ಹೀಗಿದೆ ಟ್ರಂಪ್ ಆಡಳಿತದ ಅಮೆರಿಕ!
ಫ್ರೀಡ್ಮನ್ ಜನಸಾಮಾನ್ಯರ ಕಣ್ಣುಗಳ ಮೂಲಕ ಅಮೆರಿಕವನ್ನು ಶೋಧಿಸಿ ತಾನು ಹದಿನಾರು ರಾಜ್ಯಗಳಲ್ಲಿ ಕೈಗೊಂಡ ಪ್ರವಾಸದಲ್ಲಿ ಅಲ್ಲಿ ಕಂಡ ತೀವ್ರ ಬಡತನ ಮತ್ತು ಭಯಾನಕ ಅಸಮಾನತೆಯನ್ನು ದಾಖಲಿಸುತ್ತಾರೆ ವಿಚಿತ್ರವೆಂದರೆ ತಮ್ಮ ಸಾಮಾಜಿಕ ಸುರಕ್ಷತೆಯ ಜಾಲವನ್ನು ಟ್ರಂಪ್ ಕತ್ತರಿಸಿ ಹಾಕುತ್ತಿದ್ದರೂ ಈ ಜನ ಟ್ರಂಪ್ ಅವರನ್ನೇ ಬೆಂಬಲಿಸುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತ ಮತ್ತು ಸಿದ್ಧಾಂತ ಅಮೆರಿಕವನ್ನು ಅಲ್ಲಾಡಿಸಿ ಬಿಟ್ಟಿದೆ. ಅಷ್ಟೇ ಅಲ್ಲ ಅದು ವಿಶ್ವ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುವ ಬೆದರಿಕೆಯೊಡ್ಡುತ್ತಿದೆ ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳೊಳಗಾಗಿ ಟ್ರಂಪ್ ತನ್ನ ಕನ್ಸರ್ವೇಟಿವ್ ಕಾರ್ಯಸೂಚಿ ಯನ್ನು ಬಲವಂತವಾಗಿ ದಾಳಿಕೋರನ ರಭಸದಿಂದ ಜಾರಿಗೊಳಿಸ ಲಾರಂಭಿಸಿದರು. ಅಮೆರಿಕದ ಬಡ ವರ್ಗಕ್ಕೆ ತುಂಬಾ ಜನೋಪಯೋಗಿ ಆರೋಗ್ಯ ಯೋಜನೆಯಾಗಿದ್ದ ಒಬಾಮಾ ಕೇರ್ನ ರದ್ದತಿ, ಹಣಕಾಸು ಮಾರುಕಟ್ಟೆಗಳ ಮೇಲಿದ್ದ ನಿಯಂತ್ರಣಗಳ ಸಡಿಲಿಕೆ, ಗನ್ ನಿಯಂತ್ರಣ ಕಾನೂನುಗಳ ಸಡಿಲಗೊಳಿಸುವಿಕೆ, ವಲಸೆ ತಡೆ ಮತ್ತು ಸ್ವಚ್ಛ ವಾಯು ನಿಯಂತ್ರಣ ಕಾನೂನುಗಳನ್ನು ಕಿತ್ತು ಹಾಕುವುದು- ಇವೆಲ್ಲ ಅವರ ಮೊದಲ ಭಾರೀ ಆದ್ಯತೆಗಳಾಗಿದ್ದವು. ಪಾರಂಪರಿಕ ಅಮೆರಿಕನ್ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೇ ಅವರು ಪ್ರಶ್ನಿಸುವಂತೆ ಮಾಡಿದ್ದಾರೆ. ಇವೆಲ್ಲ ಪ್ರಸಿದ್ಧ ‘ಅಮೆರಿಕನ್ ಡ್ರೀಮ್’ ಕುರಿತಾದ ಜನರ ಜನಪ್ರಿಯ ಕಲ್ಪನೆಯನ್ನು ಹೇಗೆ ಬದಲಾಯಿಸಿಬಿಟ್ಟಿವೆ ಎಂಬುದು ಯೋಚಿಸಬೇಕಾದ ವಿಷಯ.
