿಂಗಳ ಹಿಂದೆ ಮುಂಬೈಯಲ್ಲಿ ಕಂಡುಬಂದ ಈ ಮೀನು, ಕ್ರಮೇಣ ಗೋವಾ, ಕಾರವಾರ ಇದೀಗ ಮಲ್ಪೆ ಸಮುದ್ರದಲ್ಲೂ ಹೇರಳವಾಗಿ ಬಲೆಗೆ ಬೀಳುತ್ತಿವೆ. ಈಗಾಗಲೇ ಈ ಮೀನುಗಳು ಕಾರವಾರ ಹಾಗೂ ಮಲ್ಪೆ ಬಂದರುಗಳಲ್ಲಿ ನೂರಾರು ಟನ್ಗಳಷ್ಟು ಲಭಿಸಿವೆ. ಕೇವಲ ಫಿಶ್ಮಿಲ್ಗಳಿಗೆ ಬಳಕೆಯಾಗುತ್ತಿರುವ ಈ ಮೀನುಗಳಿಂದ ಮೀನುಗಾರರು ಬಹಳ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.
ಈ ಮೀನಿನ ವಿಶಿಷ್ಟತೆ ಏನು?
ಈ ಮೀನಿನ ಸಾಮಾನ್ಯ ಹೆಸರು ರೆಡ್ಟೂತ್ಡ್ ಟ್ರಿಗ್ಗರ್ಫಿಶ್. ಓಡೋನಸ್ ನಿಗರ್ ಇದರ ವೈಜ್ಞಾನಿಕ ಹೆಸರು. ‘ಬಲಿಸ್ಟಿಡೆ’ ಕುಟುಂಬಕ್ಕೆ ಸೇರಿದ ಈ ಮೀನುಗಳಲ್ಲಿ ಸುಮಾರು 80 ಜಾತಿಗಳಿವೆ. ಇದು ಸೈನಿಕ ಸಮವಸ್ತ್ರ ಮಾದರಿಯ ಬಣ್ಣ ಹೊಂದಿರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಇದನ್ನು ‘ಕಾರ್ಗಿಲ್’ ಎಂಬುದಾಗಿ ಕರೆಯುತ್ತಾರೆ. ಸಮುದ್ರದ 35ರಿಂದ 40 ಮೀಟರ್ ಆಳದಲ್ಲಿರುವ ಹವಳದ ಬಂಡೆ ಅಥವಾ ದಿಬ್ಬಗಳು ಇವುಗಳ ಆವಾಸ ಸ್ಥಾನ. ಇಲ್ಲಿಯೇ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಈ ಹವಳ ಬಂಡೆಗಳು ಮಹಾರಾಷ್ಟ್ರ, ಗುಜರಾತ್, ಗೋವಾ, ಕೇರಳದ ಲಕ್ಷದ್ವೀಪಗಳು ಹಾಗೂ ಕರ್ನಾಟಕ ರಾಜ್ಯದ ಸಮುದ್ರದಲ್ಲೂ ಕಂಡುಬರುತ್ತವೆ. ಹೀಗೆ ಈ ಬಂಡೆಗಳು ಪಶ್ಚಿಮ ಆಸ್ಟ್ರೇಲಿಯಾ ದವರೆಗೂ ವ್ಯಾಪಿಸಿರುವುದರಿಂದ ಟ್ರಿಗ್ಗರ್ ಫಿಶ್ಗಳು ಅಲ್ಲೂ ಕೂಡ ಹೇರಳವಾಗಿ ಕಂಡುಬರುತ್ತವೆ. ‘ಜೂಪ್ಲಾನ್ ಟನ್’ ಎಂಬ ಸೂಕ್ಷ್ಮ ಸಮುದ್ರ ಜೀವಿ ಇದರ ಬಹಳ ಮುಖ್ಯವಾದ ಆಹಾರ. ಅದೇ ರೀತಿ ಬೊಂಡಾಸೆಯನ್ನು ಕೂಡ ಇು ಸೇವಿಸುತ್ತವೆ.
