ಮೈಸೂರು ದಸರಾದಲ್ಲಿ ತಮಿಳುನಾಡಿನ ‘ಚಕ್ರವರ್ತಿ’!
ಸೈಕಲ್ ಹತ್ತಿ ಬಂದ ಇವರ ಕತೆಯನ್ನು ಎಲ್ಲರೂ ಕೇಳಲೇಬೇಕು..
ಮೈಸೂರು,ಅ.5: ದೇಶದಲ್ಲಿ ಶಾಂತಿಗಾಗಿ ವ್ಯಕ್ತಿಯೊಬ್ಬರು ಸೈಕಲ್‍ನಲ್ಲೇ ದಕ್ಷಿಣ ಭಾರತವನ್ನು ಸಂಚರಿಸುತ್ತಿದ್ದು, ಮೈಸೂರು ದಸರಾ ಹಿನ್ನಲೆ ನಗರಕ್ಕೆ ಆಗಮಿಸಿ ಸೈಕಲ್‍ನಲ್ಲಿಯೇ ತಮ್ಮ ಧ್ಯೇಯ ಉದ್ದೇಶವನ್ನು ಸಾರುತ್ತಿದ್ದಾರೆ.
ಮೂಲತಃ ತಮಿಳುನಾಡಿನವರಾದ ಚಕ್ರವರ್ತಿ ಎಂಬವರು ಕಳೆದ ಹನ್ನೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹತ್ತು ವರ್ಷಗಳಿಂದ ಶಾಂತಿಗಾಗಿ ದೇಶದ ಹಲವು ಭಾಗಗಳಲ್ಲಿ ಸಂಚರಿಸಿ ಎಲ್ಲಿ ಹೆಚ್ಚು ಹೆಚ್ಚು ಜನರು ಇರುತ್ತಾರೊ ಅವರಲ್ಲಿ ಹೋಗಿ ಮಾತನಾಡಿ, ನಾವು ಶಾಂತಿಯಿಂದ ಇರಬೇಕು ಮತ್ತು ಪ್ರಕೃತಿಯನ್ನು ಉಳಿಸಬೇಕು ಎಂದು ಹೇಳುತ್ತಾರೆ.
ಟೀ ಶರ್ಟ್, ತಲೆಗೆ ಒಂದು ಟೋಪಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಆಕರ್ಷಣೀಯ ರೀತಿಯಲ್ಲಿ ಸೈಕಲ್‍ನಲ್ಲಿ ಸಂಚರಿಸುತ್ತಾರೆ. ಸೈಕಲ್‍ನ ಹಿಂಬದಿಯಲ್ಲಿ ಶಾಂತಿಗಾಗಿ ಸಂಚಾರ ಮಾಡುತ್ತಿರುವ ಇವರ ಸುದ್ದಿ ಚಿತ್ರಗಳು, ಕನ್ನಡ, ಹಿಂದಿ, ತಮಿಳು ಮತ್ತು ಇಂಗ್ಲೀಷ್ ಸೇರಿದಂತೆ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದನ್ನು ದೊಡ್ಡದಾಗಿ ಫ್ರೇಮ್ ಹಾಕಿಸಿಕೊಂಡಿದ್ದಾರೆ. ಮುಂಭಾಗದಲ್ಲಿ ಶಾಂತಿ ನೆಲೆಸಲಿ ಎಂಬ ನಾಫಲಕವನ್ನು ಹಾಕಿಕೊಂಡು ಸೈಕಲ್‍ನ ಎರಡು ಕಡೆಗಳಲ್ಲಿ ಬಿಳಿ ಬಣ್ಣದ ಬಾವುಟಗಳನ್ನು ಹಾಕಿಕೊಂಡು ದಾರಿಯಲ್ಲಿ ಹೋಗುವವರ ಜೊತೆ ಪ್ರೀತಿಯಿಂದ ಸಹನೆಯಿಂದ ಮಾತನಾಡಿಸುತ್ತಾರೆ.
'ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಮಾಡುತ್ತೇನೆ. ವರ್ಷ ಪೂರ್ತಿ ಕೆಲಸ ಮಾಡಿ ಎರಡು ತಿಂಗಳು ಕರ್ನಾಟಕ, ತಮಿಳುನಾಡು, ಗೋವಾ, ಕೇರಳ ರಾಜ್ಯಗಳನ್ನು ಸಂಚರಿಸಿ ಶಾಂತಿಗಾಗಿ ಜನರಲ್ಲಿ ಅರಿವು ಮೂಡಿಸುತಿದ್ದೇನೆ ಎಂದು 'ವಾರ್ತಾಭಾರತಿ'ಗೆ ಚಕ್ರವರ್ತಿ ತಿಳಿಸಿದರು.
ರಾಷ್ಟ್ರ ಶಾಂತಿಯಿಂದ ಇರಬೇಕು, ಪ್ರಕೃತಿ ಉಳಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯದಲ್ಲಿ ತೊಡಗಿದ್ದು, ಹಲವು ಕಡೆಗಳಲ್ಲಿ ಜನರು ನನಗೆ ಡೊನೇಷನ್ ರೂಪದಲ್ಲಿ ಅಲ್ಪ ಸ್ವಲ್ಪ ಹಣ ನೀಡುತ್ತಾರೆ. ಅದರಿಂದಲೇ ಜೀವನ ನಡೆಯುತ್ತದೆ ಎನ್ನುತ್ತಾರೆ.