ಓ ಮೆಣಸೇ…
ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ - ಉಮೇಶ್ ಕತ್ತಿ, ಬಿಜೆಪಿ ಶಾಸಕ
ತಮ್ಮ ಕತ್ತಿ ಹೆಸರಿಗೆ ತಕ್ಕಂತೆ ಕತ್ತಿ ಇಟ್ಟಿದ್ದೀರಿ.
---------------------
ಸಾಹಿತಿ ಬರವಣಿಗೆ ಬಿಟ್ಟು ಜಯಕಾರ, ಧಿಕ್ಕಾರ ಕೂಗಲು ಹೋಗಬಾರದು - ಎಸ್.ಎಲ್. ಭೈರಪ್ಪ, ಸಾಹಿತಿ
ಜಯಕಾರ, ಧಿಕ್ಕಾರ ಏನಿದ್ದರೂ ಬರವಣಿಗೆಯ ಮೂಲಕವೇ ಮಾಡಿ.
---------------------
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದ ವರ್ಚಸ್ಸು ಬದಲಾಗಿದೆ - ಲತಾ ಮಂಗೇಶ್ಕರ್, ಗಾಯಕಿ
ಕೋಗಿಲೆಗೆ ಕಾಗೆಯ ಮೇಲೆ ಒಲವು ಬಂದಂತಿದೆ.
---------------------
ನನ್ನದು ತಂತಿ ಮೇಲಿನ ನಡಿಗೆ - ಯಡಿಯೂರಪ್ಪ, ಮುಖ್ಯಮಂತ್ರಿ
ಸರಕಾರ ನಡೆಸುವ ಬದಲು ಸರ್ಕಸ್ ಕಂಪೆನಿ ನಡೆಸುತ್ತಿರುವಂತಿದೆ.
---------------------
ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲ ತುಂಬಿವೆ - ಜಿ.ಟಿ. ದೇವೇಗೌಡ, ಶಾಸಕ
ಮಳೆ ನೀರು ಯಡಿಯೂರಪ್ಪರ ಕುತ್ತಿಗೆವರೆಗೆ ಬಂದಿದೆ.
---------------------
ಯಡಿಯೂರಪ್ಪರ ಬೆಂಬಲದಿಂದಾಗಿ ವೀರಶೈವ ಸಮಾಜ ಉಳಿದಿದೆ - ಶಾಮನೂರು ಶಿವಶಂಕರಪ್ಪ, ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ
ವೀರಶೈವ ಸಮಾಜವನ್ನು ಉಳಿಸುವುದಕ್ಕಾಗಿ ಅವರು ಲಿಂಗಾಯತ ಧರ್ಮವನ್ನೇ ಬಲಿಕೊಟ್ಟಿದ್ದಾರೆ.
---------------------
ಗೋಡ್ಸೆ ವಿಚಾರಧಾರೆಯನ್ನು ದೇಶದಿಂದ ಹೊರದಬ್ಬ ಬೇಕಾಗಿದೆ - ದೇವನೂರ ಮಹಾದೇವ, ಸಾಹಿತಿ
ಹೊರದೇಶಗಳಲ್ಲೂ ಗೋಡ್ಸೆ ಚಿಂತನೆ ಹರಡಲಿ ಎನ್ನುವ ಆಸೆಯೇ?
---------------------
ರಾಜಕಾರಣ ಎಂಬುದು ಸನ್ಯಾಸಿಗಳ ಸಂಘ ಅಲ್ಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬಯಲಾಗುತ್ತಿರುವ ಲೈಂಗಿಕ ಹಗರಣಗಳನ್ನು ಗಮನಿಸಿದಾಗ ನಿಜ ಅನ್ನಿಸುತ್ತದೆ.
---------------------
ಅನರ್ಹ ಶಾಸಕರನ್ನು ಕಡೆಗಣಿಸುವುದೂ ಇಲ್ಲ, ತಲೆ ಮೇಲೆ ಕೂರಿಸಿಕೊಳ್ಳುವುದೂ ಇಲ್ಲ - ಸಿ.ಟಿ. ರವಿ, ಸಚಿವ
ಅವರೀಗ ಯಡಿಯೂರಪ್ಪರ ಎದೆ ಮೇಲೆ ಕೂತಿದ್ದಾರೆ.