ಟ್ರಿಗ್ಗರ್ಫಿಶ್ನ್ನು ಚೀನಾದಲ್ಲಿ ತಿನ್ನುತ್ತಾರೆ. ಬಹಳ ದುವಾರ್ಸನೆ ಬೀರುವ ಈ ಮೀನುಗಳನ್ನು ಇಲ್ಲಿ ಯಾರು ಆಹಾರವಾಗಿ ಬಳಸು ವುದಿಲ್ಲ. ಈ ಮೀನು ಮಾನವರಂತೆ ಹೋಲುವ ಕೆಂಪು ಬಣ್ಣದ ಕೋರೆ ಹಲ್ಲನ್ನು ಹೊಂದಿದೆ. ಕಂದುಬಣ್ಣದ ಜೊತೆ ನೀಲಿ ಬಣ್ಣದಲ್ಲಿ ಮಿನುಗುವ ಈ ಮೀನು ಅತ್ಯಂತ ಸುಂದರವಾಗಿದೆ. ಹವಳ ಬಂಡೆ ಬಳಿ ವಾಸ ಮಾಡುವುದರಿಂದ ಸ್ವರಕ್ಷಣೆಗಾಗಿ ಈ ವಿಚಿತ್ರ ಬಣ್ಣ ಅದಕ್ಕೆ ಸಹಕಾರಿ ಎನ್ನುತ್ತಾರೆ ಕಾರವಾರದ ಕರ್ನಾಟಕ ವಿವಿಯ ಕಡಲಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಶಿವಕುಮಾರ್ ಹರಗಿ.
ಆಹಾರಕ್ಕಾಗಿ ವಲಸೆ ಸಾಧ್ಯತೆ
ಮುಂಗಾರು ಮುಗಿದು ಹಿಂಗಾರು ಆರಂಭಗೊಂಡ ಹಿನ್ನೆಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯ ಪರಿಣಾಮ ಟ್ರಿಗ್ಗರ್ಫಿಶ್ಗಳು ಭಾರೀ ಪ್ರಮಾಣದಲ್ಲಿ ಆಹಾರವನ್ನು ಅರಸುತ್ತ ಪಶ್ಚಿಮ ಕರಾವಳಿಯತ್ತ ಬಂದಿರಬಹುದು ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.
ಸಮುದ್ರದ ಒಳಗೆ ಉಂಟಾದ ಗಾಳಿಯ ಸೆಳೆತಕ್ಕೆ ಟ್ರಿಗ್ಗರ್ ಫಿಶ್ಗಳ ಆಹಾರವಾಗಿರುವ ಜೂಪ್ಲಾನ್ಟನ್ ಕೊಚ್ಚಿಕೊಂಡು ಬಂದಿದ್ದು, ಅದನ್ನು ಆರಸಿಕೊಂಡು ಗಾಳಿಯ ವೇಗಕ್ಕೆ ಟ್ರಿಗ್ಗರ್ ಫಿಶ್ಗಳು ಬಹುದೊಡ್ಡ ಸಂಖ್ಯೆಯಲ್ಲಿ ಈ ಭಾಗಕ್ಕೆ ಹರಿದುಬಂದಿರಬಹುದು ಎಂದು ಡಾ.ಶಿವಕುಮಾರ್ ಹರಗಿ ಅಭಿಪ್ರಾಯ ಪಟ್ಟಿದ್ದಾರೆ.
ಎರಡು ಮೂರು ವರ್ಷಗಳ ಹಿಂದೆ ಈ ಮೀನುಗಳು ಪಶ್ಚಿಮ ಕರಾವಳಿಯಲ್ಲಿ ಕಂಡುಬಂದಿತ್ತು. ಆದರೆ ಈ ಬಾರಿ ಭಾರೀ ಪ್ರಮಾಣ ದಲ್ಲಿ ಈ ಮೀನುಗಳು ಕಾಣಸಿಕ್ಕಿರುವುದು ತಜ್ಞರನ್ನು ಕೂಡ ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಈ ಮೀನುಗಳು ಹೇರಳ ಲಭ್ಯತೆಗೆ ಕಾರಣವೇನೆಂಬುದನ್ನು ಪತ್ತೆಹಚ್ಚಲು ತಜ್ಞರ ತಂಡ ಅಧ್ಯಯನದಲ್ಲಿ ತೊಡಗಿಸಿದೆ. ಇದರ ಹೊಟ್ಟೆಯಲ್ಲಿರುವ ಆಹಾರವನ್ನು ತಿಳಿದು, ಆ ಮೂಲಕ ಕಾರಣ ಪತ್ತೆ ಹಚ್ಚಲು ತಜ್ಞರು ಮುಂದಾಗಿದ್ದಾರೆ.