ಅಮೆರಿಕದ ಖ್ಯಾತ ಪತ್ರಕರ್ತ, ಲೇಖಕ ಮತ್ತು ಟಿಲಿವಿಷನ್ ಪರ್ಸನಾಲಿಟಿ ಅಲನ್ ಫ್ರೀಡ್ಮನ್ ಬರೆದಿರುವ ‘ಡೆಮಾಕ್ರಸಿ ಇನ್ಪೆರಿಲ್: ಡೊನಾಲ್ಡ್ ಟ್ರಂಪ್’ಸ್ ಅಮೆರಿಕ’ ಇಂದಿನ ಅಮೆರಿಕದ ದುರಂತ ಪ್ರಶ್ನೆಗಳನ್ನು ಪರಿಶೀಲಿಸಿ ಅಲ್ಲಿ ಏನಾಗಿದೆ ಎಂಬ ವಿವರ ನೀಡುತ್ತದೆ. ಫ್ರೀಡ್ಮನ್ ಜನಸಾಮಾನ್ಯರ ಕಣ್ಣುಗಳ ಮೂಲಕ ಅಮೆರಿಕವನ್ನು ಶೋಧಿಸಿ ತಾನು ಹದಿನಾರು ರಾಜ್ಯಗಳಲ್ಲಿ ಕೈಗೊಂಡ ಪ್ರವಾಸದಲ್ಲಿ ಅಲ್ಲಿ ಕಂಡ ತೀವ್ರ ಬಡತನ ಮತ್ತು ಭಯಾನಕ ಅಸಮಾನತೆಯನ್ನು ದಾಖಲಿಸುತ್ತಾರೆ ವಿಚಿತ್ರವೆಂದರೆ ತಮ್ಮ ಸಾಮಾಜಿಕ ಸುರಕ್ಷತೆಯ ಜಾಲವನ್ನು ಟ್ರಂಪ್ ಕತ್ತರಿಸಿ ಹಾಕುತ್ತಿದ್ದರೂ ಈ ಜನ ಟ್ರಂಪ್ ಅವರನ್ನೇ ಬೆಂಬಲಿಸುತ್ತಿದ್ದಾರೆ. ಹೆಚ್ಚು ಹೆಚ್ಚು ಅಮೆರಿಕನ್ನರು ಬಡತನ ರೇಖೆಗಿಂತ ಕೆಳಗೆ ಬರುತ್ತಿದ್ದಾರೆ. ಇವರ ಸಂಖ್ಯೆ 43 ಮಿಲಿಯ ತಲುಪಿದೆ.
ಫ್ರೀಡ್ಮನ್ರ ಪ್ರಕಾರ ಗಾಯಗೊಂಡ ಒಂದು ರಾಷ್ಟ್ರವಾಗಿರುವ ಅಮೆರಿಕದಲ್ಲಿ ಪ್ರಜಾಪ್ರಭುತ್ವಕ್ಕೆ ಮುತ್ತಿಗೆ ಹಾಕಲಾಗಿದೆ. ಅಲ್ಲಿ ಹಲವು ಪ್ರದೇಶಗಳಲ್ಲಿ ಜನಾಂಗೀಯ ದ್ವೇಷ ಸಾಮಾಜಿಕವಾಗಿ ಸ್ವೀಕಾರಾರ್ಹವಾಗಿದೆ. ಕಳೆದ ಚುನಾವಣೆ ವೇಳೆ ಟ್ರಂಪ್ ಅವರ ಆವೇಶ ಪೂರಿತ ಭಾಷಣಗಳು ದ್ವೇಷ ಮತ್ತು ಜನಾಂಗೀಯ ತಾರತಮ್ಯದ ಜ್ವಾಲೆಗೆ ತುಪ್ಪ ಹೊಯ್ಯುವ ಕೆಲಸ ಮಾಡಿದವು.
ಅಮೆರಿಕದ 319 ಮಿಲಿಯ ಜನಸಂಖ್ಯೆಗೆ 350 ಮಿಲಿಯ ಗನ್ಗಳಿವೆ. ಅಲ್ಲಿ ಪ್ರತಿ ವರ್ಷ 30,000ಕ್ಕೂ ಹೆಚ್ಚು ಮಂದಿ ಗನ್ ಹಿಂಸೆಯಲ್ಲಿ ಸಾಯುತ್ತಾರೆ. ಆದರೂ ಗನ್ ನಿಯಂತ್ರಣಕ್ಕೆ ಪ್ರಬಲವಾದ ಪ್ರತಿಭಟನೆ ಇದೆ. ಪರಿಣಾಮಕಾರಿಯಾದ ಗನ್ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸಲು ಅಮೆರಿಕದ ಯಾವುದೇ ಅಧ್ಯಕ್ಷ ಧೈರ್ಯ ಮಾಡಿಲ್ಲ. ತನ್ನ ಚುನಾವಣಾ ಪ್ರಚಾರದ ವೇಳೆ ಮಾಡಿದ ಭಾಷಣಕ್ಕೆ ಅನುಸಾರವಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಟ್ರಂಪ್ ಒಬಾಮಾ ಕೇರ್ ಆರೋಗ್ಯ ಸವಲತ್ತನ್ನು ರದ್ದುಪಡಿಸಲು ಕ್ರಮ ಕೈಗೊಂಡರು. ಇಪ್ಪತ್ತು ಮಿಲಿಯಕ್ಕೂ ಹೆಚ್ಚು ಮಂದಿ ಅಮೆರಿಕನ್ನರಿಗೆ ಕೈಗೆಟುಕುವಂತಹ ಆರೋಗ್ಯ ಸವಲತ್ತು ಇದಾಗಿತ್ತು. ಟ್ರಂಪ್ ಅವರ ವಲಸೆ ವಿರೋಧಿ ನಿಲುವು ಮತ್ತು ಮೆಕ್ಸಿಕೋದ ಗಡಿಯ ಉದ್ದಕ್ಕೂ ಗೋಡೆಯೊಂದನ್ನು ಕಟ್ಟುವ ಯೋಜನೆ ತೀರಾ ವಿವಾದಾಸ್ಪದವಾಗಿದೆ.