---------------------
ಮುಖ್ಯಮಂತ್ರಿ ಯಡಿಯೂರಪ್ಪರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಡಿಕೆಶಿಯನ್ನು ನೋಡಿದಾಗ ನಿಮಗೆ ಏನನ್ನಿಸುತ್ತಿದೆ ಎನ್ನುವುದನ್ನೂ ಹೇಳಿ.
---------------------
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನ್ನನ್ನು ಪರಸ್ಪರ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ - ಈಶ್ವರಪ್ಪ, ಸಚಿವ
ನನ್ನನ್ನು ಅಂಟಿಕೊಂಡ ಶನಿ ಅದು ಎನ್ನುತ್ತಿದ್ದಾರೆ ಯಡಿಯೂರಪ್ಪ.
---------------------
ಕೋಟಿ ಕೋಟಿ ರೂಪಾಯಿ ದುಡಿಮೆಗಿಂತ ನೆಮ್ಮದಿಯ ಬದುಕು ಮುಖ್ಯವಾಗಬೇಕು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ನಿಮ್ಮ ನೆಮ್ಮದಿಯ ಬದುಕಿಗಾಗಿ ಜನರ ನೆಮ್ಮದಿಯನ್ನು ಕೆಡಿಸದಿರಿ.
---------------------
ಗುರುಕುಲಗಳು ಮನೆಯೇ ಹೊರತು ಜೈಲಲ್ಲ - ಸುರೇಶ್‌ಕುಮಾರ್, ಸಚಿವ
ಕುಲ ನೋಡಿ ಶಿಷ್ಯರನ್ನು ಆರಿಸುವ ವ್ಯವಸ್ಥೆಯೇ ಗುರುಕುಲ.
---------------------
ವಿಶ್ವವು ಭಾರತದಿಂದ ಬಹಳಷ್ಟು ನಿರೀಕ್ಷಿಸುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
ಭಾರತದ ಜನರು ಕೂಡ ನಿಮ್ಮಿಂದ ನಿರೀಕ್ಷಿಸುತ್ತಿದ್ದಾರೆ.
---------------------
ನಮ್ಮನ್ನು ಆಳಿದವರು ಗಾಂಧಿ ಚಿಂತನೆಗಳನ್ನು ಅನುಸರಿಸಿದ್ದರೆ ಇಂದಿನ ಅನೇಕ ಸಮಸ್ಯೆಗಳು ಇರುತ್ತಲೇ ಇರಲಿಲ್ಲ - ಮೋಹನ್ ಭಾಗವತ್, ಆರೆಸ್ಸ್ಸೆಸ್ ಮುಖಂಡ
ಅದಕ್ಕೆ ತಾನೆ ಗೋಡ್ಸೆಯ ಕೈಯಲ್ಲಿ ಗಾಂಧಿಯನ್ನು ಕೊಲ್ಲಿಸಿದ್ದು.
---------------------
ರಾಜ್ಯದ ಜನರು ನೆನಪಿನಲ್ಲಿಟ್ಟುಕೊಳ್ಳುವ ಯಾವ ಸಾಧನೆಯನ್ನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ಒಮ್ಮೆ ಜೈಲಿಗೆ ಹೋಗಿ ಬಂದಿದ್ದರೆ ನೆನಪಿಟ್ಟುಕೊಳ್ಳುತ್ತಿದ್ದರೇನೋ, ಅಲ್ಲವೇ?
---------------------
ಅನರ್ಹ ಶಾಸಕರೆಲ್ಲ ಚುನಾವಣೆಯಲ್ಲಿ ಗೆದ್ದು ಎಲ್ಲರೂ ಸಚಿವರಾಗುತ್ತಾರೆ - ಎಚ್. ನಾಗೇಶ್, ಸಚಿವ
ಅಂದರೆ ಅರ್ಹರ್ಯಾರೂ ಗೆಲ್ಲುವುದಿಲ್ಲವೇ?