ಮೀನುಗಾರರಲ್ಲಿ ‘ಬರ’ದ ಆತಂಕ
ಟ್ರಿಗ್ಗರ್ಫಿಶ್(ಕಾರ್ಗಿಲ್) ಬಂದರೆ ಇತರ ಜಾತಿಯ ಮೀನುಗಳಿಗೆ ಬರ ಎಂಬುದು ಮೀನುಗಾರರ ಅನಿಸಿಕೆ. ಹೀಗೆ ಎಲ್ಲ ಕಡೆ ಈ ಮೀನುಗಳೇ ಬಹಳ ದೊಡ್ಡ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ಯಾವುದೇ ಜಾತಿಯ ಮೀನುಗಳು ಬೋಟುಗಳ ಬಲೆಗೆ ಬೀಳುತ್ತಿಲ್ಲ.
ಆಳಸಮುದ್ರ ಮೀನುಗಾರಿಕೆಗೆ ತೆರಳುವ ಲೈಲಾಂಡ್ ಬೋಟುಗಳಿಗೆ ಈ ಮೀನು ಹೇರಳವಾಗಿ ಸಿಗುತ್ತಿವೆ. ಅದೇ ರೀತಿ 370 ಇಂಜಿನ್ ಬೋಟು ಮತ್ತು ಪರ್ಸಿನ್ ಬೋಟುಗಳಿಗೂ ಕೂಡಾ ಇದೇ ಮೀನುಗಳು ಲಭಿಸಿವೆ. ಯಾರು ಕೂಡ ಈ ಮೀನನ್ನು ತಿನ್ನದ ಕಾರಣ ಮೀನುಗಾರರು ನೇರವಾಗಿ ಇದನ್ನು ಫಿಶ್ಮಿಲ್ ಗಳಿಗೆ ಸಾಗಿಸುತ್ತಿದ್ದಾರೆ. ಸದ್ಯ ಇದರ ವೌಲ್ಯ ಕೆ.ಜಿ.ಗೆ 12 ರೂ. ಆಗಿದೆ.
ಕಳೆದ ಒಂದು ತಿಂಗಳುಗಳಿಂದ ಮುಂಬೈ, ಕಾರವಾರ, ಗೋವಾ ಕಡೆಗಳಿಗೆ 10 ದಿನಗಳ ಅವಧಿಗೆ ಆಳಸಮುದ್ರಕ್ಕೆ ತೆರಳುವ ಲೈಲಾಂಡ್ ಬೋಟುಗಳಿಗೆ ಸರಾಸರಿ 25 ಟನ್ಗಳಷ್ಟು ಕಾರ್ಗಿಲ್ ಮೀನುಗಳು ಸಿಗುತ್ತಿವೆ. ಒಂದು ಬೋಟಿಗೆ ಗರಿಷ್ಠ ಅಂದರೆ 40 ಟನ್ ಮೀನುಗಳು ದೊರೆತಿರುವ ಉದಾಹರಣೆ ಕೂಡ ಇದೆ. ಬಹಳ ಭಾರವಾಗಿರುವ ಈ ಮೀನುಗಳನ್ನು ಲೋಡ್ ಅನ್ಲೋಡ್ ಮಾಡುವುದು ಕೂಡ ಕಷ್ಟ ಎನ್ನುತ್ತಾರೆ ಮೀನುಗಾರರು.