ಫ್ರೀಡ್ಮನ್ ಟ್ರಂಪ್ರನ್ನು ಅಪಾಯಕಾರಿ, ಚಂಚಲ ಸ್ವಭಾವದ, ಮುಂದೆ ಏನು ಮಾಡುತ್ತಾರೆಂದು ಊಹಿಸಲಾಗದ ವ್ಯಕ್ತಿ ಮತ್ತು ಹಿಂದೆ ಮುಂದೆ ನೋಡದೆ, ಮುಂದೆ ಆಗುವ ಪರಿಣಾಮಗಳನ್ನು ಊಹಿಸದೆ ದಿಢೀರ್ ತೀರ್ಮಾನ ತೆಗೆದುಕೊಳ್ಳುವಾತ ಎಂದು ಕರೆಯುತ್ತಾರೆ ಅಲ್ಲದೆ, ಟ್ರಂಪ್ ಜಾಗತಿಕ ರಂಗದಲ್ಲಿ ಎಲ್ಲವನ್ನೂ ಅಸ್ತವ್ಯಸ್ತಗೊಳಿಸುವ ಒಂದು ಶಕ್ತಿ ಎನ್ನುವ ಫ್ರೀಡ್ಮನ್ ಟ್ರಂಪ್ರ ಮಾನಸಿಕ ಫಿಟ್ನೆಸ್ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುತ್ತಾರೆ.
ಫ್ರೀಡ್ಮನ್ ಪ್ರಕಾರ, ಟ್ರಂಪ್ ಅವರ ಅಧ್ಯಕ್ಷತೆ ನಿಜವಾಗಿಯೂ ಒಂದು ಟಿವಿ ರಿಯಾಲಿಟಿ ಶೋ ತರಹ ಕಾರ್ಯಾಚರಿಸುತ್ತಿದೆ. ‘‘21ನೇ ಶತಮಾನದ ಅಮೆರಿಕನ್ ರಾಜಕಾರಣದಲ್ಲಿ ಟ್ವೀಟ್ ಅನ್ನು ಟ್ರಂಪ್ ಜನಸಮೂಹದ ಗಮನ ಬೇರೆಡೆಗೆ ಸೆಳೆಯುವ ಅಂತಿಮ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಸರಕಾರದ ಹಲವಾರು ಮಂದಿ ಅಧಿಕಾರಿಗಳನ್ನು ಒಂದು ಟ್ವೀಟ್ನಲ್ಲೇ ಅವರು ಮನೆಗೆ ಕಳುಹಿಸಿದ್ದಾರೆ.’’
ಟ್ರಂಪ್ ಅಧಿಕಾರಕ್ಕೆ ಬಂದಿರುವುದು ಉದಾರವಾದಿ ಅಲ್ಲದ ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರಿ ಆಡಳಿತದ ದಿಕ್ಸೂಚಿಯಾಗಿದೆ. ಈ ಪ್ರವೃತ್ತಿ ವಿಶ್ವದ ಹಲವೆಡೆಗಳಲ್ಲಿ ಕಾಣಿಸುತ್ತಿದೆ. ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕವೇ ಅಧಿಕಾರಕ್ಕೆ ಬಂದ ಸರ್ವಾಧಿಕಾರಿ ನಾಯಕರು ಜನ ನ್ಯಾಯಾಂಗದ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳನ್ನು ದಮನಿಸುತ್ತಿದ್ದಾರೆ.
ಭಾರತದ ಪಾಲಿಗೆ ಟ್ರಂಪ್ ‘‘ಎರಡು ಅಲಗುಗಳ ಖಡ್ಗವಾಗಬಹುದು; ತೋರಿಕೆಗೆ ಕಾಣುವುದಕ್ಕಿಂತ ಟ್ರಂಪ್ ಹೆಚ್ಚು ಅಪಾಯಕಾರಿಯಾಗಬಹುದು’’ ಎಂದು ಎಚ್ಚರಿಸುವ ಫ್ರೀಡ್ಮನ್ ಭಾರತದ ಹಿತಾಸಕ್ತಿಗಳು ಟ್ರಂಪ್ ಸರಕಾರದಿಂದ ಈಡೇರುವಂತೆ ಕಾಣುತ್ತಿಲ್ಲ ಎನ್ನುತ್ತಾರೆ. ಅವರ ವಿಚಾರಗಳಿರುವ ‘ಗಂಡಾಂತರದಲ್ಲಿ ಪ್ರಜಾಪ್ರಭುತ್ವ’ ಪ್ರಜ್ಞಾವಂತ ಜನರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಕೃಪೆ: ಡೆಕ್ಕನ್ ಹೆರಾಲ್ಡ್