---------------------
ಪ್ರಧಾನಿ ಮೋದಿಗೆ ಸರಿಸಾಟಿ ಯಾರೂ ಇಲ್ಲ - ಡಾ. ದೊಡ್ಡರಂಗೇಗೌಡ, ಸಾಹಿತಿ
ಮತ್ತೇಕೆ ತಡ, ಅವರ ಹೆಸರಲ್ಲಿ ಮಹಾಕಾವ್ಯವೊಂದನ್ನು ಬರೆದು ಜ್ಞಾನಪೀಠಕ್ಕೆ ಅರ್ಹರಾಗಿ.
---------------------
ಪ್ರಧಾನಿ ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನು ಬೈದಂತೆ - ಪ್ರತಾಪಸಿಂಹ, ಸಂಸದ
ನಿಮ್ಮ ಆ ದೇವರ ತಲೆಯ ಮೇಲೆ 100 ತೆಂಗಿನಕಾಯಿ ಒಡೆಯುವ ಹರಕೆ ಹೊತ್ತಿದ್ದಾರಂತೆ ಕೇಜ್ರಿವಾಲ್.
---------------------
ಸಮ್ಮಿಶ್ರ ಸರಕಾರದ ವಿರುದ್ಧ ಅಸಮಾಧಾನ ಇದ್ದುದರಿಂದಲೇ ನನಗೆ ಅನಾರೋಗ್ಯ ಕಾಡಿತು - ಶ್ರೀಮಂತ ಪಾಟೀಲ್, ಅನರ್ಹ ಶಾಸಕ
ಬಹುಶಃ ಈಗ ಅನಾರೋಗ್ಯ ಉಲ್ಬಣಿಸಿರಬೇಕು.
---------------------
ನಾನು ಮೊದಲು ನಕ್ಸಲ್ ಆಗಿದ್ದೆ, ಬಳಿಕ ಆರೆಸ್ಸೆಸ್ ಸೇರಿಕೊಂಡೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಗಾಂಧೀಜಿಯ ಕೊಲೆಯನ್ನು ನಕ್ಸಲರ ತಲೆಗೆ ಕಟ್ಟುವ ಹುನ್ನಾರವೇ?
---------------------
ನಾನು ಮೊದಲಿನಿಂದಲೂ ಭಾರತೀಯ ಜನತಾ ಪಕ್ಷದವನು- ಚಿದಾನಂದ ಮೂರ್ತಿ, ಸಂಶೋಧಕ
ನೀವು ವಿದ್ವಾಂಸರು ಎಂದು ನಾವಿದುವರೆಗೆ ತಪ್ಪು ತಿಳಿದಿದ್ದೆವು, ಕ್ಷಮಿಸಿ.
---------------------
ಮಹಾತ್ಮಾ ಗಾಂಧಿಯಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ತಮ್ಮ ಮಗನ ರೂಪದಲ್ಲಿ ಗಾಂಧಿ ಪುನರ್‌ಜನ್ಮ ಎತ್ತಿದ್ದಾನೆ ಎಂದು ಹೇಳಲಿಲ್ಲವಲ್ಲ ಪುಣ್ಯ
---------------------
ಬಿಜೆಪಿಯವರು ನಮ್ಮ ಮಕ್ಕಳನ್ನು(ಅನರ್ಹ ಶಾಸಕರು) ಕರೆದು ಕೊಂಡು ಹೋಗಿ ಬೀದಿಪಾಲು ಮಾಡಿದ್ದಾರೆ - ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ
ಬೀದಿ ಪಾಲಾಗಲು ನೀವು ಕೂಡ ಅತ್ಯುತ್ಸಾಹದಲ್ಲಿದ್ದಿರಂತೆ ಹೌದೇ?
---------------------
ನೆರೆ ಪೀಡಿತ ಜನರ ಸಹಾಯಕ್ಕೆ ಧಾವಿಸದ ಸಂಸದರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮ ಚಪ್ಪಲಿಯಲ್ಲಿ ನಮಗೆ ನಾವೇ ಹೊಡೆದುಕೊಳ್ಳಬೇಕು - ಶಂಕರ ಬಿದರಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ
ಜನ ತಮ್ಮ ಮನೆಯ ಹೊರಗೆ ಚಪ್ಪಲಿ ಹಿಡಿದು ಕಾಯುತ್ತಿದ್ದಾರೆ ಸಾರ್...