ಆಳ ಸಮುದ್ರ ಮೀನುಗಾರಿಕೆ ಹೋಗಿಬರಲು ಸುಮಾರು 5 ಲಕ್ಷ ರೂ. ವೌಲ್ಯದ ಡಿಸೇಲ್ ಬೇಕಾಗುತ್ತದೆ. ಕೇವಲ ಕಾರ್ಗಿಲ್ ಮೀನು ಮಾತ್ರ ಸಿಕ್ಕಿದರೆ ನಮಗೆ ದೊಡ್ಡ ನಷ್ಟವಾಗುತ್ತದೆ. ಕಳೆದ ವರ್ಷ ತಮಿಳುನಾಡಿನ ಮೀನುಗಾರರು ಈ ಮೀನನ್ನು ಹಿಡಿದು ತರುತ್ತಿದ್ದರು. ಆದರೆ ಈಗ ನಮಗೂ ಅನಿವಾರ್ಯವಾಗಿದೆ. ಬರಿಗೈಯಲ್ಲಿ ಬರುವುದಕ್ಕೆ ಸಿಕ್ಕಿದ ಮೀನನ್ನು ತರುತ್ತಿದ್ದೇವೆ ಎಂದು ಮಲ್ಪೆ ಜಲ ಮಾರುತಿ ಆಳ ಸಮುದ್ರ ಬೋಟಿನ ಮಾಲಕ ವಿಕ್ರಂ ಮೈಂದನ್ ತಿಳಿಸಿದ್ದಾರೆ.
ಕಾರ್ಗಿಲ್ ಫಿಶ್ ದೊಡ್ಡ ಪ್ರಮಾಣದಲ್ಲಿ ಲಭಿಸುತ್ತಿರುವುದರಿಂದ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಮತ್ಸಕ್ಷಾಮದ ಪರಿಸ್ಥಿತಿ ಎದುರಾಗಿದೆ. ಮಲ್ಪೆ ಕಡಲ ಕಿನಾರೆಯಲ್ಲೂ ಕೆಲವು ಬೋಟುಗಳಿಗೆ ಈ ಮೀನು ದೊರೆತಿವೆ. ಈ ಮೀನು ಲಾಭದಾಯಕವಲ್ಲ. ಆದುದರಿಂದ ಡೀಸೆಲ್ ವ್ಯಯಿಸಿ ಆಳ ಸಮುದ್ರಕ್ಕೆ ತೆರಳುವ ಬೋಟುಗಳು ನಷ್ಟ ಅನುಭವಿಸುತ್ತಿವೆ.
ಕೃಷ್ಣ ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ
ಟ್ರಿಗ್ಗರ್ಫಿಶ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೇಗೆ ಬಂತು ಎಂಬುದು ಆಶ್ಚರ್ಯ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗಾಗಲೇ ಕಾರವಾರದ ಬಂದರಿನಿಂದ ಕೆಲವು ಮೀನುಗಳನ್ನು ತರಲಾಗಿದೆ. ಇದರಲ್ಲಿ ಮೂರು ಜಾತಿಯ ಟ್ರಿಗ್ಗರ್ಫಿಶ್ ದೊರೆತಿವೆ. ಈ ಮೀನು ಸೇವಿಸುವ ಆಹಾರವನ್ನೇ ಬಂಗುಡೆ ಮೀನು ಕೂಡ ಸೇವಿಸುವುದರಿಂದ ಬಂಗುಡೆಗಳ ಸಂಖ್ಯೆ ಈ ಭಾಗದಲ್ಲಿ ಇಳಿಮುಖ ಆಗಿರುವ ಸಾಧ್ಯತೆ ಇದೆ. ಅದೇ ರೀತಿ ಟ್ರಿಗ್ಗರ್ಫಿಶ್ ಬೊಂಡಾಸೆ ಮೀನನ್ನು ಕೂಡ ಸೇವಿಸುವುದರಿಂದ ಮೀನುಗಾರರಿಗೆ ಈ ಮೀನುಗಳ ಜೊತೆ ಬೊಂಡಾಸೆ ಕೂಡ ಬಲೆಗೆ ಬೀಳುತ್ತಿವೆ.
ಡಾ.ಶಿವಕುವಾರ್ ಹರಗಿ, ಸಹಾಯಕ ಪ್ರೊಫೆಸರ್, ಕಡಲಶಾಸ್ತ್ರ ವಿಭಾ, ಕರ್ನಾಟಕ ವಿವಿ, ಕಾರವಾರ